ಇಂದು ಯತ್ನಾಳ್‌ ಬಣದ ಸಭೆ ಕುತೂಹಲ - ಉಚ್ಚಾಟನೆ ವಾಪಸ್‌ಗಾಗಿ ವರಿಷ್ಠರಿಗೆ ಮೊರೆ ಹೋಗುವ ಕುರಿತು ಚರ್ಚೆ

ಸಾರಾಂಶ

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಶುಕ್ರವಾರ ಸಭೆ ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

 ಬೆಂಗಳೂರು :  ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಶುಕ್ರವಾರ ಸಭೆ ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಯತ್ನಾಳ್ ಅವರು ಭಾಗಿಯಾಗುವ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ. ಪಕ್ಷದ ಶಿಸ್ತು ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಉಚ್ಚಾಟನೆಗೊಂಡಿರುವ ಕಾರಣ ಯತ್ನಾಳ್‌ ಅವರೊಂದಿಗೆ ಸೇರಿ ಸಭೆ ನಡೆಸಿದರೆ ವರಿಷ್ಠರ ಕೆಂಗಣ್ಣಿಗೆ ಗುರಿಯಾಬೇಕಾದೀತು ಎಂಬ ಆತಂಕವೂ ಮುಖಂಡರಲ್ಲಿದೆ.

ಸದ್ಯದ ಮಾಹಿತಿ ಪ್ರಕಾರ ಯತ್ನಾಳ್ ಅವರ ಉಚ್ಚಾಟನೆಯನ್ನು ವಾಪಸ್ ಪಡೆದುಕೊಳ್ಳುವಂತೆ ವರಿಷ್ಠರಿಗೆ ಮನವಿ ಮಾಡುವ ಬಗ್ಗೆ ಅವರ ಬಣದ ಮುಖಂಡರು ಸಮಾಲೋಚನೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಯತ್ನಾಳ್‌ ಅವರು ಈಗ ಸ್ವತಂತ್ರ ಶಾಸಕರಾಗಿರುವುದರಿಂದ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ವದಂತಿ ಹಬ್ಬಿದ್ದರೂ ಅದನ್ನು ಅವರ ಆಪ್ತರು ಬಲವಾಗಿ ಅಲ್ಲಗಳೆದಿದ್ದಾರೆ. ರಾಜ್ಯ ರಾಜಕಾರಣದ ಅತಿರಥ ಮಹಾರಥರು ಸ್ವಂತ ರಾಜಕೀಯ ಪಕ್ಷ ಸ್ಥಾಪಿಸಿ ಮುಂದೇನು ಮಾಡಿದರು ಎಂಬುದು ಗೊತ್ತಿರುವ ಸಂಗತಿಯೇ. ಹೀಗಾಗಿ, ಆ ಸಾಹಸಕ್ಕೆ ಕೈಹಾಕುವುದಿಲ್ಲ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಹೀಗಾಗಿ, ಶತಾಯಗತಾಯ ಯತ್ನಾಳ್‌ ಅವರ ಉಚ್ಚಾಟನೆ ಆದೇಶ ವಾಪಸ್ ಪಡೆಯುವಂತೆ ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆಯೇ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯತ್ನಾಳ್‌ ಪರವಾಗಿ ಅವರ ಬಣದ ಮುಖಂಡರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸುವ ಬಗ್ಗೆಯೂ ಶುಕ್ರವಾರದ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಉಚ್ಚಾಟನೆ ವಾಪಸಿಗೆಪತ್ರ ಬರೆಸುತ್ತೇವೆ

ಹೈಮಾಂಡ್‌ ಕೈಗೊಂಡಿರುವ ನಿರ್ಣಯವನ್ನು ಪ್ರಶ್ನಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಶುಕ್ರವಾರ ಬೆಂಗಳೂರಿನಲ್ಲಿ ಸಭೆ ಸೇರಿ ಚರ್ಚೆ ಮಾಡುತ್ತೇವೆ. ಯತ್ನಾಳ್‌ ಕಡೆಯಿಂದ ಹೈಕಮಾಂಡ್‌ಗೆ ಪತ್ರ ಬರೆಸಿ, ಉಚ್ಚಾಟನೆ ಮರುಪರಿಶೀಲಿಸುವಂತೆ ಮನವಿ ಮಾಡುತ್ತೇವೆ. ಈಗಾಗಲೇ ಹೈಕಮಾಂಡ್‌ ಜತೆ ಮಾತನಾಡಿದ್ದೇನೆ.

- ರಮೇಶ್‌ ಜಾರಕಿಹೊಳಿ, ಮಾಜಿ ಸಚಿವ

ನನ್ನ ಉಚ್ಚಾಟನೆ

ದ್ವಂದ್ವ ನಿಲುವು

ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರನ್ನು ಉಚ್ಚಾಟಿಸದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂಥವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ.

-ಬಸನಗೌಡ ಪಾಟೀಲ್ ಯತ್ನಾಳ, ಶಾಸಕ

Share this article