ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ನೀಡಬೇಕು. ಮತ್ತೊಂದನ್ನು ಹಿಂದುಳಿದ ವರ್ಗದವರಿಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು : ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ನೀಡಬೇಕು. ಮತ್ತೊಂದನ್ನು ಹಿಂದುಳಿದ ವರ್ಗದವರಿಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಕನಕದಾಸರ ಜಯಂತಿ ಪ್ರಯುಕ್ತ ಶಾಸಕರ ಭವನದ ಬಳಿ ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂಬ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿದ ಅವರು, ‘ಸಚಿವ ಸಂಪುಟ ರಚನೆ ಮಾಡುವುದು ಮುಖ್ಯಮಂತ್ರಿಯೇ ಹೊರತು ನಾನಲ್ಲ. ನನ್ನ ಅಭಿಪ್ರಾಯ ಎಂದರೆ ಮಹಿಳೆಗೂ ಅವಕಾಶ ನೀಡಬೇಕು, ಹಿಂದುಳಿದ ವರ್ಗದವರಿಗೂ ಸಚಿವ ಸ್ಥಾನ ಸಿಗಬೇಕು’ ಎಂದು ಸ್ಪಷ್ಟಪಡಿಸಿದರು.

 ಬಸವ ಮಂಟಪ ಕೃತಿ ಲೇಖಕರ ಮೇಲೆ ಕ್ರಿಮಿನಲ್ ಕ್ರಮ ಆಗಬೇಕು: 

ಬಸವಣ್ಣ ಅವರು ಸಮಾಜ ಸುಧಾರಕರು. ಸಮಾಜದಲ್ಲಿ ಬದಲಾವಣೆ ತರಬೇಕು, ಅಮಾನವೀಯ ಸಾಮಾಜಿಕ ನಡೆಗಳನ್ನು ಅಳಿಸಿ ಹಾಕಬೇಕು ಎಂದವರು. ಅಂತಹವರ ಬಗ್ಗೆ ಅಪಪ್ರಚಾರ ಮಾಡುವ ಕೃತಿ ಬಗ್ಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಬಸವ ಮಂಟಪ ಎಂಬ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದು ಪ್ರಚಾರ ಆಗದಂತೆ ತಡೆಯಬೇಕು. ಜತೆಗೆ ಲೇಖಕರ ಮೇಲೆ ಕ್ರಿಮಿನಲ್‌ ಪ್ರಕರಣ ಹೂಡಿ ಪ್ರಾಸಿಕ್ಯೂಟ್‌ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಗೋಹತ್ಯೆ ನಿಷೇಧ ತಿದ್ದುಪಡಿ ಹಿಂಪಡೆಯಬೇಕು:

ಗೋಹತ್ಯೆ ನಿಷೇಧ ಕಾಯಿದೆ ತಿದ್ದುಪಡಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ಹಿಂದೆ ನಾವು (ಕಾಂಗ್ರೆಸ್‌) ಕಾನೂನು ಮಾಡಿದ್ದೆವು. ಆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರೆಸುವ ಕೆಲಸ ಮಾಡಬೇಕು. ಪ್ರತಿಪಕ್ಷಗಳು ರಾಜಕೀಯವಾಗಿ ಮಾಡುವುದಕ್ಕೆ ಬೆಲೆ ನೀಡದೆ ಹಿಂದಿನ ಸರ್ಕಾರದಲ್ಲಿ ನಾವೇ ಮಾಡಿದ್ದೆವಲ್ಲ ಅದನ್ನು ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿರುವ ಕುರಿತು ಮಾತನಾಡಿದ ಅವರು, ‘ನಾಗೇಂದ್ರ ಅವರು ನಿರಪರಾಧಿ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ’ ಎಂದರು.

ಜಿ.ಪಂ. ಮತ್ತು ತಾ. ಪಂ. ಚುನಾವಣೆಗಳ ಕುರಿತು ಪ್ರತಿಕ್ರಿಯಿಸಿ, ‘ಅದನ್ನು ಸರ್ಕಾರ ನಡೆಸುತ್ತದೆ’ ಎಂದಷ್ಟೇ ಹೇಳಿದರು.

- 2 ಖಾಲಿ ಹುದ್ದೆಗಳನ್ನು ಈ ವರ್ಗಕ್ಕೆ ಹಂಚಬೇಕು - ಮೊದಲ ಸಲ ಮಾಜಿ ಸಿಎಂ ಬಹಿರಂಗ ಬೇಡಿಕೆ

- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಂಪುದಲ್ಲಿ 2 ಖಾಲಿ ಸ್ಥಾನಗಳು ಇರುವ ಹಿನ್ನೆಲೆ

- ಮಹಿಳೆ ಹಾಗೂ ಹಿಂದುಳಿದ ವರ್ಗಕ್ಕೆ ತಲಾ 1ರಂತೆ ಆ ಸ್ಥಾನ ನೀಡಲು ಸಿದ್ದು ಬೇಡಿಕೆ

- ದೆಹಲಿಗೆ ತೆರಳಿ ಪಕ್ಷದ ನಾಯಕರಿಗೂ ಈ ಬಗ್ಗೆ ಚರ್ಚೆ ನಡೆಸಿದ್ದ ಮಾಜಿ ಮುಖ್ಯಮಂತ್ರಿ

- ಇದೇ ಮೊದಲ ಬಾರಿ ಖಾಲಿ ಸಂಪುಟ ಸ್ಥಾನಗಳ ವಿಚಾರವಾಗಿ ಬಹಿರಂಗವಾಗಿ ಬೇಡಿಕೆ