ನಂತರ ದೂರದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳು ಸರದಿಯಲ್ಲಿ ದೂರದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸಿ ಅದರ ಮೇಲ್ಮೈಯ ವಿವರಗಳನ್ನು ಕಣ್ತುಂಬಿಕೊಂಡರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಪ್ರತಿದಿನ ರಾತ್ರಿ ಆಕಾಶದಲ್ಲಿ ಹೊಳೆಯುವ ಚಂದ್ರನನ್ನು ನೋಡುತ್ತಿದ್ದ ಮಕ್ಕಳು, ಅದೇ ಚಂದ್ರನನ್ನು ದೂರದರ್ಶಕದ ಮೂಲಕ ಹತ್ತಿರದಿಂದ ಕಂಡಾಗ ಅವರ ಕಣ್ಣಲ್ಲಿ ಅಚ್ಚರಿ, ಮನದಲ್ಲಿ ಕುತೂಹಲ, ಮುಖದಲ್ಲಿ ಮಂದಹಾಸ ಮೂಡಿತು. ಪುಸ್ತಕಗಳಲ್ಲಿ ಓದಿದ್ದ ಖಗೋಳ ವಿಜ್ಞಾನವನ್ನು ನೈಜ ಅನುಭವದ ಮೂಲಕ ಅರಿತುಕೊಳ್ಳುವ ಅಪರೂಪದ ಅವಕಾಶಕ್ಕೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಸಾಕ್ಷಿಯಾಯಿತು.ಶಾಲೆಯಲ್ಲಿ ಭಾರ್ತಿ ಏರ್ಟೆಲ್ ಫೌಂಡೇಶನ್ ಸಹಯೋಗದಲ್ಲಿ ಮೂನ್ ವಾಚ್ ಚಂದ್ರ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರ್ತಿ ಏರ್ಟೆಲ್ ಫೌಂಡೇಶನ್ನ ಗುಣಮಟ್ಟ ಬೆಂಬಲ ಅಡಿಯಲ್ಲಿ ಸ್ಥಾಪಿಸಿರುವ ಖಗೋಳ ವಿಜ್ಞಾನ ಕ್ಲಬ್ನ ಚಟುವಟಿಕೆಯ ಭಾಗವಾಗಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ವಿಸ್ಮಯಗಳನ್ನು ಪರಿಚಯಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಡ್ಯ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ನಿವೃತ್ತ ವಿಷಯ ಪರೀಕ್ಷಕರಾದ ನಂಜರಾಜು ಮತ್ತು ಲೋಕೇಶ್ ಅವರು ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಕುರಿತು ಸರಳವಾಗಿ ಹಾಗೂ ಆಸಕ್ತಿದಾಯಕವಾಗಿ ಮಾಹಿತಿ ನೀಡಿದರು.ಚಂದ್ರನ ಸ್ವರೂಪ, ಮೇಲ್ಮೈಯಲ್ಲಿರುವ ಕುಳಿಗಳು, ಆಕಾಶಕಾಯಗಳ ಚಲನೆ ಹಾಗೂ ಬಾಹ್ಯಾಕಾಶದ ಹಲವು ವಿಸ್ಮಯಕಾರಿ ಸಂಗತಿಗಳನ್ನು ವಿವರಿಸಿದರು. ವಿಜ್ಞಾನವನ್ನು ಕೇವಲ ಪಠ್ಯಪುಸ್ತಕಗಳಲ್ಲಿ ಓದುವುದಕ್ಕೆ ಸೀಮಿತಗೊಳಿಸದೆ ನೇರ ವೀಕ್ಷಣೆ ಮತ್ತು ಪ್ರಯೋಗಗಳ ಮೂಲಕ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಆಕಾಶವನ್ನು ಕುತೂಹಲದಿಂದ ಗಮನಿಸುವುದರ ಜೊತೆಗೆ ಪ್ರತಿಯೊಂದು ವೈಜ್ಞಾನಿಕ ಸಂಗತಿಯ ಹಿಂದಿರುವ ಕಾರಣವನ್ನು ತಿಳಿಯಲು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ದೂರದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳು ಸರದಿಯಲ್ಲಿ ದೂರದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸಿ ಅದರ ಮೇಲ್ಮೈಯ ವಿವರಗಳನ್ನು ಕಣ್ತುಂಬಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೂ ಇಂತಹ ಆಧುನಿಕ ವೈಜ್ಞಾನಿಕ ಅನುಭವಗಳನ್ನು ಒದಗಿಸುತ್ತಿರುವುದು ಸಂತಸದ ಸಂಗತಿ. ಮಕ್ಕಳಲ್ಲಿ ಸಹಜವಾಗಿಯೇ ಪ್ರಶ್ನಿಸುವ ಕುತೂಹಲವಿರುತ್ತದೆ. ಅದಕ್ಕೆ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನ ದೊರೆತಾಗ ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ. ವಿಜ್ಞಾನವನ್ನು ಪುಸ್ತಕದ ಮೂಲಕ ಕಲಿಯುವುದರ ಜೊತೆಗೆ ಪ್ರತ್ಯಕ್ಷವಾಗಿ ವೀಕ್ಷಿಸಿ ಅನುಭವಿಸುವುದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಆಸಕ್ತಿ ಮತ್ತು ಹೊಸ ಆವಿಷ್ಕಾರಗಳ ಕನಸನ್ನು ಬೆಳೆಸುತ್ತವೆ ಎಂದರು.
ಭಾರ್ತಿ ಏರ್ಟೆಲ್ ಫೌಂಡೇಶನ್ನ ಸಂಯೋಜಕರಾದ ಯಶವಂತ್ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಮಧುಸೂದನ್, ಬಿ.ಕೆ. ಲತಾ, ರಶ್ಮಿ, ಶಶಿಕುಮಾರ್, ಶಶಿರೇಖಾ, ರಾಜಣ್ಣ, ರಾಜೇಶ್ವರಿ, ಪಲ್ಲವಿ, ಸಾಕಮ್ಮ, ಲತಾ, ಸುಶೀಲಮ್ಮ, ಲಕ್ಷ್ಮಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.