ಪತ್ರಿಕೋದ್ಯಮಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದರೆ, ಪತ್ರಿಕಾ ವಿತರಣಾ ವೃತ್ತಿಗೂ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. 19ನೇ ಶತಮಾನದಲ್ಲಿ ಬಾಲಕರಿಂದ ಆರಂಭವಾದ ‘ನ್ಯೂಸ್‌ಪೇಪರ್ ಬಾಯ್’ ಸಂಸ್ಕೃತಿ ಕ್ರಮೇಣ ಸಂಘಟಿತ ಪತ್ರಿಕಾ ವಿತರಣಾ ವ್ಯವಸ್ಥೆಯಾಗಿ ಬೆಳೆದಿದ್ದು, ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪತ್ರಿಕಾ ವಿತರಕರು ಮುದ್ರಿತ ಮಾಧ್ಯಮದ ಕೊನೆಯ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
-ಪ್ರಶಾಂತ್ ಕುಮಾರ್ ಎನ್.
ರಾಜ್ಯ ಉಪಾಧ್ಯಕ್ಷರು,
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ.)
-ಇಂದು ವಿಶ್ವ ಪತ್ರಿಕಾ ವಿತರಕರ ದಿನಾಚರಣೆ (ಲೋಗೋ ಮಾಡಿ)
‘ನೀವು ಬೆಳಗ್ಗೆ ಕಣ್ಣು ತೆರೆಯುವ ಮೊದಲೇ, ನಿಮ್ಮ ಮನೆ ಬಾಗಿಲಿಗೆ ಜಗತ್ತನ್ನೇ ತಂದು ಇಡುವವನು - ಪತ್ರಿಕಾ ವಿತರಕ’.
ಪತ್ರಿಕೋದ್ಯಮಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದರೆ, ಪತ್ರಿಕಾ ವಿತರಣಾ ವೃತ್ತಿಗೂ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. 19ನೇ ಶತಮಾನದಲ್ಲಿ ಬಾಲಕರಿಂದ ಆರಂಭವಾದ ‘ನ್ಯೂಸ್‌ಪೇಪರ್ ಬಾಯ್’ ಸಂಸ್ಕೃತಿ ಕ್ರಮೇಣ ಸಂಘಟಿತ ಪತ್ರಿಕಾ ವಿತರಣಾ ವ್ಯವಸ್ಥೆಯಾಗಿ ಬೆಳೆದಿದ್ದು, ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪತ್ರಿಕಾ ವಿತರಕರು ಮುದ್ರಿತ ಮಾಧ್ಯಮದ ಕೊನೆಯ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲ ಬದಲಾಯಿತು. ತಂತ್ರಜ್ಞಾನ ಬದಲಾಯಿತು. ಪತ್ರಿಕೆಗಳ ಗಾತ್ರ, ವಿನ್ಯಾಸ, ಮುದ್ರಣ ತಂತ್ರಜ್ಞಾನ ಮತ್ತು ವಿಷಯಗಳೆಲ್ಲವೂ ಬದಲಾದವು. ಕಂಪ್ಯೂಟರ್ ಬಂತು, ಇಂಟರ್‌ನೆಟ್ ಬಂತು, ಮೊಬೈಲ್ ಬಂತು, ಸಾಮಾಜಿಕ ಜಾಲತಾಣಗಳು ಬಂದವು. ಇಂದು ಕ್ಷಣಾರ್ಧದಲ್ಲಿ ಜಗತ್ತಿನ ಸುದ್ದಿಯನ್ನು ಮೊಬೈಲ್‌ನಲ್ಲಿ ಪಡೆಯುವ ಕಾಲ. ಆದರೆ ಪತ್ರಿಕಾ ವಿತರಕನ ಬದುಕು ಮಾತ್ರ ಇನ್ನೂ ಹಲವು ದಶಕಗಳ ಹಿಂದಿನಂತೆಯೇ ಉಳಿದಿದೆ.
