ಗಣಪತಿ ಮೂರ್ತಿ ವಿಸರ್ಜನೆಗೆ ಅನುಮತಿ ಕೊಡುವ ವಿಚಾರವಾಗಿ ಹಾಸನ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ನಡುವಣ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.ಇಲ್ಲಿನ 70 ವರ್ಷ ಇತಿಹಾಸವಿರುವ ಗಣಪತಿ ಉತ್ಸವದ ಮೂರ್ತಿಯನ್ನು ದೇವಿಗೆರೆಯಲ್ಲಿ ವಿಸರ್ಜನೆ ಮಾಡಿರುವುದಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ಸಿಡಿಮಿಡಿ

ಹಾಸನ : ಗಣಪತಿ ಮೂರ್ತಿ ವಿಸರ್ಜನೆಗೆ ಅನುಮತಿ ಕೊಡುವ ವಿಚಾರವಾಗಿ ಹಾಸನ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ನಡುವಣ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.

ಇಲ್ಲಿನ 70 ವರ್ಷ ಇತಿಹಾಸವಿರುವ ಗಣಪತಿ ಉತ್ಸವದ ಮೂರ್ತಿಯನ್ನು ದೇವಿಗೆರೆಯಲ್ಲಿ ವಿಸರ್ಜನೆ ಮಾಡಿರುವುದಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ಸಿಡಿಮಿಡಿಗೊಂಡಿದ್ದು, ‘ನೀವು ಹೇಗೆ ಅನುಮತಿ ಕೊಟ್ಟಿರಿ?’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೇ ನೋಟಿಸ್‌ ನೀಡಿದ್ದಾರೆ. ಜೊತೆಗೆ ವಿಸರ್ಜನೆ ಮಾಡಿದವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ವಿವರಿಸಿ ಎಂದು ತಿಳಿಸಿದ್ದಾರೆ.

ಪೆಂಡಾಲ್‌ ಗಣಪತಿ ಶನಿವಾರ ವಿಸರ್ಜನೆ

ಹಾಸನದ ಹಳೆ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ಪೆಂಡಾಲ್‌ ಗಣಪತಿಯನ್ನು ಶನಿವಾರ ವಿಸರ್ಜನೆ ಮಾಡಲಾಯಿತು. ಪ್ರತಿ ವರ್ಷದಂತೆ ಈ ವರ್ಷ ಕೂಡ ದೇವಿಗೆರೆಯಲ್ಲೇ ವಿಸರ್ಜನೆ ಮಾಡಲಾಯಿತು. ಅದಕ್ಕಾಗಿ ಗಣಪತಿ ಸೇವಾ ಸಮಿತಿಯವರು ಜಿಲ್ಲಾಡಳಿತದಿಂದ ಅನುಮತಿಯನ್ನೂ ಪಡೆದಿದ್ದರು. ಆದರೆ ಅದಾದ ಮರುದಿನವೇ ದೇವಿಗೆರೆಯಲ್ಲಿ ಯಾವುದೇ ಗಣಪತಿ, ಗೌರಿಯನ್ನು ವಿಸರ್ಜಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿದ್ದರು. ಇದನ್ನು ತಿಳಿಯದ ಸಮಿತಿಯವರು ಗಣಪತಿ ವಿಸರ್ಜನೆ ಮಾಡಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಎಸ್ಪಿ ಶುಭನ್ವಿತಾ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಿಷೇಧಾಜ್ಞೆ ಹೊರತಾಗಿಯೂ ಹೇಗೆ ಅನುಮತಿ ಕೊಟ್ಟಿರಿ. ಗಣೇಶ ವಿಸರ್ಜನೆ ಮಾಡಿದವರ ಮೇಲೆ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ. ಜಿಲ್ಲಾಡಳಿತವೇ ಅನುಮತಿ ಕೊಟ್ಟು ಮರುದಿನವೇ ನಿಷೇಧ ಹೇರಿ, ಇದೀಗ ಎಸ್ಪಿ ಅವರಿಗೆ ನೋಟಿಸ್‌ ಜಾರಿ ಮಾಡಿರುವ ಜಿಲ್ಲಾಧಿಕಾರಿಯ ದ್ವಂದ್ವ ನೀತಿ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಶಾಸಕ ಸ್ವರೂಪ್‌ ಆಕ್ಷೇಪ:

ಈ ಕುರಿತು ಹಾಸನ ಶಾಸಕ ಎಚ್‌.ಪಿ. ಸ್ವರೂಪ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಸುಮಾರು 7 ದಶಕಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ಗಣಪತಿ ಮೂರ್ತಿಯ ವಿಸರ್ಜನೆಗೆ ಕೊನೆಯ ಕ್ಷಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಜಿಲ್ಲಾಧಿಕಾರಿಯವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗೂ ನೋಟಿಸ್ ನೀಡಿರುವುದು ಗಮನಕ್ಕೆ ಬಂದಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸಂಘಟಕರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.