ಚಿಕ್ಕಮಗಳೂರುಮುಂಬರುವ ಜಿಲ್ಲಾ , ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಗೆಲ್ಲಿಸುವ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ತಮ್ಮಯ್ಯ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 110ನೇ ಜನ್ಮದಿನಾಚರಣೆ । ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಎಚ್.ಪಿ.ಮಂಜೇಗೌಡರ ಅಧಿಕಾರ ಸ್ವೀಕಾರ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮುಂಬರುವ ಜಿಲ್ಲಾ , ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಗೆಲ್ಲಿಸುವ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ತಮ್ಮಯ್ಯ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದ ಮುಂಭಾಗದ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 110ನೇ ಜನ್ಮದಿನಾಚರಣೆ ಹಾಗೂ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಎಚ್.ಪಿ.ಮಂಜೇಗೌಡರ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು ಕಾರ್ಯಕರ್ತರಿಗೆ ಅಧಿಕಾರ ನೀಡುವ ಮಹತ್ವದ ಚುನಾವಣೆಗಳಾಗಿವೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಈ ಚುನಾವಣೆಗಳ ಮೂಲಕ ಅಧಿಕಾರ ದೊರೆಯಲಿದೆ. ಹೀಗಾಗಿ, ಕಾರ್ಯ ಕರ್ತರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ಮನವರಿಕೆ ಮಾಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ನೇತೃತ್ವದಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಬೇಕು. ಚಿಕ್ಕಮಗಳೂರಿನಲ್ಲಿರುವ ಸೌಹಾರ್ದಯುತ ವಾತಾವರಣ ಬಳಸಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಬಡವರ ಪರ ಕಾಂಗ್ರೆಸ್, ಶ್ರೀಮಂತರ ಪರ ಬಿಜೆಪಿ

ದೇಶದ ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ನಿರಂತರವಾಗಿ ಶ್ರಮಿಸುತ್ತಿದೆ. ಬಿಜೆಪಿ ಶ್ರೀಮಂತರು ಮತ್ತು ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಸಮಾಜದ ಕಟ್ಟಕಡೆ ವ್ಯಕ್ತಿಯ ಬದುಕು ಸುಧಾರಿಸಲು ಆದ್ಯತೆ ನೀಡುತ್ತಿದೆ ಎಂದರು.

ಜಾತಿ, ವರ್ಗ ಹಾಗೂ ಆರ್ಥಿಕ ಅಸಮಾನತೆ ನಿವಾರಣೆಗಾಗಿಯೇ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಯಿತು ಎಂದರು.

ಕಾಂಗ್ರೆಸ್ ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯಗಳನ್ನು ಒಗ್ಗೂಡಿಸುವ ಪಕ್ಷವಾಗಿದೆ. ಬಿಜೆಪಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುತ್ತಿದ್ದರೆ, ಕಾಂಗ್ರೆಸ್ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವಕ್ಕೆ ಆದ್ಯತೆ ನೀಡುತ್ತಿದೆ. ಕಾರ್ಯಕರ್ತರು ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಸಾಧನೆ ಜನರಿಗೆ ತಲುಪಿಸಬೇಕು. ಬಿಜೆಪಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ಸೋಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಬಿ.ಎಲ್.ಶಂಕರ್, ಸಿದ್ದರಾಮಯ್ಯ, ಮೋಟಮ್ಮ ಹಾಗೂ ಎಚ್.ಪಿ.ಮಂಜೇಗೌಡ ಅವರಿಗೆ ಸೋನಿಯಾ ಗಾಂಧಿ ಅವರ ಜೀವನಚರಿತ್ರೆ ಪುಸ್ತಕ ನೀಡಿದರು.

ಸಮಾರಂಭದಲ್ಲಿ ಸಚಿವ ರಿಜ್ವಾನ್ ಅರ್ಷದ್, ತೆಲಂಗಾಣ ಉಸ್ತುವಾರಿ ಬಿ.ಎನ್.ಸಂದೀಪ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮಾಜಿ ಸಚಿವೆ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಡಾ.ಆರತಿ ಕೃಷ್ಣ, ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಕೆಪೆಕ್ ಅಧ್ಯಕ್ಷ ಬಿ.ಎಚ್.ಹರೀಶ್, ಬಿ.ಎಲ್.ಶಂಕರ್, ಎಂ.ಎಲ್.ಮೂರ್ತಿ, ಡಾ.ವಿಜಯಕುಮಾರ್, ಬಿ.ಬಿ.ನಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

--- ಬಾಕ್ಸ್‌--

ಕುಮಾರಸ್ವಾಮಿಗೆ ಮುಖ್ಯಮಂತ್ರಿ ಕನಸು

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈಗಾಗಲೇ ರಾಜ್ಯದಲ್ಲಿ ಗೆಲುವು ಸಾಧಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ ಎಂದು ಸಿದ್ದರಾಮಯ್ಯ ಹೇಳಿದರು.

--- ಬಾಕ್ಸ್‌---

ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: ಎಚ್.ಡಿ.ತಮ್ಮಯ್ಯ

ಮುಂಬರುವ ಜಿಪಂ, ತಾಪಂ, ಗ್ರಾಪಂ ಹಾಗೂ ನಗರಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಗುರಿ ಹೊಂದಿದೆ. ಈ ಚುನಾವಣೆಗಳ ಸಿದ್ಧತೆಯ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗೆ ಇಂದಿರಾ ಗಾಂಧಿ ಅವರ ಕೊಡುಗೆ ಮಹತ್ವದ್ದಾಗಿದೆ. ಅವರು ಪ್ರಚಾರಕ್ಕಿಂತ ಜನರ ವಿಶ್ವಾಸ ಮತ್ತು ಪ್ರೀತಿಗೆ ಹೆಚ್ಚಿನ ಮಹತ್ವ ನೀಡಿದ್ದ ನಾಯಕಿಯಾಗಿದ್ದರು ಎಂದರು.

ದೇಶದಲ್ಲಿ ಅಣೆಕಟ್ಟು, ವಿಮಾನ ನಿಲ್ದಾಣ, ರೈಲ್ವೆ ಹಾಗೂ ಬಸ್ ನಿಲ್ದಾಣಗಳಂತಹ ಮೂಲಸೌಕರ್ಯಗಳು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಆಗಿವೆ. ನೆಹರು ಮತ್ತು ಇಂದಿರಾ ಗಾಂಧಿ ದೇಶದ ಆರ್ಥಿಕ ವ್ಯವಸ್ಥೆ ಬಲಪಡಿಸುವ ಜತೆಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಕಳೆದ 13 ವರ್ಷಗಳಿಂದ ಆಡಳಿತ ನಡೆಸುತ್ತಿರುವವರು ಹೊಸ ಯೋಜನೆ ರೂಪಿಸುವ ಬದಲು ಇರುವ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಚಿಕ್ಕಮಗಳೂರು ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ 3ನೇ ಹಂತದ ಕೆರೆ ತುಂಬಿಸುವ ಯೋಜನೆಗೆ ₹315 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದೆ. ಇದರೊಂದಿಗೆ ₹10 ಕೋಟಿ ವೆಚ್ಚದಲ್ಲಿ ಕೆಎಸ್‌ ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಹಾಗೂ 20 ಡಾಂಬರು ರಸ್ತೆ ಕಾಮಗಾರಿಗಳಿಗೆ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.-- ಕೋಟ್‌ --

ಸಿದ್ದರಾಮಯ್ಯ ಕೊಡುಗೆ ಅಪಾರ

ದೇಶದಲ್ಲಿ ಮೊದಲ ಬಾರಿಗೆ ಉಚಿತವಾಗಿ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದವರು ಸಿದ್ದರಾಮಯ್ಯ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತರೀಕೆರೆ, ಕಡೂರು, ಅಜ್ಜಂಪುರ ಹಾಗೂ ಚಿತ್ರದುರ್ಗ ಭಾಗಗಳಿಗೆ ನೀರು ಒದಗಿಸುವ ಪ್ರಯತ್ನ ಮಾಡಲಾಗಿದೆ.

ಶ್ರೀನಿವಾಸ್ ಶಾಸಕರು, ತರೀಕೆರೆ

--

ಕಾರ್ಯಕರ್ತರನ್ನು ಒಗ್ಗೂಡಿಸೋಣ

ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡುವ ಹಲವು ಚುನಾವಣೆಗಳು ಎದುರಾಗಲಿವೆ. ನೂತನ ಜಿಲ್ಲಾಧ್ಯಕ್ಷರ ಮುಂದೆ ಸಾಕಷ್ಟು ಸವಾಲುಗಳಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಸಂಘಟಿಸಬೇಕಿದೆ.

ಕೆ.ಎಸ್.ಆನಂದ್, ಶಾಸಕರು, ಕಡೂರು

---

ಗ್ಯಾರಂಟಿ ಯೋಜನೆ ಮರೆಯಲ್ಲ

ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರು ಎಂದಿಗೂ ಮರೆಯುವುದಿಲ್ಲ. ಸರ್ಕಾರದ ಉತ್ತಮ ಕೆಲಸ ಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಆದರೆ, ಕೆಲವೊಮ್ಮೆ ನಮ್ಮ ಪಕ್ಷದ ಕಾರ್ಯಕರ್ತರೇ ಪಕ್ಷ ಹಾಗೂ ಶಾಸಕರನ್ನು ಟೀಕಿಸುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ.

ನಯನಾ ಮೋಟಮ್ಮ, ಶಾಸಕಿ, ಮೂಡಿಗೆರೆ

---ಬಾಕ್ಸ್‌---

ಕೋಮು ದ್ವೇಷ ಬಿತ್ತುವ ರಾಜಕಾರಣವನ್ನೂ ಸೋಲಿಸಬೇಕು: ಬಿ.ಕೆ.ಹರಿಪ್ರಸಾದ್‌

ಚಿಕ್ಕಮಗಳೂರು ಜಿಲ್ಲೆ ಜನತೆ ಚುನಾವಣೆಯಲ್ಲಿ ಕೋಮುವಾದಿ ನಾಯಕರನ್ನು ಸೋಲಿಸಿದ್ದಾರೆ. ಆದರೆ, ಸೋಲಿಸಿದರೆ ಸಾಲದು, ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ರಾಜಕಾರಣವನ್ನೂ ಸೋಲಿಸಬೇಕು. ಈ ಜವಾಬ್ದಾರಿ ಕಾಂಗ್ರೆಸ್ ಕಾರ್ಯ ಕರ್ತರ ಮೇಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯ ವಿಭಿನ್ನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಸಹಬಾಳ್ವೆಯ ನೆಲವನ್ನು ಧರ್ಮದ ಹೆಸರಿನಲ್ಲಿ ಅಶಾಂತಿ ಕೇಂದ್ರವನ್ನಾಗಿಸಲು ಕೆಲವರು ಪ್ರಯತ್ನಿಸಿದ್ದರು. ಶಾಸಕರಾಗಲು ಧರ್ಮವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿ ಕೊಂಡು ದ್ವೇಷ ಸೃಷ್ಟಿಸಿದ ರಾಜಕಾರಣಕ್ಕೆ ಜನರು ಚುನಾವಣೆ ಮೂಲಕ ಉತ್ತರಿಸಿದ್ದಾರೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಅವಕಾಶ ನೀಡಿಲ್ಲ. ಮುಂದೆಯೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಯತ್ನ ಸಹಿದಲ್ಲ. ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಹೆಸರಿನಲ್ಲಿ ಜನರನ್ನು ವಿಭಜಿಸದೆ ಒಗ್ಗೂಡಿಸಿಕೊಂಡು ಹೋಗುವುದೇ ಕಾಂಗ್ರೆಸ್ ಸಿದ್ಧಾಂತ ಎಂದು ಹೇಳಿದರು.

