ಭರ್ಜರಿ ವಾಕ್ಸಮರದ ಬಳಿಕ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ‘ಉಮೀದ್’ ಅಂಗೀಕಾರವಾಗಿದೆ. ಈ ಮಸೂದೆಯನ್ನು ರೂಪಿಸಿದ್ದು ಏಕೆ? ಅದರ ಪ್ರಯೋಜನ ಏನು? ಹಳೆ ಕಾಯ್ದೆಗೂ ಹೊಸ ಶಾಸನಕ್ಕೂ ಏನು ವ್ಯತ್ಯಾಸ ಎಂಬುದರ ಕಿರು ಚಿತ್ರಣ ಇಲ್ಲಿದೆ.
ಭರ್ಜರಿ ವಾಕ್ಸಮರದ ಬಳಿಕ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ‘ಉಮೀದ್’ ಅಂಗೀಕಾರವಾಗಿದೆ. ಈ ಮಸೂದೆಯನ್ನು ರೂಪಿಸಿದ್ದು ಏಕೆ? ಅದರ ಪ್ರಯೋಜನ ಏನು? ಹಳೆ ಕಾಯ್ದೆಗೂ ಹೊಸ ಶಾಸನಕ್ಕೂ ಏನು ವ್ಯತ್ಯಾಸ ಎಂಬುದರ ಕಿರು ಚಿತ್ರಣ ಇಲ್ಲಿದೆ.
ಕಾಯ್ದೆ ತಿದ್ದುಪಡಿ ಉದ್ದೇಶ ಏನು?
ಆಸ್ತಿಗಳ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಇದನ್ನು ಪರಿಹರಿಸುವುದರ ಜತೆಗೆ ವಕ್ಫ್ ಆಸ್ತಿಗಳ ನಿರ್ವಹಣೆ ಹಾಗೂ ಆಡಳಿತವನ್ನು ಸುಧಾರಣೆ ಮಾಡುವ ಉದ್ದೇಶದಿಂದ ವಕ್ಫ್ (ತಿದ್ದುಪಡಿ) ಮಸೂದೆ- 2024 ಅನ್ನು ರೂಪಿಸಲಾಗಿದೆ. ಕಾಯ್ದೆಯ ಹೆಸರು ಬದಲಾವಣೆ, ವಕ್ಫ್ ವ್ಯಾಖ್ಯಾನ ಪರಿಷ್ಕರಣೆ, ನೋಂದಣಿ ನೋಂದಣಿ ಪ್ರಕ್ರಿಯೆ ಸುಧಾರಣೆ, ವಕ್ಫ್ ದಾಖಲೆಗಳ ನಿರ್ವಹಣೆಯಲ್ಲಿ ತಂತ್ರಜ್ಞಾನದ ಪಾತ್ರ ವೃದ್ಧಿಸುವುದು ಕಾಯ್ದೆ ತಿದ್ದುಪಡಿಯ ಉದ್ದೇಶಗಳು.
ವಕ್ಫ್ ನಿರ್ವಹಣೆ ಯಾರ ಹೊಣೆ?
