ಪ್ರಜಾಪ್ರಭುತ್ವದ ನಿಜವಾದ ಯಶಸ್ಸು ಅಡಗಿರುವುದು ಪ್ರಜೆಗಳು ಸರ್ಕಾರದ ಕಚೇರಿಗಳನ್ನು ಹುಡುಕಿಕೊಂಡು ಬರುವುದರಲ್ಲಲ್ಲ. ಬದಲಾಗಿ ಪ್ರಜೆಗಳ ಸಂಕಷ್ಟಗಳಿಗೆ ಸ್ಪಂದಿಸಲು ಇಡೀ ಆಡಳಿತ ಯಂತ್ರವೇ ಜನರ ಮನೆಬಾಗಿಲಿಗೆ ತೆರಳುವುದರಲ್ಲಿದೆ.

ಎನ್‌.ಚಲುವರಾಯಸ್ವಾಮಿ

ಜಲಸಂಪನ್ಮೂಲ ಸಚಿವ

ಪ್ರಜಾಪ್ರಭುತ್ವದ ನಿಜವಾದ ಯಶಸ್ಸು ಅಡಗಿರುವುದು ಪ್ರಜೆಗಳು ಸರ್ಕಾರದ ಕಚೇರಿಗಳನ್ನು ಹುಡುಕಿಕೊಂಡು ಬರುವುದರಲ್ಲಲ್ಲ. ಬದಲಾಗಿ ಪ್ರಜೆಗಳ ಸಂಕಷ್ಟಗಳಿಗೆ ಸ್ಪಂದಿಸಲು ಇಡೀ ಆಡಳಿತ ಯಂತ್ರವೇ ಜನರ ಮನೆಬಾಗಿಲಿಗೆ ತೆರಳುವುದರಲ್ಲಿದೆ. ಸ್ವತಂತ್ರ ಭಾರತದ ಹಾಗೂ ನಮ್ಮ ಕರ್ನಾಟಕದ ಆಡಳಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡು, ‘ಪ್ರಜಾಸೇವಾ ಇಲಾಖೆ’ ಎಂಬ ಸ್ವತಂತ್ರ ಇಲಾಖೆಯನ್ನು ಸ್ಥಾಪಿಸಿದೆ. ಈ ಮೂಲಕ ನವಯುಗದ ಆಡಳಿತ ಕ್ರಾಂತಿಗೆ ನಾಂದಿ ಹಾಡಿದೆ. ಜನಸಾಮಾನ್ಯರು, ರೈತರು, ದೀನದಲಿತರು, ಕೂಲಿಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರ ಧ್ವನಿಯನ್ನು ಆಲಿಸಿ, ಅವರ ಸಂಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಿಂದ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ‘ನುಡಿದಂತೆ ನಡೆದಿದ್ದೇವೆ’ ಎಂಬ ಬದ್ಧತೆಯೊಂದಿಗೆ ಆಡಳಿತದ ಶಕ್ತಿಯನ್ನು ನೇರವಾಗಿ ಜನರ ಕೈಗಿಡುವ ಐತಿಹಾಸಿಕ ಪ್ರಯತ್ನವಿದು.

ಸರ್ಕಾರಿ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡುವುದು, ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾಯುವುದು ಪ್ರಜಾಪ್ರಭುತ್ವದ ಘನತೆಗೆ ಶೋಭೆಯಲ್ಲ. ಈ ದುಸ್ಥಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು, ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ, ಮೇಲ್ವಿಚಾರಣೆ ಹಾಗೂ ಆಡಳಿತ ಸುಧಾರಣೆಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ‘ಪ್ರಜಾಸೇವಾ ಇಲಾಖೆ’ ರೂಪುಗೊಂಡಿದೆ. ‘ಜನಸ್ಪಂದನ’ ವ್ಯವಸ್ಥೆಯನ್ನು ತಳಮಟ್ಟದವರೆಗೆ ಬಲಪಡಿಸಿ, ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ನಾಗರಿಕರ ಸಮಸ್ಯೆಗಳಿಗೆ ಕಟ್ಟುನಿಟ್ಟಿನ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವುದು ಮತ್ತು ನಾಗರಿಕರ ತೃಪ್ತಿಯ ಮಾನದಂಡದ ಮೇಲೆ ಆಡಳಿತದ ದಕ್ಷತೆಯನ್ನು ಅಳೆಯುವುದು ಈ ಇಲಾಖೆಯ ಮುಖ್ಯ ಉದ್ದೇಶ.

