ಜಾನಪದ ಒಂದು costume ಅಲ್ಲ, ಒಂದು dance ಅಲ್ಲ, ಒಂದು sound effect ಅಲ್ಲ, ಒಂದು horror element ಅಲ್ಲ. ಅದು ಜೀವಂತ ಜನಸಂಸ್ಕೃತಿ. ಆ ಜೀವಂತ ಸಂಸ್ಕೃತಿಯನ್ನು ಪರದೆಯ ಮೇಲೆ ತರುವಾಗ ನಮ್ಮ ಜವಾಬ್ದಾರಿ ಕೇವಲ ಅದನ್ನು ತೋರಿಸುವುದಲ್ಲ; ಅದರ ಆತ್ಮವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದೂ ಹೌದು.
- ಬಿ.ಎಸ್. ಲಿಂಗದೇವರು
ಜಾನಪದದ ಬಗ್ಗೆ ಮಾತನಾಡುವಾಗ ನಾವು ಸಾಮಾನ್ಯವಾಗಿ ದೊಡ್ಡ ದೊಡ್ಡ ಆಚರಣೆಗಳು, ಪ್ರಸಿದ್ಧ ದೈವಗಳು, ದೇವಾಲಯಗಳು ಅಥವಾ ಜನಪ್ರಿಯ ಸಾಂಸ್ಕೃತಿಕ ರೂಪಗಳತ್ತ ಗಮನ ಹರಿಸುತ್ತೇವೆ. ಆದರೆ ಜಾನಪದದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ನಮ್ಮದೇ ಊರಿನ ಒಂದು ಸಣ್ಣ ಅನುಭವ ಸಾಕಾಗುತ್ತದೆ. ಅಂತಹ ಒಂದು ಅನುಭವ ನನ್ನದೇ ಊರಾದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬ್ಯಾಲದಕೆರೆಯದು.
ನಾನು ಬ್ಯಾಲದಕೆರೆಯವನು. ನಮ್ಮ ಊರಿನ ಕೆಂಪಮ್ಮ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಗ್ರಾಮ ದೇವತೆ. ನಮ್ಮ ಊರಿನಲ್ಲಿ ಸೋಮನೂ ಇದೆ. ಸೋಮನ ಕುಣಿತವನ್ನು ನಾನು ಚಿಕ್ಕವನಾಗಿದ್ದಾಗಿನಿಂದಲೂ ನೋಡುತ್ತಾ ಬಂದಿದ್ದೇನೆ. ಸೋಮ ನಮ್ಮ ಮನೆಗಳ ಆಚರಣೆಗಳ ಭಾಗವೂ ಹೌದು. ಯಾವುದೇ ಶುಭಕಾರ್ಯ ನಡೆಯಬೇಕಾದರೂ ಕೆಂಪಮ್ಮನ ಜೊತೆಗೆ ಸೋಮ ಕಡ್ಡಾಯ. ವಿಶೇಷವಾಗಿ ಗೃಹಪ್ರವೇಶದ ಸಂದರ್ಭದಲ್ಲಿ ಅದನ್ನು ನಾವು ಕೇವಲ ಗೃಹಪ್ರವೇಶ ಎಂದು ಕರೆಯುತ್ತಿರಲಿಲ್ಲ; ಮನೆ ದೇವರ ಆಚರಣೆ ಎಂದೇ ನೋಡುತ್ತಿದ್ದೆವು. ಕೆಂಪಮ್ಮ ಮನೆ ಒಳಗೆ ಬಂದ ನಂತರ ಅಷ್ಟ ದಿಕ್ಕುಗಳಿಗೂ ಹೋಗಿ ಪೂಜೆ ಮಾಡಿ ಬರುವ ಆಚರಣೆಯಲ್ಲೂ ಸೋಮನಿಗೆ ಪ್ರಮುಖ ಸ್ಥಾನವಿತ್ತು.
