;Resize=(412,232))
ನವದೆಹಲಿ: ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಸಾಕಾರಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆ ಸ್ಥಾನಗಳನ್ನು ಈಗ ಇರುವುದಕ್ಕಿಂತ ಶೇ.50ರಷ್ಟು ಹೆಚ್ಚಳ ಮಾಡಲು ಐತಿಹಾಸಿಕ ನಿರ್ಧಾರ ಮಾಡಿದೆ.
ನ.30ರಿಂದ ಡಿ.3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಸಂಯೋಜಿತ ಮಹಿಳಾ ಮೀಸಲು ಜಾರಿ ಸಂಬಂಧ ಮೂರು ಮಸೂದೆಗಳನ್ನು ಮಂಡನೆ ಮಾಡಲು ಉದ್ದೇಶಿಸಿದ್ದು, ಅದಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ.
2029ರ ಲೋಕಸಭೆ ಚುನಾವಣೆಗೂ ಮುನ್ನವೇ ಶೇ.50ರಷ್ಟು ಕ್ಷೇತ್ರಗಳ ಹೆಚ್ಚಳದೊಂದಿಗೆ ಮಹಿಳಾ ಮೀಸಲು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ವಿಧೇಯಕದಲ್ಲಿ ಉಲ್ಲೇಖಿಸಿದೆ.
1971ರ ಜನಗಣತಿಯ ಆಧಾರದಲ್ಲಿ ಲೋಕಸಭೆ, ವಿಧಾನಸಭೆ ಕ್ಷೇತ್ರಗಳನ್ನು ಶೇ.50ರಷ್ಟು ಹೆಚ್ಚಳ ಮಾಡಲಾಗುತ್ತದೆ. ಕ್ಷೇತ್ರಗಳ ಗಡಿ ನಿಗದಿಗೆ 2011ರ ಗಣತಿಯನ್ನು ಬಳಕೆ ಮಾಡಲಾಗುತ್ತದೆ ಎಂದು ಮಸೂದೆ ಹೇಳುತ್ತದೆ.
ಲೋಕಸಭೆಯ ಬಲ 543 ಇದ್ದು, ಅದನ್ನು ಗರಿಷ್ಠ 850ಕ್ಕೆ ಹೆಚ್ಚಳ ಮಾಡುವುದು ಕೇಂದ್ರ ಸರ್ಕಾರ ಉದ್ದೇಶ. ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ ಎಲ್ಲ ರಾಜ್ಯಗಳ ಲೋಕಸಭೆ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಳ ಮಾಡಿದರೆ ಲೋಕಸಭೆಯ ಬಲ 815ಕ್ಕೆ ಏರಿಕೆಯಾಗಲಿದೆ. ಉಳಿದ 35 ಸ್ಥಾನವನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ನತಹ ಸಣ್ಣ ದ್ವೀಪಗಳಿಗೆ 50% ಹೆಚ್ಚಳ ಅನ್ವಯವಾಗುವುದಿಲ್ಲ.
ಲೋಕಸಭೆಯ ಜತೆಗೆ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನೂ ಶೇ.50ರಷ್ಟು ಹೆಚ್ಚಳ ಮಾಡುವ ಅಂಶ ಮಸೂದೆಯಲ್ಲಿದೆ. ಯಾವುದೇ ರಾಜ್ಯದ ವಿಧಾನಸಭೆಯ ಬಲ 500ರ ಮಿತಿಯನ್ನು ಮೀರಕೂಡದು ಎಂಬ ನಿರ್ಬಂಧ ಹಾಲಿ ಜಾರಿಯಲ್ಲಿದೆ. ಅದಕ್ಕೆ ತಿದ್ದುಪಡಿ ಮಾಡಿ, ‘650ರ ಮಿತಿಯನ್ನು ಮೀರಬಾರದು’ ಎಂಬ ಬದಲಾವಣೆಯನ್ನು ಮಸೂದೆಯ ಮೂಲಕ ಮಾಡಲಾಗುತ್ತಿದೆ. ಇದರಿಂದಾಗಿ ಕರ್ನಾಟಕ ವಿಧಾನಸಭೆಯ ಬಲ 224ರಿಂದ 316ಕ್ಕೆ, ದೇಶದ ಅತಿದೊಡ್ಡ ವಿಧಾನಸಭೆಯಾಗಿರುವ ಉತ್ತರಪ್ರದೇಶದ ಬಲ 605ಕ್ಕೆ ಏರುವ ನಿರೀಕ್ಷೆ ಇದೆ. ಕರ್ನಾಟಕದ ಲೋಕಸಭೆ ಸ್ಥಾನಗಳು 42ಕ್ಕೇರಲಿವೆ.
