ಬಿವೈವಿ ಹೇಳಿದಂತೆ 20ಕ್ಕೆ ಎಲ್ಲವೂ ಸರಿ ಹೋಗಲಿಲ್ಲ! ಬಿಜೆಪಿ ಯತ್ನಾಳ್‌ ಬಣ ಮತ್ತೆ ಉಲ್ಬಣ!

KannadaprabhaNewsNetwork | Updated : Feb 21 2025, 04:07 AM IST

ಸಾರಾಂಶ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದರಿಂದ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಇನ್ನೇನು ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಇದೀಗ ಮತ್ತೆ ಸಕ್ರಿಯವಾಗಿದೆ.

 ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದರಿಂದ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಇನ್ನೇನು ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಇದೀಗ ಮತ್ತೆ ಸಕ್ರಿಯವಾಗಿದೆ.

ಈ ತಿಂಗಳ 20ರೊಳಗಾಗಿ (ಗುರುವಾರ) ಗೊಂದಲ ಬಗೆಹರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಗುರುವಾರವೇ ಯತ್ನಾಳ್ ನೇತೃತ್ವದಲ್ಲಿ ಭಿನ್ನರು ಸಭೆ ನಡೆಸುವ ಮೂಲಕ ಸಡ್ಡು ಹೊಡೆದಿದ್ದಾರೆ.

ಈ ಮೂಲಕ ನೋಟಿಸ್ ನೀಡಿದರೂ ವಿಜಯೇಂದ್ರ ಬದಲಾವಣೆ ಮಾಡಬೇಕು ಎಂಬ ತಮ್ಮ ಬೇಡಿಕೆಯ ವಿಚಾರದಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಭಿನ್ನರು ನೀಡಿದ್ದಾರೆ. ಇದೇ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಪರ ಗಟ್ಟಿಯಾಗಿ ನಿಲ್ಲುತ್ತೇವೆ. ನೋಟಿಸ್‌ಗೆ ಹೆದರುವುದಿಲ್ಲ ಎಂಬ ತಿರುಗೇಟು ಕೊಡುವಲ್ಲೂ ಭಿನ್ನರು ಯಶಸ್ವಿಯಾಗಿದ್ದಾರೆ.

ಕುಮಾರ್‌ ಮನೆಯಲ್ಲಿ ಸಭೆ:

ಸದಾಶಿವನಗರದಲ್ಲಿನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಬಂಡಾಯ ನಾಯಕರೆಲ್ಲ ಸಭೆ ನಡೆಸಿದರು. ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್‌ ಅವರಿಗೆ ಪಕ್ಷದ ವರಿಷ್ಠರು ನೋಟಿಸ್ ಜಾರಿಗೊಳಿಸಿರುವ ಕುರಿತು ಗಂಭೀರವಾಗಿ ಚರ್ಚೆ ನಡೆಸಿದರು. ಯತ್ನಾಳ್ ಜತೆ ಗಟ್ಟಿಯಾಗಿ ಎಲ್ಲರೂ ನಿಂತುಕೊಳ್ಳಬೇಕು. ನೋಟಿಸ್ ನೀಡಿದರೂ ಚದುರಿ ಸುಮ್ಮನಾಗಬಾರದು. ಸುಮ್ಮನಾದರೆ ವಿಚಲಿತವಾಗುವ ಸಂದೇಶ ರವಾನೆಯಾಗಲಿದೆ ಎಂಬ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಂಡದಿಂದ ಹೊರತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಯತ್ನಾಳ್ ತಂಡದ ಶಕ್ತಿಯೇ ರಮೇಶ್ ಜಾರಕಿಹೊಳಿ. ಅವರನ್ನು ಸೆಳೆದು ಸಮಾಧಾನ ಮಾಡಿದರೆ ಯತ್ನಾಳ್ ಬಣದ ಶಕ್ತಿಗುಂದುತ್ತದೆ ಎಂಬುದು ವಿಜಯೇಂದ್ರ ಬಣದ ಚಿಂತನೆ. ಹೀಗಾಗಿ ನಮ್ಮ ತಂಡ ಒಗ್ಗಟ್ಟಿನಲ್ಲಿರಬೇಕು. ತಂಡ ಒಡೆಯುವ ಪ್ರಯತ್ನವನ್ನು ಬಿಜೆಪಿಯಲ್ಲೇ ಬೇರೆ ಬೇರೆ ರೀತಿ ನಡೆಸಲಾಗುತ್ತಿದೆ. ಇದಕ್ಕೆಲ್ಲ ಆಸ್ಪದ ನೀಡಬಾರದು ಎಂಬ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಬಿವೈವಿ ಬದಲಾವಣೆಯೇ ಅಜೆಂಡಾ:

ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವುದೇ ಬಂಡಾಯ ಬಣದ ಅಜೆಂಡಾ. ಇದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ವೈಯಕ್ತಿಕ ಕಾರಣಕ್ಕಾಗಿ ವಿಜಯೇಂದ್ರರನ್ನು ವಿರೋಧ ಮಾಡುತ್ತಿಲ್ಲ. ಬದಲಿಗೆ ಅವರು ಪಕ್ಷ ಸಂಘಟನೆಯಲ್ಲಿ ವಿಫಲವಾಗಿದ್ದಾರೆ ಎನ್ನುವುದು ಕಾರ್ಯಕರ್ತರಿಗೆ ಮನದಟ್ಟಾಗಬೇಕು ಎಂಬ ನಿರ್ಣಯಕ್ಕೆ ಯತ್ನಾಳ ತಂಡ ಬಂದಿದೆ ಮೂಲಗಳು ಮಾಹಿತಿ ನೀಡಿವೆ.

ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್‌, ಪ್ರತಾಪ್ ಸಿಂಹ, ಎನ್.ಆರ್.ಸಂತೋಷ್, ಬಿ.ವಿ.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ನೋಟಿಸ್‌ ಹಿಂದಿರುವ ಶಕ್ತಿ ವಿಜಯೇಂದ್ರ: ಯತ್ನಾಳ್‌

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್‌ ಮತ್ತೆ ಏಕವಚನದಲ್ಲಿಯೇ ಹರಿಹಾಯ್ದಿದ್ದಾರೆ. ‘ನನಗೆ ನೋಟಿಸ್ ಬಂದಿದೆ ಎಂಬುದಾಗಿ ಹೇಳೋಕೆ ವಿಜಯೇಂದ್ರ ಯಾರು? ನನಗೆ ನೋಟಿಸ್ ಬಂದಿದೆ ಎಂಬುದು ಆತಗೆ ಹೇಗೆ ಗೊತ್ತು? ಹಾಗಾದರೆ ಅವನೇ ತಾನೇ ನೋಟಿಸ್ ಹಿಂದಿರುವ ಶಕ್ತಿ’ ಎಂದು ಟೀಕಾಪ್ರಹಾರ ನಡೆಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ಬಾರಿ ನಕಲಿ ನೋಟಿಸ್ ಬಿಡುಗಡೆ ಮಾಡಿಸಿದ್ದೇ ಅವರು. ಈಗಿನ ನೋಟಿಸ್ ಬಗ್ಗೆ ನಾನು ಏನೂ ಹೇಳುವುದಿಲ್ಲ. ನೋಟಿಸ್ ಪ್ರತಿಯನ್ನು ಮಾಧ್ಯಮಗಳಿಗೆ ಕೊಟ್ಟಿದ್ದು ಯಾರು? ನೊಟೀಸ್‌ಗೆ ಉತ್ತರ ಕೊಟ್ಟಿದ್ದೀನಾ ಅಥವಾ ಬಿಟ್ಟಿದ್ದೀನಾ ಎಂಬುದನ್ನು ವಿಜಯೇಂದ್ರ ಬಳಿ ಕೇಳಿ. ನನ್ನ ಮೇಲ್‌ಗೆ ನೋಟಿಸ್ ಬರುವುದಕ್ಕಿಂತ ಮೊದಲು ಬಿಡುಗಡೆಯಾಗುತ್ತದೆ ಎಂದರೆ ಅದನ್ನು ವಿಜಯೇಂದ್ರನೇ ಮಾಡಿದ್ದಾನೆ. ವಿಜಯೇಂದ್ರ ಇಂಥ ಕೆಲಸ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಬೇಕಾ ಬಿಟ್ಟಿ ಮಾತನಾಡಿಸುವುದು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. 

ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಯತ್ನಾಳ್‌ ಬಣದ ಸಭೆ ತಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ನೀಡುವುದಾಗಿದೆ. ಒಬ್ಬರಿಗೆ ನೊಟೀಸ್ ನೀಡಿದರೆ ಮತ್ತೆ ಉಳಿದವರು ಸುಮ್ಮನಾಗುತ್ತಾರೆ ಎನ್ನುವ ಯೋಚನೆ ಸುಳ್ಳು. ಅದಕ್ಕಾಗಿ ಸಭೆ ನಡೆಸಲಾಗಿದೆ. ಅಲ್ಲದೆ, ಮತ್ತೊಮ್ಮೆ ಶೀಘ್ರ ಒಟ್ಟಿಗೆ ಸೇರುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬಂಡಾಯ ನಾಯಕರೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶವೇ ಮುಖ್ಯ

ವಕ್ಫ್‌ ಹೋರಾಟದ ಯಶಸ್ಸಿನ ಕುರಿತು ಸಭೆ: ಪ್ರತಾಪ್ ಈಗಾಗಲೇ ನಡೆಸಿದ ವಕ್ಫ್ ಹೋರಾಟ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು, ಮುಂದಿನ ಹೋರಾಟ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ವಿಚಾರವನ್ನಿಟ್ಟುಕೊಂಡು ಸಭೆ ನಡೆಸಲಾಯಿತೇ ಹೊರತು ಬೇರಾವುದೇ ವಿಚಾರಕ್ಕಾಗಿ ಅಲ್ಲ. ನಾವು ಸಭೆ ಸೇರಿದಾಗಲೆಲ್ಲ ಬಂಡಾಯ ಸಭೆ ಎನ್ನಲಾಗುತ್ತದೆ. ಈಗಾಗಲೇ ವಕ್ಫ್ ಹೋರಾಟ ನಡೆಸಿ ವಕ್ಫ್‌ ತಿದ್ದುಪಡಿ ಮಾಡುವ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವರದಿ ನೀಡಿದ್ದೇವೆ. ನಮ್ಮ ವಕ್ಫ್ ಹೋರಾಟ ಯಶಸ್ವಿಯಾಗಿದೆ. ಹೀಗಾಗಿ ನಾವೆಲ್ಲ ಸೇರಿ ಒಂದು ಕಾಫಿ ಕುಡಿದಿದ್ದೇವೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು. 

ಮುಂದಿನ ಸಭೆಯಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರ ಬಗ್ಗೆಯೂ ಕೂಲಂಕಷವಾಗಿ ಚರ್ಚೆ ಮಾಡುತ್ತೇವೆ. ಬೇರೆ ದೇಶದವರು ನಮ್ಮವರನ್ನು ವಾಪಸ್ ಕಳುಹಿದ್ದಾರೆ. ನಾವು ಅದನ್ನು ಒಪ್ಪಿದ್ದೇವೆ. ಆದರೆ ಬಾಂಗ್ಲಾದವರು ಮಾತ್ರ ಅವರು ನಮ್ಮವರಲ್ಲ ಎನ್ನುತ್ತಾರೆ. ಹೀಗಾಗಿ ಅಕ್ರಮವಾಗಿ ವಾಸ ಮಾಡುವವರ ಪತ್ತೆ ಕಾರ್ಯ ಆಗಬೇಕು ಆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಯತ್ನಾಳ್‌ಗೆ ಒಂದೇ ಸಲ ಉತ್ತರ ಕೊಡ್ತೀನಿ: ವಿಜಯೇಂದ್ರ ಗುಡುಗು

ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್‌ ಮಾತನಾಡಿದ್ದೆನ್ನೆಲ್ಲ ಪಟ್ಟಿ ಮಾಡಿಟ್ಟುಕೊಂಡು ಒಂದೇ ಬಾರಿ ಉತ್ತರಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್‌ ಮಾತನಾಡಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ಎಲ್ಲದ್ದಕ್ಕೂ ಒಂದೇ ಬಾರಿ ಉತ್ತರ ಕೊಡುತ್ತೇನೆ. ನಾನು ಪಕ್ಷದ ರಾಜ್ಯಾಧ್ಯಕ್ಷ. ಮಾಡಲು ಬೇಕಾದಷ್ಟು ಕೆಲಸ ಇದೆ. ಯತ್ನಾಳ್‌ ಹಿರಿಯರು. ಅವರು ನನಗೆ ಕೇಳಿದ ಪ್ರಶ್ನೆಗೆ ನಾನೇ ಸಮಯ ಬಂದಾಗ ಉತ್ತರಿಸುತ್ತೇನೆ ಎಂದರು.

Share this article