ಅಧಿಕಾರಕ್ಕಿಂತ ಜವಾಬ್ದಾರಿ ಮುಖ್ಯ:

ಕಾಂಗ್ರೆಸ್‌ನಲ್ಲಿ ಹುದ್ದೆ ಎಂದರೆ ಕೇವಲ ಅಧಿಕಾರವಲ್ಲ, ದೊಡ್ಡ ಜವಾಬ್ದಾರಿ. ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ದೊರಕಿಸು ವುದು ಅಧಿಕಾರದ ಉದ್ದೇಶವಾದರೆ, ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಅನುಷ್ಠಾನಗೊಳಿಸುವುದು ಜವಾಬ್ದಾರಿ. ನೂತನ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.--- ಬಾಕ್ಸ್‌---

ಶೇಂಗಾ ಚಿಕ್ಕಿ ಕೊಟ್ಟ ನಯನಾ ಮೋಟಮ್ಮ

ಸಮಾರಂಭದ ವೇದಿಕೆಯಲ್ಲಿದ್ದ ಶಾಸಕರು ಹಾಗೂ ಮುಖಂಡರಿಗೆ ಶಾಸಕಿ ನಯನಾ ಮೋಟಮ್ಮ ಅವರು ಶೇಂಗಾ ಚಿಕ್ಕಿ ವಿತರಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಊಟದ ಸಮಯ ಮೀರಿದ್ದರಿಂದ ಹಸಿವಿನಿಂದಿದ್ದ ಕೆಲವು ನಾಯಕರು ಕೇಳಿ ಪಡೆದು ಶೇಂಗಾ ಚಿಕ್ಕಿ ಸೇವಿಸಿದರು. ರಾಜಕೀಯ ಭಾಷಣಗಳ ನಡುವೆಯೇ ವೇದಿಕೆಯಲ್ಲಿ ನಡೆದ ಈ ಚಿಕ್ಕಿ ವಿತರಣೆ ಗಮನ ಸೆಳೆಯಿತು.

--

ಬರ ಪರಿಹಾರ ನೀಡದ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದಲ್ಲಿ ಭೀಕರ ಬರಗಾಲ ಎದುರಾದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಈವರೆಗೆ ಒಂದೇ ಒಂದು ರು. ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನಲ್ಲಿ ಗುರುವಾರ ಆಯೋಜಿಸಿದ್ದ 110ನೇ ಇಂದಿರಾ ಗಾಂಧಿ ಜನ್ಮದಿನ ಹಾಗೂ ಚಿಕ್ಕಮಗಳೂರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ ರಾಜ್ಯದಲ್ಲಿ ಬರದಿಂದ ಸುಮಾರು ₹62 ಸಾವಿರ ಕೋಟಿ ನಷ್ಟವಾಗಿದ್ದು, ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ₹21 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರ ದಿಂದ ಆಗಮಿಸಿದ ನಿಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿಲ್ಲ. 2023ರಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋಗಿ ಬರ ಪರಿಹಾರ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ದೂರಿದರು.ಇನ್ನೂ ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆದರೆ ಈವರೆಗೆ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದ ಸಾಲ ₹53 ಲಕ್ಷ ಕೋಟಿ ಇತ್ತು. ಈಗ ಅದು ₹200 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಪಾರ ಪ್ರಮಾಣದ ಸಾಲ ಮಾಡಿರುವ ಕೇಂದ್ರ ಸರ್ಕಾರ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಬಡತನ, ನಿರುದ್ಯೋಗ ಹೆಚ್ಚಾಗಿದ್ದು, ಅಚ್ಚೇದಿನ್ ಮತ್ತು ಗುಜರಾತ್ ಮಾದರಿ ಆಡಳಿತದ ಭರವಸೆಗಳು ಈಡೇರಿಲ್ಲ. ಮೋದಿ ನೀಡಿದ ಭರವಸೆಗಳ ಬಗ್ಗೆ ದೇಶದ ಜನರು ಪ್ರಶ್ನಿಸಬೇಕಿದೆ ಎಂದರು.ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ನೈತಿಕತೆ ಹೊಂದಿದೆಯೇ ಎಂದು ಪ್ರಶ್ನಿಸಿದ ಅವರು, ಸುಳ್ಳು ಭರವಸೆಗಳ ಮೂಲಕವೇ ಆಡಳಿತ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

-- ಬಾಕ್ಸ್‌----ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರಿಗೆ ದೇಶ ಆಳುವ ಅರ್ಹತೆ ಇದೆಯೇ?

