ದಾವಣಗೆರೆ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ನಾಣಿಕೇರಿ ಕಲೋತ್ಸವವು ಮಿನಿ ಹಂಪಿ ಉತ್ಸವದಂತೆ ವೈಭವದಿಂದ ಮೂಡಿಬಂದಿದೆ. ಮುಂದಿನ ವರ್ಷದಿಂದ ಈ ಉತ್ಸವಕ್ಕೆ ಸರ್ಕಾರದ ವತಿಯಿಂದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು.
- ಸಚಿವ ಬಸವಂತಪ್ಪ ಭರವಸೆ । ನಾಣಿಕೇರಿ ವಸಂತ ವೈಭವ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ನಾಣಿಕೇರಿ ಕಲೋತ್ಸವವು ಮಿನಿ ಹಂಪಿ ಉತ್ಸವದಂತೆ ವೈಭವದಿಂದ ಮೂಡಿಬಂದಿದೆ. ಮುಂದಿನ ವರ್ಷದಿಂದ ಈ ಉತ್ಸವಕ್ಕೆ ಸರ್ಕಾರದ ವತಿಯಿಂದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು.ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ನಾಣಿಕೇರಿ ಉತ್ಸವ ಅಂಗವಾಗಿ ನಡೆದ ನಾಣಿಕೇರಿ ವಸಂತ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಈ ಉತ್ಸವ ಸ್ಥಳೀಯರ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಜನರಿಗೆ ನೀರುಣಿಸುವ ಬೃಹತ್ ಜಲಾಶಯ ನಿರ್ಮಾಣಕ್ಕಾಗಿ ನಾಣಿಕೇರಿ ಹಾಗೂ ಸುತ್ತಮುತ್ತಲಿನ ಭಾಗದ ಜನರು ತಮ್ಮ ಫಲವತ್ತಾದ ಜಮೀನು ಮತ್ತು ಮನೆಗಳನ್ನು ತ್ಯಾಗ ಮಾಡಿದ್ದಾರೆ. ಈ ಭಾಗದ ಜನರು ತೋರಿದ ತ್ಯಾಗ ಮತ್ತು ಹೃದಯವಂತಿಕೆ ನಿಜಕ್ಕೂ ಮಾದರಿ ಎಂದರು.ಜಲಾಶಯದಲ್ಲಿ ನೀರಿದ್ದರೂ ಈ ಭಾಗದ ಹಲವು ತಾಲೂಕುಗಳು ಬರಗಾಲ ಎದುರಿಸುತ್ತಿವೆ. ತುಂಗಭದ್ರಾ ನೀರು ತಲುಪದ ಪ್ರದೇಶಗಳಿಗೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿಯೋಗದ ಮೂಲಕ ಮನವಿ ಸಲ್ಲಿಸಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು ಎಂದರು.
ಮರಿಯಮ್ಮನಹಳ್ಳಿ ಭಾಗವು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರು ಹಾಗೂ ಸರ್ಕಾರಿ ನೌಕರರನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಹೊಂದಿದೆ. ದಾವಣಗೆರೆಯಲ್ಲಿ ಜನಮಾನಸದಲ್ಲಿ ನೆಲೆಸಿರುವ ಆರ್ಟಿಒ ಪರಮೇಶಣ್ಣ ಅವರಂತಹ ಅನೇಕ ಸಾಧಕರು ಈ ಭಾಗದವರು. ಮುಂದಿನ ವರ್ಷದಿಂದ ನಾಣಿಕೇರಿ ಉತ್ಸವದೊಂದಿಗೆ ಮಕ್ಕಳಿಗೆ ಪ್ರೇರಣೆ ನೀಡುವ ಶಿಕ್ಷಣ ಉತ್ಸವ ಅಥವಾ ಶಿಕ್ಷಣ ಜಾತ್ರೆಯನ್ನೂ ಆಯೋಜಿಸಬೇಕು. ಮುಂದಿನ ವರ್ಷ ಸಿಎಂ ಜತೆ ಚರ್ಚಿಸಿ ನಾಣಿಕೇರಿ ಉತ್ಸವಕ್ಕೆ ಸರ್ಕಾರದ ಅನುದಾನ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ಬಳ್ಳಾರಿ ಮತ್ತು ವಿಜಯನಗರ ಲೋಕಸಭಾ ಕ್ಷೇತ್ರದ ಸಂಸದ ಕೆ. ತುಕಾರಾಂ ಸೇರಿದಂತೆ ಹಲವು ಗಣ್ಯರು, ಸ್ಥಳೀಯ ಮುಖಂಡರು, ಉತ್ಸವ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- - --22ಕೆಡಿವಿಜಿ31:
ನಾಣಿಕೇರಿ ವಸಂತ ವೈಭವ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್.ಬಸವಂತಪ್ಪ, ವಿಪ ಸಭಾಪತಿ ಸಲೀಂ ಅಹಮದ್, ಬಳ್ಳಾರಿ ಸಂಸದ ಕೆ.ತುಕಾರಾಂ ಇತರರಿದ್ದರು.