ಹಾಸನಕ್ಕೆ ಐಐಟಿ ಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಉದ್ದೇಶಕ್ಕಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಇಂದಿಗೂ ಐಐಟಿ ಸ್ಥಾಪನೆಯಾಗಿಲ್ಲ. ಇತ್ತ ರೈತರ ಭೂಮಿಯನ್ನೂ ವಾಪಸ್ ನೀಡಿಲ್ಲ. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು. ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಐಐಟಿ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಐಐಟಿ ಹಾಸನಕ್ಕೆ ಬಂದರೆ ಯಾವುದೇ ರಾಜಕೀಯ ಭೇದವಿಲ್ಲದೆ ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ.
ಕನ್ನಡಪ್ರಭವಾರ್ತೆ, ಹಾಸನ
ಜಿಲ್ಲೆಗೆ ಐಐಟಿ ತಪ್ಪಿಸಿದ್ದು ಕಾಂಗ್ರೆಸ್ನವರು ಎಂದು ಆರೋಪಿಸುವ ಜೆಡಿಎಸ್ ಮುಖಂಡರಾದ ಎಚ್.ಡಿ.ಕುಮಾರಸ್ವಾಮಿಯವರೇ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಅವರೇ ಇದಕ್ಕಾಗಿ ಪ್ರಯತ್ನಿಸಲಿ. ಅದಕ್ಕಾಗಿ ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಐಐಟಿ ಮಂಜೂರು ಮಾಡಿಸದಿದ್ದರೆ ಜಿಲ್ಲೆ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಗಡುವು ಹಾಗೂ ಎಚ್ಚರಿಕೆ ನೀಡಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನಕ್ಕೆ ಐಐಟಿ ಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಉದ್ದೇಶಕ್ಕಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಇಂದಿಗೂ ಐಐಟಿ ಸ್ಥಾಪನೆಯಾಗಿಲ್ಲ. ಇತ್ತ ರೈತರ ಭೂಮಿಯನ್ನೂ ವಾಪಸ್ ನೀಡಿಲ್ಲ. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು. ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಐಐಟಿ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಐಐಟಿ ಹಾಸನಕ್ಕೆ ಬಂದರೆ ಯಾವುದೇ ರಾಜಕೀಯ ಭೇದವಿಲ್ಲದೆ ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಐಐಟಿ ವಿಚಾರದಲ್ಲಿ ಯಾರನ್ನೂ ದೂಷಿಸುವ ಉದ್ದೇಶವಿಲ್ಲ. ಆದರೆ, ಅಧಿಕಾರದಲ್ಲಿರುವವರು ಜಿಲ್ಲೆಯ ಜನರ ನಿರೀಕ್ಷೆಗಳಿಗೆ ಸ್ಪಂದಿಸಬೇಕು. ಪ್ರಹ್ಲಾದ್ ಜೋಶಿ ಅವರು ಈ ಹಿಂದೆ ಐಐಟಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಲಿಲ್ಲವೇ? ಅದೇ ರೀತಿ ಹಾಸನಕ್ಕೂ ಐಐಟಿ ತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ ಬೇಡ:ಬೇಲೂರು ಭಾಗದಲ್ಲಿ ಕಾಡಾನೆಗಳ ಸಮಸ್ಯೆ ತೀವ್ರವಾಗಿದ್ದು, ಜನರು ಹಾಗೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ೧.೨೪ ಲಕ್ಷ ಎಕರೆ ವ್ಯಾಪ್ತಿಯ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಸ್ಥಳಾಂತರಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಎರಡು ಆನೆಗಳನ್ನು ಸೆರೆಹಿಡಿಯಲಾಗಿದೆ. ಆದರೆ, ಈ ಕ್ರಮದ ಬಗ್ಗೆ ಕೆಲವರು ತಪ್ಪು ಗ್ರಹಿಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.