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ನೆಹರು ಕುಟುಂಬವನ್ನು ಕಂಡರೆ ಅಸಹನೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವ ಹಿಸದ ಜನಸಂಘ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಇಂದು ದೇಶದ ಆಡಳಿತ ನಡೆಸುತ್ತಿದ್ದಾರೆ. ವಾಜಪೇಯಿ ಆರು ವರ್ಷ ಹಾಗೂ ನರೇಂದ್ರ ಮೋದಿ 12 ವರ್ಷ ಆಡಳಿತ ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿರುವವರೇ ದೇಶದ ಆಡಳಿತಕ್ಕೆ ಅರ್ಹರೇ ಎಂಬ ಪ್ರಶ್ನೆಯನ್ನು ಜನರು ಕೇಳಬೇಕಿದೆ. ಇಂತಹ ಆಡಳಿತದ ಅಧಿಕಾರದಿಂದ ಕೆಳಗಿಳಿಸುವ ಜವಾಬ್ದಾರಿ ಜನರ ಮೇಲಿದೆ ಎಂದು ಹೇಳಿದರು.

---

ಯದುವೀರ್‌ಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು

ಚಿಕ್ಕಮಗಳೂರು: ಸೋನಿಯಾ ಗಾಂಧಿ ಅವರ ಪುಸ್ತಕ ಓದುವುದಿಲ್ಲ ಎಂದು ಹೇಳಿರುವ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪುಸ್ತಕ ಓದುವಂತೆ ಹೇಳುತ್ತಿರುವವರು ಯಾರು? ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಪುಸ್ತಕ ಓದುವ ಹವ್ಯಾಸವಿದ್ದರೆ ದೇಶಕ್ಕೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.ಚಿಕ್ಕಮಗಳೂರಿನಲ್ಲಿ ಗುರುವಾರ ಇಂದಿರಾಗಾಂಧಿ 110ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿ ಸೋನಿಯಾ ಗಾಂಧಿ ಅವರ ಕಾಂಗ್ರೆಸ್‌ನವರು ತಮಗೆ ಬೇಕಾದಂತೆ ನಿರೂಪಿಸಿಕೊಂಡಿದ್ದಾರೆ ಎಂಬ ಯದುವೀರ್ ಹೇಳಿಕೆಗೆ ಪ್ರತಿಕ್ರಿ ಯಿಸಿದ ಅವರು, ಯಾರು ಪುಸ್ತಕ ಓದಬೇಕೋ ಅವರು ಓದುತ್ತಾರೆ. ಓದದಿದ್ದರೆ ಅದರಿಂದ ಬೇರೆಯವರಿಗೆ ತೊಂದರೆಯಿಲ್ಲ. ಆದರೆ, ಪುಸ್ತಕ ಓದುವ ಬಗ್ಗೆ ಮಾತನಾಡುವವರು ಮೊದಲು ತಮ್ಮ ಓದುವ ಹವ್ಯಾಸದ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಲಿ ಎಂದು ತಿರುಗೇಟು ನೀಡಿದರು.

ಪುಸ್ತಕ ಓದುವ ಸಂಸ್ಕೃತಿ ಬಿಜೆಪಿಯವರಲ್ಲಿ ಮತ್ತು ಆರ್‌ಎಸ್‌ಎಸ್‌ನವರಲ್ಲಿ ಇದ್ದಿದ್ದರೆ ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತಿರ ಲಿಲ್ಲ. ಪದವಿ ಪ್ರಮಾಣಪತ್ರದ ಬಗ್ಗೆಯೇ ವಿವಾದಗಳಿರುವ ಪ್ರಧಾನಿಯನ್ನು ಹೊಂದಿರುವವರು ಇತರರಿಗೆ ಪುಸ್ತಕ ಓದುವ ಬಗ್ಗೆ ಉಪದೇಶ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕಾಪ್ರಹಾರ ನಡೆಸಿದರು.

