ನೀವು ಅರ್ಜಿ ಹಾಕಿ ಸಾಕು, ನಾವು ಗೆಲ್ಲಿಸಿಕೊಂಡು ಬರುತ್ತೇವೆ: ಮಾಜಿ ಸಂಸದ ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Mar 16, 2024, 01:47 AM IST
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು | Kannada Prabha

ಸಾರಾಂಶ

ಹೊಟ್ಟೆಪಾಡಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸೇರಿದ್ದಾರೆ ಎಂದು ಹೇಳುವ ನೀವು, ಕುಮಾರಸ್ವಾಮಿ ಇಲ್ಲದಿದ್ದರೆ ರಾಜಕೀಯದಲ್ಲೇ ಇರುತ್ತಿರಲಿಲ್ಲ. ನಿಮಗೆ ರಾಜಕೀಯವಾಗಿ ಭವಿಷ್ಯ ರೂಪಿಸಿ, ನಿಮ್ಮನ್ನು ರಾಜ್ಯದ ನಾಯಕರನ್ನಾಗಿ ಮಾಡಿದವರ ಬಗ್ಗೆಯೇ ಹಗುರವಾಗಿ ಮಾತನಾಡುತ್ತೀರಾ?, ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾವೂ ಸೇರಿದಂತೆ ಜಿಲ್ಲೆಯ ಮತದಾರರ ಅಭಿಪ್ರಾಯ ಒಂದೇ, ಅದು ಕುಮಾರಣ್ಣ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಬೇಕೆಂಬುದು. ನೀವು ಅರ್ಜಿ ಹಾಕಿ ಸಾಕು, ನಾವು ಚುನಾವಣೆ ನಡೆಸಿ, ಅತ್ಯಂತ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಆದ್ಯತೆ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕು. ಇಲ್ಲವಾದಲ್ಲಿ ಅವರು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆ ನಾವೆಲ್ಲರೂ ಹೊರುತ್ತೇವೆ ಎಂದು ಭರವಸೆ ನೀಡಿದರು.

ಹೊಟ್ಟೆಪಾಡಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸೇರಿದ್ದಾರೆ ಎಂದು ಹೇಳುವ ನೀವು, ಕುಮಾರಸ್ವಾಮಿ ಇಲ್ಲದಿದ್ದರೆ ರಾಜಕೀಯದಲ್ಲೇ ಇರುತ್ತಿರಲಿಲ್ಲ. ನಿಮಗೆ ರಾಜಕೀಯವಾಗಿ ಭವಿಷ್ಯ ರೂಪಿಸಿ, ನಿಮ್ಮನ್ನು ರಾಜ್ಯದ ನಾಯಕರನ್ನಾಗಿ ಮಾಡಿದವರ ಬಗ್ಗೆಯೇ ಹಗುರವಾಗಿ ಮಾತನಾಡುತ್ತೀರಾ?, ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

೨೦೦೬ರಲ್ಲಿ ದೇವೇಗೌಡರ ಮನಸೊಡೆದು, ಆರೋಗ್ಯ ಕೆಡಿಸಿ ಕುಮಾರಸ್ವಾಮಿ ಅವರನ್ನು ಬಿಜೆಪಿಗೆ ಯಾಕೆ ಕರೆದೊಯ್ದಿರಿ? ಎಲ್ಲಿದ್ದೀಯಾ ಬಾ ಎಂದು ದೇವೇಗೌಡರು ಕರೆದರೂ ಅವರ ಮಾತಿಗೆ ಬೆಲೆ ಕೊಡದೆ, ಜಾ.ದಳದ ಎಲ್ಲ ಶಾಸಕರನ್ನೂ ಗೋವಾಕ್ಕೆ ಕರೆದೊಯ್ದಿದಿರಿ. ವಿಶೇಷ ವಿಮಾನ ಮಾಡಿಕೊಂಡು ಕುಮಾರಸ್ವಾಮಿ ನಾನು ಬಂದೆವು. ಮನೆ ಒಡೆದಂತಹ ಸಚಿವರು, ಇಂದು ಇಷ್ಟು ಹಗುರವಾಗಿ ನಮ್ಮ ನಾಯಕರ ಬಗ್ಗೆ ಮಾತನಾಡುತ್ತಾರೆ ಎಂದರೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಎರಡು ಪ್ರಮುಖ ಖಾತೆಗಳ ಸಚಿವರಾಗಿದ್ದರೂ ೨೦೧೩ರ ಚುನಾವಣೆಯಲ್ಲಿ ಸುರೇಶ್‌ಗೌಡರ ಎದುರು ಸೋತಿರಿ. ಕಾಲ ಹೀಗೇ ಇರಲ್ಲ. ಮೊದಲು ನೀವು ನಡೆದು ಬಂದ ದಾರಿ, ನಿಮ್ಮನ್ನು ಬೆಳೆಸಿದವರನ್ನು ನೆನೆಯಿರಿ. ಇಲ್ಲದಿದ್ದಲ್ಲಿ ಕಾಲವೇ ಎಲ್ಲವನ್ನೂ ಅರ್ಥ ಮಾಡಿಸಲಿದೆ ಎಂದು ಎಚ್ಚರಿಕೆ ನೀಡಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