ನವದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿಯ ಹೋರಾಟದ ಭಾಗವಾಗಿ ಕಳೆದ 25 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ತಮ್ಮ ಉಪವಾಸ ಸತ್ಯಾಗ್ರಹ ಕೈಬಿಡಲು ಮುಂದಿಟ್ಟಿದ್ದ ಷರತ್ತುಗಳನ್ನು ಸಡಿಲಿಸಿದ್ದಾರೆ. ಈ ಮೊದಲು ಇಟ್ಟಿದ್ದ ಮೂರು ಬೇಡಿಕೆಗಳ ಪೈಕಿ ಮುಖ್ಯವಾಗಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಬೇಡಿಕೆಯನ್ನು ಅವರು ಕೈಬಿಟ್ಟಿದ್ದಾರೆ.

ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್‌ಗೆ ಪತ್ರ ಬರೆದಿರುವ ಸೋನಂ

ಈ ಕುರಿತು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್‌ಗೆ ಬುಧವಾರ ಪತ್ರ ಬರೆದಿರುವ ಸೋನಂ, ‘ಸಂಸತ್‌ ಚಲೋ ಪೊಲೀಸರ ದೌರ್ಜನ್ಯ, ಬಲಪ್ರಯೋಗದ ನಡುವೆಯೂ ಅತ್ಯಂತ ಶಾಂತಿಯುತವಾಗಿತ್ತು. ಇಡೀ ದೇಶ, ಜಗತ್ತು ಅವರ ತಾಳ್ಮೆಗೆ ಸಾಕ್ಷಿಯಾಗಿತ್ತು. ಆದರೆ ಇದನ್ನು ಯಾವುದೇ ಕಾನೂನು ಕ್ರಮ , ಪ್ರತೀಕಾರಗಳಿಂದ ದುರ್ಬಲಗೊಳಿಸಬಾರದು. ಈ ಆಂದೋಲನದಲ್ಲಿ ಭಾಗಿಯಾದ ಯಾವುದೇ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಭರವಸೆ ನೀಡಬೇಕು. ಸರ್ಕಾರ ನನ್ನ ಮನವಿಯನ್ನು ಆಲಿಸಿದರೆ ಉಪವಾಸ ಕೈಬಿಡುತ್ತೇನೆ. ಇಲ್ಲದಿದ್ದರೆ ಅನಿರ್ದಿಷ್ಟಾವಧಿಗೆ ಮುಂದುವರೆಸುತ್ತೇನೆ’ ಎಂದಿದ್ದಾರೆ.

ಜೊತೆಗೆ, ಸರ್ಕಾರ ಬೇಡಿಕೆ ಈಡೇರಿಕೆಗೆ ಒಪ್ಪಿಕೊಂಡಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ, ‘ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಕ್ಕೆ ಧನ್ಯವಾದಗಳು. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಹೊಣೆಗಾರಿಕೆ ಕುರಿತು ಸಂಸತ್ತಿನಲ್ಲಿ ಚರ್ಚಿಸುವ ಭರವಸೆ ನೀಡಿದ್ದಕ್ಕೆ ಧನ್ಯವಾದಗಳು. ಆ ಬಳಿಕ ವಿವಿಧ ರಾಜಕೀಯ ಪಕ್ಷಗಳಿಂದ 67 ಸಂಸದರು ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದಾರೆ. ನಾನು ಬದುಕಲು ಬಯಸುತ್ತೇನೆ. ನನ್ನ ವಿದ್ಯಾರ್ಥಿಗಳಿಗಾಗಿ ಮತ್ತೆ ಹಿಂದಿರುಗುತ್ತೇನೆ. ಅವರಿಗಾಗಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.


ಈ ಮೂಲಕ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತ ತಮ್ಮ ಪಟ್ಟು ಸಡಿಲಿಸಿದ್ದಾರೆ.

ಸೋನಂ ಹೇಳಿಕೆ ಏನು?

- ಆತ್ಮಹತ್ಯೆಗೈದ ನೀಟ್‌ ಹುಡುಗರಿಗೆ ಪರಿಹಾರಕ್ಕೆ ಸರ್ಕಾರ ಒಪ್ಪಿದೆ

- ಪ್ರತಿಭಟನಾಕಾರರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು

- ಹಾಗೆ ಮಾಡಿದರೆ ನಾನು ಉಪವಾಸ ಸತ್ಯಾಗ್ರಹ ಕೈಬಿಡಲು ಸಿದ್ಧ

- ಸಂಸತ್ತಲ್ಲಿ ಚರ್ಚೆ, ಪರಿಹಾರಕ್ಕೆ ಒಪ್ಪಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ

- ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ನೀಡಿದ ಸೋನಂ ವಾಂಗ್ಚುಕ್‌