ಮುಂಜಾನೆ 4-5 ಗಂಟೆಗೆ ಎದ್ದು, ಪತ್ರಿಕಾ ವಿತರಕರ ಕೇಂದ್ರಕ್ಕೆ ಹೋಗಿ ನೂರಾರು ಪ್ರತಿಗಳನ್ನು ವಿಂಗಡಿಸಿ, ಸೈಕಲ್ ಅಥವಾ ದ್ವಿಚಕ್ರ ವಾಹನದಲ್ಲಿ ತುಂಬಿಕೊಂಡು, ಮಳೆ, ಚಳಿ, ಗಾಳಿ, ಯಾವುದನ್ನೂ ಲೆಕ್ಕಿಸದೆ ಮನೆ-ಮನೆಗೆ ಪತ್ರಿಕೆ ತಲುಪಿಸುವ ಕಾಯಕ.
ಒಬ್ಬ ವಿತರಕನ ಭುಜದ ಮೇಲೆ ಕೆಲವೊಮ್ಮೆ ಹತ್ತಾರು ಕಿಲೋ ಪತ್ರಿಕೆಗಳ ಭಾರ ಇರುತ್ತದೆ. ಆದರೆ ಅದಕ್ಕಿಂತಲೂ ದೊಡ್ಡ ಭಾರ ಅವನ ಕುಟುಂಬದ ಜವಾಬ್ದಾರಿ. ಅವನಿಗೆ ರಜೆ ಕಡಿಮೆ. ಮುಂಜಾನೆಯ ನಿದ್ರೆ ಕಡಿಮೆ. ಆದಾಯ ಸೀಮಿತ. ಅಪಘಾತದ ಅಪಾಯ ಹೆಚ್ಚು. ವಯಸ್ಸಾದರೂ ಕೆಲಸ ನಿಲ್ಲಿಸುವ ಪರಿಸ್ಥಿತಿ ಇಲ್ಲ. ಅವನಿಲ್ಲದೆ ಪತ್ರಿಕೆಯಿಲ್ಲ. ಪತ್ರಿಕೆಯಿಲ್ಲದೆ ಜ್ಞಾನದ ಬೆಳಕಿಲ್ಲ. ಆದರೆ ಜ್ಞಾನದ ಬೆಳಕು ಹಂಚುವ ಅವನ ಜೀವನ ಮಾತ್ರ ಇಂದಿಗೂ ಕತ್ತಲಲ್ಲೇ ಇದೆ.
ಪ್ರಜಾಪ್ರಭುತ್ವದ ಬೆಳಗಿನ ಕಾವಲುಗಾರ:
ಪತ್ರಿಕೆ ಎನ್ನುವುದು ಕೇವಲ ಕಾಗದದ ಹಾಳೆಯಲ್ಲ. ಅದು ಜನರ ಹಕ್ಕು, ಸರ್ಕಾರದ ನೀತಿ, ಸಮಾಜದ ಸಮಸ್ಯೆ, ರೈತರ ನೋವು, ವಿದ್ಯಾರ್ಥಿಗಳ ಕನಸು, ಉದ್ಯೋಗದ ಅವಕಾಶ, ಕ್ರೀಡೆ, ವಿಜ್ಞಾನ, ಶಿಕ್ಷಣ ಮತ್ತು ಜಗತ್ತಿನ ಸುದ್ದಿಯನ್ನು ಪ್ರತಿಯೊಬ್ಬರ ಮನೆಗೆ ತಲುಪಿಸುವ ಮಾಧ್ಯಮ. ಆ ಮಾಹಿತಿಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಕೊನೆಯ ಕೊಂಡಿ ಪತ್ರಿಕಾ ವಿತರಕ. ರಾಜಕೀಯ ನಾಯಕರು, ಅಧಿಕಾರಿಗಳು, ಉದ್ಯಮಿಗಳು, ವೈದ್ಯರು, ಶಿಕ್ಷಕರು, ವಕೀಲರು, ಕಾರ್ಮಿಕರು, ವಿದ್ಯಾರ್ಥಿಗಳು - ಎಲ್ಲರೂ ಬೆಳಗ್ಗೆ ಪತ್ರಿಕೆ ಓದುವಾಗ ಅದರ ಹಿಂದೆ ಒಬ್ಬ ವಿತರಕನ ಪರಿಶ್ರಮವಿದೆ.
