- ನರೇಗಾ ಸ್ವರೂಪದ ಬದಲಿಸಿದ್ದಕ್ಕೆ ಆಕ್ರೋಶ- ವಿಪಕ್ಷ ಜತೆ ಚರ್ಚಿಸದೇ ಗಾಂಧಿ ಹೆಸರು ರದ್ದು
ಮನರೇಗಾ ಯೋಜನೆ ರೂಪ, ರಚನೆಯನ್ನೂ ಯಾರೊಂದಿಗೂ ಚರ್ಚಿಸದೇ ಬದಲಾಯಿಸಲಾಗಿದೆ
ಈ ಬದಲಾವಣೆ ಮೂಲಕ ಸರ್ಕಾರ ರೈತರು, ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆಹೊಸ ಕಾಯ್ದೆ ರದ್ದಾಗುವವರೆಗೂ ನಮ್ಮ ಕಾರ್ಯಕರ್ತರ ಹೋರಾಡುತ್ತಾರೆ: ಸೋನಿಯಾ ಗುಡುಗು
---ಪಿಟಿಐ ನವದೆಹಲಿ‘ಮೋದಿ ಸರ್ಕಾರವು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ (ಎಂಜಿ-ನರೇಗಾ) ಯೋಜನೆಯನ್ನು ನಾಶ ಮಾಡಿದೆ. ಇದನ್ನು ರದ್ದುಗೊಳಿಸಿ ತರಲಾಗಿರುವ ‘ಕಪ್ಪು ಕಾನೂನನ್ನು’ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಧಿಕ್ಕರಿಸುತ್ತಾರೆ ಹಾಗೂ ಹೊಸ ಕಾನೂನು ರದ್ದಾಗುವತನಕ ಹೋರಾಡುತ್ತಾರೆ’ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಗುಡುಗಿದ್ದಾರೆ.
ನರೇಗಾ ಯೋಜನೆ ರದ್ದು ಮಾಡಿ ಅದರ ಬದಲು ತರಲಾಗಿರುವ ‘ವಿಬಿ ಜಿ ರಾಮ್ ಜಿ’ ಕಾನೂನಿನ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಸೋನಿಯಾ, ‘ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಲ್ಲದೆ, ಎಂಜಿ-ನರೇಗಾದದ ರೂಪ ಮತ್ತು ರಚನೆಯನ್ನು ಯಾವುದೇ ಚರ್ಚೆಯಿಲ್ಲದೆ, ಯಾರನ್ನೂ ಸಂಪರ್ಕಿಸದೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅನಿಯಂತ್ರಿತವಾಗಿ ಬದಲಾಯಿಸಲಾಗಿದೆ’ ಎಂದು ಆರೋಪಿಸಿದ್ದಾರೆ.‘ನರೇಗಾ ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರ ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ. ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ಗ್ರಾಮೀಣ ಬಡವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ’ ಎಂದು ಆರೋಪಿಸಿದ್ದಾರೆ.
‘20 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನರೇಗಾ ಕಾಯ್ದೆಯನ್ನು ಸಂಸತ್ತಿನಲ್ಲಿ ಒಮ್ಮತದಿಂದ ಅಂಗೀಕರಿಸಲಾಗಿತ್ತು. ಆ ದಿನ ಇನ್ನೂ ನನಗೆ ನೆನಪಿದೆ. ಅದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು ಮತ್ತು ವಂಚಿತರು, ಶೋಷಿತರು ಮತ್ತು ಬಡವರಲ್ಲಿ ಬಡವರಿಗೆ ಜೀವನೋಪಾಯದ ಸಾಧನವಾಗಿತ್ತು’ ಎಂದಿದ್ದಾರೆ.‘ಇದರಿಂದ ಕೆಲಸ ಹುಡುಕಿಕೊಂಡು ವಲಸೆ ಹೋಗುವುದು ನಿಂತುಹೋಯಿತು, ಉದ್ಯೋಗಕ್ಕೆ ಕಾನೂನುಬದ್ಧ ಹಕ್ಕನ್ನು ಒದಗಿಸಲಾಯಿತು ಮತ್ತು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಲಾಯಿತು. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ದೃಷ್ಟಿಕೋನ ಆಧರಿಸಿದ ಭಾರತದ ಕನಸನ್ನು ನನಸಾಗಿಸುವತ್ತ ನರೇಗಾ ಮೂಲಕ ದೃಢ ಹೆಜ್ಜೆ ಇಡಲಾಗಿತ್ತು’ ಎಂದು ಹೇಳಿದ್ದಾರೆ.