2028ಕ್ಕೆ ಬೇರೆ ಪಕ್ಷದಿಂದ ಸ್ಪರ್ಧೆ: ಜಿಟಿಡಿ

Published : Sep 07, 2026, 11:28 AM IST
GT DeveGowda

ಸಾರಾಂಶ

2028ಕ್ಕೆ ಪಕ್ಷೇತರವಾಗಲಿ ಅಥವಾ ಯಾವುದೇ ಪಕ್ಷವಾದರೂ ಸ್ಪರ್ಧೆ ಮಾಡುವೆ. ನಿಮ್ಮ ಆಶೀರ್ವಾದ, ಬೆಂಬಲ ಇರಬೇಕು ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು : 2028ಕ್ಕೆ ಪಕ್ಷೇತರವಾಗಲಿ ಅಥವಾ ಯಾವುದೇ ಪಕ್ಷವಾದರೂ ಸ್ಪರ್ಧೆ ಮಾಡುವೆ. ನಿಮ್ಮ ಆಶೀರ್ವಾದ, ಬೆಂಬಲ ಇರಬೇಕು ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಸತತ 7ನೇ ಬಾರಿ ಆಯ್ಕೆಯಾಗಿ ಮೊದಲ ಬಾರಿ ಮೈಸೂರಿಗೆ ಆಗಮಿಸಿದ ಅವರಿಗೆ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿ, ಜೈಕಾರ ಕೂಗಿದರು.

ಬಳಿಕ ಮಾತನಾಡಿದ ದೇವೇಗೌಡರು, ಜಿಟಿಡಿಗೆ ಅಪಮಾನವಾದರೆ ಸಹಿಸಲ್ಲ, ಕಣ್ಣೀರು ಹಾಕಿಸಿದರೆ ಸುಮ್ಮನಿರಲ್ಲ, ಮುಟ್ಟಿದರೆ ಹುಷಾರ್‌ ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ. ಜಿ.ಟಿ.ದೇವೇಗೌಡ ಸತ್ತಿಲ್ಲ, ಬದುಕಿದ್ದಾನೆ. ಇಂದು ಶಾಸಕ, ಮುಂದೆಯೂ ಶಾಸಕನಾಗಿ ಇರುತ್ತಾನೆ ಎನ್ನುವಂತೆ ಹೇಳುತ್ತಿದ್ದಾರೆ. ಹೀಗಾಗಿ, ಕ್ಷೇತ್ರದ ಸ್ವಾಭಿಮಾನಿಗಳನ್ನು ಕೆಣಕಬೇಡಿ ಎಂದು ಪರೋಕ್ಷವಾಗಿ ತಮ್ಮ ಎದುರಾಳಿಗೆ ಎಚ್ಚರಿಕೆ ನೀಡಿದರು.

ಯಾವುದೇ ಸಂದರ್ಭದಲ್ಲಿಯೂ ಯುದ್ಧಕ್ಕೆ ಸಿದ್ಧನಿದ್ದೇನೆ

ಜಿ.ಟಿ.ದೇವೇಗೌಡರು ಎಲ್ಲಿದ್ದಾರೆ ಎನ್ನುವ ಮಾತನ್ನಾಡುತ್ತಿದ್ದವರಿಗೆ ಉತ್ತರ ಕೊಟ್ಟಿದ್ದೀರಾ. ಯಾವುದೇ ಸಂದರ್ಭದಲ್ಲಿಯೂ ಯುದ್ಧಕ್ಕೆ ಸಿದ್ಧನಿದ್ದೇನೆ ಎನ್ನುವುದನ್ನು ತೋರಿಸಲು ಜಮಾಯಿಸಿದ ಕಾರ್ಯಕರ್ತರೇ ಸಾಕ್ಷಿ. ಜಿ.ಟಿ. ದೇವೇಗೌಡರು ಎಲ್ಲಿದ್ದಾರೆ ಎನ್ನುವ ಮಾತನ್ನು ಕೆಲವರು ಕೇಳುತ್ತಾರೆ. ಅದಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಮುಂದೆಯೂ ನನ್ನ ಪರವಾಗಿ ನಿಂತು ಯುದ್ಧಕ್ಕೆ ನಾವು ಸಿದ್ಧ ಎನ್ನುವ ಮಾತನ್ನಾಡಿದ್ದಾರೆ. ಅದೇ ರೀತಿ ಗಟ್ಟಿಯಾಗಿ ಬೆಂಬಲ ನೀಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಜನರು ಸ್ವಾಭಿಮಾನಿಗಳು. ಈ ಜಿ.ಟಿ. ದೇವೇಗೌಡನಿಗೆ ಅಪಮಾನವಾದರೆ ಸಹಿಸಲ್ಲ ಎನ್ನುವುದನ್ನು ಮೂರು ಚುನಾವಣೆಗಳಿಂದಲೂ ತೋರಿಸಿಕೊಟ್ಟಿದ್ದಾರೆ. ಜಿಪಂ, ಎಪಿಎಂಸಿ ಸೇರಿದಂತೆ ಯಾವುದೇ ಚುನಾವಣೆಗಳಲ್ಲೂ ಸೋಲಿಸಲು ಬಿಟ್ಟುಕೊಟ್ಟಿಲ್ಲ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬಿಟ್ಟು ಸಭೆ ಮಾಡುತ್ತಾರೆ, ಸಮಾವೇಶ ಮಾಡುತ್ತಾರೆ. ಅವರನ್ನು ಬಿಟ್ಟು ಅಪಮಾನಿಸುತ್ತಾರೆಂದು ಜನರು ಮನಸ್ಸಿಗೆ ನೋವು ಮಾಡಿಕೊಂಡಿದ್ದಾರೆ. ಶಾಸಕರಿಗೆ ಅಪಮಾನವಾದರೆ ನಾವು ಸುಮ್ಮನಿರಲ್ಲ ಎನ್ನುವುದಕ್ಕೆ ಕಾರ್ಯಕರ್ತರು ಆಯೋಜನೆ ಮಾಡಿದ್ದಾರೆ ಎಂದರು.