ನನ್ನ ಬಾಲ್ಯದ ನೆನಪಿನಲ್ಲಿ ಸೋಮನ ಕುಣಿತ ಎಂದರೆ ಒಂದು ದೊಡ್ಡ ಜನಸಂದಣಿ. ಅರೆವಾದ್ಯಗಳ ಜೊತೆಗೆ ಶಹನಾಯಿ ನಾದ ಮೊಳಗುತ್ತಿತ್ತು. ವಾದ್ಯಗಳು ಅಲ್ಲಲ್ಲಿ ನಿಂತಾಗ ಪೂಜಾರಿಗಳು ಕೆಂಪಮ್ಮನನ್ನು ಹಾಡಿ ಹೊಗಳುವ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಆ ಹಾಡಿನ ಲಯಕ್ಕೆ ಮತ್ತೆ ವಾದ್ಯಗಳು ಮೊಳಗುತ್ತಿದ್ದವು; ಅದರೊಂದಿಗೆ ಸೋಮನ ಕುಣಿತ ಮುಂದುವರಿಯುತ್ತಿತ್ತು. ಈ ಆಚರಣೆಯನ್ನು ನೋಡುವುದು ನಮ್ಮ ಪಾಲಿಗೆ ಕೇವಲ ಮನರಂಜನೆಯಾಗಿರಲಿಲ್ಲ. ಅದರ ಹಿಂದೆ ಒಂದು ನಂಬಿಕೆ ಇತ್ತು, ಒಂದು ಭಯವೂ ಇತ್ತು, ಅದಕ್ಕಿಂತ ಮುಖ್ಯವಾಗಿ ನಮ್ಮ ಊರಿನ ಬದುಕಿನೊಂದಿಗೆ ಬೆಸೆದುಕೊಂಡಿದ್ದ ಒಂದು ಸಾಂಸ್ಕೃತಿಕ ಅನುಭವವಿತ್ತು.
ಸೋಮನ ಬಗ್ಗೆ ನಮ್ಮಲ್ಲಿ ಒಂದು ನಿರ್ದಿಷ್ಟ ನಂಬಿಕೆಯೂ ಇತ್ತು- ಸೋಮ ದೆವ್ವಗಳನ್ನು ಹಿಡಿದು ಸುಟ್ಟುಹಾಕುತ್ತಾನೆ ಎಂಬುದು. ಆ ಕಾಲದಲ್ಲಿ ಕನಿಷ್ಠ ತಿಂಗಳಿಗೆ ಒಂದಾದರೂ ಸುತ್ತಮುತ್ತಲಿನ ಊರುಗಳಿಗೆ ದೆವ್ವಗಳನ್ನು ಹಿಡಿಯಲು ನಮ್ಮ ಸೋಮ ಮತ್ತು ಕೆಂಪಮ್ಮ ಹೋಗುತ್ತಿದ್ದನ್ನು ನಾನು ನೋಡಿದ್ದೇನೆ. ಬಾಲ್ಯದಲ್ಲಿ ನಾನು ಅದನ್ನು ಪ್ರಶ್ನಿಸಲಿಲ್ಲ. ಅದು ಸತ್ಯವೋ, ಮೌಢ್ಯವೋ ಎಂಬ ವಿಶ್ಲೇಷಣೆಯೂ ಮಾಡಲಿಲ್ಲ. ಅದನ್ನು ಒಂದು ನಂಬಿಕೆಯಾಗಿ ಸ್ವೀಕರಿಸಿದ್ದೆ. ಬಾಲ್ಯದ ಅನುಭವಕ್ಕೆ ಅದರಾಚೆಯ ವಿವರಣೆಯ ಅಗತ್ಯವೂ ಇರಲಿಲ್ಲ.
ಆದರೆ ಇತ್ತೀಚೆಗೆ ಕೇಳಿಬಂದ ಒಂದು ಸಂಗತಿ ನನ್ನಲ್ಲಿ ಕುತೂಹಲ ಮೂಡಿಸಿತು. ಕಳೆದ ಎಂಟು–ಹತ್ತು ವರ್ಷಗಳಿಂದ ನಮ್ಮೂರಿನ ಸುತ್ತಮುತ್ತ ದೆವ್ವಗಳಿಲ್ಲ ಎಂಬ ಕಾರಣಕ್ಕೆ ಸೋಮ ದೆವ್ವ ಹಿಡಿಯುವ ಕಾರ್ಯಕ್ರಮ ನಡೆಯುತ್ತಿಲ್ಲವಂತೆ. ಆದರೆ ಇದೇ ಸೋಮ ಈಗ ಭವಿಷ್ಯ ಹೇಳಲು ಆರಂಭಿಸಿದೆ ಎಂಬ ಮಾಹಿತಿ ಕೇಳಿಬಂದಿದೆ. ಸೋಮನ ಮುಖವಾಡಕ್ಕೆ ಬಳಸುವ ರಕ್ತ ಭೂತಾಳೆಯನ್ನು ಪವಿತ್ರವಾದದ್ದು ಎಂದು ಪರಿಗಣಿಸಲಾಗುತ್ತದೆ. ಆ ಪವಿತ್ರ ಮುಖವಾಡವನ್ನು ಒಂದು ಕುರ್ಚಿಯಲ್ಲಿ ಕೂರಿಸಿ, ಪೂಜಾರಿಗಳು ಅದನ್ನು ಹಿಡಿದುಕೊಂಡು ದೊಡ್ಡ ಗಾತ್ರದ ಬೋರ್ಡ್ ಮೇಲೆ ಏನೋ ಬರೆಯುತ್ತಾರಂತೆ. ಅದನ್ನು ಕೇಳಲು ಹುಣ್ಣಿಮೆಯ ದಿನ ನೂರಾರು ಜನರು ಬರುತ್ತಾರೆ ಎನ್ನಲಾಗಿದೆ.
ಈ ಕಥೆಯ ಸತ್ಯಾಸತ್ಯತೆ ಅಥವಾ ಅದರ ಹಿಂದಿರುವ ಕಾರಣಗಳನ್ನು ಪರಿಶೀಲಿಸುವುದು ಬೇರೆ ವಿಷಯ. ಆದರೆ ನನ್ನಲ್ಲಿ ಒಂದು ಪ್ರಶ್ನೆ ಮಾತ್ರ ಮೂಡಿತು. ಒಂದು ಆಚರಣೆ ಕಾಲದೊಂದಿಗೆ ಬದಲಾಗಬಹುದೇ? ಬದಲಾಗುವುದಾದರೆ ಅದರ ಮೂಲ ನಂಬಿಕೆಗೆ ಏನಾಗುತ್ತದೆ? ಜನರ ಅಗತ್ಯಗಳು ಬದಲಾದಂತೆ ಆಚರಣೆಗಳ ಅರ್ಥವೂ ಬದಲಾಗುತ್ತದೆಯೇ? ಅಥವಾ ಜನಪ್ರಿಯವಾಗಿರುವ ಮತ್ತೊಂದು ಸಾಂಸ್ಕೃತಿಕ ರೂಪದ ಪ್ರಭಾವದಿಂದ ಒಂದು ಆಚರಣೆ ಹೊಸ ರೂಪವನ್ನು ಪಡೆದುಕೊಳ್ಳುತ್ತದೆಯೇ?
ಇತ್ತೀಚೆಗೆ ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ‘ತುಳುನಾಡಿನ ಜಾನಪದ ಮತ್ತು ದೃಶ್ಯಮಾಧ್ಯಮ’ ಎಂಬ ವಿಷಯದ ಕುರಿತು ಮಾತನಾಡುವ ಸಂದರ್ಭ ನನಗೆ ದೊರಕಿತ್ತು. ಆಗ ತುಳುನಾಡಿನ ಭೂತಕೋಲದ ಸಂದರ್ಭದಲ್ಲಿ ದೈವದ ‘ನುಡಿ’ ಕೇಳುವ ಪರಂಪರೆಯ ಬಗ್ಗೆ ಗಮನಹರಿಸಿದೆ. ದೈವದ ಸನ್ನಿಧಿಯಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ, ದೈವದಿಂದ ಉತ್ತರ ಅಥವಾ ಮಾರ್ಗದರ್ಶನ ಪಡೆಯುತ್ತಾರೆ ಎಂಬ ನಂಬಿಕೆ ಅಲ್ಲಿದೆ. ಈ ಪರಂಪರೆಯನ್ನು ಅನೇಕ ಚಲನಚಿತ್ರಗಳಲ್ಲಿ, ಇತ್ತೀಚಿನ ಸಾಮಾಜಿಕ ಮಾಧ್ಯಮಗಳಲ್ಲಿಯೂ ನೋಡುತ್ತಾ ಬಂದಿದ್ದೇನೆ. ನಮ್ಮೂರಿನ ಸೋಮನಲ್ಲೂ ಈಗ ಭವಿಷ್ಯ ಹೇಳುವಂತಹ ಬೆಳವಣಿಗೆ ಕಾಣಿಸುತ್ತಿದೆ ಎಂಬುದನ್ನು ಕೇಳಿದಾಗ, ಈ ಎರಡರ ನಡುವೆ ಯಾವುದಾದರೂ ಸಾಂಸ್ಕೃತಿಕ ಸಾಮ್ಯತೆ ರೂಪುಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿತು.