ಕೇಂದ್ರ ಸರ್ಕಾರ ಮಂಡನೆ ಮಾಡಲು ಉದ್ದೇಶಿಸಿರುವ ಮೂರರ ಪೈಕಿ 2 ವಿಧೇಯಕಗಳು ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ್ದಾಗಿವೆ. ಹೀಗಾಗಿ ಲೋಕಸಭೆ ಹಾಗೂ ರಾಜ್ಯಸಭೆಯ ಒಟ್ಟು ಬಲದಲ್ಲಿ ಮೂರನೇ ಎರಡಷ್ಟು ಸದಸ್ಯರ ಬೆಂಬಲ ಬೇಕಾಗುತ್ತದೆ. ಅದನ್ನು ಸರ್ಕಾರ ಹೇಗೆ ಹೊಂದಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಉದ್ದೇಶಿತ ಮಸೂದೆಗಳ ಪ್ರಕಾರ, ಶೇ.50ರಷ್ಟು ಹೆಚ್ಚಳವಾದ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು 2051ರವರೆಗೂ ಬದಲಾವಣೆ ಮಾಡದೆ ಉಳಿಸಿಕೊಳ್ಳಲಾಗುತ್ತದೆ. ಆರಂಭಿಕವಾಗಿ 15 ವರ್ಷಗಳ ಕಾಲ ಮಹಿಳೆಯರಿಗೆ ಮೀಸಲಾತಿ ನೀಡಲಾಗುತ್ತದೆ (ಸಂವಿಧಾನ ಅಂಗೀಕಾರವಾದ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕೂಡ 10 ವರ್ಷಗಳ ಅವಧಿಗೆ ನೀಡಲಾಗಿತ್ತು). ಪ್ರತಿ ಅವಧಿಯಲ್ಲೂ ಮಹಿಳಾ ಮೀಸಲು ಕ್ಷೇತ್ರಗಳನ್ನು ಬದಲಿಸಲಾಗುತ್ತದೆ (ರೊಟೇಷನ್). 15 ವರ್ಷಗಳ ಬಳಿಕ ಮಹಿಳಾ ಮೀಸಲಾತಿಯನ್ನು ಮುಂದುವರಿಸಬೇಕೇ? ಬೇಡವೇ ಎಂಬುದನ್ನು ಅಂದಿನ ಸರ್ಕಾರ ನಿರ್ಧರಿಸಬೇಕಾಗುತ್ತದೆ.
ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ತಕ್ಷಣವೇ ರಚನೆ ಮಾಡಲಾಗುತ್ತದೆ. ಸಂವಿಧಾನಿಕ ತಿದ್ದುಪಡಿ ಮಸೂದೆಗಳಿಗೆ ಶೇ.50ರಷ್ಟು ರಾಜ್ಯಗಳ ಅನುಮೋದನೆ ಕಡ್ಡಾಯ ಅಲ್ಲದಿದ್ದರೂ, ಆ ಪ್ರಕ್ರಿಯೆಯನ್ನೂ ಸಂಪ್ರದಾಯದಂತೆ ನಡೆಸಲು ಮೋದಿ ಸರ್ಕಾರ ಬಯಸಿದೆ.
