ಸಾಲ ಮನ್ನಾಗೆ ಬಿಜೆಪಿ ಸ್ಪಂದಿಸುತ್ತಿಲ್ಲ: ಕೃಷಿ ಸಚಿವ ನರೇಂದ್ರಸ್ವಾಮಿ

KannadaprabhaNewsNetwork |  
Published : Sep 07, 2026, 01:30 AM IST
೬ಕೆಎಂಎನ್‌ಡಿ-೧ಮಳವಳ್ಳಿ ತಾಲೂಕಿನ ಹಲಗೂರಿನ ಹೊರವಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ನಾವು ಬಳ್ಳಾರಿ ಗಣಿ ಧಣಿಗಳ ವಿರುದ್ಧ ಪಾದಯಾತ್ರೆ ನಡೆಸಿದವು. ನೀವು ಸಲ್ಲದ ಕಾರಣ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದೀರಿ. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಸದನಕ್ಕೆ ತನ್ನಿ. ಮುಕ್ತವಾಗಿ ಚರ್ಚಿಸಿ. ಅದನ್ನು ಬಿಟ್ಟು ಬರ ಪರಿಸ್ಥಿತಿಯ ಸಮಯದಲ್ಲಿ ಪಾದಯಾತ್ರೆ ಮಾಡುವುದರಿಂದ ಯಾರಿಗೆ ಏನು ಪ್ರಯೋಜನ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರದ ವಿರುದ್ಧ ವಿನಾಕಾರಣ ಟೀಕೆ, ಪಾದಯಾತ್ರೆ ನಡೆಸುವುದನ್ನು ಬಿಟ್ಟು ರೈತರ ಸಾಲಮನ್ನಾ ಕುರಿತಂತೆ ಕೇಂದ್ರದ ಗಮನಸೆಳೆದು ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಲ ಮನ್ನಾ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ನೆರವು ಕೇಳುವುದಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಅನ್ನದಾತರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡು ಬಿಜೆಪಿ ಕೇಂದ್ರ ಸಚಿವರು ಹಾಗೂ ಸಂಸದರು ಸರ್ಕಾರದ ಜೊತೆ ನಿಂತು ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ದೊರಕಿಸಿಕೊಡಲಿ. ಆ ಮೂಲಕ ರೈತರ ಬಗ್ಗೆ ಬದ್ಧತೆ ಪ್ರದರ್ಶಿಸಲಿ ಎಂದರು.

ನಾವು ಬಳ್ಳಾರಿ ಗಣಿ ಧಣಿಗಳ ವಿರುದ್ಧ ಪಾದಯಾತ್ರೆ ನಡೆಸಿದವು. ನೀವು ಸಲ್ಲದ ಕಾರಣ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದೀರಿ. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಸದನಕ್ಕೆ ತನ್ನಿ. ಮುಕ್ತವಾಗಿ ಚರ್ಚಿಸಿ. ಅದನ್ನು ಬಿಟ್ಟು ಬರ ಪರಿಸ್ಥಿತಿಯ ಸಮಯದಲ್ಲಿ ಪಾದಯಾತ್ರೆ ಮಾಡುವುದರಿಂದ ಯಾರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನೆಲೆಸಿರುವ ಬರ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸಂಕಷ್ಟ, ಜನ-ಜಾನುವಾರುಗಳ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ವಿಪಕ್ಷ ನಾಯಕರು ಎಂದಾದರೂ ಸದನದಲ್ಲಿ ದನಿ ಎತ್ತಿ ಮಾತನಾಡಿದ್ದೀರಾ. ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಒಂದೇ ಒಂದು ಸಲಹೆ ನೀಡಿದ್ದೀರಾ. ಕನಿಷ್ಠ ಪಕ್ಷ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಹೆಚ್ಚಿನ ನೆರವು ಇಲ್ಲವೇ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಹಣವನ್ನಾದರೂ ಕೊಡಿಸುವುದಕ್ಕೆ ಪ್ರಯತ್ನಿಸಿದ್ದೀರಾ ಎಂದರೆ ಏನೂ ಇಲ್ಲ. ಅಂದ ಮೇಲೆ ವಿಪಕ್ಷ ಸ್ಥಾನದಲ್ಲಿ ಕುಳಿತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿರುವುದಕ್ಕೆ ಇದು ಸಾಕ್ಷಿ ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದರು.