ಇದು ಯಾರನ್ನೂ ಆರೋಪಿಸುವ ಪ್ರಶ್ನೆಯಲ್ಲ. ಬದಲಾಗಿ, ಆಚರಣೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸುವ ಪ್ರಯತ್ನ. ನಾನು ಬಯಲುಸೀಮೆಯವನು. ತುಳುನಾಡಿನ ಆಚರಣೆಗಳ ನಡುವೆ ಹುಟ್ಟಿ ಬೆಳೆದವನಲ್ಲ. ಆದರೆ ಸಿನಿಮಾ ಮತ್ತು ದೃಶ್ಯಮಾಧ್ಯಮದ ಮೂಲಕ ಸಂಸ್ಕೃತಿಯನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಆ ಕಾರಣದಿಂದಲೇ ಒಂದು ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ: ದೃಶ್ಯಮಾಧ್ಯಮ ಒಂದು ಆಚರಣೆಯನ್ನು ಕೇವಲ ದಾಖಲಿಸುತ್ತಿದೆಯೇ, ಅಥವಾ ಅದನ್ನು ನೋಡುವ ನಮ್ಮ ದೃಷ್ಟಿಯನ್ನೇ ಬದಲಿಸುತ್ತಿದೆಯೇ?
ಜಾನಪದದ ಬಗ್ಗೆ ಮಾತನಾಡುವ ಪ್ರಮಾಣವೇ ಬದಲಾಗಿದೆ
ಕಾಂತಾರ ಚಿತ್ರದ ನಂತರ ತುಳುನಾಡಿನ ಜಾನಪದದ ಬಗ್ಗೆ ಮಾತನಾಡುವ ಪ್ರಮಾಣವೇ ಬದಲಾಗಿದೆ. ತುಳುನಾಡಿನ ಭೂತಾರಾಧನೆ, ಭೂತಕೋಲ, ದೈವಾರಾಧನೆ, ಪಂಜುರ್ಲಿ, ಗುಳಿಗ, ನಾಗಾರಾಧನೆ, ಕಂಬಳ ಮುಂತಾದವುಗಳು ದೇಶದಾದ್ಯಂತ ಚರ್ಚೆಗೆ ಬಂದವು. ಆದರೆ ಕಾಂತಾರ ತುಳುನಾಡಿನ ಜಾನಪದದ ಆರಂಭವಲ್ಲ, ಅದು ಒಂದು turning point. ಅದಕ್ಕೂ ಬಹಳ ಹಿಂದೆಯೇ ತುಳುನಾಡಿನ ಭಾಷೆ, ಜನಜೀವನ, ಆಚರಣೆ ಮತ್ತು ಜಾನಪದವನ್ನು ಆಧರಿಸಿ ಹಲವು ಚಿತ್ರಗಳು ಬಂದಿವೆ. ಆದರೆ ಕಾಂತಾರ ಅವುಗಳನ್ನು ಹಿಂದೆಂದಿಗಿಂತಲೂ ದೊಡ್ಡ ಪ್ರೇಕ್ಷಕ ವಲಯದ ಮುಂದೆ ತಂದಿತು ಎಂಬುದರಲ್ಲಿ ಅನುಮಾನವಿಲ್ಲ.