ಸೋನಿಯಾ ಗಾಂಧಿ ಅವರ ತ್ಯಾಗ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅವರೊಂದಿಗೆ 18 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರ ವ್ಯಕ್ತಿತ್ವ ಮತ್ತು ತ್ಯಾಗದ ಬಗ್ಗೆ ನನಗೆ ಅರಿವಿದೆ ಎಂದರು.

ಇನ್ನೂ ಕೆಲವರು ಇಂದಿಗೂ ತಮ್ಮನ್ನು ರಾಜ-ಮಹಾರಾಜರೆಂದು ಕರೆದುಕೊಳ್ಳುತ್ತಿದ್ದಾರೆ. ಆ ಕಾಲ 1997ರಲ್ಲೇ ಮುಗಿದುಹೋಗಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗಲೇ ರಾಜ-ಮಹಾರಾಜರಿಗೆ ನೀಡುತ್ತಿದ್ದ ರಾಜಧನ ರದ್ದು ಗೊಳಿಸಿದ್ದರು. ದೇಶದ ಪ್ರತಿಯೊಂದು ಇಂಚು ಭೂಮಿಯೂ ಸಾರ್ವಜನಿಕರ ಆಸ್ತಿ. ರಾಜಮಹಾರಾಜರ ಕಾಲದ ಮನಸ್ಥಿತಿ ಯಿಂದ ಹೊರಬರಬೇಕು. ಇಲ್ಲವಾದರೆ ಅದೇ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಯದುವೀರ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರೆ, ಈಗಿನ ಪ್ರಧಾನಿ ಬ್ಯಾಂಕುಗಳನ್ನು ಮಾರಾಟ ಮಾಡುವ ಹಾದಿಯಲ್ಲಿದ್ದಾರೆ. ನೆಹರು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ್ದರು. ಆದರೆ, ಈಗಿನ ಸರ್ಕಾರ 26 ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿದೆ. ಇಂತಹವರು ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

--

ಸಂಪುಟದಲ್ಲಿ ಮಹಿಳಾ ಸಚಿವರಿಲ್ಲ: ವೇದಿಕೆಯಲ್ಲೇ ನಯನಾ ಮೋಟಮ್ಮ ಅಸಮಾಧಾನ

ಚಿಕ್ಕಮಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಪ್ರಾತಿನಿಧ್ಯ ನೀಡದಿರುವ ಬಗ್ಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಸಮ್ಮುಖದಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ದಿಟ್ಟ ನಾಯಕಿ, ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಇಂದಿರಾ ಗಾಂಧಿ ಅವರ ಜನ್ಮದಿನವನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನು ಸ್ಮರಿಸುತ್ತಿದ್ದೇವೆ. ಆದರೆ, ಮಹಿಳೆಯರಿಗೆ ಅವಕಾಶ ಮತ್ತು ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಇಂತಹ ಆಚರಣೆಗಳ ಉದ್ದೇಶದ ಬಗ್ಗೆಯೇ ಪ್ರಶ್ನೆ ಮೂಡುವುದರ ಜತೆಗೆ ಪಕ್ಷಕ್ಕೂ ಮುಜುಗರ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು.ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರೇ ಇಲ್ಲದಿರುವುದು ಬೇಸರದ ಸಂಗತಿ. ಮಹಿಳೆಯರಿಗೆ ರಾಜಕೀಯದಲ್ಲಿ ಸೂಕ್ತ ಅವಕಾಶ ಹಾಗೂ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರು ಗಮನಹರಿಸಬೇಕು ಎಂದು ವೇದಿಕೆಯಲ್ಲೇ ಒತ್ತಾಯಿಸಿದರು.