ಬಿಜೆಪಿ-ಜೆಡಿಎಸ್‌ ಶಾಸಕರೂ ರೆಸಾರ್ಟ್‌ಗೆ ಹೋಗ್ತಾರಾ?

KannadaprabhaNewsNetwork |  
Published : Feb 24, 2024, 02:37 AM ISTUpdated : Feb 24, 2024, 11:51 AM IST
ಬಿಜೆಪಿ ಜೆಡಿಎಸ್‌ | Kannada Prabha

ಸಾರಾಂಶ

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಕ್ಕೆಐವರು ಅಭ್ಯರ್ಥಿಗಳು ಕಣದಲ್ಲಿರುವ ಹಿನ್ನೆಲೆಯಲ್ಲಿ ಕುತೂಹಲ ಹೆಚ್ಚಾಗಿದ್ದು, ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಕಾರಣ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು  ರೆಸಾರ್ಟ್‌ಗೆ ಕರೆದೊಯ್ಯುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಐವರು ಅಭ್ಯರ್ಥಿಗಳು ಕಣದಲ್ಲಿರುವ ಹಿನ್ನೆಲೆಯಲ್ಲಿ ಕುತೂಹಲ ಹೆಚ್ಚಾಗಿದ್ದು, ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಕಾರಣ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ಗೆ ಕರೆದೊಯ್ಯುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿವೆ.

ಆದರೆ, ಈ ಬಗ್ಗೆ ಪಕ್ಷದ ಹಿರಿಯ ನಾಯಕರಲ್ಲಿ ಇನ್ನೂ ಒಮ್ಮತಾಭಿಪ್ರಾಯ ಮೂಡಿಲ್ಲ. ಸೋಮವಾರದ ಪರಿಸ್ಥಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಮಂಗಳವಾರ ಚುನಾವಣೆ ನಡೆಯಲಿದೆ.

ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌ ಬಳಿ ಅಗತ್ಯ ಮತಗಳಿವೆ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿ-ಜೆಡಿಎಸ್‌ ಶಾಸಕರನ್ನು ಸೆಳೆಯುವ ಸಾಧ್ಯತೆ ಇದೆ. 

ಹೀಗಾಗಿ ತಮ್ಮ ಪಕ್ಷದ ಶಾಸಕರು ಕಾಂಗ್ರೆಸ್‌ ಪಾಲಾಗುವುದನ್ನು ತಪ್ಪಿಸಲು ಉಭಯ ಪಕ್ಷಗಳು ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಅಡ್ಡ ಮತದಾನವಾಗದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣದಲ್ಲಿರುವುದರಿಂದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್‌ಗೆ ಸಹಕರಿಸಬೇಕಾಗಿದೆ. 

ಈ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಬಿಜೆಪಿ ಶಾಸಕರು ಸಹ ರೆಸಾರ್ಟ್‌ಗೆ ತೆರಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. 

ಮಂಗಳವಾರ ಚುನಾವಣೆ ನಡೆಯಲಿದ್ದು, ಸೋಮವಾರ ಅಧಿವೇಶನ ಮುಕ್ತಾಯದ ಬಳಿಕ ನೇರವಾಗಿ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತದೆ.

ಮಂಗಳವಾರ ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಕರೆತರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಓರ್ವ ಅಭ್ಯರ್ಥಿ ತಲಾ 45 ಮತಗಳನ್ನು ಪಡೆಯಬೇಕು. 

ಬಿಜೆಪಿ ತನ್ನ ಅಭ್ಯರ್ಥಿಗೆ 46 ಮತಗಳನ್ನು ನಿಗದಿಪಡಿಸಲಿದ್ದು, ಹೆಚ್ಚುವರಿಯಾಗಿ ಉಳಿಯುವ 20 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ವರ್ಗಾಯಿಸಲಿದೆ. 

ಜೆಡಿಎಸ್ 19 ಸದಸ್ಯರನ್ನು ಹೊಂದಿದ್ದು, ಬಿಜೆಪಿಯ ಹೆಚ್ಚುವರಿ 20 ಮತಗಳು ಸೇರಿದರೆ 39 ಮತಗಳು ಕುಪೇಂದ್ರ ರೆಡ್ಡಿಗೆ ಬರಲಿದೆ. ಇನ್ನುಳಿದ ಆರು ಮತಗಳಿಗಾಗಿ ತೆರೆಮರೆಯಲ್ಲಿ ಕಸರತ್ತು ನಡೆದಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ
ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಸಂಪುಟ ಗ್ರಿನ್ ಸಿಗ್ನಲ್‌