ಇದರ ಪರಿಣಾಮವಾಗಿ ಒಂದು ಅಪಾಯವೂ ಎದುರಾಗಿದೆ. ತುಳುನಾಡು ಎಂದರೆ ಕೋಲ, ದೈವ, ಗಗ್ಗರ, ನಾಗ, ಬೆಂಕಿ, ಉಗ್ರ ಸಂಗೀತ ಮತ್ತು trance ಎಂಬ ಸಂಕ್ಷಿಪ್ತ ದೃಶ್ಯಚಿತ್ರಣ ನಮ್ಮ ಮನಸ್ಸಿನಲ್ಲಿ ರೂಪುಗೊಳ್ಳುವ ಸಾಧ್ಯತೆ ಇದೆ. ಆದರೆ ತುಳುನಾಡಿನ ಜಾನಪದ ಅದಕ್ಕಿಂತ ಬಹಳ ದೊಡ್ಡದು. ಭೂತಕೋಲವೆಂದರೆ ಕೇವಲ ವೇಷಭೂಷಣ, ಮುಖವರ್ಣಿಕೆ, ಗಗ್ಗರ, ಬೆಂಕಿ ಅಥವಾ ನೃತ್ಯವಲ್ಲ. ಅದರ ಹಿಂದೆ ಒಂದು ಸಮುದಾಯವಿದೆ, ಒಂದು ನಂಬಿಕೆಯಿದೆ, ಹಲವು ತಲೆಮಾರುಗಳ ಪರಂಪರೆಯಿದೆ, ದೈವ ಮತ್ತು ಮನುಷ್ಯರ ನಡುವಿನ ಸಂಬಂಧವಿದೆ. ಈ ಹಿನ್ನೆಲೆಯನ್ನು ಬಿಟ್ಟು ಆಚರಣೆಯ ದೃಶ್ಯರೂಪವನ್ನಷ್ಟೇ ತೆಗೆದುಕೊಂಡರೆ, ಅದರ ಸಾಂಸ್ಕೃತಿಕ ಅರ್ಥದ ಬಹುಭಾಗ ಕಳೆದುಹೋಗುವ ಸಾಧ್ಯತೆ ಇದೆ.
ಅದೇ ರೀತಿ ನಮ್ಮ ಗ್ರಾಮ ದೇವತೆಗಳ ಹಿಂದೆಯೂ ಸ್ಥಳೀಯ ಸಮುದಾಯದ ನೆನಪು ಮತ್ತು ಸಂಬಂಧವಿದೆ. ನಮ್ಮೂರಿನ ಕೆಂಪಮ್ಮ, ಸುತ್ತಮುತ್ತಲಿನ ಊರುಗಳ ದೇವತೆಗಳೊಂದಿಗೆ ಇರುವ ಸಂಬಂಧ, ಅವುಗಳ ಹಿಂದಿರುವ ಸ್ಥಳೀಯ ಕಥೆಗಳು- ಇವೆಲ್ಲವೂ ಜಾನಪದದ ಭಾಗ. ಜನರು ತಮ್ಮ ದೇವತೆಗಳು ತಮ್ಮ ಊರನ್ನು, ತಮ್ಮ ಭೂಮಿಯನ್ನು ಮತ್ತು ತಮ್ಮ ಬದುಕನ್ನು ರಕ್ಷಿಸುತ್ತವೆ ಎಂಬ ನಂಬಿಕೆಯನ್ನು ಹೊಂದಿರುತ್ತಾರೆ. ಹೀಗಾಗಿ ಆಚರಣೆ ಎಂದರೆ ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಸಮುದಾಯದ ಬದುಕಿನ ಒಂದು ಭಾಗ.
