ಲಡಾಖ್‌ ಹೋರಾಟಗಾರ ವಾಂಗ್‌ಚುಕ್‌ ಬಂಧನ

| Published : Sep 27 2025, 12:00 AM IST

ಸಾರಾಂಶ

ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ರಾಜ್ಯದ ಸ್ಥಾನ ನೀಡುವಂತೆ ನಡೆದ ಜೆನ್‌-ಝೀ ದಂಗೆಗೆ ಪ್ರಚೋದನೆ ನೀಡಿರುವ ಆಪಾದನೆ ಮೇರೆಗೆ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

- ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸೆರೆ- ಲಡಾಖ್‌ನಿಂದ ಹೊರಗೆ ಶಿಫ್ಟ್‌, ದಿಲ್ಲಿಗೆ ಕರೆತರುವ ಸಾಧ್ಯತೆ- ರಾಜ್ಯಕ್ಕಾಗಿ ಬಂಧಿಸಲ್ಪಟ್ಟರೂ ಖುಷಿ ಎಂದಿದ್ದ ವಾಂಗ್ಚುಕ್‌

ಲೇಹ್‌: ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ರಾಜ್ಯದ ಸ್ಥಾನ ನೀಡುವಂತೆ ನಡೆದ ಜೆನ್‌-ಝೀ ದಂಗೆಗೆ ಪ್ರಚೋದನೆ ನೀಡಿರುವ ಆಪಾದನೆ ಮೇರೆಗೆ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ದೇಶವಿರೋಧಿಗಳ ಮೇಲೆ ಹಾಕುವ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸೋನಂರನ್ನು ಬಂಧಿಸಲಾಗಿದೆ. ಜತೆಗೆ ಅವರನ್ನು ಲಡಾಖ್‌ನ ಹೊರಗೆ ಕರೆದೊಯ್ಯಲಾಗಿದೆ. ದಿಲ್ಲಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ದಿನದ ಹಿಂದಷ್ಟೇ ಸೋನಂ, ‘ರಾಜ್ಯಕ್ಕಾಗಿ ಹೋರಾಡಿದ್ದಕ್ಕೆ ನನ್ನ ಬಂಧನವಾದರೂ ಖುಷಿಯಿದೆ’ ಎಂದಿದ್ದರು.

ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಲಡಾಖ್‌ ಡಿಜಿಪಿ ಎಸ್‌.ಡಿ.ಸಿಂಗ್‌ ಜಮ್ವಾಲ್‌ ನೇತೃತ್ವದ ಪೊಲೀಸರ ತಂಡ ಸೋನಂರನ್ನು ಬಂಧಿಸಿದೆ. ಹಿಂಸಾಚಾರ ನಡೆದ 2 ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಲಡಾಖ್‌ಅನ್ನು ರಾಜ್ಯವೆಂದು ಗುರುತಿಸಲು ಕೋರಿ ಬುಧವಾರ ನಡೆದ ಯುವಕರ ಪ್ರತಿಭಟನೆಯಲ್ಲಿ 4 ಜನ ಸಾವನ್ನಪ್ಪಿ 70 ಮಂದಿ ಗಾಯಗೊಂಡಿದ್ದರು. ಇದಕ್ಕೆ ಸೋನಂ ಪ್ರಚೋದನೆ ನೀಡಿದ್ದರು ಎಂಬುದು ಸರ್ಕಾರದ ಆರೋಪ. ಗುರುವಾರವಷ್ಟೇ ಅವರ ಶಿಕ್ಷಣ ಸಂಸ್ಥೆಗೆ ನೀಡಲಾಗಿದ್ದ ವಿದೇಶಿ ದೇಣಿಗೆ ಸ್ವೀಕಾರ ಲೈಸೆನ್ಸ್‌ಅನ್ನು ಕೇಂದ್ರಸರ್ಕಾರ ರದ್ದುಗೊಳಿಸಿತ್ತು. ==3ನೇ ದಿನ ಲೇಹ್‌ ಶಾಂತ:

ಕರ್ಫೂ ಮುಂದುವರಿಕೆಬುಧವಾರ ಭಾರೀ ಹಿಂಸೆಗೆ ಸಾಕ್ಷಿಯಾಗಿದ್ದ ಲೇಹ್‌ನಲ್ಲಿ ಶುಕ್ರವಾರವೂ ಶಾಂತಸ್ಥಿತಿ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲವಾದರೂ, ಭದ್ರತಾ ದೃಷ್ಟಿಯಿಂದ ಕರ್ಫೂವನ್ನು ಮುಂದುವರೆಸಲಾಗಿದೆ. ಆದಷ್ಟು ಬೇಗ ನಿರ್ಬಂಧ ತೆರವುಗೊಳಿಸಿ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.