ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಸಮಾಜವಾದಿ ಪಕ್ಷ ಯುವಕರು, ಜೆನ್ಜೀಗಳನ್ನು ಗುರಿಯಾಗಿಸಿಕೊಂಡ ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ.
ಲಖನೌ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಸಮಾಜವಾದಿ ಪಕ್ಷ ಯುವಕರು, ಜೆನ್ಜೀಗಳನ್ನು ಗುರಿಯಾಗಿಸಿಕೊಂಡ ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಅಖಿಲೇಶ್, ‘ಒಳ್ಳೆ ದಿನಗಳು ಬಂದಿಲ್ಲ. ಆದರೆ ಕೆಟ್ಟ ದಿನಗಳು ತೊಲಗಲಿವೆ’ ಎಂದಿದ್ದಾರೆ.
ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಹ್ಯಾಟ್ರಿಕ್ ತಪ್ಪಿಸುವ ನಿಟ್ಟಿನಲ್ಲಿ ಹಲವು ಭರ್ಜರಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ. 5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ, 2-3 ಕೋಟಿ ಜನರಿಗೆ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, 12ನೇ ತರಗತಿಯಿಂದ ತೇರ್ಗಡೆಯಾಗುವವರಿಗೆ 20 ಲಕ್ಷ ಜನರಿಗೆ ಉಚಿತ ಲ್ಯಾಪ್ಟಾಪ್, ವೃದ್ಧೆಯರಿಗೆ ವಾರ್ಷಿಕ 40 ಸಾವಿರ ರು. ಪಿಂಚಣಿ, ಕೃಷಿ ಸಾಲ ಮನ್ನಾದ ಭರವಸೆ ನೀಡಲಾಗಿದೆ.
ಜೊತೆಗೆ ಬಡವರು ಮತ್ತು ಪಿಡಿಎ ಸಮುದಾಯದ ಮಹಿಳೆಯರಿಗಾಗಿ 5 ರು.ಗೆ ಊಟ ಒದಗಿಸುವ ಕ್ಯಾಂಟೀನ್ಗಳನ್ನು ಆರಂಭಿಸುವ ಘೋಷಣೆ ಮಾಡಲಾಗಿದೆ.
ಎಸ್ಪಿ ಭರವಸೆಗಳೇನು?:
- 25 ಲಕ್ಷ ಯುವಕರಿಗೆ ಸರ್ಕಾರಿ ಕೆಲಸ, 3 ಕೋಟಿ ಯುವಕರಿಗೆ ಇತರೆ ಕ್ಷೇತ್ರದಲ್ಲಿ ಉದ್ಯೋಗ
- ₹50 ಕೋಟಿವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ದಲಿತರು, ಪಿಡಿಎ ಸಮುದಾಯಕ್ಕೆ 50% ಮೀಸಲು
- ನಿರುದ್ಯೋಗಿಗಳಿಗೆ ಮಾಸಿಕ ₹5,000 ಸಹಾಯಧನ, ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿ
- ರೈತರ ಕೃಷಿ ಸಾಲ ಮನ್ನಾ, ಜಾತಿ ಗಣತಿ, ಪಿಯು ಉತ್ತೀರ್ಣರಾದವರಿಗೆ ಉಚಿತ ಲ್ಯಾಪ್ಟಾಪ್
- ವೃದ್ಧ ಮಹಿಳೆಯರಿಗೆ ವಾರ್ಷಿಕ ₹40,000 ಪಿಂಚಣಿ. ಹಣ ಬ್ಯಾಂಕ್ ಖಾತೆಗೆ ನೇರ ವರ್ಗ
- ಕಾರ್ಮಿಕರು, ಮಹಿಳಾ ಕಾರ್ಮಿಕರು, ಕುಶಲಕರ್ಮಿಗಳಿಗೆ ವಾರ್ಷಿಕ ₹40,000 ಪಿಂಚಣಿ
- ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ. ಲೋಪಕ್ಕೆ ಅಧಿಕಾರಿಗಳು, ಸಚಿವರು ಹೊಣೆ
- ಹಿರಿಯ ನಾಗರಿಕರಿಗೆ ವೃದ್ಧಾಶ್ರಮ, ಕ್ಲಬ್ಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪ್ರಯಾಣ
- ₹15,000 ಕೋಟಿ ನಿಧಿ ಸ್ಥಾಪಿಸಿ, ಕಬ್ಬು ಬೆಳೆಗಾರರಿಗೆ 24 ಗಂಟೆಯೊಳಗೆ ಹಣ ಪಾವತಿ ವ್ಯವಸ್ಥೆ
- ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ರಾಜ್ಯ ಶಿಕ್ಷಣ ನೀತಿ ಜಾರಿ
- ದಲಿತ ಅಭಿವೃದ್ಧಿ ಮಂಡಳಿ ರಚನೆ। 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು

