ಕರ್ನಾಟಕ ವಿದ್ಯಾವರ್ಧಕ ಸಂಘವು ಎಲ್ಲ ಕ್ಷೇತ್ರಕ್ಕೆ ಸಂಬಂಧಪಟ್ಟ ವೈಶಿಷ್ಟ್ಯ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಯುವಜನತೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ.

3ನೇ ದಿನದ ನಾಟಕೋತ್ಸವದಲ್ಲಿ ರೈತ ಮುಖಂಡ

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘವು ಎಲ್ಲ ಕ್ಷೇತ್ರಕ್ಕೆ ಸಂಬಂಧಪಟ್ಟ ವೈಶಿಷ್ಟ್ಯ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಯುವಜನತೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ. ಶ್ರೀಸಾಮಾನ್ಯನಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಯವರೆಗೆ ದೈನಂದಿನ ಬದುಕಿಗೆ ಅಗತ್ಯ ಬೇಕಾದ ಪೂರಕ ಕನ್ನಡಪರ ಚಿಂತನೆಗಳು ಪಡೆಯಲು ಇದರಿಂದ ಸಾಧ್ಯ ಎಂದು ರೈತ ಮುಖಂಡ ಈಶ್ವರಚಂದ್ರ ಹೊಸಮನಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಆಯೋಜಿಸಿರುವ ನಾಟಕೋತ್ಸವದ ಮೂರನೇ ದಿನಕ್ಕೆ ಚಾಲನೆ ನೀಡಿದ ಅವರು, ರೈತರು ಇಂದಿಗೂ ಸಂಕಷ್ಟದಲ್ಲಿ ಜೀವ ಸವೆಸುತ್ತಿದ್ದಾರೆ. ಪ್ರಕೃತಿ ವಿಕೋಪದ ವೈರುಧ್ಯದ ನಡುವೆ ರೈತ ಸಮುದಾಯ ಬರಗಾಲಕ್ಕೆ ತತ್ತರಿಸಿದೆ. ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ರೈತರ ದೈನಂದಿನ ಬದುಕಿನಲ್ಲಿ ದಿನನಿತ್ಯದ ಮನೋರಂಜನೆ ಮತ್ತು ಚಿಂತನೆಗೆ ಒಳಪಡಿಸುವ ಅನೇಕ ರೀತಿಯ ವಿವಿಧತೆಯಲ್ಲಿ ಏಕತೆ ಸಾರುವ ಚಟುವಟಿಕೆಗಳು ಈಗ ಮಾಯವಾಗುತ್ತಿವೆ. ಯುವಜನತೆ ಎಲ್ಲ ಕ್ಷೇತ್ರಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು ಮತ್ತು ವರುಣನ ಕೃಪೆ ಇದ್ದರೆ ಬದುಕು ತುಂಬಾ ಸುಂದರವಾಗುತ್ತದೆ. ನಾಟಕಗಳು ಸತ್ಯಶೋಧನೆಗೆ ದಾರಿ ಮಾಡಿಕೊಡುತ್ತವೆ ಎಂದರು.

ರಂಗಕಲಾವಿದ ದಾವಣಗೆರೆಯ ಶಂಭುಲಿಂಗಪ್ಪ ಚಿಂದೋಡಿ ಅವರಿಗೆ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಆರು ದಶಕಗಳಿಂದ ವೃತಿ ರಂಗಭೂಮಿಯಲ್ಲಿ ನನ್ನನ್ನು ಕಲಾಸಕ್ತರು ಅನ್ನ ನೀರು ಕೊಟ್ಟು ಬೆಳೆಸಿದ್ದಾರೆ. ವೃತಿ ರಂಗಭೂಮಿ ನಾಟಕಗಳು ಪ್ರಸ್ತುತ ಸಾಕಷ್ಟು ನಷ್ಟ ಅನುಭವಿಸಿಕೊಂಡು ಕಲಾವಿದರ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದರು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ವಿಶ್ವೇಶ್ವರಿ ಹಿರೇಮಠ ಇದ್ದರು. ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಮಾತನಾಡಿದರು. ಕುವೆಂಪು ರಚನೆಯ ರಾಮಾಯಣದರ್ಶನಂ ಮಹಾಕಾವ್ಯದಿಂದಾಯ್ದ, ಮಂಜುನಾಥ ಎಲ್. ಬಡಿಗೇರ ನಿರ್ದೇಶನದ, `ಅತ್ತಲಾ ಕಿಷ್ಕಿಂಧೆಯೊಳ್’ ನಾಟಕವನ್ನು ಮಂಡ್ಯದ ಸದ್ವಿದ್ಯಾ ರಂಗ ತಂಡವು ಪ್ರಸ್ತುತಪಡಿಸಿತು.