ಇಲ್ಲಿ ದೃಶ್ಯಮಾಧ್ಯಮದ ಜವಾಬ್ದಾರಿ ಬಹಳ ಮುಖ್ಯವಾಗುತ್ತದೆ. ಜಾನಪದದ ದೇಹವನ್ನು ಕ್ಯಾಮೆರಾ ಸುಲಭವಾಗಿ ಹಿಡಿಯುತ್ತದೆ, ಅದರ ಆತ್ಮವನ್ನು ಹಿಡಿಯಲು ಅಧ್ಯಯನ ಬೇಕು. ಒಂದು ದೈವದ ವೇಷವನ್ನು ತೋರಿಸುವುದರಿಂದ ದೈವಾರಾಧನೆ ಅರ್ಥವಾಗುವುದಿಲ್ಲ. ಗಗ್ಗರದ ಶಬ್ದ ಕೇಳಿಸುವುದರಿಂದ ಭೂತಾರಾಧನೆಯ ಅರ್ಥ ಪ್ರೇಕ್ಷಕರಿಗೆ ತಲುಪುವುದಿಲ್ಲ. ಬೆಂಕಿ, ಹೊಗೆ, ಕತ್ತಲೆ ಮತ್ತು slow motion ಸೇರಿಸಿದರೆ ಅದು ದೃಶ್ಯವಾಗಿ ಆಕರ್ಷಕವಾಗಬಹುದು; ಆದರೆ ಅದರ ಹಿಂದೆ ಇರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅರ್ಥ ಪ್ರೇಕ್ಷಕರಿಗೆ ತಲುಪದೇ ಹೋಗಬಹುದು.
ಇಂದು ಸಾಮಾಜಿಕ ಮಾಧ್ಯಮದ ಕಾಲದಲ್ಲಿ ಈ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಒಂದು ಆಚರಣೆಯನ್ನು ಹತ್ತು ಜನ ನೋಡಿದರೆ ಅದು ಒಂದು ಅನುಭವ. ಅದೇ ಆಚರಣೆಯನ್ನು ಹತ್ತು ಲಕ್ಷ ಜನ ನೋಡಿದರೆ ಅದು ಒಂದು ಸಾಂಸ್ಕೃತಿಕ ಚಿತ್ರಣವಾಗುತ್ತದೆ. ಆ ಚಿತ್ರಣ ಜನರ ಕಲ್ಪನೆಯನ್ನು ರೂಪಿಸುತ್ತದೆ. ನಂತರ ಜನರ ಆ ಕಲ್ಪನೆಯೇ ಮತ್ತೆ ಆ ಆಚರಣೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮಾಧ್ಯಮ ಕೇವಲ ಸಂಸ್ಕೃತಿಯನ್ನು ದಾಖಲಿಸುವುದಿಲ್ಲ; ಸಂಸ್ಕೃತಿಯ ಬಗ್ಗೆ ನಮ್ಮ ಕಲ್ಪನೆಯನ್ನೂ ನಿರ್ಮಿಸುತ್ತದೆ.
ಇಲ್ಲಿಯೇ ನನ್ನ ಬ್ಯಾಲದಕೆರೆಯ ಸೋಮನ ಅನುಭವ ಮತ್ತೆ ನೆನಪಾಗುತ್ತದೆ. ಒಂದು ಕಾಲದಲ್ಲಿ ಸೋಮ ದೆವ್ವಗಳನ್ನು ಹಿಡಿಯುವ ಆಚರಣೆಯ ಭಾಗವಾಗಿದ್ದ. ಇಂದು ಅದೇ ಸೋಮ ಭವಿಷ್ಯ ಹೇಳುವ ರೂಪ ಪಡೆದುಕೊಂಡಿದೆ ಎನ್ನುವುದು ನಿಜವಾಗಿದ್ದರೆ, ಅದನ್ನು ಕೇವಲ ಒಂದು ಸ್ಥಳೀಯ ಆಚರಣೆಯ ಬದಲಾವಣೆ ಎಂದು ಬಿಟ್ಟುಬಿಡಬಹುದೇ? ಅಥವಾ ನಮ್ಮ ಕಾಲದ ಜನಪ್ರಿಯ ಸಾಂಸ್ಕೃತಿಕ ರೂಪಗಳು, ಮಾಧ್ಯಮ ಮತ್ತು ಸಾಮಾಜಿಕ ಪರಿಸರವೂ ಇಂತಹ ಬದಲಾವಣೆಗಳ ಮೇಲೆ ಪರಿಣಾಮ ಬೀರುತ್ತಿವೆಯೇ? ಈ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡುವುದು ನನ್ನ ಉದ್ದೇಶವಲ್ಲ. ಆದರೆ ಇಂತಹ ಬದಲಾವಣೆಗಳನ್ನು ಗಮನಿಸುವುದು ಮತ್ತು ದಾಖಲಿಸುವುದು ಅಗತ್ಯ.
ಇದರ ಜೊತೆಗೆ ನಂಬಿಕೆ ಮತ್ತು ಮೌಢ್ಯಗಳ ನಡುವಿನ ಗಡಿಯನ್ನೂ ನಾವು ಗಮನಿಸಬೇಕು. ಕರ್ನಾಟಕ ಸರ್ಕಾರ 2017ರಲ್ಲಿ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆಯನ್ನು ಜಾರಿಗೆ ತಂದಿದೆ. ಅತೀಂದ್ರಿಯ ಶಕ್ತಿ ವ್ಯಕ್ತಿಯ ದೇಹವನ್ನು ಪ್ರವೇಶಿಸಿದೆ ಎಂದು ಹೇಳಿ, ಆತನ ಮಾತನ್ನು ಅನುಸರಿಸದಿದ್ದರೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಭಯವನ್ನು ಹುಟ್ಟಿಸುವುದು, ಜನರನ್ನು ವಂಚಿಸುವುದು ಅಥವಾ ಮೋಸ ಮಾಡುವುದು ನಿಷೇಧಿತ ಕೃತ್ಯಗಳ ವ್ಯಾಪ್ತಿಗೆ ಬರುತ್ತದೆ. ಆದರೆ ಕಾನೂನು ಜಾನಪದವನ್ನು ನಿಷೇಧಿಸುವುದಿಲ್ಲ; ಎಲ್ಲಾ ಧಾರ್ಮಿಕ ಆಚರಣೆಗಳನ್ನೂ ಪ್ರಶ್ನಿಸುವುದಿಲ್ಲ. ನಂಬಿಕೆಯ ಹೆಸರಿನಲ್ಲಿ ಭಯ ಹುಟ್ಟಿಸುವುದು, ವಂಚಿಸುವುದು ಅಥವಾ ಜನರನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಮಾತ್ರ ಮಿತಿ ವಿಧಿಸುತ್ತದೆ. ಆದ್ದರಿಂದ ಜಾನಪದವನ್ನು ಗೌರವಿಸುವುದೂ, ಮೌಢ್ಯವನ್ನು ಪ್ರಶ್ನಿಸುವುದೂ ಒಂದೇ ಸಮಯದಲ್ಲಿ ಸಾಧ್ಯ.
ತುಳುನಾಡಿನ ಜಾನಪದದ ಜಗತ್ತು ಇದಕ್ಕಿಂತಲೂ ವಿಶಾಲವಾಗಿದೆ. ನಾಗಾರಾಧನೆಯ ಹಿಂದೆ ಕುಟುಂಬಗಳ ನಂಬಿಕೆ ಇದೆ, ಭೂಮಿಯೊಂದಿಗಿನ ಸಂಬಂಧವಿದೆ, ವಂಶಪಾರಂಪರ್ಯವಿದೆ. ರಾಣಿ ಅಬ್ಬಕ್ಕರಂತಹ ಇತಿಹಾಸ ಸೃಷ್ಟಿಸಿದ ವ್ಯಕ್ತಿತ್ವಗಳಿವೆ. ಇಂದಿನ ತುಳುನಾಡಿನ ಮಹಿಳೆಯರ ಶಿಕ್ಷಣ, ಕಲೆ, ಸಮಾಜಸೇವೆ, ಉದ್ಯಮ ಮತ್ತು ರಾಜಕೀಯ ಕ್ಷೇತ್ರಗಳ ಸಾಧನೆಗಳಿವೆ. ಇವೆಲ್ಲವೂ ದೃಶ್ಯಮಾಧ್ಯಮಕ್ಕೆ ಕಥೆಗಳೇ. ಅಲ್ಲಿ ಗಗ್ಗರದ ಶಬ್ದ ಇಲ್ಲದಿರಬಹುದು, ಬೆಂಕಿಯ ದೃಶ್ಯಗಳಿಲ್ಲದಿರಬಹುದು, slow motion ಇರದಿರಬಹುದು. ಆದರೆ ಅಲ್ಲಿ ಬದುಕಿದೆ, ಸಂಘರ್ಷವಿದೆ, ಇತಿಹಾಸವಿದೆ, ಮಾನವೀಯತೆ ಇದೆ.
ಹೀಗಾಗಿ ನನ್ನ ಬ್ಯಾಲದಕೆರೆಯ ಸೋಮನಿಂದ ಆರಂಭವಾದ ಈ ಸಣ್ಣ ಅನುಭವ ಮತ್ತೆ ಒಂದು ದೊಡ್ಡ ಪ್ರಶ್ನೆಯತ್ತ ಕರೆದೊಯ್ಯುತ್ತದೆ. ಒಂದು ಆಚರಣೆ ಕಾಲದೊಂದಿಗೆ ಬದಲಾಗುವಾಗ, ಅದನ್ನು ಬದಲಾಯಿಸುತ್ತಿರುವುದು ಯಾರು? ಜನರ ನಂಬಿಕೆಯೇ? ಸಾಮಾಜಿಕ ಪರಿಸರವೋ? ಜನಪ್ರಿಯ ಸಂಸ್ಕೃತಿಯೋ? ಅಥವಾ ಮಾಧ್ಯಮವೂ ಅದರ ಒಂದು ಭಾಗವಾಗಿದೆಯೇ? ಇದಕ್ಕೆ ಉತ್ತರ ಹುಡುಕುವುದು ಸಂಶೋಧಕರ ಕೆಲಸ ಮಾತ್ರವಲ್ಲ. ಕಲಾವಿದರು, ಚಿತ್ರನಿರ್ದೇಶಕರು ಮತ್ತು ಮಾಧ್ಯಮಗಳ ಜವಾಬ್ದಾರಿಯೂ ಹೌದು.
ಜಾನಪದವನ್ನು ಬಳಸುವುದು ತಪ್ಪಲ್ಲ. ಆದರೆ ಜಾನಪದವನ್ನು ಕೇವಲ ದೃಶ್ಯ ಆಕರ್ಷಣೆಯಾಗಿ ಬಳಸುವುದೇ ಸಮಸ್ಯೆ. ಒಂದು ಸಂಸ್ಕೃತಿ ನಮಗೆ ಇಷ್ಟವಾಯಿತು ಎಂದರೆ ಅದು ನಮ್ಮದಾಗುವುದಿಲ್ಲ. ಅದರ ಮೂಲವನ್ನು ತಿಳಿದು, ಅದರ ಹಿಂದೆ ಇರುವ ಜನರನ್ನು ಅರ್ಥಮಾಡಿಕೊಂಡು, ಅವರ ನಂಬಿಕೆಯನ್ನು ಗೌರವಿಸಿ, ಅವರ ನೆಲದೊಂದಿಗಿನ ಸಂಬಂಧವನ್ನು ಅರಿತಾಗ ಮಾತ್ರ ನಾವು ಆ ಸಂಸ್ಕೃತಿಯನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಆರಂಭಿಸುತ್ತೇವೆ.
ಜಾನಪದ ಒಂದು costume ಅಲ್ಲ, ಒಂದು dance ಅಲ್ಲ, ಒಂದು sound effect ಅಲ್ಲ, ಒಂದು horror element ಅಲ್ಲ. ಅದು ಜೀವಂತ ಜನಸಂಸ್ಕೃತಿ. ಆ ಜೀವಂತ ಸಂಸ್ಕೃತಿಯನ್ನು ಪರದೆಯ ಮೇಲೆ ತರುವಾಗ ನಮ್ಮ ಜವಾಬ್ದಾರಿ ಕೇವಲ ಅದನ್ನು ತೋರಿಸುವುದಲ್ಲ; ಅದರ ಆತ್ಮವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದೂ ಹೌದು.
ಮಾಧ್ಯಮ ಸಂಸ್ಕೃತಿಯನ್ನು ಉಳಿಸಬಹುದು, ಅದನ್ನು ವ್ಯಾಪಾರೀಕರಿಸಬಹುದು, ಅದರ ಪಾವಿತ್ರ್ಯವನ್ನು ಕಾಪಾಡಬಹುದು ಅಥವಾ ಅದನ್ನು ಕೇವಲ ದೃಶ್ಯ ಆಕರ್ಷಣೆಯಾಗಿ ಮಾಡಬಹುದು. ಆ ಆಯ್ಕೆ ನಮ್ಮ ಕೈಯಲ್ಲಿದೆ.

