;Resize=(412,232))
ಮೋದಿಯವರದ್ದು ತೀರಾ ತಳಮಟ್ಟದ ಚಿಂತನೆ. ಅವರ ಚಿಂತನೆಯಿಂದ ಮೂಡಿಬಂದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೇಂದ್ರೀಕರಿಸಿರುತ್ತವೆ. ಭಾರತೀಯ ಜನಸಂಘದ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಂತ್ಯೋದಯದ ಪರಿಕಲ್ಪನೆಯನ್ನು ದೇಶಕ್ಕೆ ನೀಡಿದ್ದರು. ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪದೇ ಇದ್ದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರ ಚಿಂತನೆಯಾಗಿತ್ತು. ಅದನ್ನು ಮೋದಿ ಯಥಾವತ್ತಾಗಿ ಅನುಷ್ಠಾನ ಮಾಡಿದ್ದಾರೆ.
ವಿಶ್ವಾಸ ಮತ್ತು ವಿಕಾಸ ಮೋದಿ ಆಡಳಿತದ ಬುನಾದಿ । ಸರ್ವ ಸಮರ್ಥ ರಾಷ್ಟ್ರ ನಿರ್ಮಾಣವೇ ಗುರಿ
ಹಿಂದೂ ಪರಂಪರೆಯಲ್ಲಿ 12 ಎಂಬ ಸಂಖ್ಯೆಗೆ ವಿಶೇಷ ಮಹತ್ವವಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ ವಿಶೇಷವಾದುದು. 12 ರಾಶಿಗಳ ಮೂಲಕ ಜನರು ತಮ್ಮ ಭವಿಷ್ಯ ನೋಡಿಕೊಳ್ಳುತ್ತಾರೆ. ದೇಶದಲ್ಲಿ 12 ಕಡೆಗಳಲ್ಲಿ ಜ್ಯೋತಿರ್ಲಿಂಗಗಳಿವೆ. ಹೀಗೆ 12 ಎಂಬುದಕ್ಕೆ ನಮ್ಮಲ್ಲಿ ವಿವಿಧ ರೀತಿಯಲ್ಲಿ ಪ್ರಾಮುಖ್ಯ ಇದೆ. 12 ಎಂಬುದೇ ಸುಧಾರಣೆಯ ಸಂಕೇತ, ಹೊಸತನದ ಗುರುತು. ಪ್ರಧಾನಿ ನರೇಂದ್ರ ಮೋದಿಯವರು ಈವರೆಗೆ ನೀಡಿದ 12 ವರ್ಷಗಳ ಆಡಳಿತ, ಭಾರತದಲ್ಲಿ ಅತ್ಯಂತ ಮಹತ್ವದ ಸುಧಾರಣೆಗಳನ್ನು, ಬದಲಾವಣೆಗಳನ್ನು, ಕ್ರಾಂತಿಗಳನ್ನು ತಂದಿದೆ. ಈ 12 ವರ್ಷಗಳು ಎಂದರೆ ಪ್ರಗತಿಯ ಕಡೆಗೆ ಭಾರತ ಹಾಕಿದ ದಾಪುಗಾಲು ಎಂದೇ ಹೇಳಬೇಕು. ಅಂತಹ ಆಡಳಿತ ನೀಡಿರುವ ಪ್ರಧಾನಿ ಮೋದಿ ವಿಕಸಿತ ಭಾರತದ ಗುರಿಯೊಂದಿಗೆ ಸಾಗಿದ್ದಾರೆ.