ಬೇಲೂರು ಭಾಗದಲ್ಲಿ ಹೇಳಿಕೊಳ್ಳುವಂತಹ ಅರಣ್ಯ ಪ್ರದೇಶವೇ ಇಲ್ಲ. ಕನಿಷ್ಠ ನೂರು ಎಕರೆ ಕಾಡು ಇಲ್ಲದ ಪರಿಸ್ಥಿತಿಯಲ್ಲಿ ಕಾಡಾನೆಗಳು ಅಲ್ಲಿ ಹೇಗೆ ನೆಲೆಸಲು ಸಾಧ್ಯ? ಆನೆಗಳು ಕಾಡಿನಲ್ಲಿರಬೇಕೇ ಹೊರತು ಜನವಸತಿ ಪ್ರದೇಶಗಳಲ್ಲಿ ಅಲ್ಲ. ಕಾನೂನಿನ ಪ್ರಕಾರ ಕಾಡಾನೆಗಳಿಗೆ ಅಭಯಾರಣ್ಯವೇ ಸೂಕ್ತ ನೆಲೆ. ಹೀಗಾಗಿ ಅವುಗಳನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆನೆಗಳನ್ನು ಬೇಲೂರಿನಿಂದ ಬೇರೆಡೆಗೆ ಕಳುಹಿಸುವುದರ ಹಿಂದೆ ಯಾವುದೇ ದ್ವೇಷದ ಉದ್ದೇಶವಿಲ್ಲ. ಜನರ ಪ್ರಾಣ ರಕ್ಷಣೆ ಮತ್ತು ರೈತರ ಬೆಳೆಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ. ಸ್ಥಳಾಂತರಗೊಂಡ ಆನೆಗಳು ಮತ್ತೆ ವಾಪಸ್ ಬಂದಿರುವ ಉದಾಹರಣೆಗಳಿಲ್ಲ. ಈ ವಿಚಾರವನ್ನು ರಾಜಕೀಯ ಅಥವಾ ಜಿಲ್ಲೆಗಳ ನಡುವಿನ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬಾರದು. ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಜನರ ನೋವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.ನವೆಂಬರ್ ೩೦ರ ಸಭೆಯಲ್ಲಿ ಸಮಸ್ಯೆಗೆ ಪರಿಹಾರ:ಆನೆಗಳ ಸ್ಥಳಾಂತರ ಕುರಿತು ಅರಣ್ಯ ಸಚಿವರು ನವೆಂಬರ್ ೩೦ರಂದು ಸಭೆ ಕರೆದಿದ್ದಾರೆ. ಸ್ಥಳಾಂತರದಿಂದ ತೊಂದರೆಯಾಗುತ್ತದೆ ಎನ್ನುವವರು ತಮ್ಮ ಆತಂಕ ಮತ್ತು ಸಮಸ್ಯೆಗಳನ್ನು ಆ ಸಭೆಯಲ್ಲಿ ನೇರವಾಗಿ ಸಚಿವರ ಗಮನಕ್ಕೆ ತರಲಿ. ಎಲ್ಲರ ಅಭಿಪ್ರಾಯಗಳನ್ನು ಆಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಆನೆಗಳನ್ನು ಸ್ಥಳಾಂತರಿಸುವ ಆದೇಶವನ್ನು ನಾವು ನೀಡಿಲ್ಲ, ಅರಣ್ಯ ಸಚಿವರು ಹಾಗೂ ಇಲಾಖೆ ಈ ಕ್ರಮ ಕೈಗೊಂಡಿವೆ ಎಂದು ಸ್ಪಷ್ಟಪಡಿಸಿದರು.
ಕಾಡಾನೆಗಳು ನಾಡಿಗೆ ಬರುತ್ತಿರುವುದೇಕೆ, ಅವುಗಳ ಸಂಚಾರ ಮಾರ್ಗಗಳು ಯಾವುವು, ಜನವಸತಿ ಪ್ರದೇಶಗಳಿಗೆ ಬಾರದಂತೆ ಹೇಗೆ ತಡೆಯಬೇಕು ಎಂಬ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಆದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಕೇವಲ ಆನೆಗಳನ್ನು ಸ್ಥಳಾಂತರಿಸುವುದರಿಂದ ಮಾತ್ರವಲ್ಲದೆ, ದೀರ್ಘಕಾಲಿಕ ಪರಿಹಾರದ ಭಾಗವಾಗಿ ಆನೆಧಾಮ ನಿರ್ಮಿಸಿ ಆನೆಗಳನ್ನು ಸಾಕುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು.ಇದೆ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಮಾಜಿ ಸಚಿವ ಬಿ. ಶಿವರಾಮ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಧರ್, ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ ಇತರರು ಇದ್ದರು.ಪಕ್ಕದಲ್ಲೇ ಬಿ. ಶಿವರಾಂ
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರ ಪಕ್ಕದಲ್ಲೇ ಮಾಜಿ ಸಚಿವ ಬಿ.ಶಿವರಾಂ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಏಕೆಂದರೆ ಕೆಲ ದಿನಗಳ ಹಿಂದಷ್ಟೇ ಹಾಸನಕ್ಕೆ ಮುಖ್ಯಮಂತ್ರಿ ಶಿವಕುಮಾರ್ ಆಗಮಿಸಿದ ಸಂದರ್ಭದಲ್ಲಿ ಬಿ.ಶಿವರಾಂ ಅವರು ಸಿಎಂ ಎದುರಲ್ಲೇ ಜೆಡಿಎಸ್ ನಿಂದ ಬಂದಿರುವ ಶಿವಲಿಂಗೇಗೌಡ ಕಾಂಗ್ರೆಸ್ ನವರ ಮೇಲೆ ಸವಾರಿ ಮಾಡ್ತಿದ್ದಾನೆ. ಇವನಿಗೆ ಇನ್ನೂ ಜೆಡಿಎಸ್ ಬುದ್ದಿ ಹೋಗಿಲ್ಲ. ನಮ್ಮನ್ನೆಲ್ಲಾ ಈವರೆಗೂ ಪರಿಗಣಿಸಿಲ್ಲ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಶಿವರಾಂ ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದು ಅಚ್ಚರಿ ಮೂಡಿಸಿತು.