;Resize=(412,232))
ಬೆಂಗಳೂರು : ನನಗಾಗಲಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟದ ಕೈಗಡಿಯಾರ (ವಾಚ್) ಧರಿಸುವ ಹಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದುಬಾರಿ ವಾಚ್ ಧರಿಸಿದ್ದರ ಬಗ್ಗೆ ಬಿಜೆಪಿ ಮಾಡಿರುವ ಟೀಕೆ ಕುರಿತಂತೆ ಬುಧವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಿಎಂ ಜತೆಗಿನ ಉಪಾಹಾರ ಸಭೆ ವೇಳೆ ನಾನು ಧರಿಸಿದ್ದ ವಾಚ್ ಅನ್ನು ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದ್ದೆ. ಅದನ್ನು ನನ್ನ ಕ್ರೆಡಿಟ್ ಕಾರ್ಡ್ ಮೂಲಕ 24 ಲಕ್ಷ ರು. ನೀಡಿ ಖರೀದಿ ಮಾಡಿದ್ದೇನೆ. ನನ್ನ ಕ್ರೆಡಿಟ್ ಕಾರ್ಡ್ ವಹಿವಾಟನ್ನು ಪರಿಶೀಲಿಸಲಿ. ನನ್ನ ಚುನಾವಣಾ ಅಫಿಡವಿಟ್‌ನಲ್ಲೂ ಈ ಬಗ್ಗೆ ನಮೂದಿಸಿದ್ದೇನೆ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ಇಷ್ಟವಾದ ವಾಚ್ ಧರಿಸುವ ಹಕ್ಕಿದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿಸಿರಬಹುದು ಎಂದರು.
ನಮ್ಮ ತಂದೆಗೆ ವಾಚ್‌ಗಳೆಂದರೆ ಬಹಳ ಇಷ್ಟ. ಅವರ ಬಳಿ ಏಳು ವಾಚ್‌ಗಳಿದ್ದವು. ಅವರ ನಂತರ ಅದನ್ನು ಯಾರು ಧರಿಸಬೇಕು? ನಾನು ಧರಿಸಬೇಕು, ಇಲ್ಲವೇ ನನ್ನ ಸೋದರ ಧರಿಸಬೇಕು. ಅದರಂತೆ ನಾವು ಅದನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.