ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ 350 ಸ್ಥಾನ ಗೆಲ್ಲುವ ಹಾಗೂ ಶೇ.50ರಷ್ಟು ಮತ ಪಡೆಯುವ ಗುರಿ ಇಟ್ಟುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ, ಈ ಹಿಂದೆ ‘ಅಚ್ಛೇ ದಿನ್’ ಎಂಬ ಸೂಪರ್ ಹಿಟ್ ಉದ್ಘೋಷದ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿ, ಈ ಲೋಕಸಭೆ ಚುನಾವಣೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ ಉದ್ಘೋಷದೊಂದಿಗೆ ಕಣಕ್ಕಿಳಿಯಲು ತೀರ್ಮಾನಿಸಿದೆ.
ಇದೇ ವೇಳೆ, ಕಾಂಗ್ರೆಸ್‌ನ ‘ಗ್ಯಾರಂಟಿ’ ಯೋಜನೆಗಳಿಗೆ ಸಡ್ಡು ಹೊಡೆವ ಉದ್ದೇಶದಿಂದ ‘ಮೋದಿ ಕಿ ಗ್ಯಾರಂಟಿ’ ಎಂಬುದನ್ನು 2024ರ ಚುನಾವಣೆಯಲ್ಲಿ ಮೂಲಮಂತ್ರ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಫಲಕೊಟ್ಟ ಈ ಉದ್ಘೋಷವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮಂತ್ರವಾಗಿ ಬಳಸಿಕೊಳ್ಳುವ ಒಮ್ಮತಕ್ಕೆ ಬರಲಾಯಿತು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
4 ‘ಜಾತಿ’ಗಳ ಏಳ್ಗೆಗೆ ಗಮನ ನೀಡಿ- ಮೋದಿ:ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಾನು ನಾಲ್ಕು ಜಾತಿಗಳೆಂದು ನಂಬಿರುವ ಯುವಕರು, ಬಡವರು, ಮಹಿಳೆಯರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ನಾವು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ನಮ್ಮ ಯೋಜನೆಗಳು ಬಡವರು, ರೈತರು, ಮಹಿಳೆಯರು ಮತ್ತು ಯುವಸಮೂಹವನ್ನು ತಲುಪಿದರೆ ಅದು ನಮಗೆ ಖಂಡಿತಾ ನೆರವು ನೀಡಲಿದೆ’ ಎಂದು ಹೇಳಿದರು.ಜೊತೆಗೆ, ‘ಬೂತ್ ನಿರ್ವಹಣೆ ಅತ್ಯಂತ ಮಹತ್ವದ್ದು. ಈ ವಿಷಯದಲ್ಲಿ ನಾವು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಮಾದರಿ ಅನುಸರಿಸಬೇಕು. ಇದನ್ನು ಎಲ್ಲಾ ನಾಯಕರು ಸವಾಲಾಗಿ ಸ್ವೀಕರಿಸಬೇಕು. ಸಂಘಟನಾ ಶಕ್ತಿಯಿಂದ ಮಾತ್ರವೇ ನಾವು ಗೆಲುವು ಸಾಧಿಸಲು ಸಾಧ್ಯ. ಸಂಪೂರ್ಣ ಸನ್ನದ್ಧರಾದ ಬಳಿಕವಷ್ಟೇ ನಾವು ಜನರ ಮುಂದೆ ಹೋಗಬೇಕು. ಹೊಸ ಮತದಾರರನ್ನು ಆಕರ್ಷಿಸಿ ಬಿಜೆಪಿ ಪರ ಮತ ಹಾಕಿಸಬೇಕು. ರಾಮಮಂದಿರ ಉದ್ಘಾಟನೆ ವಿಷಯವನ್ನು ಬಿಜೆಪಿಗೆ ಅನುಕೂಲವಾಗುವಂತೆ ಪರಿವರ್ತಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮಾಹಿತಿಯೊಂದಿಗೆ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳಬೇಕು. ಈ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುವ ವಿಪಕ್ಷಗಳಿಗೆ ಸೂಕ್ತ ಉತ್ತರ ನೀಡಬೇಕು’ ಎಂದು ಪದಾಧಿಕಾರಿಗಳಿಗೆ ಮೋದಿ ಸಲಹೆ ನೀಡಿದರು.
ಈ ಬಾರಿ ಚಲಾವಣೆಯಾಗುವ ಒಟ್ಟು ಮತಗಳಲ್ಲಿ ಶೇ.50ರಷ್ಟು ಮತಗಳನ್ನು ನಾವು ಪಡೆಯುವಂತೆ ನೋಡಿಕೊಳ್ಳಬೇಕು ಎಂಬ ಗುರಿಯನ್ನೂ ಪಕ್ಷದ ನಾಯಕರಿಗೆ ಮೋದಿ ನೀಡಿದ್ದಾರೆ ಎನ್ನಲಾಗಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಶೇ.31ರಷ್ಟು, 2019ರ ಚುನಾವಣೆಯಲ್ಲಿ ಶೇ.37.36ರಷ್ಟು ಮತವನ್ನು ಪಡೆದುಕೊಂಡಿತ್ತು.ಈ ನಡುವೆ ಸಭೆಯ ಬಳಿಕ ಮಾತನಾಡಿದ ಕೆಲ ನಾಯಕರು, ‘ಚುನಾವಣೆ ಗೆಲ್ಲಲು ರೂಪಿಸಿರುವ ಪ್ರತಿಯೊಂದು ಕಾರ್ಯತಂತ್ರಗಳ ಬಗ್ಗೆಯೂ ಪ್ರಧಾನಿ ಮೋದಿ ಕೂಲಂಕಷವಾಗಿ ಗಮನಿಸಿದರು ಮತ್ತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಸಭೆಯಲ್ಲಿದ್ದ ಬಹುತೇಕ ನಾಯಕರು, ದೇಶಕ್ಕೆ ಮತ್ತೆ ಮೋದಿ ನಾಯಕತ್ವ ಬೇಕಿದೆ ಹಾಗೂ ಇತ್ತೀಚಿನ ಪಂಚರಾಜ್ಯ ಚುನಾವಣೆಯ ಫಲಿತಾಂಶ ಮೂಲಕ ದೇಶದ ಜನತೆ ಮತ್ತೆ ಮೋದಿ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬುದು ಸಾಬೀತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕೀ ಗ್ಯಾರಂಟಿಯೇ ನಮ್ಮ ಮೂಲ ಮಂತ್ರವಾಗಲಿದೆ’ ಎಂದು ಹೇಳಿದರು.ಟಾರ್ಗೆಟ್ 160: ಕಳೆದ ಬಾರಿ ಅತ್ಯಂತ ಕಡಿಮೆ ಮತಗಳಿಂದ ಸೋತ 160 ಕ್ಷೇತ್ರಗಳನ್ನು ಗುರುತಿಸಿರುವ ಬಿಜೆಪಿ, ಈ ಬಾರಿ ಅಲ್ಲಿ ವಿಶೇಷ ಪ್ರಚಾರ, ಬೂತ್ ಮಟ್ಟದ ಅಭಿಯಾನದ ಮೂಲಕ ಅದನ್ನು ಗೆಲ್ಲಲು ಹೆಚ್ಚಿನ ಗಮನ ಹರಿಸಲಿದೆ ಎಂದು ಮೂಲಗಳು ಹೇಳಿವೆ.