ಹಬ್ಬಕ್ಕೂ ಮುಂಚಿತವಾಗಿ ಅಮೆಜಾನ್ ಇಂಡಿಯಾ ಸಂಸ್ಥೆ 1.6 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗ ಸೃಷ್ಟಿಸಿದೆ. ಈ ಕುರಿತ ವರದಿ ಇಲ್ಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು:
ಮುಂಬರುವ ದಸರಾ ಹಾಗೂ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳ ಸುಸಂದರ್ಭದಲ್ಲಿ ಗ್ರಾಹಕರಿಗೆ ಸುಗಮ ಸೇವೆ ಒದಗಿಸುವ ನಿಟ್ಟಿನಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಮಹತ್ವದ ಹೆಜ್ಜೆಯಿಟ್ಟಿದೆ. ಭಾರತದಾದ್ಯಂತ ತನ್ನ ಪ್ರಮುಖ ಕಾರ್ಯನಿರ್ವಹಣಾ ಕೇಂದ್ರಗಳು ಹಾಗೂ ಕ್ವಿಕ್ ಕಾಮರ್ಸ್ ಜಾಲದಾದ್ಯಂತ ಬರೋಬ್ಬರಿ 1,60,000ಕ್ಕೂ ಅಧಿಕ ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದಾಗಿ ಸಂಸ್ಥೆ ಪ್ರಕಟಿಸಿದೆ. ಅಮೆಜಾನ್ ನೌ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ಕೆಲವೇ ನಿಮಿಷಗಳಲ್ಲಿ ತ್ವರಿತ ವಿತರಣೆ ಒದಗಿಸಲು ಮೈಕ್ರೋ ಫುಲ್‌ಫಿಲ್‌ಮೆಂಟ್ ಕೇಂದ್ರಗಳ ವ್ಯಾಪ್ತಿಯಲ್ಲಿ ಹತ್ತಾರು ಸಾವಿರ ಸಂಖ್ಯೆಯ ಸೀಸನಲ್ ಅವಕಾಶಗಳನ್ನು ತೆರೆಯಲಾಗಿದೆ.ಈ ಬೃಹತ್ ನೇಮಕಾತಿಯು ದೇಶದ ಮೆಟ್ರೋಪಾಲಿಟನ್ ಮಹಾನಗರಗಳ ಜತೆಗೆ ವಾರಣಾಸಿ, ಕೊಚ್ಚಿ, ಜಲಂಧರ್, ಗಾಜಿಯಾಬಾದ್, ರಾಂಚಿ, ಸೇಲಂ, ಗೋರಖ್‌ಪುರ ಸೇರಿದಂತೆ ಒಟ್ಟಾರೆಯಾಗಿ 400ಕ್ಕೂ ಅಧಿಕ ನಗರಗಳಲ್ಲಿ ವಿಸ್ತರಿಸಿದೆ. ತನ್ನ ಕಾರ್ಯಜಾಲದಲ್ಲಿ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಸಾವಿರಾರು ಮಹಿಳಾ ಸಹವರ್ತಿಗಳಿಗೆ ಹಾಗೂ ವಿಶೇಷಚೇತನರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ನೂತನವಾಗಿ ಸೇರ್ಪಡೆಗೊಂಡಿರುವ ಸಿಬ್ಬಂದಿ ಹಾಲಿ ಕಾರ್ಯಪಡೆಯೊಂದಿಗೆ ಕೈಜೋಡಿಸಲಿದ್ದು, ಹಬ್ಬದ ದಿನಗಳಲ್ಲಿ ಹೆಚ್ಚಾಗುವ ಆರ್ಡರ್‌ಗಳ ಪಿಕಿಂಗ್, ಪ್ಯಾಕಿಂಗ್, ಸುರಕ್ಷಿತ ಸಾಗಾಣಿಕೆ ಹಾಗೂ ಅಂತಿಮ ವಿಳಾಸಕ್ಕೆ ವಿತರಿಸುವ ಕಾರ್ಯಗಳಲ್ಲಿ ನೆರವಾಗಲಿದ್ದಾರೆ. ಈಗಾಗಲೇ ಬಹುತೇಕರಿಗೆ ಅಗತ್ಯ ವೃತ್ತಿಪರ ತರಬೇತಿಯನ್ನು ನೀಡಲು ಸಂಸ್ಥೆ ಆರಂಭಿಸಿದೆ.
ಕಾಯಂ ನೌಕರರಿಗೆ ನೀಡುವಂತೆಯೇ ತಾತ್ಕಾಲಿಕ ನೌಕರರಿಗೂ ಎಲ್ಲಾ ಬಗೆಯ ಸುರಕ್ಷತೆ ಮತ್ತು ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಹಬ್ಬದ ಸೀಸನ್‌ನ ಕಾರ್ಯಾಚರಣೆಗೆ ಹೊಸದಾಗಿ ಸೇರ್ಪಡೆಗೊಳ್ಳುವ ಸಿಬ್ಬಂದಿಗೆ ಕಂಪನಿಯ ‘ಸಮೃದ್ಧಿ’ ಯೋಜನೆಯ ಮೂಲಕ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿ, ಸರ್ಕಾರದ ನಾನಾ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಪೂರ್ಣ ಬೆಂಬಲ ನೀಡಲಾಗುತ್ತಿದೆ.ಈ ಕುರಿತು ಮಾತನಾಡಿದ ಅಮೆಜಾನ್ ಇಂಡಿಯಾದ ಆಪರೇಷನ್ಸ್ ಉಪಾಧ್ಯಕ್ಷ ಅಭಿನವ್ ಸಿಂಗ್, ‘ದೇಶದ ಪ್ರತಿಯೊಂದು ಪಿನ್-ಕೋಡ್ ವ್ಯಾಪ್ತಿಯ ಗ್ರಾಹಕರಿಗೂ ಕ್ಷಿಪ್ರ ಹಾಗೂ ವಿಶ್ವಾಸಾರ್ಹ ಸೇವೆ ನೀಡಲು 1.6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗಿದೆ’ ಎಂದಿದ್ದಾರೆ. ಅಲ್ಲದೆ ಇಲ್ಲಿ ಕೆಲಸ ಮಾಡುವ ಅನೇಕ ಸಹವರ್ತಿಗಳು ಹಬ್ಬದ ಅವಧಿ ಮುಗಿದ ನಂತರವೂ ಸಂಸ್ಥೆಯೊಂದಿಗೆ ಪಯಣ ಮುಂದುವರಿಸುತ್ತಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಅಮೆಜಾನ್ 15 ರಾಜ್ಯಗಳಲ್ಲಿ ಫುಲ್‌ಫಿಲ್‌ಮೆಂಟ್ ಕೇಂದ್ರಗಳು, 19 ರಾಜ್ಯಗಳಲ್ಲಿ ವಿಂಗಡಣಾ ಕೇಂದ್ರಗಳು ಹಾಗೂ ಸುಮಾರು 2,000 ಡೆಲಿವರಿ ಸ್ಟೇಷನ್‌ಗಳ ಜಾಲವನ್ನು ಹೊಂದಿದೆ. ದೇಶಾದ್ಯಂತ 17 ಲಕ್ಷಕ್ಕೂ ಹೆಚ್ಚು ಮಾರಾಟಗಾರರು, 28,000 ಹಬ್ ಡೆಲಿವರಿ ಪಾಲುದಾರರು ಹಾಗೂ ಸಾವಿರಾರು ಅಮೆಜಾನ್ ಫ್ಲೆಕ್ಸ್ ಪಾಲುದಾರರ ಬಲ ಸಂಸ್ಥೆಗಿದೆ.ಸಂಸ್ಥೆಯು ತನ್ನ ಕಾರ್ಯಜಾಲದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೂ ಶಾಸನಬದ್ಧ ಭವಿಷ್ಯ ನಿಧಿ (ಪಿಎಫ್), ಇಎಸ್‌ಐಸಿ ಹಾಗೂ ಗ್ರಾಚ್ಯುಟಿ ಸವಲತ್ತುಗಳನ್ನು ಖಾತರಿಪಡಿಸಿದೆ. ಕಟ್ಟಡಗಳ ಒಳಾಂಗಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಾಗಿ ಶುದ್ಧ ಕುಡಿಯುವ ನೀರು, ಹವಾನಿಯಂತ್ರಿತ ವಿಶಾಲ ಕ್ಯಾಂಟೀನ್, ಸ್ವಯಂಚಾಲಿತ ವೆಂಡಿಂಗ್ ಯಂತ್ರಗಳು ಹಾಗೂ ಎಎಂ ಕೇರ್ ಆನ್-ಸೈಟ್ ಪ್ರಥಮ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯೂ ಇದೆ. ಸಿಬ್ಬಂದಿಗೆ ವಾರಕ್ಕೆ ಐದು ದಿನಗಳ ಕೆಲಸ ಹಾಗೂ ಎರಡು ದಿನಗಳ ಕಡ್ಡಾಯ ವಿಶ್ರಾಂತಿ ರಜೆ ನೀಡಲಾಗುತ್ತಿದ್ದು, ಗಳಿಸಿದ ವೇತನದ ಶೇಕಡಾ 80ರವರೆಗಿನ ಮೊತ್ತವನ್ನು ಮುಂಗಡವಾಗಿ ಪಡೆಯಲು ಅರ್ಲಿ ಆಕ್ಸೆಸ್ ಟು ಪೇ ಸೌಲಭ್ಯ ಕಲ್ಪಿಸಲಾಗಿದೆ.
ಡೆಲಿವರಿ ಸಿಬ್ಬಂದಿಗಾಗಿ ಸಂಸ್ಥೆಯು ‘ಸಮ್ಮಾನ್’ ಎಂಬ ಸಮಗ್ರ ಯೋಜನೆಯನ್ನು ಜಾರಿಗೆ ತಂದಿದ್ದು, ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಬ್ಯಾಂಕಿಂಗ್ ಒಳಗೊಳ್ಳುವಿಕೆ ಮತ್ತು ರಸ್ತೆ ಸುರಕ್ಷತಾ ತರಬೇತಿಯನ್ನು ನೀಡುತ್ತಿದೆ. ಇದರ ಜತೆಗೆ ಸುಮಾರು 90,000 ಡೆಲಿವರಿ ಸಹವರ್ತಿಗಳಿಗೆ ಗ್ರೂಪ್ ಮೆಡಿಕ್ಲೈಮ್ ಹಾಗೂ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಸೌಲಭ್ಯ ವಿಸ್ತರಿಸಲಾಗಿದೆ. ಇದು ಹೊರರೋಗಿ ವೆಚ್ಚ, ಆಸ್ಪತ್ರೆ ಚಿಕಿತ್ಸೆ, ಅಂಗವೈಕಲ್ಯ ಪರಿಹಾರ ಹಾಗೂ ಗಾಯದಿಂದಾಗುವ ಆದಾಯ ನಷ್ಟವನ್ನು ಭರಿಸುತ್ತದೆ. ಬಿಸಿಲಿನಲ್ಲಿ ಸಂಚರಿಸುವ ಡೆಲಿವರಿ ಸಿಬ್ಬಂದಿ ವಿಶ್ರಾಂತಿ ಪಡೆಯಲು ‘ಆಶ್ರಯ್’ ಹೆಸರಿನ ಹವಾನಿಯಂತ್ರಿತ ವಿಶ್ರಾಂತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿ ಇತರ ಆನ್‌ಲೈನ್ ಕಂಪನಿಗಳ ಸಿಬ್ಬಂದಿಗೂ ಮುಕ್ತ ಪ್ರವೇಶವಿದೆ. ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳಲ್ಲಿರುವ ಈ ಕೇಂದ್ರಗಳ ಸಂಖ್ಯೆಯನ್ನು 2026ರ ಅಂತ್ಯಕ್ಕೆ 250ಕ್ಕೆ ಹೆಚ್ಚಿಸಲು ಸಂಸ್ಥೆ ಯೋಜಿಸಿದೆ. ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಸಂಚಾರಿ ಮೊಬೈಲ್ ಆಶ್ರಯ ವ್ಯಾನ್‌ಗಳನ್ನೂ ನಿಯೋಜಿಸಲಾಗಿದೆ.