ನಿಮ್ಮೂರಿಗೇ ಬರಲಿದೆ ಸರ್ಕಾರ

ಹೊಸ ಇಲಾಖೆಯ ರೂಪುರೇಷೆಯ ಪ್ರಕಾರ, ಸಚಿವರು ಶಾಸಕರ ದಿನಾಂಕಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ. ಆಡಳಿತವು ವಾರಾಂತ್ಯದಲ್ಲಿ ಜನರ ಅಂಗಳದಲ್ಲಿರಲಿದೆ. ಇಡೀ ರಾಜ್ಯಾದ್ಯಂತ ಪ್ರತಿ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ‘ಪ್ರಜಾಸೇವಾ ಅಭಿಯಾನ’ದ ಸಭೆಗಳು ಪರ್ಯಾಯವಾಗಿ ನಿರಂತರವಾಗಿ ನಡೆಯಲಿವೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ಬೃಹತ್ ಸಭೆಗಳು ಜರುಗಲಿವೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳು ನಡೆಯಲಿವೆ. ಸಚಿವರು ಸಭೆ ನಡೆಸುವ ದಿನದಂದು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಹಾಜರಿದ್ದು, ಜನರ ಅಹವಾಲುಗಳನ್ನು ಖುದ್ದು ಆಲಿಸಲಿದ್ದಾರೆ. ಮುಂದಿನ 3-4 ತಿಂಗಳಲ್ಲಿ ರಾಜ್ಯದ ಪ್ರತಿಯೊಂದು ತಾಲೂಕು ಮತ್ತು ಹೋಬಳಿಯನ್ನು ತಲುಪಲು ಈಗಾಗಲೇ ವ್ಯವಸ್ಥಿತ ‘ಕ್ಯಾಲೆಂಡರ್ ಆಫ್ ಈವೆಂಟ್ಸ್’ ಸಿದ್ಧಪಡಿಸಲಾಗಿದೆ.

ಪಾರದರ್ಶಕ ವ್ಯವಸ್ಥೆ

ಈ ಅಭಿಯಾನದಲ್ಲಿ ಜನರಿಗೆ ಸಭೆಯ ಬಗ್ಗೆ 15 ದಿನಗಳ ಮುಂಚಿತವಾಗಿಯೇ ಮನೆಮನೆಗೆ ಕರಪತ್ರಗಳನ್ನು ತಲುಪಿಸಿ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪಟ್ಟಿ ಇರಲಿದೆ. ಸಭೆಯ ದಿನಾಂಕ ಮತ್ತು ಸ್ಥಳದ ವಿವರವನ್ನು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಾಲ್ ಸೆಂಟರ್ ಮೂಲಕ ನಾಗರಿಕರಿಗೆ ದೂರವಾಣಿ ಕರೆ ಮಾಡಿ ಮುಂಚಿತವಾಗಿಯೇ ತಿಳಿಸಲಾಗುತ್ತದೆ. ಜನಸಾಮಾನ್ಯರು ಗ್ರಾಮ ಒನ್ ಕೇಂದ್ರಗಳಲ್ಲಿ ಮೊದಲೇ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಸಭೆಯ ಸ್ಥಳದಲ್ಲೇ ಲ್ಯಾಪ್‌ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯವುಳ್ಳ ‘ಗ್ರಾಮ ಒನ್’ ವಿಶೇಷ ಮಳಿಗೆಗಳಿದ್ದು, ಆನ್‌ಲೈನ್‌ನಲ್ಲಿ ಅಹವಾಲುಗಳನ್ನು ದಾಖಲಿಸಿ, ಕ್ಷಣಾರ್ಧದಲ್ಲಿ ಅದರ ಪ್ರಗತಿಯನ್ನು ನೈಜ-ಸಮಯದಲ್ಲಿ ತಿಳಿಯುವ ಅವಕಾಶ ಕಲ್ಪಿಸಲಾಗಿದೆ.

