ಚನ್ನಪಟ್ಟಣ/ರಾಮನಗರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ದೆಹಲಿ ನಾಯಕರ ಸಪೋರ್ಟ್ ಏಕೆ ಬೇಕು?. ಹಣ ಕೊಟ್ಟು ಅವರನ್ನು ಏಕೆ ಕರೆಸಿದ್ದೀರಿ. ಧೈರ್ಯ ಇದ್ದಿದ್ದರೆ ನೀವೇ ಎದುರಿಸಬಹುದಿತ್ತಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ .ಅಶೋಕ್ ವಾಗ್ದಾಳಿ ನಡೆಸಿದರು.ಮೈಸೂರು ಚಲೋದ 3ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಸಿದ್ದರಾಮಯ್ಯ ಈಗ ಲೂಟಿರಾಮಯ್ಯ ಆಗಿದ್ದಾರೆ. ಅವರಿಗೆ ನೈತಿಕತೆ ಇದ್ದಿದ್ದರೆ ದೆಹಲಿ ನಾಯಕರ ಬೆಂಬಲ ಪಡೆಯುತ್ತಿರಲಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು, ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಡಿ.ಕೆ.ಶಿವಕುಮಾರ್ ಅವರು ನಿನ್ನ ಆಸ್ತಿ ಇಷ್ಟಿದೆ, ಅವನ ಆಸ್ತಿ ಎಷ್ಟಿದೆ ಅಂತ ಕೇಳಿದ್ದಾರೆ. ನಾವು ವರ್ಷಗಳಿಂದ ನಿಮ್ಮ ಆಸ್ತಿ ವಿವರ ಕೇಳುತ್ತಲೇ ಇದ್ದೇವೆ. ನೀವು ಕೊಟ್ಟಿಲ್ಲ. ನಾವಿಲ್ಲಿ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಬಂದಿದ್ದೇವೆ. ಆದರೆ, ನಮಗಿಂತ ಮೊದಲೇ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅಧಿಕಾರದಿಂದ ಬೇಗ ಇಳಿಯಲೆಂದು ಜನಾಂದೋಲನ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಸಿದ್ದರಾಮಯ್ಯನವರಿಗೆ 14 ಸೈಟು ಏಕೆ ಬೇಕು ಅಂತ ಜನರೇ ಕೇಳುತ್ತಿದ್ದಾರೆ. ಅವರಿಗೆ ಧೈರ್ಯ ಇದ್ದಿದ್ದರೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಪಲಾಯನ ಮಾಡುತ್ತಿರಲಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ತಿಂಗಳಿಗೆ 2 ಸಾವಿರ ಕೊಡುತ್ತೇವೆಂದು ಹೇಳಿದ್ದರಿಂದಲೇ ಆಸೆಯಿಂದ ಮಹಿಳೆಯರು ಓಟು ಹಾಕಿದರು. ಆದರೀಗ ಎಣ್ಣೆ ಕ್ವಾಟ್ರಗೆ 50 ರು., ಹಾಲಿನ ಬೆಲೆ 3 ರು., ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ, ಪೆಟ್ರೋಲ್ ಬೆಲೆ 3 ರು. ಹೆಚ್ಚಳ ಮಾಡಿದ್ದಾರೆ. ಇಲ್ಲಿ ಲೂಟಿ ಮಾಡಿ ದೆಹಲಿಗೆ ಕಳುಹಿಸುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದ್ದೀರಿ. ಜನರು ಗ್ಯಾರಂಟಿಯನ್ನು ನ್ಯಾಯವಾಗಿ ಕೊಡಿ ಅಂತ ಉಗಿಯುತ್ತಿದ್ದಾರೆ ಎಂದು ಹರಿಹಾಯ್ದರು.