ಕೇಂದ್ರ ವಕ್ಫ್ ಪರಿಷತ್ತು, ರಾಜ್ಯ ವಕ್ಫ್ ಮಂಡಳಿಗಳು ಹಾಗೂ ವಕ್ಫ್ ನ್ಯಾಯಾಧಿಕರಣಗಳೆಂಬ ಮೂರು ಸಂಸ್ಥೆಗಳು ವಕ್ಫ್‌ಗೆ ಸಂಬಂಧಿಸಿದ್ದಾಗಿವೆ. ಈ ಪೈಕಿ ಕೇಂದ್ರ ವಕ್ಫ್ ಮಂಡಳಿ ನೇರವಾಗಿ ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರ ಹಾಗೂ ರಾಜ್ಯ ವಕ್ಫ್ ಮಂಡಳಿಗಳಿಗೆ ಸಲಹೆ- ಸೂಚನೆಗಳನ್ನು ನೀಡುತ್ತದೆ. ರಾಜ್ಯ ವಕ್ಫ್ ಮಂಡಳಿಗಳು ವಕ್ಫ್ ಆಸ್ತಿಯನ್ನು ಆಯಾ ರಾಜ್ಯದಲ್ಲಿ ನಿರ್ವಹಣೆ ಹಾಗೂ ಸಂರಕ್ಷಣೆ ಮಾಡುವ ಹೊಣೆ ಹೊತ್ತಿವೆ. ಆ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯಾಜ್ಯ ಸೃಷ್ಟಿಯಾದರೆ ಅದನ್ನು ನಿರ್ವಹಿಸಲು ವಕ್ಫ್ ನ್ಯಾಯಾಧಿಕರಣಗಳು ಇವೆ.
ಕಾಯ್ದೆ ಬದಲಾವಣೆ ಮಾಡಿದ್ದು ಏಕೆ?
‘ಒಮ್ಮೆ ವಕ್ಫ್ ಎಂದು ಘೋಷಣೆಯಾದರೆ ಮುಗಿಯಿತು, ಅದು ಯಾವತ್ತಿಗೂ ವಕ್ಫ್ ಆಸ್ತಿಯೇ’ ಎಂಬ ತತ್ವ ವಕ್ಫ್‌ನಲ್ಲಿ ಪಾಲನೆಯಾಗುತ್ತಿದೆ. ವ್ಯಾಜ್ಯಗಳಿಗೆ ಇದುವೇ ಮೂಲ ಕಾರಣ. ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದಾಗ, ಆಸ್ತಿ ಮಾಲೀಕತ್ವ ಕುರಿತು ವ್ಯಾಜ್ಯ ಸೃಷ್ಟಿಯಾದಾಗ, ನಿರ್ವಹಣೆಯಲ್ಲಿ ಲೋಪ ಎದುರಾದಾಗ ಈ ಹಿಂದಿನ ಕಾಯ್ದೆಗಳಲ್ಲಿ ಸೂಕ್ತ ಪರಿಹಾರಗಳು ಇರಲಿಲ್ಲ. ಅಪಾರ ಪ್ರಮಾಣದ ವಿವಾದಗಳೂ ಸೃಷ್ಟಿಯಾಗಿದ್ದವು. ಕೇಂದ್ರ ಸರ್ಕಾರಕ್ಕೆ ದೂರುಗಳೂ ಹೋಗಿದ್ದವು.
ವಕ್ಫ್ ಟ್ರಿಬ್ಯುನಲ್ ಆದೇಶ ಪ್ರಶ್ನಾತೀತ!
ವಕ್ಫ್ ನ್ಯಾಯಾಧಿಕರಣಗಳು ನೀಡುವ ನಿರ್ಧಾರವನ್ನು ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಅವಕಾಶವೇ ಇರಲಿಲ್ಲ. ಇದರಿಂದಾಗಿ ವಕ್ಫ್ ಮಂಡಳಿಯ ನಿರ್ವಹಣೆಯಲ್ಲಿ ಹೊಣೆಗಾರಿಕೆ ಕುಸಿದಿತ್ತು. ಪಾರದರ್ಶಕತೆಯೂ ಕ್ಷೀಣಿಸಿತ್ತು. ಸರ್ವೇ ಕಾರ್ಯಗಳು ಹಳ್ಳ ಹಿಡಿದಿದ್ದವು. ಇದನ್ನೆಲ್ಲಾ ಗಮನಿಸಿ ಸರ್ಕಾರ ಕಾಯ್ದೆ ತಿದ್ದುಪಡಿ ತಂದಿದೆ.
ಯಾವ ಆಸ್ತಿ ಬೇಕಾದರೂ
ವಕ್ಫ್ ಎಂದು ಆಗುತ್ತಿತ್ತು!
