ರಾಜಕೀಯ ಮಾಡಲು ಎಚ್‌ಡಿಕೆ ರಾಮನಗರಕ್ಕೆ ಏಕೆ ಬಂದ್ರು : ಡಿ.ಕೆ.ಶಿವಕುಮಾರ್‌ ಟೀಕಾ ಪ್ರಹಾರ

KannadaprabhaNewsNetwork | Updated : May 24 2025, 04:25 AM IST
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದರು? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಟೀಕಾಪ್ರಹಾರ ನಡೆಸಿದ್ದಾರೆ.
Follow Us

 ವಿಜಯಪುರ : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದರು? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಜಿಲ್ಲೆಯ ಕೊಲ್ಹಾರದಲ್ಲಿ ಶುಕ್ರವಾರ ಡಿ.ಕೆ.ಶಿವಕುಮಾರ್‌, ರಾಮನಗರದ ನಾಮಫಲಕಕ್ಕೆ ಚಿನ್ನದ ತಗಡು ಹೊಡೆಯಲಾಗುತ್ತದೆಯೇ ಎನ್ನುವ ಕುಮಾರಸ್ವಾಮಿ ಅವರ ಸರಣಿ ಟೀಕೆಗಳಿಗೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದರು? ಹಾಸನದಲ್ಲಿಯೇ ಏಕೆ ರಾಜಕೀಯ ಮಾಡಲಿಲ್ಲ? ಮೊದಲು ಎಚ್.ಡಿ.ಕುಮಾರಸ್ವಾಮಿ ಎನ್ನುವ ಹೆಸರಿನಲ್ಲಿರುವ ಅವರ ಊರಿನ ಹೆಸರು ಹಾಗೂ ತಂದೆಯ ಹೆಸರನ್ನು ಏಕೆ ಇನ್ನು ಇಟ್ಟುಕೊಂಡಿದ್ದಾರೆ? ಮೊದಲು ಅದನ್ನು ಬದಲಾವಣೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ನಾವು ಬೆಂಗಳೂರು ಜಿಲ್ಲೆಯವರು. ಒಂದೊಂದು ಊರಿನ ಹೆಸರಿಗೆ ತನ್ನದೇ ಆದ ಇತಿಹಾಸವಿರುತ್ತದೆ. ಮದ್ರಾಸ್‌ ಅನ್ನು ಮತ್ತೆ ಏಕೆ ಚೆನ್ನೈ ಎಂದು ಕರೆದರು‌. ಗುಲ್ಬರ್ಗಾವನ್ನು ಕಲಬುರ್ಗಿ ಎಂದು ಏಕೆ ಮರುನಾಮಕರಣ ಮಾಡಲಾಗಿದೆ? ನಮಗೂ ನಮ್ಮದೇ ಆದಂತಹ ಆಸೆ ಇರುತ್ತದೆ. ಅವರಿಗೆ ಏನು ತೊಂದರೆಯಾಗಿದೆ ಎಂದು ಪ್ರಶ್ನಿಸಿದರು.

ರಿಯಲ್ ಎಸ್ಟೇಟ್‌ಗಾಗಿ ಹೆಸರು ಬದಲಾವಣೆ ಮಾಡಲಾಗಿದೆ ಎನ್ನುವ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಹೌದು. ನಮ್ಮ ಹಳ್ಳಿಯ ಜನ ಉದ್ಧಾರವಾಗಬೇಕು. ಎಲ್ಲರಿಗೂ ಉದ್ಯೋಗ ಸಿಗಬೇಕು. ನಮ್ಮ ಜನರ ಆಸ್ತಿ ಮೌಲ್ಯ ಜಾಸ್ತಿಯಾಗಬೇಕು. ಪ್ರತಿಯೊಬ್ಬ ರೈತನಿಗೂ ಒಳ್ಳೆಯದಾಗಬೇಕು. ಹೊರಗಡೆ ದೇಶದಿಂದ ಜನರು ಬಂದು ಬಂಡವಾಳ ಹೂಡಿಕೆ ಮಾಡಬೇಕು. ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಆಸೆ. ಸಂಸತ್ ಕ್ಷೇತ್ರವನ್ನು ಮೊದಲು ಕನಕಪುರ ಎಂದು ಕರೆಯಲಾಗುತ್ತಿತ್ತು. ಅದನ್ನು ಬೆಂಗಳೂರು ಗ್ರಾಮಾಂತರ ಎಂದು ಆನಂತರ ಏಕೆ ಮಾಡಿದರು? ರಾಮನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ. ನಾವು ಕೇವಲ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುತ್ತಿದ್ದೇವೆ ಎಂದರು.

Read more Articles on