ಅಹವಾಲುಗಳ ವಿಲೇವಾರಿಗೆ ಅತ್ಯಂತ ವೈಜ್ಞಾನಿಕ ವಿಧಾನ ರೂಪಿಸಲಾಗಿದೆ. ಸಭಾ ಸ್ಥಳದಲ್ಲಿ ಎರಡು ಪ್ರತ್ಯೇಕ ಸರತಿಗಳಿರುತ್ತವೆ. ಮೊದಲನೆಯದು ಹೊಸದಾಗಿ ಅರ್ಜಿ ನೀಡುವ ಸಾರ್ವಜನಿಕರ ಸರತಿ. ಎರಡನೆಯದು, ಈಗಾಗಲೇ ‘ಸಕಾಲ’ ಅಥವಾ ಸರ್ಕಾರದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ 21 ದಿನಗಳು ಕಳೆದರೂ ಇತ್ಯರ್ಥವಾಗದ ಅಥವಾ ಅಸಮಾಧಾನಕರವಾಗಿ ಉಳಿದಿರುವ ಅರ್ಜಿಗಳ ಸರತಿ. ಇಂತಹ ಬಾಕಿ ಅರ್ಜಿಗಳಿಗೆ ಸಚಿವರು ಮತ್ತು ಶಾಸಕರೊಂದಿಗೆ ಮುಖಾಮುಖಿ ಮಾತನಾಡಲು ಮೊದಲ ಆದ್ಯತೆ ನೀಡಲಾಗುತ್ತದೆ. ಸ್ಥಳದಲ್ಲೇ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ, ಮಂಜೂರಾತಿ ಪತ್ರ ಹಾಗೂ ಇತ್ಯರ್ಥವಾದ ಅರ್ಜಿಗಳಿಗೆ ದೃಢೀಕರಣ ಪತ್ರಗಳನ್ನು ನೀಡುವ ಮೂಲಕ ಸ್ಥಳದಲ್ಲೇ ನ್ಯಾಯ ಒದಗಿಸಲಾಗುತ್ತಿದೆ.

3 ಹಂತದಲ್ಲಿ ನಡೆಯಲಿದೆ ಪರಿಶೀಲನೆ

ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳು ಕಡತಗಳಲ್ಲಿ ಧೂಳು ಹಿಡಿಯದಂತೆ ತಡೆಯಲು ಪ್ರತಿ ಬುಧವಾರ ಮೂರು ಹಂತಗಳ ಕಟ್ಟುನಿಟ್ಟಿನ ಪರಿಶೀಲನಾ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಬೆಳಗ್ಗೆ 9 ರಿಂದ 11 (ತಾಲ್ಲೂಕು ಮಟ್ಟ): ತಹಶೀಲ್ದಾರ್ ಹಾಗೂ ಇಒ ನೇತೃತ್ವದಲ್ಲಿ ಪರಿಶೀಲನೆ ನಡೆದು, ಬಗೆಹರಿಯದ ಅರ್ಜಿಗಳು ಉಪವಿಭಾಗಾಧಿಕಾರಿಗಳಿಗೆ ಇ-ಕಚೇರಿ ಮೂಲಕ ರವಾನೆಯಾಗುತ್ತವೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 (ಉಪವಿಭಾಗ ಮಟ್ಟ): ಸಹಾಯಕ ಆಯುಕ್ತರು ಅಹವಾಲುಗಳನ್ನು ಪರಿಶೀಲಿಸಿ, ಮುಂದಿನ ಹಂತಕ್ಕೆ ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತಾರೆ. ಮಧ್ಯಾಹ್ನ 3 ರಿಂದ ಸಂಜೆ 5 (ಜಿಲ್ಲಾ ಮಟ್ಟ): ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಇತ್ಯರ್ಥಪಡಿಸುತ್ತಾರೆ.

ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕೆ ಆದ್ಯತೆ ನೀಡಬೇಕೆಂಬ ಕಾರಣಕ್ಕೆ ಬುಧವಾರ ಹಾಗೂ ಶನಿವಾರಗಳಂದು ರಾಜ್ಯ, ಜಿಲ್ಲೆ ಅಥವಾ ತಾಲೂಕು ಮಟ್ಟದ ಯಾವುದೇ ಇತರ ಆಡಳಿತಾತ್ಮಕ ಸಭೆಗಳನ್ನು ನಡೆಸುವುದನ್ನು ಸರ್ಕಾರ ಕಡ್ಡಾಯವಾಗಿ ನಿಷೇಧಿಸಿದೆ.

ಉನ್ನತ ಮಟ್ಟದ ಹೊಣೆಗಾರಿಕೆ

ತಳಮಟ್ಟದಲ್ಲಿ ವಿಲೇವಾರಿಯಾಗದ ಅರ್ಜಿಗಳು ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಆಯಾ ಇಲಾಖೆಯ ಉನ್ನತ ಕಾರ್ಯದರ್ಶಿಗಳ ಪೋರ್ಟಲ್‌ಗೆ ರವಾನೆಯಾಗುತ್ತವೆ. ಪ್ರತಿ ಜಿಲ್ಲೆಗೂ ಹಿರಿಯ ಐಎಎಸ್ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದ್ದು, ಅವರು ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಖುದ್ದು ಭೇಟಿ ನೀಡಿ ಸಿದ್ಧತೆ ಹಾಗೂ ಕಡತಗಳ ಪ್ರಗತಿ ಪರಿಶೀಲಿಸಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ತಿಂಗಳು ಈ ಪ್ರಗತಿಯನ್ನು ಪರಾಮರ್ಶಿಸುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ, ಮುಖ್ಯಮಂತ್ರಿಗಳೇ ಖುದ್ದು ಜಿಲ್ಲಾವಾರು ಮತ್ತು ಇಲಾಖಾವಾರು ಬಾಕಿ ಇರುವ ಅಹವಾಲುಗಳ ಪರಿಶೀಲನಾ ಸಭೆ ನಡೆಸಿ, ಅಗತ್ಯವಿದ್ದರೆ ಸರ್ಕಾರದ ನೀತಿ ನಿಯಮಗಳನ್ನೇ ತಿದ್ದುಪಡಿ ಮಾಡುವಷ್ಟು ಗಂಭೀರವಾಗಿ ಈ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕಾಗದರಹಿತ ‘ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’ (ಐಪಿಜಿಆರ್‌ಎಸ್‌) ಹಾಗೂ 1902 ಉಚಿತ ಸಹಾಯವಾಣಿ ಮೂಲಕ 24 ಗಂಟೆಯೂ ದೂರು ದಾಖಲಿಸಲು ಅವಕಾಶವಿದೆ.

ಇದು ಅಧಿಕಾರಿಗಳಿಗೆ ಒತ್ತಡ ಸೃಷ್ಟಿಸುವ ವ್ಯವಸ್ಥೆಯಲ್ಲ. ಜನರ ಮುಂದೆ ಆಡಳಿತದ ಉತ್ತರದಾಯಿತ್ವವನ್ನು ಖಚಿತಪಡಿಸುವ ವ್ಯವಸ್ಥೆಯಾಗಿದೆ. ಸರ್ಕಾರದ ಪ್ರತಿಯೊಂದು ಯೋಜನೆಯ ಫಲಾನುಭವಿ ನಾಗರಿಕನೇ ಆಗಿದ್ದಾನೆ. ಆ ನಿಟ್ಟಿನಲ್ಲಿ ಆತನಿಗೆ ಸೇವೆ ಅಥವಾ ಸೌಲಭ್ಯ ತಲುಪಿದೆಯೇ ಎಂಬುದೇ ಈ ಪ್ರಜಾ ಪ್ರಭುತ್ವ ವ್ಯವಸ್ಥೆಯ ಅಳತೆಗೋಲಾಗಿದೆ.

