ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ, ‘ಏನೇ ಆದರೂ ಜು.20ರವರೆಗೂ ಜೀವ ಉಳಿಸಿಕೊಂಡಿರುತ್ತೇನೆ’ ಎಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹೇಳಿದ್ದಾರೆ.
ನವದೆಹಲಿ: ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ, ‘ಏನೇ ಆದರೂ ಜು.20ರವರೆಗೂ ಜೀವ ಉಳಿಸಿಕೊಂಡಿರುತ್ತೇನೆ’ ಎಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹೇಳಿದ್ದಾರೆ. ಜು.20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಂದು ಪ್ರತಿಭಟನಾ ಸ್ಥಳದಿಂದ ಸಂಸತ್ತಿನವರೆಗೂ ಜಿರಳೆ ಪಕ್ಷವು ಪಾದಯಾತ್ರೆ ಹಮ್ಮಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಾಂಗ್ಚುಕ್, ‘ನಾನು ದೈಹಿಕವಾಗಿ ಹೊರಗಡೆಯಿಂದ ದುರ್ಬಲವಾಗಿರಬಹುದು, ಆದರೆ ಮಾನಸಿಕವಾಗಿ ಬಲಿಷ್ಠನಾಗಿದ್ದೇನೆ. ನನ್ನ ಪ್ರಕಾರ ಹೊರಗಡೆ, ಒಳಗಡೆ ಎರಡೂ ಕೂಡ ಸದೃಢನಾಗಿದ್ದೇನೆ. ಈ ಶಕ್ತಿ ಜು. 20ಕ್ಕೆ ನಡೆಯಲಿರುವ ಶಾಂತಿಯುತ ಸಂಸತ್ ಚಳುವಳಿಯ ತನಕವೂ ಇರುತ್ತದೆ. ನಾವೆಲ್ಲರೂ ಒಟ್ಟಿಗೆ ಹೋಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ಮನವಿ ಸಲ್ಲಿಸೋಣ. ಅಲ್ಲಿಯ ತನಕ ನಾನು ಎಷ್ಟೇ ಕಷ್ಟವಾದರೂ ಜೀವ ಉಳಿಸಿಕೊಂಡು ಇರುತ್ತೇನೆ. ನೀವೆಲ್ಲರೂ ಅಂದು ಬಾರದಿದ್ದರೆ ಪ್ರತಿಭಟನೆ ವಿಫಲಗೊಂಡಂತೆ. ಹಾಗೇನಾದರೂ ಆದರೆ ಮರಳಿ ನಾನು ಭೂತವಾಗಿ ಬರುತ್ತೇನೆ’ ಎಂದಿದ್ದಾರೆ.
ಇದರ ನಡುವೆ ಕಳೆದ 24 ಗಂಟೆಗಳಲ್ಲಿ ವಾಂಗ್ಚುಕ್ ಮತ್ತೆ 350 ಗ್ರಾಂ ತೂಕ ಕಳೆದುಕೊಂಡಿದ್ದಾರೆ. 20 ದಿನದಲ್ಲಿ 9.5ಕೇಜಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ವಾಂಗ್ಚುಕ್ ಪ್ರತಿಭಟನೆ ಕಾಂಗ್ರೆಸ್ ಕೂಡ ಬೆಂಬಲಿಸಿದೆ. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪವನ್ ಖೇರಾ ಸೇರಿದಂತೆ ವಿವಿಧ ಪಕ್ಷದ ನಾಯಕರು ವಾಂಗ್ಚುಕ್ ಅವರನ್ನು ಭೇಟಿಯಾಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.
3 ಈಡಿಯಟ್ಸ್‌ಗೂ ಸೋನಂಗೆ ಸಂಬಂಧವಿಲ್ಲ: ಅಮೀರ್
ತಮ್ಮ ಅಭಿನಯದ 3 ಈಡಿಯಟ್ಸ್ ಸೋನಂ ವಾಂಗ್ಚುಕ್ ಅವರ ಜೀವನಾಧರಿತ ಎನ್ನುವ ಸುದ್ದಿಯನ್ನು ನಟ ಅಮೀರ್ ಖಾನ್ ತಳ್ಳಿ ಹಾಕಿದ್ದಾರೆ. ‘ಈ ಸುದ್ದಿ ನಿಜವಲ್ಲ. ಸಿನಿಮಾದ ಸಂದರ್ಭದಲ್ಲಿ ನನಗೆ ಸೋನಂ ಅವರು ಯಾರೂ ಅಂತಲೇ ಗೊತ್ತಿರಲಿಲ್ಲ. ಚಿತ್ರದ ಪಾತ್ರ ಅವರ ಜೀವನಾಧರಿತ ಅಲ್ಲ’ ಎಂದಿದ್ದಾರೆ.
ವಾಂಗ್ಚುಕ್‌ಗೆ, ಜಿರಳೆ ಪಕ್ಷ ಅಮೀರ್ ಮಾಜಿ ಪತ್ನಿ ಕಿರಣ್ ಬೆಂಬಲ
ವಾಂಗ್ಚುಕ್ ಅವರ ಹೋರಾಟಕ್ಕೆ ಅಮೀರ್ ಖಾನ್ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ನಾನು ಸೋನಂ ವಾಂಗ್ಚುಕ್, ಸಿಜೆಪಿ ಪಕ್ಷವನ್ನು ಬೆಂಬಲಿಸುತ್ತೇನೆ. ಸರ್ಕಾರದ ಮೌನ ಬೇಸರ ತರಿಸಿದೆ. ಕೇಂದ್ರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