ಕಳೆದ 60 ವರ್ಷಗಳಲ್ಲಿ ಯಾವುದೇ ಸರ್ಕಾರಗಳು ಮಾಡಲು ಸಾಧ್ಯವಾಗದ್ದನ್ನು ಈ 12 ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿ ತೋರಿಸಿದ್ದಾರೆ. ಒಬ್ಬ ವ್ಯಕ್ತಿಗೆ ರಾಷ್ಟ್ರೀಯತೆಯ ಚಿಂತನೆಯ ಜೊತೆಗೆ ರಾಜಕೀಯದ ಅಧಿಕಾರ ಸಿಕ್ಕರೆ ಎಷ್ಟೆಲ್ಲ ಸುಧಾರಣೆ ತರಬಹುದು ಎಂಬುದಕ್ಕೆ ಅವರಷ್ಟು ದೊಡ್ಡ ಉದಾಹರಣೆ ಬೇರೆ ಬೇಕಿಲ್ಲ.
ಪ್ರಧಾನಿ ಎಂದರೆ ಸಂಸತ್ತಿನ ಸದಸ್ಯರಿಂದ ಆಯ್ಕೆಯಾಗುವ ನಾಯಕ, ಅವನೆಂದೂ ನಮ್ಮ ಬಳಿ ಬರಲು ಸಾಧ್ಯವಿಲ್ಲ ಎಂದು ಭಾರತೀಯರು ಅಂದುಕೊಂಡಿದ್ದರು. ಅಂತಹ ರಾಜಕೀಯ ವ್ಯವಸ್ಥೆ ನಮ್ಮಲ್ಲಿತ್ತು. ಅದನ್ನು ಮೊದಲು ತೊಡೆದುಹಾಕಿದವರು ಅಟಲ್ ಬಿಹಾರಿ ವಾಜಪೇಯಿ. ಸಾಮಾನ್ಯ ನೆಲೆಯಿಂದ ಬಂದ ವ್ಯಕ್ತಿ ಪ್ರಧಾನಿ ಹುದ್ದೆಯನ್ನೂ ಏರಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಆ ನಂತರ ಚಹಾ ಮಾರುವ ಬಡ ವ್ಯಕ್ತಿ ಕೂಡ ಪ್ರಧಾನಿಯಾಗಬಲ್ಲ ಎಂಬುದನ್ನು ನರೇಂದ್ರ ಮೋದಿ ತೋರಿಸಿಕೊಟ್ಟರು. ಅವರು ಪ್ರಧಾನಿಯಾದ ಕೂಡಲೇ ಮಾಡಿದ ಮೊದಲ ಕೆಲಸ ಜನರಲ್ಲಿ ವಿಶ್ವಾಸವನ್ನು ತರುವುದು.
ಸ್ವಚ್ಛ ಭಾರತ ಯೋಜನೆ ಹಿಂದೆಯೂ ಇತ್ತು. ಆದರೆ ಜನರಲ್ಲಿ ಈ ದೇಶ ಸ್ವಚ್ಛವಾಗುತ್ತದೆ, ಜನರಲ್ಲಿ ಸ್ವಚ್ಛತೆಯ ಬಗ್ಗೆ ನಾಗರಿಕಪ್ರಜ್ಞೆ ಬರುತ್ತದೆ ಎಂಬ ವಿಶ್ವಾಸವೇ ಇರಲಿಲ್ಲ. ಆಗ ಮೋದಿ ಸ್ವತಃ ಕೈಯಲ್ಲಿ ಪೊರಕೆ ಹಿಡಿದು ಗುಡಿಸಿ ನಾನು ಕೂಡ ಪೌರಕಾರ್ಮಿಕ ಎಂದು ತೋರಿಸಿಕೊಟ್ಟರು. ಅಂದಿನಿಂದ ಕಾರ್ಪೊರೆಟ್ ಕಂಪನಿಗಳು, ಸಂಘಟನೆಗಳು ವಾರಾಂತ್ಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದನ್ನು ಹವ್ಯಾಸ ಮಾಡಿಕೊಂಡವು. ಇದೇ ಯೋಜನೆಯಡಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಘನತೆ ಎತ್ತಿ ಹಿಡಿಯಲಾಯಿತು. ಫಿಟ್ ಇಂಡಿಯಾದ ವಿಚಾರದಲ್ಲೂ ಪ್ರಧಾನಿ ಮೋದಿ ಜನರಲ್ಲಿ ವಿಶ್ವಾಸ ಮೂಡಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ತಾವೇ ಯೋಗ ಮಾಡಿ ತೋರಿಸಿ, ನಿತ್ಯ ವ್ಯಾಯಾಮದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.