ಕೆಲವು ರಾಜ್ಯಗಳ ವಕ್ಫ್ ಮಂಡಳಿಗಳು ತಮ್ಮ ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡಿದ್ದರಿಂದ ಸಮುದಾಯದಲ್ಲಿ ಸಂಘರ್ಷ ಸೃಷ್ಟಿಯಾಗಿತ್ತು. ವಕ್ಫ್ ಕಾಯ್ದೆಯಲ್ಲಿದ್ದ ಸೆಕ್ಷನ್ 40 ಅನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಕಾಯಿದೆಯ ಆ ಅಂಶ ಬಳಸಿ ಖಾಸಗಿ ಆಸ್ತಿಯನ್ನೆಲ್ಲಾ ವಕ್ಫ್ ಆಸ್ತಿ ಎಂದು ಘೋಷಿಸಲಾಗಿತ್ತು. ಇದರಿಂದ ಕಾನೂನು ಸಮರ ಹಾಗೂ ಅಶಾಂತಿ ಸೃಷ್ಟಿಯಾಗಿತ್ತು. ಪರಿಣಾಮವಾಗಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಕೈ ಹಾಕುವಂತಾಯಿತು.
ಬೇರೆ ಯಾವ ಧರ್ಮದಲ್ಲೂ
ವಕ್ಫ್‌ನಂತಹ ಕಾಯ್ದೆ ಇಲ್ಲ
ವಕ್ಫ್ ಕಾಯ್ದೆ ಎಂಬುದು ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುತ್ತದೆ. ಆದರೆ ಇಂತಹ ಕಾಯ್ದೆ ಬೇರೆ ಯಾವ ಧರ್ಮಕ್ಕೂ ಇಲ್ಲ. ವಕ್ಫ್ ಕಾಯ್ದೆ ಸಂವಿಧಾನಬದ್ಧವೇ ಎಂದು ಪ್ರಶ್ನಿಸಿ ಈ ದೆಹಲಿ ಹೈಕೋರ್ಟ್‌ಗೂ ಪಿಐಎಲ್ ಸಲ್ಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.
ತಿದ್ದುಪಡಿಗೂ ಮುನ್ನ ಪಾಕ್ ಸೇರಿ
ಅರಬ್ ದೇಶಗಳ ಕಾಯ್ದೆ ಅಧ್ಯಯನ
ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ರೂಪಿಸುವ ಮುನ್ನ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸಾಕಷ್ಟು ಸಮಾಲೋಚನೆ ನಡೆಸಿದೆ. ವಕ್ಫ್ ಕಾಯ್ದೆಯ ಅಧಿಕಾರ ದುರ್ಬಳಕೆ, ವಕ್ಫ್ ಆಸ್ತಿ ನಿರ್ವಹಣಾ ಲೋಪ, ವಕ್ಫ್ ಆಸ್ತಿಗಳ ಕಡಿಮೆ ಬಳಕೆ ಕುರಿತು ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮ, ಶ್ರೀಸಾಮಾನ್ಯರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಂಡಿದೆ. ರಾಜ್ಯ ವಕ್ಫ್ ಮಂಡಳಿಗಳ ಜತೆಗೂ ಸಮಾಲೋಚನೆ ನಡೆಸಿದೆ. ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್, ಕುವೈತ್, ಒಮಾನ್, ಬಾಂಗ್ಲಾದೇಶ ಹಾಗೂ ಟರ್ಕಿಯಲ್ಲಿ ವಕ್ಫ್ ನಿರ್ವಹಣೆ ಕುರಿತು ಇರುವ ಅಂತಾರಾಷ್ಟ್ರೀಯ ಅಭ್ಯಾಸಗಳನ್ನೂ ವಿಶ್ಲೇಷಣೆಗೆ ಒಳಪಡಿಸಿದೆ. ಆಗ ಕಂಡುಬಂದ ವಾಸ್ತವ ಏನೆಂದರೆ, ಅಲ್ಲೆಲ್ಲಾ ವಕ್ಫ್ ಆಸ್ತಿಗಳನ್ನು ಸರ್ಕಾರದ ಕಾನೂನು ಹಾಗೂ ಸಂಸ್ಥೆಗಳೇ ನಿರ್ವಹಿಸುತ್ತಿವೆ.