‘ನಾಡಿನ ಜನರಿಗೆ ಬೆಳಗಿನ ಸುದ್ದಿಯನ್ನು ತಲುಪಿಸುವ ವ್ಯಕ್ತಿಯ ಬದುಕಿನಲ್ಲೇ ಬೆಳಕು ಮೂಡದಿದ್ದರೆ, ಅದು ಸಮಾಜದ ವೈಫಲ್ಯ’.
ಡಿಜಿಟಲ್ ಯುಗದಲ್ಲೂ ಪತ್ರಿಕಾ ವಿತರಕ ಏಕೆ?:
ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದ್ದರೂ ಮುದ್ರಿತ ಪತ್ರಿಕೆಗೆ ತನ್ನದೇ ಆದ ವಿಶ್ವಾಸಾರ್ಹತೆ ಮತ್ತು ಸಾಮಾಜಿಕ ಮೌಲ್ಯವಿದೆ. ಬೆಳಗಿನ ಚಹಾದೊಂದಿಗೆ ಪತ್ರಿಕೆ ಓದುವ ಅಭ್ಯಾಸ ಇಂದಿಗೂ ಕೋಟ್ಯಂತರ ಜನರ ಜೀವನದ ಭಾಗವಾಗಿದೆ. ಹಿರಿಯರು, ವ್ಯಾಪಾರಿಗಳು, ಉದ್ಯಮಿಗಳು, ಶಿಕ್ಷಕರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಮುದ್ರಿತ ಪತ್ರಿಕೆಯನ್ನು ಇಂದಿಗೂ ಅವಲಂಬಿಸಿದ್ದಾರೆ. ಡಿಜಿಟಲ್ ಮಾಧ್ಯಮದ ವೇಗದ ಜೊತೆಗೆ ತಪ್ಪುಮಾಹಿತಿ, ಸುಳ್ಳುಸುದ್ದಿ ಮತ್ತು ಗೊಂದಲಗಳೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಆ ಪತ್ರಿಕೆಯನ್ನು ಮನೆ ಬಾಗಿಲಿಗೆ ತಲುಪಿಸುವ ವಿತರಕನ ಪಾತ್ರವೂ ಅಷ್ಟೇ ಮಹತ್ವದ್ದು.
ಕತ್ತಲಿನಲ್ಲಿ ಆರಂಭವಾಗುವ ಒಂದು ದಿನ:
ಪತ್ರಿಕಾ ವಿತರಕನ ಬೆಳಗ್ಗೆ ಸೂರ್ಯೋದಯದ ನಂತರ ಆರಂಭವಾಗುವುದಿಲ್ಲ. ಇತರರು ನಿದ್ರಿಸುವಾಗ ಅವನ ದಿನ ಆರಂಭವಾಗುತ್ತದೆ. ಮುಂಜಾನೆ ಪತ್ರಿಕೆಗಳ ಕಟ್ಟನ್ನು ಸ್ವೀಕರಿಸುವುದು, ಪ್ರತಿಗಳನ್ನು ವಿಂಗಡಿಸುವುದು, ಮಾರ್ಗವಾರು ಜೋಡಿಸುವುದು, ಸೈಕಲ್/ದ್ವಿಚಕ್ರ ವಾಹನದಲ್ಲಿ ತುಂಬುವುದು, ಮನೆ-ಮನೆಗೆ ವಿತರಿಸುವುದು, ಬಾಕಿ ಹಣ ಸಂಗ್ರಹಿಸುವುದು, ಏಜೆನ್ಸಿಯ ಲೆಕ್ಕಪತ್ರ ಮುಗಿಸುವುದು.