ಕೋವಿಡ್ ಸಮಯದಲ್ಲಿ ಕೊರೊನಾ ಸೇನಾನಿಗಳಿಗೆ ಧನ್ಯವಾದ ಸಲ್ಲಿಸಲು ನೀಡಿದ್ದ ಕರೆ, ನೋಟು ರದ್ದತಿ ಸಮಯದಲ್ಲಿ ಜನರಲ್ಲಿ ತುಂಬಿದ್ದ ಧೈರ್ಯ.. ಹೀಗೆ ಅನೇಕ ಸಮಯದಲ್ಲಿ ಅವರು ಜನರ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತಿದ್ದರು. ಪಹಲ್ಗಾಂನಲ್ಲಿ ಭಯೋತ್ಪಾದಕ ದಾಳಿಯಾದಾಗ ಜನರು ಭೀತಿಗೊಳಗಾಗಿದ್ದರು. ಆ ಸಮಯದಲ್ಲಿ ಅವರು ನೀಡಿದ ಸಂದೇಶ ಎಲ್ಲರ ಮನಸ್ಸನ್ನು ಒಂದುಗೂಡಿಸಿತ್ತು. ಆಪರೇಶನ್ ಸಿಂದೂರದಿಂದಾಗಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಹೆಚ್ಚಾಯಿತು. ವಿಕಾಸದ ಜೊತೆಗೆ ವಿಶ್ವಾಸ ಒಂದಾಗಿ ಸಾಗುವುದರ ಮಹತ್ವವನ್ನು ಪ್ರಧಾನಿ ಮೋದಿಯವರಷ್ಟು ಸಮರ್ಥವಾಗಿ ಯಾರೂ ಸಾರಿಲ್ಲ.
ಜನರೊಂದಿಗೆ ನೇರ ಸಂಪರ್ಕ:
ಜನರೊಂದಿಗೆ ನೇರ ಸಂಪರ್ಕ ಸಾಧಿಸುವುದರಲ್ಲಿ ಪ್ರಧಾನಿ ಮೋದಿ ನಿಷ್ಣಾತರು. ಇಂದಿನ ಕಾಲದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿಬಿಟ್ಟರೆ ಆತ ಜನರೊಂದಿಗೆ ಒಡನಾಡುವುದನ್ನೇ ಮರೆತುಬಿಡುತ್ತಾನೆ. ಆದರೆ ಮೋದಿ ಪ್ರಧಾನಿ ಹುದ್ದೆಯಲ್ಲಿದ್ದರೂ ಅವರ ಕಣ್ಣು ಕುರ್ಚಿಯ ಕಡೆಗೆ ಇರದೆ ಸಾಮಾನ್ಯರ ಮೇಲೆ ನೆಟ್ಟಿರುತ್ತದೆ. ಅವರು ಯಾವುದೇ ಸಭೆ, ಸಮಾರಂಭಕ್ಕೆ ಹೋದಾಗ ಎಂತಹ ಭದ್ರತೆ ಇದ್ದರೂ, ಅವರ ಅಭಿಮಾನಿಗಳು ಕೊಡುವ ಉಡುಗೊರೆಗಳನ್ನು ಸ್ವೀಕರಿಸದೇ ಹೋಗುವುದಿಲ್ಲ. ಪ್ರತಿ ತಿಂಗಳು ಮನ್ ಕೀ ಬಾತ್ ನಡೆಸಿ ಜನರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಪರೀಕ್ಷೆಯ ಸಮಯದಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ಚರ್ಚೆ ಮಾಡುತ್ತಾರೆ.
