ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಮನವೊಲಿಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ ವಕೀಲರೂ ಆಗಿರುವ ಕಾಂಗ್ರೆಸ್ ಸಂಸದ ವಿವೇಕ್ ತಂಖಾ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಮನವೊಲಿಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ ವಕೀಲರೂ ಆಗಿರುವ ಕಾಂಗ್ರೆಸ್ ಸಂಸದ ವಿವೇಕ್ ತಂಖಾ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲರಾಗಿರುವ ತಂಖಾ ಅವರು ವಾಂಗ್ಚುಕ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಿದ್ದ ವಕೀಲರಲ್ಲಿ ಒಬ್ಬರು. ಜು.20ರಂದು ದೆಹಲಿಯಲ್ಲಿ ಯುವಕರು ಭಾರಿ ಸಂಖ್ಯೆಯಲ್ಲಿ ಸಂಸತ್ತಿನತ್ತ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ ಬಳಿಕ ಕೇಂದ್ರ ಸರ್ಕಾರ ವಾಂಗ್ಚುಕ್ ಜತೆ ಮಾತುಕತೆಗೆ ಮುಂದಾಯಿತು. ಈ ಪ್ರಕ್ರಿಯೆಯಲ್ಲಿ ತಂಖಾ ಅವರು ಸೇತುವೆಯಂತೆ ಕೆಲಸ ಮಾಡಿದರು ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಜು.22ರಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಮತ್ತು ಸಿಪಿಐ ಸಂಸದ ಜಾನ್ ಬ್ರಿಟಾಸ್ ಜತೆಗೆ ವಾಂಗ್ಚುಕ್‌ರನ್ನು ಭೇಟಿ ಮಾಡಿ ಉಪವಾಸ ಕೊನೆಗೊಳಿಸುವಂತೆ ಮನವಿ ಮಾಡಿದ್ದರು. ತಂಖಾ ಅವರ ಮನವೊಲಿಕೆಯ ಮೇರೆಗೆ, ವಾಂಗ್ಚುಕ್ ಅವರು ಸಚಿವ ಜೆ.ಪಿ. ನಡ್ಡಾ ಅವರಿಗೆ ತಮ್ಮ ಬೇಡಿಕೆಗಳ ಕುರಿತು ಪತ್ರ ಬರೆದರು. ಅಲ್ಲಿಂದ ಸರ್ಕಾರ ಮತ್ತು ವಾಂಗ್ಚುಕ್ ನಡುವೆ ಮಾತುಕತೆ ಆರಂಭವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯ ಮೇರೆಗೆ ಸಂಧಾನ ಏರ್ಪಟ್ಟು, ವಾಂಗ್ಚುಚ್ ನಿರಶನ ಕೈಬಿಟ್ಟರು ಎಂದು ಮೂಲಗಳು ಹೇಳಿವೆ. ಉಪವಾಸದಿಂದ ವಾಂಗ್ಚುಕ್ 11 ಕೇಜಿ ತೂಕ ಕಳೆದುಕೊಂಡಿದ್ದರು. ಅವರ ಆರೋಗ್ಯದ ಬಗ್ಗೆ ಕಳವಳಗೊಂಡು ತಂಖಾ ಸಂಧಾನ ನಡೆಸಿದರು ಎನ್ನಲಾಗಿದೆ.
ಅಮಿತ್ ಶಾ 4 ತಾಸು ಸಭೆ:
ಅಲ್ಲದೆ, ಅಂತಿಮ ಸಂಧಾನಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ 4 ಗಂಟೆಗಳ ಸಭೆ ಮಹತ್ವದ ಪಾತ್ರ ವಹಿಸಿತ್ತು ಎಂಬ ಸಂಗತಿ ಕೂಡ ಬಯಲಾಗಿದೆ.
26 ದಿನಗಳ ಉಪವಾಸದಿಂದ ವಾಂಗ್ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಈ ಬಗ್ಗೆ ದೇಶಾದ್ಯಂತ ತೀವ್ರ ಕಳವಳ ಸೃಷ್ಟಿಯಾಗಿದ್ದಲ್ಲದೆ, ಸರ್ಕಾರವೂ ಆತಂಕಗೊಂಡಿತು. ಹೀಗಾಗಿ ಅಮಿತ್ ಶಾ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಜತೆ ಸುಮಾರು 4 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದರು. ಶಾ ಸೂಚನೆಯಂತೆ ಅಲ್ಲಿಂದ ತೆರಳಿದ ಸಚಿವರು, ವಾಂಗ್ಚುಕ್‌ರನ್ನು ಭೇಟಿಯಾಗಿ ಉಪವಾಸ ನಿಲ್ಲಿಸುವಂತೆ ಮನವಿ ಮಾಡಿದರು. ಸಿಂಗ್ ಅವರು ವಾಂಗ್ಚುಕ್‌ರ ಪತ್ನಿ ಗೀತಾಂಜಲಿ ಆಂಗ್ಮೊ ಅವರನ್ನು ಭೇಟಿಯಾಗಿ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿದರು. ಆ ನಂತರವಷ್ಟೇ ವಾಂಗ್ಚುಕ್ ಉಪವಾಸ ನಿಲ್ಲಿಸಿದರು ಎಂದು ತಿಳಿದುಬಂದಿದೆ.
ಕಳೆದುಕೊಂಡ ತೂಕ ಬೇಗ ಗಳಿಸಿಕೊಳ್ಳಿ: ಮೋದಿ ಹಾರೈಕೆ
ನವದೆಹಲಿ: 26 ದಿನಗಳ ಉಪವಾಸ ಅಂತ್ಯಗೊಳಿಸಿದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ವೈದ್ಯರ ಸಲಹೆಯಂತೆ ಸೋನಮ್ ತಮ್ಮ ದಿನಚರಿಯನ್ನು ಅನುಸರಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ, ಕಳೆದುಕೊಂಡ ತೂಕವನ್ನು ಮರಳಿ ಪಡೆಯುವಂತೆ ನಾನು ಕೋರುತ್ತೇನೆ. ಸೋನಮ್ ಜೀ ಆರೋಗ್ಯವಾಗಿರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.


