ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಮಗೆ ಕ್ಷೇತ್ರದ ಜನತೆಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಶಕ್ತಿ ತುಂಬಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ರವರಿಗೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕೋರಿದರು. ಜೆಡಿಎಸ್ ಜಾತ್ಯತೀತ ಅಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಲ್ಲದೆ ಪಕ್ಷ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಪಕ್ಷದ ನಂಬಿಕೆ ಉಳಿಸಿ ಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಅನುದಾನ ತರಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕೋಮುವಾದಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಜಾತ್ಯತೀತತೆಗೆ ತಿಲಾಂಜಲಿ ಹಾಡಿದೆ ಎಂದರು.
ಬಿಜೆಪಿ ಎಂದು ಹೇಳುತ್ತಿದ್ದ ಹೂಡಿ ವಿಜಯಕುಮಾರ್ ಟಿಕೆಟ್ ನೀಡದ್ದಕ್ಕೆ ನಾನು ಎಂದಿಗೂ ಬಿಜೆಪಿ ಸೇರುವುದಿಲ್ಲ ಪಕ್ಷೇತರನಾಗಿ ಇರುತ್ತೇನೆ ಎಂದು ದೇವಾಲಯ, ಮಸೀದಿಗಳಲ್ಲಿ ಪ್ರಮಾಣ ಮಾಡಿ ಸಂವಿಧಾನದ ಪರ ಇರುತ್ತೇನೆ ಎಂದು ಹೇಳಿದ್ದರು. ಈಗ ಮಾತಿಗೆ ತಪ್ಪಿ ಜನತೆಗೆ ಮೋಸ ಮಾಡಿ ಮತ್ತೇ ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಇವರು ನಂಬಲು ಅರ್ಹರೆ ಎಂದು ಪ್ರಶ್ನಿಸಿದರು.
ವಹ್ನಿಕುಲಸ್ಥರಿಗೆ ಏಮಾರಿಸಿದ ಹೂಡಿ
ವಹ್ನಿಕುಲಸ್ಥರು ಹಿಂದೆ ಮತ್ತು ಇಂದಿಗೂ ನನ್ನ ಜೊತೆಗೆ ಇದ್ದಾರೆ. ನನಗೆ ಸಹಕಾರ ನೀಡಿದ ಜನಾಂಗ ಅವರನ್ನೂ ಹೂಡಿ ವಿಜಯಕುಮಾರ್ ಏಮಾರಿಸುವ ಕೆಲಸ ಮಾಡಿದರು. ಅವರ ಬೆಂಬಲ ಘೋಷಣೆಯಿಂದ ಅವರ ನಿಜವಾದ ಬಣ್ಣ ಬಯಲಾಗಿದೆ. ಇದರಿಂದ ಜನ ಎಚ್ಚೆತ್ತು ಕೊಳ್ಳುವಂತೆ ಅವರು ಮನವಿ ಮಾಡಿದರು.ಮಾಲೂರು ಟೌನ್ ಗೆ ೩೦೦ ಕೋಟಿ ರು. ವೆಚ್ಚದಲ್ಲಿ ಫ್ಲೈ ಓವರ್ ಮಂಜೂರಾಗಿದೆ, ಮಾಲೂರಿನ ೨೭ ವಾರ್ಡ್ ಗಳಿಗೆ ೫೦ ಕೋಟಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಮಂಜೂರು ಆಗಿದೆ. ಮಾಲೂರು ಕೆರೆ ಅಭಿವೃದ್ಧಿಗೆ ೧೦ ಕೋಟಿ ಬಿಡುಗಡೆ ಆಗಿದ್ದು,ಇನ್ನೂ ಹೆಚ್ಚುವರಿ ೧೦ ಕೋಟಿ ಹೆಚ್ಚಿನ ಅನುದಾನ ಪಡೆದು ಕೆರೆ ಅಭಿವೃದ್ಧಿ ಮಾಡಲಾಗುವುದು. ರಂಗಮಂದಿರ ಅಭಿವೃದ್ಧಿಗೆ ೨ ಕೋಟಿ, ಬಸ್ ನಿಲ್ದಾಣದ ಅಭಿವೃದ್ಧಿಗೆ ೧೦ ಕೋಟಿ ರು. ಮಂಜೂರು ಮಾಡಿಸಲಾಗಿದೆ.ಷಟ್ಪಥ ರಸ್ತೆಗೆ ಅನುಮೋದನೆ
ಹೊಸಕೋಟೆ ಮಾಲೂರಿಗೆ ೬ ಲೈನ್ ಗಳ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ ಹಾಗೂ ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಮಂಜೂರು ದೊರೆತಿದ್ದು ಟೆಂಡರ್ ಹಂತದಲ್ಲಿದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ತರಲು ನನಗೆ ಶಕ್ತಿ ತುಂಬಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.