ಯುದ್ಧದ ಪರಿಣಾಮವಾಗಿ ತೈಲ ಕೊರತೆ ಉಂಟಾದಾಗ ಮೋದಿಯವರು ಯಾವುದೇ ಮುಜುಗರವಿಲ್ಲದೆ ತೈಲ ಬಳಕೆ ಕಡಿಮೆ ಮಾಡಲು ಮನವಿ ಮಾಡಿದ್ದರು. ಇದಕ್ಕೆ ಕಟುಟೀಕೆಗಳನ್ನು ಎದುರಿಸಬೇಕಾಗಬಹುದು ಎಂಬ ಅರಿವು ಅವರಿಗೆ ಇದ್ದೇ ಇತ್ತು. ಆದರೂ ಜನರೊಂದಿಗೆ ನೇರವಾಗಿ ಮನದ ಮಾತುಗಳನ್ನು ಹಂಚಿಕೊಳ್ಳುವ ಅವರು, ಈ ಬಾರಿಯೂ ದೇಶ ಸಂಕಷ್ಟದಲ್ಲಿರುವ ವಿಷಯವನ್ನು ಹೇಳಿಕೊಳ್ಳಲು ಯಾವುದೇ ರಾಜಕೀಯ ಮುಂದಾಲೋಚನೆ ಮಾಡಲಿಲ್ಲ. ಆದರೆ ಇದನ್ನೇ ದೊಡ್ಡ ತಪ್ಪು ಎಂಬಂತೆ ವಿರೋಧ ಪಕ್ಷಗಳು ಬಿಂಬಿಸಿದವು. ಟೀಕೆ, ಅಪವಾದಗಳು ಬರಲಿವೆ ಎಂದು ಗೊತ್ತಿದ್ದರೂ, ಜನರೊಂದಿಗೆ ಪ್ರಾಮಾಣಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳುವುದು ಹಾಗೂ ಜನಹಿತಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದೇ ಪ್ರಧಾನಿಗೆ ಮುಖ್ಯವಾಯಿತು. ನಿಜವಾದ ನಾಯಕತ್ವ ಎಂದರೆ ಹೀಗೆ ಜನರ ಮುಂದೆ ತೆರೆದ ಪುಸ್ತಕದಂತೆ ಬದುಕುವುದು.
ತಳಮಟ್ಟದ ಚಿಂತನೆ
ಮೋದಿಯವರದ್ದು ತೀರಾ ತಳಮಟ್ಟದ ಚಿಂತನೆ. ಅವರ ಚಿಂತನೆಯಿಂದ ಮೂಡಿಬಂದ ಯೋಜನೆಗಳು ಯಾವಾಗಲೂ ಸಮಾಜದ ಕಟ್ಟ ಕಡೆಯ ಜನರನ್ನು ಕೇಂದ್ರೀಕರಿಸಿರುತ್ತವೆ. ಭಾರತೀಯ ಜನಸಂಘದ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಂತ್ಯೋದಯದ ಪರಿಕಲ್ಪನೆಯನ್ನು ದೇಶಕ್ಕೆ ನೀಡಿದ್ದರು. ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪದೇ ಇದ್ದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರ ಚಿಂತನೆಯಾಗಿತ್ತು. ಅದನ್ನು ಪ್ರಧಾನಿ ಮೋದಿ ಯಥಾವತ್ತಾಗಿ ಅನುಷ್ಠಾನ ಮಾಡಿದ್ದಾರೆ.
ಜಲಜೀವನ್ ಮಿಷನ್ ಕೂಡ ಅಂಥದ್ದೇ ಯೋಜನೆ. ಗ್ರಾಮೀಣ ಮಹಿಳೆಯರು ಬಹಳ ದೂರ ನಡೆದು ನೀರನ್ನು ಹೊತ್ತು ತರುತ್ತಿದ್ದರು. ಅಂತಹ ಕುಟುಂಬಗಳಿಗೆ ಮನೆಗೆ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 2019ರಿಂದ ಈವರೆಗೆ ಹೊಸದಾಗಿ ಗ್ರಾಮೀಣ ಭಾಗಗಳಲ್ಲಿ 12.5 ಕೋಟಿ ಕೊಳಾಯಿ ಸಂಪರ್ಕ ಸಿಕ್ಕಿದೆ. ಪಿಎಂ ಆವಾಸ್ ಯೋಜನೆಯಡಿ 4 ಕೋಟಿಗೂ ಅಧಿಕ ಮನೆಗಳನ್ನು ಬಡವರಿಗೆ ನಿರ್ಮಿಸಿಕೊಡಲಾಗಿದೆ. ಒಲೆಯಲ್ಲಿ ಬೆಂಕಿ ಉರಿಸಲು ಗಾಳಿ ಊದಿಕೊಂಡು ಕೆಮ್ಮುತ್ತಿದ್ದ ಮಹಿಳೆಯರ ಆರೋಗ್ಯವನ್ನು ಉಜ್ವಲಾ ಯೋಜನೆ ಸುಧಾರಿಸಿದೆ. ಇದರಲ್ಲಿ 10.5 ಕೋಟಿಗೂ ಅಧಿಕ ಎಲ್ಪಿಜಿ ಸಂಪರ್ಕ ನೀಡಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ 32 ಕೋಟಿಗೂ ಅಧಿಕ ಜನಧನ ಖಾತೆಗಳ ಆರಂಭವಾಗಿದೆ. 3 ಕೋಟಿಗೂ ಹೆಚ್ಚು ಲಕ್ಷಾಧಿಪತಿ ದೀದಿಯರು, 91 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಮೂಲಕ 10 ಕೋಟಿ ಗ್ರಾಮೀಣ ಮಹಿಳೆಯರ ಸಬಲೀಕರಣ ನಡೆದಿದೆ. ಹೀಗೆ ಮಹಿಳೆಯರ ಘನತೆ, ಗೌರವ ಕಾಪಾಡುವುದರಲ್ಲಿ ಮೋದಿ ಸರ್ಕಾರ ಮುಂಚೂಣಿಯಲ್ಲಿದೆ.
ರೈತರ ಸಬಲೀಕರಣಕ್ಕಾಗಿ ತಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಈವರೆಗೆ 22 ಕಂತುಗಳನ್ನು ನೀಡಲಾಗಿದೆ. ಒಟ್ಟಾರೆಯಾಗಿ 9.32 ಕೋಟಿ ರೈತರಿಗೆ 4.3 ಲಕ್ಷ ಕೋಟಿ ರು. ವಿತರಣೆಯಾಗಿದೆ. 4 ಕೋಟಿಗೂ ಹೆಚ್ಚು ರೈತರಿಗೆ 2 ಲಕ್ಷ ಕೋಟಿ ರು. ಮೊತ್ತದ ಬೆಳೆ ವಿಮೆ ಸಿಕ್ಕಿದೆ. 8 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ದೊರೆತಿದೆ. ಆರೋಗ್ಯ ರಕ್ಷಣೆಗಾಗಿ ಜನರು ಹೆಚ್ಚು ಹಣ ಖರ್ಚು ಮಾಡುತ್ತಾರೆ. ಅದಕ್ಕಾಗಿ ತಂದ ಆಯುಷ್ಮಾನ್ ಭಾರತ್ ಯೋಜನೆಯಡಿ, 11.69 ಕೋಟಿ ರೋಗಿಗಳಿಗೆ 1.73 ಲಕ್ಷ ಕೋಟಿ ರು. ವಿಮೆ ಸಿಕ್ಕಿದೆ. ಇದೇ ಯೋಜನೆಯಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಸಂಪೂರ್ಣ 5 ಲಕ್ಷ ರು. ವಿಮೆ ಸಿಕ್ಕಿದೆ. ದೇಶಾದ್ಯಂತ 19,000ಕ್ಕೂ ಅಧಿಕ ಜನೌಷಧಿ ಮಳಿಗೆಗಳಿದ್ದು, ಶೇ.90ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳು ದೊರೆಯುತ್ತಿವೆ.
