ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ, ಪೀಠೋಪಕರಣಗಳ ವಿತರಣೆ, ಆಟದ ಮೈದಾನ, ಸ್ವಚ್ಛತೆ, ಶಿಕ್ಷಕರ ವ್ಯವಸ್ಥೆ ಹಾಗೂ ಶೌಚಾಲ ಸೇರಿ ವಿವಿಧ ಮೂಲಸೌಕರ್ಯ ಒದಗಿಸುತ್ತಿದೆ. ಇದರೊಂದಿಗೆ ವಿದ್ಯಾರ್ಥಿವೇತನ, ಅಶಕ್ತರಿಗೆ ಪಿಂಚಣಿ, ಮನೆ ನಿರ್ಮಾಣ, ಕೆರೆಕಟ್ಟೆಗಳ ಅಭಿವೃದ್ಧಿ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಸೇರಿ ರಾಜ್ಯಾದ್ಯಂತ ಹಲವು ಸಮಾಜಮುಖಿ ಕಾರ್ಯ ನಡೆಸುತ್ತಿದೆ. ವಿದ್ಯಾರ್ಥಿಗಳು ವಿಶೇಷ ತರಗತಿ ಪ್ರಯೋಜನ ಪಡೆದು ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶ ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡುವ ಗುರಿ ಹೊಂದಬೇಕು. ಮಕ್ಕಳ ಭವಿಷ್ಯಕ್ಕಾಗಿ ತಂದೆ-ತಾಯಂದಿರು ಪಡುವ ಕಷ್ಟ ಹಾಗೂ ಮಾಡುವ ತ್ಯಾಗ ಪ್ರತಿ ವಿದ್ಯಾರ್ಥಿ ಅರಿತುಕೊಂಡು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕೌಲ್ ಕರೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಿಶೇಷ ತರಗತಿ ಉದ್ಘಾಟಿಸಿ, ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡ ಅವರು, ಹಿಂದೆ ಶಿಕ್ಷಣ ಪಡೆಯಲು ಸುಮಾರು 12 ಕಿಮೀ ದೂರ ಕಾಲ್ನಡಿಗೆಯಲ್ಲಿ ಸಂಚರಿಸಬೇಕಾಗಿತ್ತು. ವರ್ಷಕ್ಕೆ ಕೇವಲ ಎರಡು ಜೊತೆ ಬಟ್ಟೆ ಹೊಂದುವ ಪರಿಸ್ಥಿತಿ ಇತ್ತು. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅಗತ್ಯ ಅನೇಕ ಸೌಲಭ್ಯ ಲಭ್ಯವಿವೆ. ಇಂತಹ ಅನುಕೂಲ ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೀವನದ ಪ್ರಮುಖ ಘಟ್ಟ. ಕೇವಲ ಉತ್ತೀರ್ಣ ಗುರಿಯಾಗದೆ ಉತ್ತಮ ಅಂಕಗಳೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ, ಪೀಠೋಪಕರಣಗಳ ವಿತರಣೆ, ಆಟದ ಮೈದಾನ, ಸ್ವಚ್ಛತೆ, ಶಿಕ್ಷಕರ ವ್ಯವಸ್ಥೆ ಹಾಗೂ ಶೌಚಾಲ ಸೇರಿ ವಿವಿಧ ಮೂಲಸೌಕರ್ಯ ಒದಗಿಸುತ್ತಿದೆ. ಇದರೊಂದಿಗೆ ವಿದ್ಯಾರ್ಥಿವೇತನ, ಅಶಕ್ತರಿಗೆ ಪಿಂಚಣಿ, ಮನೆ ನಿರ್ಮಾಣ, ಕೆರೆಕಟ್ಟೆಗಳ ಅಭಿವೃದ್ಧಿ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಸೇರಿ ರಾಜ್ಯಾದ್ಯಂತ ಹಲವು ಸಮಾಜಮುಖಿ ಕಾರ್ಯ ನಡೆಸುತ್ತಿದೆ. ವಿದ್ಯಾರ್ಥಿಗಳು ವಿಶೇಷ ತರಗತಿ ಪ್ರಯೋಜನ ಪಡೆದು ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆ ಉಪಪ್ರಾಂಶುಪಾಲ ಶೈಲಜಾ ಮಾತನಾಡಿ, ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆ ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದು, ಗುಣಮಟ್ಟದ ಫಲಿತಾಂಶವೂ ಶೇ.83ಕ್ಕೂ ಅಧಿಕವಾಗಿದೆ. ಈ ಬಾರಿಯೂ ಅದಕ್ಕಿಂತ ಉತ್ತಮ ಸಾಧನೆ ಮಾಡುವ ಗುರಿ ಶಿಕ್ಷಕ ವೃಂದ ಹೊಂದಿದೆ. ವಿದ್ಯಾರ್ಥಿಗಳು ಮೊದಲ ಬಾರಿಗೆ ಸಾರ್ವಜನಿಕ ಪರೀಕ್ಷೆ ಎದುರಿಸುತ್ತಿರುವುದರಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಶಿಕ್ಷಕರು ಈಗಾಗಲೇ ವಿಷಯವಾರು ವೇಳಾಪಟ್ಟಿ ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳು ಮನೆಯಲ್ಲಿಯೂ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಪೋಷಕರ ಸಹಕಾರವೂ ಶೈಕ್ಷಣಿಕ ಪ್ರಗತಿಗೆ ಅತ್ಯಗತ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ನೆರವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಮತ್ತು ಶಾಲೆ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.