ರೈತರ ಸಾಲ ಮನ್ನಾ ವಿಚಾರವನ್ನು ಕೇಂದ್ರದ ಮುಂದಿಡಲು ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಈಗಲಾದರೂ ಬಿಜೆಪಿ ಕೇಂದ್ರ ಮಂತ್ರಿಗಳು ಹಾಗೂ ಸಂಸದರು ಸರ್ಕಾರಕ್ಕೆ ಸಹಕಾರ ನೀಡಬೇಕು. ಟೀಕೆ ಮಾಡುವುದೇ ವಿಪಕ್ಷಗಳ ಕೆಲಸವಾಗಬಾರದು. ಟೀಕೆಗಳು ಆರೋಗ್ಯಕರವಾಗಿದ್ದರೆ ನಾವು ಸ್ವೀಕರಿಸುತ್ತೇವೆ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಡದೆ ಯಾವುದೋ ವಿಚಾರವನ್ನು ಮುಂದಿಟ್ಟುಕೊಂಡು ಸದನವನ್ನು ಬಲಿ ತೆಗೆದುಕೊಳ್ಳುವುದು ಜನರಿಗೆ ಬಗೆದ ದ್ರೋಹ ಎಂದು ಟೀಕಿಸಿದರು.

ಟೀಕಿಸೋಕಷ್ಟೇ ಎಚ್‌ಡಿಕೆ ಕೇಂದ್ರ ಸಚಿವರಾಗಿರೋದು?

- ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರತ್ಯಾಸ್ತ್ರ ಪ್ರಯೋಗ

- ರಾಜ್ಯಕ್ಕೆ ನೀಡಿದ ಕೊಡುಗೆಗಳ ಪಟ್ಟಿ ಬಿಡುಗಡೆ ಮಾಡಲಿ: ಸವಾಲು

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಕೇವಲ ರಾಜ್ಯ ಸರ್ಕಾರವನ್ನು ಟೀಕಿಸುವುದಕ್ಕಷ್ಟೇ ಕೇಂದ್ರದಲ್ಲಿ ಸಚಿವರಾಗಿರೋದು?. ಸಚಿವರಾಗಿ ಮೂರು ವರ್ಷದಲ್ಲಿ ಅವರು ನೀಡಿರುವ ಕೊಡುಗೆಗಳ ಪಟ್ಟಿ ಬಿಡುಗಡೆ ಮಾಡಲಿ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಸವಾಲು ಹಾಕಿದರು.

ಟೀಕೆ ಮಾಡೋದಕ್ಕೆ ಕೇಂದ್ರ ಸಚಿವ ಸ್ಥಾನ ಕೊಡುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಯಾಕೆ ಈ ಪ್ರಯತ್ನ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಬೇರೆ ಪಕ್ಷದವರು ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ. ಕಳೆದ ಮೂರು ವರ್ಷದಲ್ಲಿ ನಾವು ಎಷ್ಟು ಅನುದಾನ ತಂದಿದ್ದೇವೆ ಎಂಬುದನ್ನು ಜನರ ಮುಂದಿಡಲಿ. ನಮಗಿಂತ ಹೆಚ್ಚು ಅನುದಾನ ಕೊಟ್ಟಿದ್ದರೆ ಈ ಕ್ಷಣವೇ ರಾಜೀನಾಮೆ ಕೊಡಲು ಸಿದ್ಧ ಎಂದು ಸವಾಲೆಸೆದರು.

ಕುಮಾರಸ್ವಾಮಿ ಅವರದ್ದೆಲ್ಲಾ ಬರೀ ಹಿಟ್ ಅಂಡ್ ರನ್ ಕೇಸ್. ಯಾವುದೂ ನಿಲ್ಲೋದೇ ಇಲ್ಲ. ದಾಖಲೆಗಳನ್ನಿಟ್ಟುಕೊಂಡು ಕುಮಾರಸಾಮಿ ಚರ್ಚೆ ಮಾಡಿರೋದನ್ನು ನಾನು ನೋಡಿಯೇ ಇಲ್ಲ. ಈಗಲೂ ಅಮೆರಿಕಾದಿಂದ ಹಿಟ್ ಅಂಡ್ ರನ್ ಆಗೋದು ಬೇಡ. ಏನಾದರೂ ಸಿಕ್ಕಿದರೆ ಅಥವಾ ಟ್ರಂಪ್ ಬಳಿ ಯಾವುದಾದರೂ ಇದ್ದರೆ ಟ್ರಂಕ್‌ನಲ್ಲಿ ತುಂಬಿಕೊಂಡು ಬಂದು ಬಿಚ್ಚಿಡಲಿ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೊಡ್ಡ ದೊಡ್ಡ ಕುಸ್ತಿಪಟುಗಳನ್ನು ಹೊಡೆದುಕೊಂಡು ಬಂದಿರುವ ದೊಡ್ಡ ಪೈಲ್ವಾನ್. ವಿಶೇಷವಾಗಿ ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದಿರುವ ಅದ್ಭುತ ಪಟು. ಅವರಿಗೆ ಎಲ್ಲಾ ಪಟ್ಟುಗಳು ಗೊತ್ತಿದೆ. ಹಾಗಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಹಾಕುವ ಪಟ್ಟು ಅವರಿಗೆ ಗೊತ್ತಿದೆ. ಮೊದಲೇ ಅದಕ್ಕೆ ತಯಾರಾಗಿರುತ್ತಾರೆ ಎಂದು ಹೇಳಿದರು.ಸರ್ಕಾರದಿಂದಲೇ ಭೂಮಿ ಉಳುಮೆಗೆ ಚಿಂತನೆ: ನರೇಂದ್ರಸ್ವಾಮಿ

- ೩ ಎಕರೆಯವರೆಗಿರುವ ರೈತರ ಭೂಮಿ ಉಚಿತ ಉಳುಮೆ

- ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ

ಮಂಡ್ಯ: ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿರುವುದರಿಂದ ಸರ್ಕಾರದಿಂದಲೇ ಭೂಮಿ ಉಳುಮೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಭೂಮಿ ಉಳುಮೆ ಮಾಡುವುದಕ್ಕೂ ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಪರಿಸ್ಥಿತಿಯನ್ನು ಮನಗಂಡು ಸರ್ಕಾರದಿಂದಲೇ ಮೂರು ಎಕರೆವರೆಗೆ ಜಮೀನು ಹೊಂದಿರುವ ರೈತರ ಭೂಮಿಯನ್ನು ಸರ್ಕಾರದಿಂದಲೇ ಉಚಿತವಾಗಿ ಉಳುಮೆ ಮಾಡಿಕೊಡುವ ಕುರಿತು ಚರ್ಚಿಸಲಾಗುತ್ತಿದೆ ಎಂದರು.

ಮುಂದಿನ ಸಚಿವ ಸಂಪುಟ ಸಭೆಗೆ ಈ ವಿಷಯವನ್ನು ತಂದು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದ ಬಳಿಕ ರಾಜ್ಯದ ೩೧ ತಾಲೂಕುಗಳಲ್ಲೂ ಜಾರಿಗೆ ತರುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ನವಯುಗದ ಆಡಳಿತ ಕ್ರಾಂತಿ ‘ಪ್ರಜಾಸೇವೆ’
ರಾಹುಲ್‌ ಗಾಂಧಿ ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ: ಸಿದ್ದು