ಧರ್ಮಸ್ಥಳ, ಚಾಮುಂಡಿಬೆಟ್ಟ, ತಿರುಪತಿ ಎಲ್ಲಿಗೆ ಹೋದರೂ ನನ್ನ ಪರವಾಗಿ ಪೂಜೆ ಮಾಡುತ್ತಾರೆ. ಮನೆಯ ದೇವರಿಗೆ ಹೂವು ಇಟ್ಟು ಗೆಲ್ಲಿಸುವಂತೆ ಕೋರುತ್ತಾರೆ. ಮುಂದೆ 2028ಕ್ಕೆ ಸ್ಪರ್ಧೆ ಮಾಡಬೇಕಾ ಅಥವಾ ಬೇಡವೇ ಎನ್ನುವುದನ್ನು ಕೈ ಎತ್ತಿ ಹೇಳಬೇಕೆಂದು ಕೋರಿದಾಗ, ನೆರೆದಿದ್ದ ಸಹಸ್ರಾರು ಜನರು ನೀವು ನಿಲ್ಲಬೇಕೆಂದು ಕೂಗಿದರು. ಆಗ ಜಿ.ಟಿ. ದೇವೇಗೌಡರು ಭಾವುಕರಾದರು.

ಅದ್ಧೂರಿ ಸ್ವಾಗತ:

ಶಾಸಕರು ಬೆಂಗಳೂರಿನಿಂದ ಮೈಸೂರಿಗೆ ಬಂದಿಳಿಯುತ್ತಿದ್ದಂತೆ ಕ್ರೇನ್‌ನಲ್ಲಿ ಗುಲಾಬಿ ಹಾರವನ್ನು ಹಾಕಿದರೇ, ಸ್ತ್ರೀಯರು ಆರತಿ ಬೆಳಗಿದರು. ನಂತರ ನೇರವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ಆವರಣಕ್ಕೆ ಬಂದಿಳಿದ ಅವರಿಗೆ ಪಟಾಕಿ ಸಿಡಿಸಿ ಜೈಕಾರದ ಘೋಷಣೆಗಳನ್ನು ಕೂಗಿದರು.

ಕೋಟೆ ಆಂಜನೇಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಜಿ.ಟಿ.ಡಿ ಅವರನ್ನು ನೂರಾರು ಮುಖಂಡರು ಹಾರ ಹಾಕಿ ಸನ್ಮಾನಿಸಲು ಮುಗಿಬಿದ್ದಿದ್ದರಿಂದ ಪೊಲೀಸರು ದೂರ ಕಳುಹಿಸಲು ಹರಸಾಹಸ ಪಟ್ಟರು. ಬಳಿಕ ಪೊಲೀಸರು ತೆರೆದ ವಾಹನವನ್ನೇರಿಸಿದರು.

ನಂದಿಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ 2 ಸಾವಿರಕ್ಕೂ ಹೆಚ್ಚು ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ನಂತರ ಚಾಮರಾಜ ವೃತ್ತದಲ್ಲಿ ಕ್ರೇನ್‌ನಿಂದ ಬೃಹತ್ ಗಾತ್ರದ ಸೇಬಿನ ಹಾರಗಳು, ಮೂಸಂಬಿ, ಕಿತ್ತಳೆ ಹಣ್ಣಿನಿಂದ ಮಾಡಿದ್ದ ಹಾರವನ್ನು ಹಾಕಿದರು. 5 ಜೆಸಿಬಿಗಳಲ್ಲಿ ಕಾರ್ಯಕರ್ತರು ಹೂವಿನ ಸುರಿ ಮಳೆಗೈದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನೈಸ್‌ಗೆ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಹಂಚಿಕೆ ನಿರ್ಧಾರ : ಎಚ್ಡಿಡಿ ಕಿಡಿ
ಕಾನೂನು ರೀತಿ ಸೈಟ್‌: ಬೇಕಿದ್ರೆ ಉಪವಾಸ ಕೂರಿ - ನನಗೂ ಸಾಮಾನ್ಯ ಜ್ಞಾನ ಇದೆ