ಇದೆಲ್ಲ ಮುಗಿಯುವ ವೇಳೆಗೆ ಬಹುತೇಕ ಜನರ ದಿನ ಆರಂಭವಾಗಿರುತ್ತದೆ. ಮಳೆ ಬಂದರೂ ಪತ್ರಿಕೆ ತಲುಪಬೇಕು. ಹಬ್ಬ ಇದ್ದರೂ ಪತ್ರಿಕೆ ತಲುಪಬೇಕು. ಮನೆಯಲ್ಲಿ ಸಾವಿದ್ದರು ಪಕ್ಕಕ್ಕಿಟ್ಟು ಪತ್ರಿಕೆಗಳನ್ನು ತಲುಪಿಸಬೇಕು. ರಸ್ತೆಯಲ್ಲಿ ಸಮಸ್ಯೆ ಇದ್ದರೂ ಪತ್ರಿಕೆ ತಲುಪಬೇಕು. ಅವನಿಗೆ ಅನಾರೋಗ್ಯವಿದ್ದರೂ ಸಾಧ್ಯವಾದಷ್ಟು ಪತ್ರಿಕೆ ತಲುಪಿಸಲೇಬೇಕು. ಏಕೆಂದರೆ - ಅವನಿಗೆ ರಜೆ ತೆಗೆದುಕೊಳ್ಳುವುದು ಎಂದರೆ ಮತ್ತೊಬ್ಬರ ಸುದ್ದಿಯನ್ನು ನಿಲ್ಲಿಸುವಂತಾಗುತ್ತದೆ.
ಪತ್ರಿಕಾ ವಿತರಕರ ಒಕ್ಕೂಟದ ಹೋರಾಟ:
ಈ ಕತ್ತಲಿನ ಬದುಕಿಗೆ ಬೆಳಕಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ.) ಕಳೆದ ಹಲವು ವರ್ಷಗಳಿಂದ ರಾಜ್ಯದ ಪತ್ರಿಕಾ ವಿತರಕರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕಳೆದ 6 ವರ್ಷಗಳಲ್ಲಿ ರಾಜ್ಯದ 31 ಜಿಲ್ಲೆಗಳಿಗೆ ತೆರಳಿ, ಸುಮಾರು 40,000 ವಿತರಕರ ಸಮಸ್ಯೆಗಳನ್ನು ಆಲಿಸಿ, ಅವರ ಜೀವನದ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸರ್ಕಾರದ ಗಮನಕ್ಕೆ ತರಲಾಗಿದೆ. ರಾಜ್ಯಮಟ್ಟದಲ್ಲಿ 5 ಬೃಹತ್ ಸಮ್ಮೇಳನಗಳನ್ನು ಆಯೋಜಿಸಿ, ಪತ್ರಿಕಾ ವಿತರಕರ ಸಾಮಾಜಿಕ ಭದ್ರತೆ, ಆರೋಗ್ಯ, ವಸತಿ, ವೃತ್ತಿ ಭದ್ರತೆ ಹಾಗೂ ಗೌರವದ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ. ಸರ್ಕಾರದಿಂದ ಕೆಲವು ನೆರವು ದೊರೆತಿರುವುದು ಸ್ವಾಗತಾರ್ಹ. ಆದರೆ ರಾಜ್ಯದ ಸಾವಿರಾರು ವಿತರಕರ ಬದುಕಿಗೆ ಶಾಶ್ವತ ಭದ್ರತೆ ನೀಡಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ.
ಸರ್ಕಾರ ಈಡೇರಿಸಬೇಕಾದ 5 ಬೇಡಿಕೆಗಳು
1.ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ:
ಪತ್ರಿಕಾ ವಿತರಕರು ಹಾಗೂ ಅವರ ಕುಟುಂಬಗಳ ಭವಿಷ್ಯಕ್ಕಾಗಿ ಕನಿಷ್ಠ ₹50 ಕೋಟಿ ಅನುದಾನದೊಂದಿಗೆ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಈ ನಿಧಿಯಿಂದ ಮಕ್ಕಳ ವಿದ್ಯಾಭ್ಯಾಸ, ಅಪಘಾತ, ಗಂಭೀರ ಅನಾರೋಗ್ಯ, ವಿತರಕರ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ನೆರವು ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕು.
2.ಪತ್ರಿಕಾ ವಿತರಕರ ವೃತ್ತಿ ಭದ್ರತೆಗೆ ಕಾನೂನು ಕ್ರಮ:
ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಮತ್ತು ವೃತ್ತಿ ಭದ್ರತೆ ದೊರೆಯುವಂತೆ ಸರ್ಕಾರ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
3.ಆರೋಗ್ಯ ವಿಮಾ ಷರತ್ತುಗಳ ಸಡಿಲಿಕೆ:
ಪ್ರಸ್ತುತ ಇರುವ ಆರೋಗ್ಯ ವಿಮಾ ಯೋಜನೆಗಳಲ್ಲಿ ವಯಸ್ಸು, ಆದಾಯ ಮುಂತಾದ ಕಠಿಣ ಷರತ್ತುಗಳನ್ನು ಸಡಿಲಿಸಿ, ಅರ್ಹ ಪತ್ರಿಕಾ ವಿತರಕರಿಗೆ ಸುಲಭವಾಗಿ ಮತ್ತು ಉಚಿತವಾಗಿ ಆರೋಗ್ಯ ವಿಮೆ ದೊರೆಯುವಂತೆ ಮಾಡಬೇಕು.
ವಿತರಕರು ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.
4.ವಸತಿ ಭಾಗ್ಯ:
ನಗರ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ 20-30 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ನಿವೇಶನ ಅಥವಾ ಮನೆ ಒದಗಿಸಲು ಪ್ರತ್ಯೇಕ ವಸತಿ ಯೋಜನೆ ರೂಪಿಸಬೇಕು.
5.ರಾಜ್ಯಮಟ್ಟದ ‘ವಿತರಕ ಸೇವಾ ಪ್ರಶಸ್ತಿ’:
ಪ್ರತಿ ವರ್ಷ ಅತ್ಯುತ್ತಮ ಸೇವೆ ಸಲ್ಲಿಸುವ ಪತ್ರಿಕಾ ವಿತರಕರನ್ನು ಗುರುತಿಸಿ, ಪತ್ರಿಕಾ ವಿತರಕರ ದಿನಾಚರಣೆಯಂದು ಸರ್ಕಾರದ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು. ಇದು ಕೇವಲ ಒಬ್ಬ ವ್ಯಕ್ತಿಗೆ ನೀಡುವ ಪ್ರಶಸ್ತಿಯಲ್ಲ; ಇಡೀ ಪತ್ರಿಕಾ ವಿತರಕ ಸಮುದಾಯದ ಸೇವೆಗೆ ಸಲ್ಲಿಸುವ ಗೌರವವಾಗಬೇಕು.
ಇನ್ನೂ ಬೇಕಿರುವುದು:
ಗೌರವ ಮತ್ತು ಸಾಮಾಜಿಕ ಭದ್ರತೆ ಪತ್ರಿಕಾ ವಿತರಕರ ಸಮಸ್ಯೆ ಕೇವಲ ಹಣದ ಸಮಸ್ಯೆಯಲ್ಲ. ಅದು ಗೌರವದ ಸಮಸ್ಯೆ. ವಯಸ್ಸಾದಾಗ ಪಿಂಚಣಿ ಇರಬೇಕು. ಅಪಘಾತವಾದಾಗ ಕುಟುಂಬಕ್ಕೆ ನೆರವು ಇರಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಇರಬೇಕು. ಆರೋಗ್ಯ ಸಮಸ್ಯೆ ಬಂದಾಗ ಚಿಕಿತ್ಸೆ ದೊರೆಯಬೇಕು. ವರ್ಷಗಳ ಸೇವೆಗೆ ಸರ್ಕಾರದಿಂದ ಮಾನ್ಯತೆ ದೊರೆಯಬೇಕು. ಇದು ದಾನವಲ್ಲ. ವರ್ಷಗಳ ಕಾಲ ಸಮಾಜಕ್ಕೆ ನೀಡಿದ ಸೇವೆಗೆ ದೊರೆಯಬೇಕಾದ ನ್ಯಾಯಯುತ ಗೌರವ.
ವಿತರಕರ ಬದುಕು ಬದಲಾದರೆ ಪತ್ರಿಕೆಯ ಭವಿಷ್ಯವೂ ಬದಲಾಗುತ್ತದೆ. ಮುದ್ರಿತ ಪತ್ರಿಕೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿಜಿಟಲ್ ಮಾಧ್ಯಮದ ಸ್ಪರ್ಧೆ, ಮುದ್ರಣ ವೆಚ್ಚ, ಕಾಗದದ ಬೆಲೆ, ವಿತರಣಾ ವೆಚ್ಚ ಮತ್ತು ಓದುಗರ ಬದಲಾಗುತ್ತಿರುವ ಅಭ್ಯಾಸಗಳು ಪತ್ರಿಕಾ ಉದ್ಯಮದ ಮುಂದೆ ಹೊಸ ಸವಾಲುಗಳನ್ನು ತಂದಿವೆ. ಈ ಸಂದರ್ಭದಲ್ಲಿ ಪತ್ರಿಕಾ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಂತ ಅಗತ್ಯ. ವಿತರಕನನ್ನು ಉಳಿಸುವುದು ಎಂದರೆ ಕೇವಲ ಒಬ್ಬ ಕಾರ್ಮಿಕನನ್ನು ಉಳಿಸುವುದಲ್ಲ; ಪತ್ರಿಕೆಯ ಕೊನೆಯ ಮೈಲಿಯನ್ನು ಉಳಿಸುವುದು.
ವಿಶ್ವ ಪತ್ರಿಕಾ ವಿತರಕರ ದಿನದ ಸಂದೇಶ:
ಈ ವಿಶ್ವ ಪತ್ರಿಕಾ ವಿತರಕರ ದಿನದಂದು ಪ್ರತಿಯೊಬ್ಬರೂ ಒಂದು ಕ್ಷಣ ಪತ್ರಿಕಾ ವಿತರಕನನ್ನು ನೆನಪಿಸಿಕೊಳ್ಳೋಣ. ನಾವು ಬೆಳಗ್ಗೆ ಪತ್ರಿಕೆ ಕೈಗೆತ್ತಿಕೊಳ್ಳುವಾಗ ಅದರ ಹಿಂದೆ ಇರುವ ಆ ಮುಂಜಾನೆ ಪರಿಶ್ರಮವನ್ನು ನೆನಪಿಸಿಕೊಳ್ಳೋಣ. ಮಳೆಯಲ್ಲಿ ನೆನೆದು ಬಂದ ಸೈಕಲನ್ನು ನೆನಪಿಸಿಕೊಳ್ಳೋಣ. ಚಳಿಯಲ್ಲಿ ನಡುಗುತ್ತಾ ಪತ್ರಿಕೆ ಹಂಚಿದ ಕೈಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಮನೆ ಬಾಗಿಲಿಗೆ ಪ್ರತಿದಿನ ಸುದ್ದಿಯ ಬೆಳಕನ್ನು ತಂದ ಆ ವ್ಯಕ್ತಿಗೆ ಒಂದು ‘ಧನ್ಯವಾದ’ ಹೇಳೋಣ. ಪತ್ರಿಕಾ ವಿತರಕ ಕೇವಲ ಪತ್ರಿಕೆ ಹಾಕುವವನಲ್ಲ. ಅವನು ಪ್ರಜಾಪ್ರಭುತ್ವದ ಬೆಳಗಿನ ಕಾವಲುಗಾರ. ಅವನ ಬೆಳಗು ಚೆನ್ನಾಗಿದ್ದರೆ ಮಾತ್ರ ನಾಡಿನ ಬೆಳಗು ಚೆನ್ನಾಗಿರುತ್ತದೆ. ವಿಶ್ವ ಪತ್ರಿಕಾ ವಿತರಕರ ದಿನಾಚರಣೆ- 2026ರ ಶುಭಾಶಯಗಳು.
