ಗ್ಯಾರಂಟಿ ಪರಾಕಾಷ್ಠೆ: ಬಿಹಾರ ಪ್ರತಿ ಮನೆಗೂ ಸರ್ಕಾರಿ ಹುದ್ದೆಯ ಆಫರ್‌!

KannadaprabhaNewsNetwork |  
Published : Oct 10, 2025, 01:00 AM ISTUpdated : Oct 10, 2025, 06:58 AM IST
ತೇಜಸ್ವಿ ಯಾದವ್‌ | Kannada Prabha

ಸಾರಾಂಶ

 ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಭರವಸೆ ದಿನೇದಿನೇ ಪರಾಕಾಷ್ಠೆ ತಲುಪುತ್ತಿದೆ. ಚುನಾವಣೆಯಲ್ಲಿ ಇಂಡಿಯಾ ಕೂಟ ಗೆದ್ದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಘೋಷಿಸಿದ್ದಾರೆ.

ಪಟನಾ: ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಭರವಸೆ ದಿನೇದಿನೇ ಪರಾಕಾಷ್ಠೆ ತಲುಪುತ್ತಿದೆ. ಚುನಾವಣೆಯಲ್ಲಿ ಇಂಡಿಯಾ ಕೂಟ ಗೆದ್ದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಘೋಷಿಸಿದ್ದಾರೆ.

ಅಂಕಿಸಂಖ್ಯೆ ಲೆಕ್ಕಾಚಾರದಲ್ಲಿ ನೋಡಿದರೆ, ಕಾರ್ಯಸಾಧುವಲ್ಲದ ಇಂಥದ್ದೊಂದು ಭರ್ಜರಿ ಆಫರ್‌ ಮೂಲಕ ಆರ್‌ಜೆಡಿ 20 ವರ್ಷಗಳ ಬಳಿಕ ರಾಜ್ಯದಲ್ಲಿ ಏಕಾಂಗಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಯೋಜನೆ ರೂಪಿಸಿದೆ.

ಗುರುವಾರ ಸುದ್ದಿಗೋ಼ಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್‌, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದ 20 ದಿನದಲ್ಲಿ ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಖಾತರಿಪಡಿಸುವ ಕಾನೂನು ರೂಪಿಸಿ, ಅದು 20 ತಿಂಗಳಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಲಾಗುತ್ತದೆ. ನಾನು ಹಿಂದಿನ ಚುನಾವಣೆಯಲ್ಲೂ ಭರವಸೆ ನೀಡಿದ್ದೆ. ಆಗ ಅಲ್ಪಾವಧಿಯಲ್ಲಿಯೇ 5 ಲಕ್ಷ ಉದ್ಯೋಗ ನೀಡಿದ್ದೆ. ಇನ್ನು 5 ವರ್ಷ ಅಧಿಕಾರ ಸ್ವೀಕರಿಸಿದರೆ, ಎಷ್ಟು ಹುದ್ದೆ ನೀಡುತ್ತೇನೆ. ನೀವೇ ಯೋಚಿಸಿ’ ಎಂದು ಹೇಳಿದ್ದಾರೆ. ಜೊತೆಗೆ ‘ಎನ್‌ಡಿಎ ಕೂಟ 20 ವರ್ಷಗಳಲ್ಲಿ ಮಾಡಲಾಗದ್ದನ್ನು ನಾವು ಮಾಡಿ ತೋರಿಸುತ್ತೇವೆ’ ಎಂದರು.

2023ರ ಜನಗಣತಿ ಅನ್ವಯ ಬಿಹಾರದಲ್ಲಿ ಒಟ್ಟು 3 ಕೋಟಿ ಕುಟುಂಬಗಳು ಇವೆ. ಈ ಪೈಕಿ ಅಂದಾಜು 1 ಕೋಟಿ ಕುಟುಂಬಗಳು ಅತ್ಯಂತ ಬಡತನದಲ್ಲಿದ್ದು, ಮಾಸಿಕ 6000 ರು.ಗಿಂತಲೂ ಕಡಿಮೆ ಆದಾಯದಲ್ಲಿ ಜೀವನ ಸಾಗಿಸುತ್ತಿವೆ. ಆರ್‌ಜೆಡಿ ನೀಡಿರುವ ಭರವಸೆ ಅನ್ವಯ ಕನಿಷ್ಠ 3 ಕೋಟಿ ಕುಟುಂಬಗಳಿಗೆ ಉದ್ಯೋಗ ನೀಡಬೇಕು. ಈಗಾಗಲೇ ಈ ಪೈಕಿ ಸಾಕಷ್ಟು ಕುಟುಂಬಗಳು ತಲಾ ಒಂದು ಸರ್ಕಾರಿ ಉದ್ಯೋಗ ಹೊಂದಿವೆ ಎಂದು ಲೆಕ್ಕ ಹಾಕಿದರೂ, ಉಳಿದವರಿಗೆ ಉದ್ಯೋಗ ಕೊಡುವುದು ಕೂಡಾ ಕಷ್ಟ.

ಭರ್ಜರಿ ಆಫರ್‌:

ಚುನಾವಣೆ ಘೋಷಣೆಗೆ ಮುನ್ನವೇ ಆಡಳಿತಾರೂಢ ಜೆಡಿಯು - ಬಿಜೆಪಿ ಮೈತ್ರಿಕೂಟವು ಹಲವು ಯೋಜನೆಗಳನ್ನು ಘೋಷಿಸಿದೆ. ಮುಖ್ಯವಾಗಿ, ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆಯಡಿ 75 ಲಕ್ಷ ಮಹಿಳೆಯರಿಗೆ ಒಂದು ಬಾರಿಯ ಕೊಡುಗೆಯಾಗಿ ತಲಾ 10000 ರು. ಘೋಷಿಸಿದೆ. ಜೊತೆಗೆ ನಿರುದ್ಯೋಗಿ ಯುವಕರಿಗೆ ಮಾಸಿಕ ತಲಾ 1000 ರು. ಭತ್ಯೆ, ವೃದ್ಧರು, ವಿಧವೆಯರು, ಅಂಗವಿಕಲರ ಪಿಂಚಣಿ 400 ರು.ನಿಂದ 1000 ರು.ಗೆ, ಪತ್ರಕರ್ತರ ಪಿಂಚಣಿ 6000 ರು.ನಿಂದ 15000 ರು.ಗೆ ಹೆಚ್ಚಿಸಲಾಗಿದೆ. ಜೊತೆಗೆ, ಪ್ರತಿ ಕುಟುಂಬಕ್ಕೂ ಮಾಸಿಕ 125 ಯುನಿಟ್‌ ಉಚಿತ ವಿದ್ಯುತ್‌, ಎಸ್ಟಿ ವಿಕಾಸ್‌ ಮಿತ್ರ ಯೋಜನೆಯಡಿ ಟ್ಯಾಬ್ಲೆಟ್‌ ಖರೀದಿಗೆ ತಲಾ 25000 ರು., ಸರ್ಕಾರಿ ಉದ್ಯೋಗದಲ್ಲಿ ಸ್ಥಳೀಯ ಮಹಿಳೆಯರಿಗೆ ಮೀಸಲು ಸೇರಿದಂತೆ ಹಲವು ಯೋಜನೆ ಪ್ರಕಟಿಸಿದೆ.

ಈಡೇರಿಕೆ ಸಾಧ್ಯವೇ?- 2023ರ ಜನಗಣತಿ ಅನ್ವಯ ಬಿಹಾರದಲ್ಲಿ ಒಟ್ಟು 3 ಕೋಟಿ ಕುಟುಂಬಗಳು ಇವೆ

- ಈ ಪೈಕಿ 1 ಕೋಟಿ ಕುಟುಂಬಗಳ ಮಾಸಿಕ ಆದಾಯ 6000 ರು.ಗಿಂತಲೂ ಕಡಿಮೆ

- ಕಡುಬಡತನದಲ್ಲಿರುವ ಕುಟುಂಬಗಳಿಗೆ ಉದ್ಯೋಗ ನೀಡಲು 1 ಕೋಟಿ ನೌಕರಿ ಬೇಕು

- ಇಷ್ಟು ನೌಕರಿ ಸೃಷ್ಟಿಸಿ, ಅಷ್ಟು ವೇತನ ನೀಡಲು ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ

- ಚುನಾವಣೆ ಗೆಲ್ಲಲು ಎನ್‌ಡಿಎ- ಇಂಡಿಯಾ ನಡುವೆ ಭರವಸೆಗಳ ಪೈಪೋಟಿ ಏರ್ಪಟ್ಟಿದೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ
ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