ಹೀಗೆ ಕೇಂದ್ರ ಸರ್ಕಾರದ ಪ್ರತಿ ಯೋಜನೆಯಲ್ಲೂ ನರೇಂದ್ರ ಮೋದಿಯವರ ಜನಕಾಳಜಿ ಎದ್ದು ಕಾಣುತ್ತದೆ. ಅವರು ಆರ್‌ಎಸ್‌ಎಸ್ ಸ್ವಯಂಸೇವಕರಾಗಿ ದೇಶ ಸುತ್ತುವಾಗಲೇ ಬಡತನವನ್ನು ಕಣ್ಣಾರೆ ಕಂಡಿದ್ದರು. ಸ್ವತಃ ಅವರೇ ಆ ಬಡತನವನ್ನು ಅನುಭವಿಸಿದ್ದರು. ಬಡತನದ ಹೆಸರಲ್ಲಿ ಯೋಜನೆಗಳನ್ನು ತಂದ ಸರ್ಕಾರಗಳು ಕೋಟಿಗಟ್ಟಲೆ ಕೊಳ್ಳೆ ಹೊಡೆದಿರುವುದನ್ನೂ ಕಂಡಿದ್ದರು. ನಮ್ಮ ಸಮಾಜಕ್ಕೆ ಶಾಪವಾದ ಬಡತನವನ್ನು ವಿವಿಧ ಯೋಜನೆಗಳ ಮೂಲಕ ನಿವಾರಿಸಲು ಅವರು ಶ್ರಮಿಸಿದ್ದಾರೆ. ಕಲ್ಯಾಣ ಕಾರ್ಯಕ್ರಮಗಳ ಪರಿಣಾಮವಾಗಿ ಸುಮಾರು 25 ಕೋಟಿ ಜನ ತೀವ್ರ ಬಡತನದಿಂದ ಹೊರಬಂದಿದ್ದಾರೆ. 2047ಕ್ಕೆ ಸಂಪೂರ್ಣ ಬಡತನ ನಿರ್ಮೂಲನೆ ಮಾಡುವ ಗುರಿ ಇದೆ.
ವಿಕಸನದ ಕಡೆ ಭಾರತದ ನಡೆ:
ಪ್ರಧಾನಿ ಮೋದಿಯವರಿಗೆ ವಿಶ್ರಾಂತಿ ಎಂಬುದಿಲ್ಲ. ಕಾಯಕ ಯೋಗಿಯಾಗಿ ದೇಶಕ್ಕಾಗಿ ದುಡಿಯುವ ಅವರು, ವಿಕಸಿತ ಭಾರತವನ್ನು ನಿರ್ಮಿಸುವ ಕಡೆಗೆ ಮನಸ್ಸು ನೆಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಸರ್ವ ಸಮರ್ಥ ದೇಶವಾಗಿ ಮಾಡುವುದು ಅವರ ಗುರಿ. ಆ ಗುರಿಯ ಕಡೆ ಹೆಜ್ಜೆ ಹಾಕಲು ಅವರ ಜೊತೆ ಕೋಟ್ಯಂತರ ಯುವಜನರು ನಿಂತಿದ್ದಾರೆ. 12 ವರ್ಷಗಳ ಸುಧಾರಣಾ ಕಾಲದಂತೆಯೇ ಇನ್ನು ಮುಂದೆ ವಿಕಸಿತ ಕಾಲ ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗಲಿದೆ.