ನಮ್ಮ ನಾಡಿನ ಪ್ರಾಚೀನ ಸ್ಮಾರಕಗಳು, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ನಮ್ಮ ಇತಿಹಾಸದ ಅಮೂಲ್ಯ ಸಂಪತ್ತುಗಳಾಗಿವೆ.
ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ ಉದ್ಘಾಟಿಸಿದ ಬಡಿಗೇರ
ಕನ್ನಡಪ್ರಭ ವಾರ್ತೆ ಗದಗನಮ್ಮ ನಾಡಿನ ಪ್ರಾಚೀನ ಸ್ಮಾರಕಗಳು, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ನಮ್ಮ ಇತಿಹಾಸದ ಅಮೂಲ್ಯ ಸಂಪತ್ತುಗಳಾಗಿವೆ. ಮಕ್ಕಳನ್ನು ಆಯಾ ಭಾಗಗಳಲ್ಲಿರುವ ಐತಿಹಾಸಿಕ ಸ್ಮಾರಕಗಳ ಬಳಿಗೆ ಕರೆದೊಯ್ದು ಅವುಗಳ ಮಹತ್ವವನ್ನು ಪರಿಚಯಿಸಬೇಕು. ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮವು ಕೇವಲ ಸ್ಪರ್ಧೆಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗಾಗಿ ಸ್ಮಾರಕಗಳೆಡೆಗೆ ಪ್ರವಾಸ ಎಂಬ ಪರಿಕಲ್ಪನೆಯೊಂದಿಗೆ ರೂಪುಗೊಳ್ಳಲಿ ಎಂದು ಡಿಡಿಪಿಐ ಕೆ.ಡಿ. ಬಡಿಗೇರ ಹೇಳಿದರು.
ನಗರದ ಬೆಟಗೇರಿಯ ಬಾಸೆಲ್ ಮಿಷನ್ ಕೃಷಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಡಯಟ್ ಉಪನ್ಯಾಸಕಿ ಸುಧಾ ಬನ್ನಿಕಲ್ಲ, ಬಾಲ್ಯದಿಂದಲೇ ಮಕ್ಕಳಲ್ಲಿ ಪರಂಪರೆ ಸಂರಕ್ಷಣೆಯ ಅರಿವು ಮೂಡಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಮುಖ್ಯ ಅತಿಥಿಗಳಾದ ಡಿವೈಪಿಸಿ ರವಿಪ್ರಕಾಶ್ ಎಸ್.ಎನ್., ಶಿಕ್ಷಣಾಧಿಕಾರಿ ಎಂ.ಪಿ. ಗೋಟೂರ ಹಾಗೂ ನೋಡಲ್ ಅಧಿಕಾರಿ ಗೀತಾ ಕುಲಕರ್ಣಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ಮತ್ತು ಶಿಲಾಶಾಸನಗಳ ಮಹತ್ವ ತಿಳಿಸಿದರು.
ಪ್ರಬಂಧ, ಭಾಷಣ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಎಂ.ಎ. ಯರಗುಡಿ, ಶಾಂತಕುಮಾರ ಭಜಂತ್ರಿ, ಕೆ.ಎಂ. ಲಕ್ಕುಂಡಿ ಸೇರಿದಂತೆ ಹಲವರು ನಿರ್ಣಾಯಕರಾಗಿ ಭಾಗವಹಿಸಿದ್ದರು. ತನುಶ್ರೀ ಬದಿ ಪ್ರಾರ್ಥಿಸಿದರು. ಆರ್.ಜಿ. ಕವಲಗೇರಿ ಸ್ವಾಗತಿಸಿದರು. ನದಾಫ ನಿರೂಪಿಸಿದರು. ಎಂ.ಎಚ್. ಸವದತ್ತಿ ವಂದಿಸಿದರು. ಮುಖ್ಯೋಪಾಧ್ಯಾಯಿನಿ ಜೆಸ್ಸಿಕಾ ಡಿಕ್ರೋಜ ಹಾಗೂ ಸಿಬ್ಬಂದಿ ಸಹಕರಿಸಿದರು.