ಕನ್ನಡ ಸಾಹಿತ್ಯದ ಭಾವಸೌಂದರ್ಯವನ್ನು ಶಾಸ್ತ್ರೀಯ ನೃತ್ಯದ ಮೂಲಕ ಅಭಿವ್ಯಕ್ತಿಸುವ ‘ಸಿರಿಗನ್ನಡಂ ಗೆಲ್ಗೆ’ ಸಾಂಸ್ಕೃತಿಕ ಕಾರ್ಯಕ್ರಮ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಜರುಗಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕನ್ನಡ ಸಾಹಿತ್ಯದ ಭಾವಸೌಂದರ್ಯವನ್ನು ಶಾಸ್ತ್ರೀಯ ನೃತ್ಯದ ಮೂಲಕ ಅಭಿವ್ಯಕ್ತಿಸುವ ‘ಸಿರಿಗನ್ನಡಂ ಗೆಲ್ಗೆ’ ಸಾಂಸ್ಕೃತಿಕ ಕಾರ್ಯಕ್ರಮ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಜರುಗಿತು.

ಮಯೂರ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕಾಡೆಮಿಯ ವಿವಿಧ ಶಾಖೆಗಳ ವಿದ್ಯಾರ್ಥಿನಿಯರು ಕನ್ನಡ ಕಾವ್ಯಾಧಾರಿತ ನೃತ್ಯಪ್ರಸ್ತುತಿಗಳನ್ನು ನೀಡಿ ಗಮನ ಸೆಳೆದರು. ಲಯಬದ್ಧ ಹೆಜ್ಜೆ, ಭಾವಪೂರ್ಣ ಅಭಿನಯ ಹಾಗೂ ಮುಖಾಭಿನಯದ ಮೂಲಕ ಕನ್ನಡ ಸಾಹಿತ್ಯದ ವಿವಿಧ ರಸಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ವಿಕ್ರಮ್ ಶಿರೂರು, ಸಂಗೀತಗಾರ ಬಾಲಚಂದ್ರ ನಾಕೋಡ್ ಹಾಗೂ ಕೆ.ಜಿ.ಪಿ. ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೆಟ್ ಉಪಸ್ಥಿತರಿದ್ದರು.

ಈ‌ ಸಂದರ್ಭದಲ್ಲಿ ವಿಕ್ರಮ್ ಶಿರೂರು ಮಾತನಾಡಿ, ಭಾರತೀಯ ಶಾಸ್ತ್ರೀಯ ನೃತ್ಯವು ಸಂಸ್ಕೃತಿ, ಸಂಪ್ರದಾಯ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಶಿಸ್ತಿನಿಂದ ಕಲೆಯನ್ನು ಅಭ್ಯಸಿಸಬೇಕು ಎಂದರು. ಬಾಲಚಂದ್ರ ನಾಕೋಡ್ ಮಾತನಾಡಿ, ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಕಲೆಯಲ್ಲಿ ಸಾಧನೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹಿಂದುಸ್ತಾನಿ ಸಂಗೀತ ಕಲಾವಿದೆ ಡಾ. ಸುಚೇತಾ ವಾಸುದೇವ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಪೊಲೀಸ್ ಉಪ ಆಯುಕ್ತೆ ಶ್ರುತಿ ಎನ್.ಎಸ್., ವಕೀಲ ಆರ್.ಬಿ. ಗದಗಕರ ಹಾಗೂ ಮುರಳೀಧರ ಮಳಗಿ ಉಪಸ್ಥಿತರಿದ್ದರು. ಹಿರಿಯ ಉದ್ಘೋಷಕಿ, ಆಕಾಶವಾಣಿ ಧಾರವಾಡದ ಕಲಾವಿದೆ ಹಾಗೂ ಗಾಯಕಿ ಮಾಯಾ ಚಿಕ್ಕೇರೂರ ಅವರನ್ನು ಗೌರವಿಸಲಾಯಿತು.

ಶ್ರುತಿ ಎನ್.ಎಸ್. ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು. ಮುರಳೀಧರ ಮಳಗಿ ಅವರು ನೃತ್ಯವು ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬೆಳೆಸುತ್ತದೆ ಎಂದರು. ಮಾಯಾ ಚಿಕ್ಕೇರೂರ ಅವರು ಸಂಗೀತ ಮತ್ತು ನೃತ್ಯಗಳ ಅವಿನಾಭಾವ ಸಂಬಂಧವನ್ನು ವಿವರಿಸಿದರು.

ಅಕಾಡೆಮಿ ಅಧ್ಯಕ್ಷೆ ವಿದುಷಿ ಹೇಮಾ ವಾಘಮೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಶಾಖೆಗಳ ವಿದ್ಯಾರ್ಥಿನಿಯರು ಹಾಗೂ ಹಿರಿಯ ವಿದ್ವತ್ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು. ಸತೀಶ್ ಮೂರೂರು ಕಾರ್ಯಕ್ರಮ ನಿರೂಪಿಸಿದರು.