ಏನೇನು ಬದಲಾವಣೆ?
ವಕ್ಫ್ ಕಾಯ್ದೆ 1995 ಉಮ್ಮೀದ್-2024
1. ಯಾವುದೇ ಆಸ್ತಿಯನ್ನು ವಕ್ಫ್ ಅಂತ ಘೋಷಿಸಿಕೊಳ್ಳಬಹುದು. ಮಾಲೀಕರ ಘೋಷಣೆ ಅಥವಾ ದತ್ತಿ ಮೂಲಕ ಪಡೆಯಬಹುದು
2. ಯಾವ ಆಸ್ತಿಯನ್ನು ಬೇಕಾದರೂ ವಕ್ಫ್ ಆಸ್ತಿ ಎಂದು ಘೋಷಿಸುವ ಅಧಿಕಾರಕ್ಕೆ ಕತ್ತರಿ. ಆಸ್ತಿ ದಾನ ಮಾಡುವವರು ಕನಿಷ್ಠ 5 ವರ್ಷಗಳಿಂದ ಮುಸ್ಲಿಂ ಧರ್ಮದಲ್ಲಿರಬೇಕು. ಮಹಿಳೆಯರಿಗೆ ಆಸ್ತಿ ಪಿತ್ರಾರ್ಜಿತ ಹಕ್ಕು ನಿರಾಕರಿಸಬಾರದು.
1. ಸರ್ಕಾರಿ ಆಸ್ತಿ ವಕ್ಫ್ ಆಸ್ತಿಯೇ ಎಂಬ ಬಗ್ಗೆ ಸ್ಪಷ್ಟ ನಿಯಮಗಳು ಇಲ್ಲ
2. ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಿದ್ದರೆ ಅದು ರದ್ದಾಗುತ್ತದೆ. ವ್ಯಾಜ್ಯಗಳನ್ನು ಜಿಲ್ಲಾಧಿಕಾರಿ ಪರಿಹರಿಸಿ, ರಾಜ್ಯಗಳಿಗೆ ತಿಳಿಸುತ್ತಾರೆ.
1. ವಕ್ಫ್ ಆಸ್ತಿ ಯಾವುದೆಂದು ನಿರ್ಧರಿಸುವ ಅಧಿಕಾರ ವಕ್ಫ್ ಮಂಡಳಿಗೆ ಇದೆ.
2. ಆ ಅಧಿಕಾರವನ್ನು ರದ್ದುಗೊಳಿಸಲಾಗಿದೆ
1. ವಕ್ಫ್ ಆಸ್ತಿಗಳ ಸರ್ವೇಯನ್ನು ಸರ್ವೇ ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರು ಮಾಡಬೇಕು
2. ರಾಜ್ಯದ ಕಂದಾಯ ಕಾಯ್ದೆಯ ಪ್ರಕಾರ ಜಿಲ್ಲಾಧಿಕಾರಿಗಳೇ ಸರ್ವೇ ನಡೆಸುವ ಅಧಿಕಾರ ಹೊಂದಿರುತ್ತಾರೆ
1. ಕೇಂದ್ರ ವಕ್ಫ್ ಪರಿಷತ್ತಿನಲ್ಲಿರುವ ಎಲ್ಲ ಸದಸ್ಯರೂ ಮುಸ್ಲಿಮರಾಗಿರಬೇಕು. ಅದಲ್ಲಿರುವ ಇಬ್ಬರು ಮಹಿಳಾ ಸದಸ್ಯರೂ ಅದೇ ಧರ್ಮದವರಾಗಿರಬೇಕು
2. ಇಬ್ಬರು ಮುಸ್ಲಿಮೇತರರು ಇರಬೇಕು. ಸಂಸದರು, ಮಾಜಿ ಜಡ್ಜ್‌ಗಳು, ಗಣ್ಯ ವ್ಯಕ್ತಿಗಳು ಮುಸ್ಲಿಮರಾಗಬೇಕಿಲ್ಲ.
1. ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಚುನಾಯಿತ ಮುಸ್ಲಿಂ ಸಂಸದ/ಶಾಸಕ/ಬೌರ್ ಕೌನ್ಸಿಲ್ ಸದಸ್ಯರಿರಬೇಕು. ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು
2. ಇಬ್ಬರು ಮುಸ್ಲಿಮೇತರರು ಸೇರಿದಂತೆ ರಾಜ್ಯ ಸರ್ಕಾರ ಸದಸ್ಯರನ್ನು ನಾಮಿರ್ದೇಶನ ಮಾಡಬಹುದು. ಶಿಯಾ, ಸುನ್ನಿ, ಹಿಂದುಳಿದ ಮುಸ್ಲಿಂ, ಬೊಹ್ರಾ, ಅಗಾಖಾನಿಯಿಂದ ತಲಾ ಒಬ್ಬರು ಇಬ್ಬರು ಇರಬೇಕು. ಕನಿಷ್ಠ ಇಬ್ಬರು ಮುಸ್ಲಿಂ ಮಹಿಳೆಯರಿರಬೇಕು.
1. ವಕ್ಫ್ ಖಾತೆಗಳನ್ನು ರಾಜ್ಯ ಸರ್ಕಾರಗಳು ಯಾವಾಗ ಬೇಕಾದರೂ ಆಡಿಟ್ ಮಾಡಬಹುದು
2. ವಕ್ಫ್ ನೋಂದಣಿ, ಖಾತೆಗಳು ಹಾಗೂ ಆಡಿಟ್‌ಗಳ ಕುರಿತು ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಬಹುದು
ಈ ತಿದ್ದುಪಡಿಯಿಂದ ಏನು ಲಾಭ?
- ವಕ್ಫ್ ಆಸ್ತಿಗಳ ಮೇಲೆ ಕೇಂದ್ರೀಕೃತ ಡಿಜಿಟಲ್ ಪೋರ್ಟಲ್ ನಿಗಾ ಇಡುತ್ತದೆ. ಇದರಿಂದಾಗಿ ವಕ್ಫ್ ಆಸ್ತಿಗಳ ಗುರುತು, ನಿಗಾ ಹಾಗೂ ನಿರ್ವಹಣೆ ಸುಲಭ
- ಲೆಕ್ಕಪರಿಶೋಧನೆ ಕ್ರಮಗಳಿಂದ ಹಣಕಾಸು ಅಕ್ರಮ ತಪ್ಪುತ್ತದೆ. ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಲಭಿಸುತ್ತದೆ.
- ವಕ್ಫ್ ಆಸ್ತಿ ದುರ್ಬಳಕೆ ಹಾಗೂ ಅಕ್ರಮ ಸ್ವಾಧೀನ ತಡೆಯುತ್ತದೆ. ವಕ್ಫ್ ಮಂಡಳಿಗಳ ಆದಾಯ ಹೆಚ್ಚುತ್ತದೆ
- ಆರೋಗ್ಯ, ಶಿಕ್ಷಣ, ವಸತಿ ಹಾಗೂ ಜೀವನೋಪಾಯ ನೆರವಿಗೆ ಹಣ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಆರ್ಥಿಕ ದುರ್ಬಲ ವರ್ಗಗಳಿಗೆ ಅನುಕೂಲ.