ಈ ಹಿಂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದ ವಿಧೇಯಕದಲ್ಲಿ ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಸಮಾನವಾಗಿ ಶೇ.50ರಷ್ಟು ಏರಿಕೆ ಮಾಡುವ ಬಗ್ಗೆ ಸರ್ಕಾರ ಮಾಹಿತಿ ನೀಡಿರಲಿಲ್ಲ. ಒಂದು ವೇಳೆ 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುಹಂಚಿಕೆ ಆದರೆ ನಮಗೆ ಭಾರೀ ನಷ್ಟ ಆಗಲಿದೆ ಎಂದು ದಕ್ಷಿಣದ ರಾಜ್ಯಗಳು ಬಿಲ್ಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದವು. ಏಪ್ರಿಲ್ನಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿದ್ದ ಮಸೂದೆಗಳಿಗೆ 3ನೇ ಎರಡಷ್ಟು ಬಹುಮತ ಸಿಗದೆ ಸೋಲಾಗಿತ್ತು.
ಬಹುಮತಕ್ಕೆ ಅಗತ್ಯಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಎನ್ಡಿಎ ಸರ್ಕಾರ, ದಕ್ಷಿಣದ ರಾಜ್ಯಗಳ ಆತಂಕ ದೂರ ಮಾಡುವ ನಿಟ್ಟಿನಲ್ಲಿ 1971ರ ಜನಗಣತಿ ಆಧಾರದಲ್ಲಿ ಸೃಷ್ಟಿಸಲಾದ 543 ಸ್ಥಾನಗಳ ಜೊತೆಗೆ, ಎಲ್ಲಾ ರಾಜ್ಯಗಳ ಸ್ಥಾನವನ್ನು ಶೇ.50ರಷ್ಟು ಏರಿಸುವ ನಿರ್ಧಾರ ಕೈಗೊಂಡಿದೆ. ಆದರೆ ರಾಜ್ಯದೊಳಗೆ ಕ್ಷೇತ್ರ ಮರುಹಂಚಿಕೆಗೆ ಮಾತ್ರ 2011ರ ಜನಗಣತಿ ಅಂಕಿ ಅಂಶ ಬಳಸಲು ನಿರ್ಧರಿಸಿದೆ.
ಜಯದ ವಿಶ್ವಾಸ:
ಮಸೂದೆ ಬೆಂಬಲಿಸುವುದಾಗಿ ಶರದ್ ಪವಾರ್ ಅವರ ಎನ್ಸಿಪಿ ಘೋಷಿಸಿದೆ. ಇನ್ನು ತನ್ನ ಬೇಡಿಕೆ ಈಡೇರಿರುವ ಕಾರಣ ಡಿಎಂಕೆ ಕೂಡಾ ಬೆಂಬಲಿಸುವ ಇಲ್ಲವೇ ಮತದಾನದ ವೇಳೆ ಗೈರಾಗುವ ಮೂಲಕ ಪರೋಕ್ಷ ಬೆಂಬಲ ನೀಡುವ ನಿರೀಕ್ಷೆ ಇದೆ. ಇದರ ಜೊತೆಗೆ ಟಿಎಂಸಿ ಬಂಡಾಯ ಬಣ, ಅಕಾಲಿದಳ, ಕೆಲ ಪಕ್ಷೇತರರ ಬೆಂಬಲದೊಂದಿಗೆ ಮಸೂದೆ ಅಂಗೀಕಾರದ ನಿರೀಕ್ಷೆಯಲ್ಲಿ ಸರ್ಕಾರ ಇದೆ.
ಮಸೂದೆ ಏಕೆ?:
1971ರ ಬಳಿಕ ಕ್ಷೇತ್ರ ಮರುವಿಂಗಡಣೆ ಆಗಿಲ್ಲ. ಕಳೆದ 50 ವರ್ಷಗಳಲ್ಲಿ ದೇಶದ ಜನಸಂಖ್ಯೆ ನಗರ, ಹಳ್ಳಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೊಸ ಜಿಲ್ಲೆಗಳು ಸೃಷ್ಟಿ ಆಗಿವೆ. ಹೀಗಾಗಿ ಬದಲಾವಣೆ ಮತ್ತು ಬೇಡಿಕೆಗೆ ತಕ್ಕಂತೆ ಕ್ಷೇತ್ರ ಮರುವಿಂಗಡನೆ ಮಾಡಬೇಕು. ಜೊತೆಗೆ ಜನಸಂಖ್ಯೆಗೆ ಅನುಗುಣವಾಗಿ ಸಂಸತ್ತಿನ ಸ್ಥಾನ ಹೆಚ್ಚಿಸಬೇಕು. ಆಗ ಜನರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕುತ್ತದೆ ಎಂಬುದು ಸರ್ಕಾರದ ವಾದ.
ಈ ನಡುವೆ ಸರ್ಕಾರ ಮಹಿಳೆಯರಿಗೆ ಶಾಸನಸಭೆಯಲ್ಲಿ ಶೇ.33ರಷ್ಟು ಮೀಸಲು ಕೊಡುವ ಉದ್ದೇಶ ಹೊಂದಿದೆ. ಆದರೆ ಮಹಿಳೆಯರಿಗೆ ಹಾಲಿ ಇರುವ ಸ್ಥಾನಗಳಲ್ಲೇ ನೀಡಲು ಮುಂದಾದರೆ, ಹಾಲಿ ಪುರುಷ ಸಂಸದರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಂಸತ್ತಿನ ಸ್ಥಾನಬಲವನ್ನು 543ರಿಂದ 850ಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ. 2051ರವರೆಗೂ 850 ಸ್ಥಾನಗಳನ್ನು ಉಳಿಸಿಕೊಳ್ಳಲಾಗುತ್ತದೆ.
ಏಕೆ ಈ ಮಸೂದೆ?
- ದೇಶದಲ್ಲಿ ಮಹಿಳೆಯರ ಸಂಖ್ಯೆ ಅರ್ಧದಷ್ಟಿದ್ದರೂ ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ
- ಮಹಿಳೆಯರಿಗೆ ಶೇ.33ರ ಮೀಸಲಾತಿ ನೀಡಬೇಕು ಎಂದು ಹಲವು ದಶಕಗಳಿಂದ ಬೇಡಿಕೆ ಇದೆ
- ಈಗಾಗಲೇ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆಯನ್ನು ಅಂಗೀಕರಿಸಿದೆ
- ಆದರೆ ಈಗ ಇರುವ ಕ್ಷೇತ್ರಗಳಲ್ಲೇ ಮಹಿಳಾ ಮೀಸಲು ಕಲ್ಪಿಸಿದರೆ ಪುರುಷರು ಸಿಟ್ಟಾಗುವ ಭೀತಿ
- ಹೀಗಾಗಿ ಲೋಕಸಭೆ, ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಿ ಮೀಸಲು
ಮೋದಿ ಸರ್ಕಾರಕ್ಕೆ ಪರೀಕ್ಷೆ
- 2026ರ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಿ ಮಹಿಳಾ ಮೀಸಲು ಜಾರಿಗೆ ಮುಂದಾಗಿತ್ತು
- ಈ ಸಂಬಂಧ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಮಂಡಿಸಿತ್ತು. ಆದರೆ ದಕ್ಷಿಣ ರಾಜ್ಯಗಳು ವಿರೋಧಿಸಿದ್ದವು
- ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದರು. ಆದರೆ ಮಸೂದೆಯಲ್ಲಿರಲಿಲ್ಲ
- ಆ ಮಸೂದೆಗೆ ಸೋಲಾಗಿತ್ತು. ಸಾಂವಿಧಾನಿಕ ತಿದ್ದುಪಡಿಯಲ್ಲಿ ಮೋದಿ ಸರ್ಕಾರಕ್ಕೆ ಸೋಲಾಗಿದ್ದು ಅದೇ ಮೊದಲು
- ಇದೀಗ ಶೇ.50ರಷ್ಟು ಲೋಕಸಭಾ, ವಿಧಾನಸಭಾ ಕ್ಷೇತ್ರ ಹೆಚ್ಚಿಸುವುದಾಗಿ ಮಸೂದೆಯಲ್ಲೇ ಸೇರಿಸಿರುವ ಕೇಂದ್ರ
- ಈಗ ವಿವಿಧ ಪಕ್ಷಗಳು ಏನು ಮಾಡುತ್ತವೆ, ಮಸೂದೆ ಸಂಸತ್ ಅಗ್ನಿಪರೀಕ್ಷೆಯನ್ನು ಗೆಲ್ಲಲಿದೆಯೇ ಎಂಬ ಕುತೂಹಲ
ಕ್ಷೇತ್ರ
ರಾಜ್ಯ ಕ್ಷೇತ್ರ ಬದಲು ಏರಿಕೆ
ಉತ್ತರಪ್ರದೇಶ 80 120 40
ಮಹಾರಾಷ್ಟ್ರ 48 72 24
ಪಶ್ಚಿಮ ಬಂಗಾಳ 42 63 21
ಬಿಹಾರ 40 60 20
ಗುಜರಾತ್ 26 39 16
ರಾಜಸ್ಥಾನ 25 38 13
ದೆಹಲಿ 7 11 4
ದಕ್ಷಿಣದ ರಾಜ್ಯಗಳು
ಕರ್ನಾಟಕ 28 42 14
ಆಂಧ್ರಪ್ರದೇಶ 25 38 13
ತೆಲಂಗಾಣ 17 26 9
ತಮಿಳುನಾಡು 39 59 20
ಕೇರಳ 20 30 10
ಮಸೂದೆಗೆ ಪವಾರ್ ಎನ್ಸಿಪಿ ಬೆಂಬಲ
ಮುಂಬೈ: ಕ್ಷೇತ್ರಗಳ ಸಂಖ್ಯೆ ಹೆಚ್ಚಳದೊಂದಿಗೆ ಮಹಿಳಾ ಮೀಸಲು ಜಾರಿಗೆ ಕೇಂದ್ರ ಸರ್ಕಾರ ಮಂಡನೆ ಮಾಡಲು ಉದ್ದೇಶಿಸಿರುವ ಮಸೂದೆಗೆ ಶರದ್ ಪವಾರ್ ಬಣದ ಎನ್ಸಿಪಿ ಅಚ್ಚರಿಯ ರೀತಿಯಲ್ಲಿ ಬೆಂಬಲ ಘೋಷಣೆ ಮಾಡಿದೆ.
ಇಂಡಿಯಾ ಕೂಟದಿಂದ ಇಂದು ಮಹತ್ವದ ಸಭೆ
ನವದೆಹಲಿ: ಕ್ಷೇತ್ರ ಮರು ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಬಗ್ಗೆ ಚರ್ಚೆಗೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಶನಿವಾರ ಸಭೆ ನಡೆಸಲಿದೆ.
- 1971ರ ಗಣತಿ ಆಧರಿಸಿ ಕ್ಷೇತ್ರ ಹೆಚ್ಚಳ, 2011ರ ಗಣತಿ ಕ್ಷೇತ್ರಗಳ ರಚನೆ
- 15 ವರ್ಷ ಮಹಿಳಾ ಮೀಸಲು । ಪ್ರತಿ ಅವಧಿಗೂ ಮೀಸಲು ಕ್ಷೇತ್ರ ಬದಲು
- ಕರ್ನಾಟಕದ ವಿಧಾನಸಭೆ ಕ್ಷೇತ್ರ 336, ಲೋಕಸಭೆ ಕ್ಷೇತ್ರಗಳು 42ಕ್ಕೇರಿಕೆ
- 2029ರ ಚುನಾವಣೆಗೂ ಮೊದಲೇ ಅನುಷ್ಠಾನ: ವಿಧೇಯಕದಲ್ಲಿದೆ ಮಾಹಿತಿ