ಸರ್ಕಾರ ಯೋಜನೆ ರೂಪಿಸುತ್ತದೆ. ಅಧಿಕಾರಿಗಳು ಅದನ್ನು ಜನರಿಗೆ ರೂಪಿಸುತ್ತಾರೆ. ಆದರೆ, ಅದರ ಪರಿಣಾಮ ಏನು ಎಂಬುದನ್ನು ತಿಳಿಯುವುದು ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿ ಜನರ ಬಳಿಗೆ ಆಡಳಿತ ಹೋಗುವುದು ಅತ್ಯಂತ ಮುಖ್ಯವಾಗಿದೆ. ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಆರಂಭವಾದ ಈ ಪ್ರಯತ್ನವು ಕನಾಟಕದ ಆಡಳಿತದ ಇತಿಹಾಸದಲ್ಲಿ "ಜನರ ಬಳಿಗೆ ಸರ್ಕಾರʼ ಎಂಬ ಪರಿಕಲ್ಪನೆಗೆ ಹೊಸ ಅರ್ಥ ನೀಡುವ ಹೆಜ್ಜೆಯಾಗಿದೆ. ನುಡಿದಂತೆ ನಡೆಯುವುದು ಕೇವಲ ರಾಜಕೀಯ ಘೋಷಣೆಯಾಗಿರದೇ ಪ್ರತಿಯೊಬ್ಬರ ಜವಾಬ್ದಾರಿಯಾಗಿರಬೇಕು. ಆಡಳಿತದ ಕಾರ್ಯ ವೈಖರಿಯಾಗಿರಬೇಕು. ಗ್ಯಾರಂಟಿ ಜಾರಿಯ ಮೂಲಕ ಈ ಸರ್ಕಾರ ಅದನ್ನು ಸಾಬೀತು ಮಾಡಿದೆ. ಈ ನಿಟ್ಟಿನಲ್ಲಿ ಪ್ರಜಾ ಸೇವಾ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಪ್ರಜಾಪ್ರಭುತ್ವದ ಅನುಭವ ಮಂಟಪ

ಬಸವಣ್ಣನವರ ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ‘ಅನುಭವ ಮಂಟಪ’ವು ಸರ್ವರಿಗೂ ಸಮಾನ ಅವಕಾಶ ಮತ್ತು ಧ್ವನಿ ನೀಡಿದಂತೆ, ಇಂದಿನ ಈ ‘ಪ್ರಜಾಸೇವಾ ಇಲಾಖೆ’ಯು ಜನರ ಅಹವಾಲು ಆಲಿಸುವ, ಸಲಹೆಗಳನ್ನು ಸ್ವೀಕರಿಸುವ ಹಾಗೂ ನೈಜ ಪರಿಹಾರ ನೀಡುವ ಆಧುನಿಕ ಅನುಭವ ಮಂಟಪವಾಗಿ ಕಾರ್ಯನಿರ್ವಹಿಸಲಿದೆ. ಶೋಷಿತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಕಣ್ಣೀರು ಒರೆಸುವ ಸಂವಿಧಾನಬದ್ಧ ಹೊಣೆಗಾರಿಕೆಯನ್ನು ಸರ್ಕಾರ ಈ ಮೂಲಕ ಪ್ರಾಮಾಣಿಕವಾಗಿ ಈಡೇರಿಸುತ್ತಿದೆ. ಪ್ರತಿಯೊಬ್ಬ ನಾಗರಿಕನೂ ಈ ಜನಪರ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು, ಸಶಕ್ತ ಹಾಗೂ ಪಾರದರ್ಶಕ ಕರ್ನಾಟಕದ ನಿರ್ಮಾಣದಲ್ಲಿ ಕೈಜೋಡಿಸಬೇಕೆಂಬುದೇ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಆಶಯವಾಗಿದೆ.