;Resize=(412,232))
ಮದುರೈ: ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ಪ್ರತಿಷ್ಠಿತ ತನಿಷ್ಕ್ ಚಿನ್ನಾಭರಣ ಮಳಿಗೆಯಿಂದ 15 ಕೋಟಿ ರು. ಮೌಲ್ಯದ, 12 ಕೆಜಿ ಚಿನ್ನ ಮತ್ತು ವಜ್ರಾಭರಣಗಳನ್ನು ಕಳ್ಳತನ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ಮದುರೈನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಈ ಪ್ರಕರಣವನ್ನು ಭೇದಿಸಿದ ಪೊಲೀಸರು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ಮೀನಾಕ್ಷಿಯನ್ನು ಬಂಧಿಸಿದ್ದಾರೆ. ಕಳ್ಳತನದ ಪ್ರಮುಖ ಸೂತ್ರಧಾರಿಯಾಗಿರುವ ಆಕೆಯ ಪ್ರಿಯಕರ ನಿಶಾಂತ್ ತಲೆಮರೆಸಿಕೊಂಡಿದ್ದಾನೆ.
15 ದಿನಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಚಿನ್ನದ ಮಳಿಗೆಯಲ್ಲಿ ನ.11ರ ರಾತ್ರಿಯಷ್ಟೇ 42 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಭರ್ತಿ ಮಾಡಲಾಗಿತ್ತು. ಮರುದಿನ ದರೋಡೆ ಮಾಡಿದ ಕಳ್ಳ, ಪ್ರದರ್ಶನಕ್ಕಿಟ್ಟಿದ್ದ ಸುಮಾರು 12 ಕೆಜಿ ಚಿನ್ನ ಮತ್ತು ವಜ್ರಾಭರಣಗಳನ್ನು ದೋಚಿ, ಲಾಕರ್‌ಗಳಲ್ಲಿದ್ದ ಆಭರಣಗಳನ್ನು ಮುಟ್ಟದೆ ಹಿಂಬಾಗಿಲಿನಿಂದ ಪರಾರಿಯಾಗಿದ್ದ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಯೂಟ್ಯೂಬರ್ ಮೀನಾಕ್ಷಿಯನ್ನು ಬಂಧಿಸಿ, ಆಕೆಯಿಂದ 5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ನಿಶಾಂತ್‌ನ ತಂದೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ನಿಶಾಂತ್‌ಗಾಗಿ ಬಲೆ ಬೀಸಲಾಗಿದೆ.