ರೈತರಿಗೆ ಉಚಿತವಾಗಿ ಉಳುಮೆ ಮಾಡಿಕೊಡಲು ಸರ್ಕಾರ ಚಿಂತನೆ

Published : Sep 07, 2026, 05:07 AM IST
PM Narendraswamy

ಸಾರಾಂಶ

ಬರದಿಂದಾಗಿ ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.. ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಮಂಡ್ಯ : ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬರದಿಂದಾಗಿ ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಭೂಮಿ ಉಳುಮೆ ಮಾಡುವುದಕ್ಕೂ ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಮೂರು ಎಕರೆವರೆಗೆ ಜಮೀನು ಹೊಂದಿರುವ ರೈತರ ಭೂಮಿಯನ್ನು ಸರ್ಕಾರದಿಂದಲೇ ಉಚಿತವಾಗಿ ಉಳುಮೆ ಮಾಡಿಕೊಡುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ಬರ ಪರಿಸ್ಥಿತಿಯಿಂದ ಬಿತ್ತನೆ ಚಟುವಟಿಕೆ ಕುಂಠಿತ

ಬರ ಪರಿಸ್ಥಿತಿಯಿಂದ ಬಿತ್ತನೆ ಚಟುವಟಿಕೆ ಕುಂಠಿತಗೊಂಡಿದೆ. ಆಗಸದಲ್ಲಿ ಮಳೆಯ ಮೋಡಗಳೇ ಮಾಯವಾಗಿವೆ. ರೈತರು ಭೂಮಿಯನ್ನು ಉಳುಮೆ ಮಾಡಲಾಗದೆ ತೆಕ್ಕಲು ಬಿಟ್ಟಿದ್ದಾರೆ. ಬರ ವೀಕ್ಷಣೆ ಸಮಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ರೈತರ ಜಮೀನನ್ನು ಹದಗೊಳಿಸಿಕೊಟ್ಟರೆ ಅರೆಖುಷ್ಕಿ ಬೆಳೆಗಳನ್ನಾದರೂ ಬಿತ್ತನೆ ಮಾಡಿ ಬೆಳೆಯುವರೆಂಬ ಉದ್ದೇಶದಿಂದ ಮೂರು ಎಕರೆವರೆಗೆ ಜಮೀನು ಹೊಂದಿರುವವರಿಗೆ ಸರ್ಕಾರದಿಂದಲೇ ಭೂಮಿಯನ್ನು ಉಳುಮೆ ಮಾಡಿಕೊಡುವ ಚಿಂತನೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ತಂದು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದ ಬಳಿಕ ರಾಜ್ಯದ 31 ತಾಲೂಕುಗಳಲ್ಲೂ ಈ ಯೋಜನೆಯನ್ನು ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಮೋಡ ಬಿತ್ತನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪರಿಸ್ಥಿತಿ ಆಶಾದಾಯಕವಾಗಿ ಮೂಡಿಬಂದು ಶೇ.30ರಷ್ಟು ಮಳೆಯಾದರೆ ಮತ್ತು ಹಿಂಗಾರು ಮಳೆ ಕೈಹಿಡಿದರೆ ರೈತರಿಗೆ ಅನುಕೂಲಕರವಾಗಬಹುದೆಂಬ ದೃಷ್ಟಿಯಿಂದ ರೈತರ ಜಮೀನನ್ನು ಉಳುಮೆ ಮಾಡಿಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಸುದೀರ್ಘ ಚರ್ಚೆ ನಡೆಸಿ, ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.

ಪ್ರಸ್ತುತ ರಾಜ್ಯ ತೀವ್ರ ಮಳೆ ಕೊರತೆ ಎದುರಿಸುತ್ತಿದೆ. ಅಂತರ್ಜಲದ ಮಟ್ಟ ಪಾತಾಳಕ್ಕೆ ಸೇರಿದೆ. ಬಹಳ ಗಂಭೀರ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಬಿತ್ತನೆ ಬೀಜ ತೆಗೆದುಕೊಳ್ಳುವುದಕ್ಕೆ ರೈತರು ಮುಂದಾಗುತ್ತಿಲ್ಲ. ಗೊಬ್ಬರವನ್ನು ಕೇಳುವವರೇ ಇಲ್ಲದಂತಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗುವಂತಹ ಕಾರ್ಯಕ್ರಮಗಳ ಜಾರಿಗೆ ಸರ್ಕಾರ ಆಲೋಚಿಸುತ್ತಿದೆ. ಅದಕ್ಕಾಗಿ ಜಮೀನನ್ನು ಉಳುಮೆ ಮಾಡಿಕೊಡುವ ಚಿಂತನೆ ಮೂಡಿದೆ. ಮೋಡ ಬಿತ್ತನೆಯಿಂದಾಗಬಹುದಾದ ಮಳೆ, ಹಿಂಗಾರು ಮಳೆಯ ನಿರೀಕ್ಷೆಯೊಂದಿಗೆ ಈ ಕಾರ್ಯಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಸಚಿವರು ತಿಳಿಸಿದರು.

ಏಕೆ ಈ ಯೋಜನೆ?

- ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ ಬರ. ರೈತರು ಜಮೀನಿನಲ್ಲಿ ಬಿತ್ತನೆಯನ್ನೇ ಮಾಡುತ್ತಿಲ್ಲ

- ಉಚಿತವಾಗಿ ಉಳುಮೆ ಮಾಡಿ ಜಮೀನು ಹದ ಮಾಡಿಕೊಟ್ಟು ಅರೆ ಖುಷ್ಕಿ ಬೆಳೆ ಬೆಳೆಯಲು ಉತ್ತೇಜನ

- ಇದರಿಂದ ಹಿಂಗಾರು ಅವಧಿಯಲ್ಲಾದರೂ ರೈತರಿಗೆ ಅನುಕೂಲವಾಗಬಹುದೆಂಬ ನಿರೀಕ್ಷೆ: ಕೃಷಿ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಚುನಾವಣೆಯಲ್ಲಿ ಗೆಲ್ಲೋದಕ್ಕೆ ಭಾರೀ ಶ್ರಮ ಹಾಕಲೇಬೇಕು: ಚಲುವರಾಯಸ್ವಾಮಿ
ಸಾಲ ಮನ್ನಾಗೆ ಬಿಜೆಪಿ ಸ್ಪಂದಿಸುತ್ತಿಲ್ಲ : ಕೃಷಿ ಸಚಿವ ನರೇಂದ್ರಸ್ವಾಮಿ