ನೀಟ್‌ ಪರೀಕ್ಷಾ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ 19 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್‌, ಜು.20ರ ಜಿರಳೆ ಪಕ್ಷದ ಸಂಸತ್‌ ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.

ನವದೆಹಲಿ: ನೀಟ್‌ ಪರೀಕ್ಷಾ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ 19 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್‌, ಜು.20ರ ಜಿರಳೆ ಪಕ್ಷದ ಸಂಸತ್‌ ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.

ಅಂದು ಸಂಸತ್‌ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಅಂದೇ ಈ ಪ್ರತಿಭಟನೆ ನಡೆಯುವುದು ವಿಶೇಷವಾಗಿದೆ.

19 ದಿನದಿಂದ ವಾಂಗ್ಚುಕ್‌ ಉಪವಾಸ

ಈ ನಡುವೆ, 19 ದಿನದಿಂದ ವಾಂಗ್ಚುಕ್‌ ಉಪವಾಸನಿರತರಾಗಿದ್ದರೂ ಸರ್ಕಾರ ವಾಂಗ್ಚುಕ್ ಜತೆ ಮಾತನಾಡದೆ ಮೌನಕ್ಕೆ ಶರಣಾಗಿರುವುದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಗ್ಯ ಕ್ಷೀಣಿಸುತ್ತಿದ್ದರೂ ನಿರಶನ ಮುಂದುವರಿಸುತ್ತಿರುವ ಸೋನಂ ವಾಂಗ್ಚುಕ್‌ ಪರ ಬೆಂಬಲವೂ ಹೆಚ್ಚಾಗತೊಡಗಿದೆ.

ವಿಡಿಯೋ ಸಂದೇಶ ಬಿಡುಗಡೆ

ಶುಕ್ರವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ‘ನಾನು ಉದ್ದೇಶ ಈಡೇರದೇ ಉಪವಾಸ ಅರ್ಧಕ್ಕೇ ನಿಲ್ಲಿಸಿದರೆ ಸರಿ ಇರುವುದಿಲ್ಲ. ಹೋರಾಟ ನಿಲ್ಲಿಸಿದರೆ ಪ್ರತಿಭಟನಾಕಾರರು ಸುಮ್ಮನೇ ಪ್ರತಿಭಟಿಸಿ ಎದ್ದು ಹೋಗುತ್ತಾರೆ ಎನ್ನುವ ಸಂದೇಶ ಸರ್ಕಾರಕ್ಕೆ ಹೋಗುತ್ತದೆ. ಅದರ ಬದಲು ಜು.20ರಂದು ಜಿರಳೆ ಪಕ್ಷ ಕರೆ ನೀಡಿರುವ ಸಂಸತ್‌ ಚಲೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ, ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಹೋರಾಟ ಬಲಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.