ಭೀಕರ ಬರದ ಹಿನ್ನೆಲೆ ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದ ಕುಡಿಯುವ ನೀರಿನ ಕೆರೆಯ ನೀರನ್ನು ಜನರು ಉಳಿಸಿಕೊಂಡಿದ್ದಾರೆ. ಕೆರೆ ದಡದ ಸುತ್ತಲು ಬೆಳೆದಿದ್ದ ಗಿಡ-ಗಂಟಿಗಳನ್ನು ಗ್ರಾಮದವರೇ ಸ್ವಚ್ಛ ಮಾಡಿಕೊಂಡಿದ್ದಾರೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಭೀಕರ ಬರದ ಹಿನ್ನೆಲೆ ತಾಲೂಕಿನ ಚಿಕೇನಕೊಪ್ಪ ಗ್ರಾಮದ ಕುಡಿಯುವ ನೀರಿನ ಕೆರೆಯ ನೀರನ್ನು ಜನರು ಉಳಿಸಿಕೊಂಡಿದ್ದಾರೆ. ಕೆರೆ ದಡದ ಸುತ್ತಲು ಬೆಳೆದಿದ್ದ ಗಿಡ-ಗಂಟಿಗಳನ್ನು ಗ್ರಾಮದವರೇ ಸ್ವಚ್ಛ ಮಾಡಿಕೊಂಡಿದ್ದಾರೆ.

ಸುತ್ತಲಿನ ಐದು ಗ್ರಾಮಗಳಿಗೆ ಈ ಕೆರೆ ನೀರು ಆಸರೆ. ಆದರೆ ಕೆರೆ ಅಕ್ಕಪಕ್ಕ ಗಿಡ-ಗಂಟಿಗಳು ಬೆಳೆದು ಅವುಗಳ ಬೇರು, ಎಲೆಗಳಿಂದ ನೀರು ಹಾಳಾಗುತ್ತಿತ್ತು. ಇದನ್ನು ಅರಿತು ಚಿಕೇನಕೊಪ್ಪ ಗ್ರಾಮದವರು ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ, ಅಧಿಕಾರಿಗಳು, ಜನಪ್ರತಿನಿಧಿಗಳ ದಾರಿ ನೋಡದೇ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.

ಕೆರೆಯ ದಡದ ಸುತ್ತಲೂ 48 ಗಂಟೆಗಳಿಗೂ ಅಧಿಕ ಕಾಲ ಶ್ರಮದಾನ ಮಾಡಿದ್ದಾರೆ. ಸುಮಾರು 16 ಎಕರೆ ವಿಸ್ತೀರ್ಣದ ಕೆರೆ ಸ್ವಚ್ಛತೆಗೆ ಜನರ ಮುಂದೆ ನಿಂತು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಗ್ರಾಮದ ವೀರಪ್ಪ ಬೀಸನಳ್ಳಿ ಅವರು ಗ್ರಾಮದ ಕೆರೆ ಕಾರ್ಯಕ್ಕೆ ತಮ್ಮ ಹಿಟಾಚಿ ವಾಹನವನ್ನು ಕೊಟ್ಟಿದ್ದು, ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಡೀಸೆಲ್‌ ವ್ಯವಸ್ಥೆ ಮಾಡಿದ್ದಾರೆ. ನಿರಂತರ 48 ಗಂಟೆಗಳಿಗೂ ಅಧಿಕ ಕಾಲ ಹಿಟಾಚಿ ಯಂತ್ರದ ಮೂಲಕ ಕೆರೆಯ ದಡದಲ್ಲಿದ್ದ ಮುಳ್ಳುಕಂಟಿ ಹಾಗೂ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಐದು ಗ್ರಾಮಗಳ ಜನರಿಗೆ ಜೀವಜಲ: ಚಿಕೇನಕೊಪ್ಪ ಗ್ರಾಮದ ಈ ಕೆರೆ ಕೇವಲ ಒಂದು ಗ್ರಾಮದ ಆಸ್ತಿಯಲ್ಲ. ಚಿಕೇನಕೊಪ್ಪ ಸೇರಿದಂತೆ ಬಿನ್ನಾಳ, ಸಿದ್ನೇಕೊಪ್ಪ, ಭಟಪ್ಪನಹಳ್ಳಿ ಹಾಗೂ ಸೋಂಪುರ ಗ್ರಾಮಗಳ ಜನರು ಕೂಡ ಇದೇ ಕೆರೆಯ ನೀರನ್ನು ಬಳಸಿಕೊಂಡು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಹೀಗಾಗಿ ಐದು ಗ್ರಾಮಗಳ ಜನರ ಪಾಲಿಗೆ ಈ ಕೆರೆ ಮಹತ್ವದ ಜಲಮೂಲವಾಗಿದೆ.

ಸಹಕರಿಸಿದ್ದಾರೆ: ಪೂರ್ವಜರ ಕೊಡುಗೆಯನ್ನು ಉಳಿಸುವ ಜವಾಬ್ದಾರಿ ನಮ್ಮದು. ನಮ್ಮ ಪೂರ್ವಜರು ನಿರ್ಮಿಸಿದ ಈ ಕೆರೆಗೆ ತನ್ನದೇ ಆದ ಇತಿಹಾಸವಿದೆ. ಕೆರೆಯ ನೀರು ನಮ್ಮ ಪಾಲಿಗೆ ಜೀವಾಮೃತವಿದ್ದಂತೆ. ಇಂತಹ ಅಮೂಲ್ಯ ಜಲಮೂಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕೆರೆ ಸ್ವಚ್ಛತೆಗೆ ಗ್ರಾಮದ ವೀರಪ್ಪ ಬಿಸನಳ್ಳಿ ಅವರು ಹಿಟಾಚಿ ಯಂತ್ರ ನೀಡಿದ್ದಾರೆ. ಗ್ರಾಮಸ್ಥರು ಕೂಡ ವೈಯಕ್ತಿಕವಾಗಿ ದೇಣಿಗೆ ನೀಡಿ ಸಹಕರಿಸಿದ್ದಾರೆ ಎಂದು ಚಿಕೇನಕೊಪ್ಪ ಗ್ರಾಮಸ್ಥ ಬಸಪ್ಪ ವಕ್ಕಳದ ಹೇಳಿದರು.

ಸಂರಕ್ಷಣೆಗೆ ಕೈಜೋಡಿಸಿ: ಕೆರೆ ನಮ್ಮ ಗ್ರಾಮದ ಜೀವನಾಡಿ. ಅದರ ಮಹತ್ವ ಅರಿತು ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಮುಂದೆಯೂ ಕೆರೆಯ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಬರಗಾಲದ ಈ ದಿನದಲ್ಲಿ ನೀರನ್ನು ಕಾಯ್ದುಕೊಳ್ಳುವುದು ಸಹ ಜವಾಬ್ದಾರಿ ಆಗಿದೆ ಎಂದು ಚಿಕೇನಕೊಪ್ಪ ಗ್ರಾಮಸ್ಥ ವೀರಪ್ಪ ಬಿಸನಳ್ಳಿ ಹೇಳಿದರು.