ಹೆಮ್ಮಿಗೆಪುರ ಬಳಿ ಸ್ಕೈ ಡೆಕ್‌ಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಡ್ಡಿ ?

KannadaprabhaNewsNetwork |  
Published : Nov 07, 2024, 01:16 AM ISTUpdated : Nov 08, 2024, 07:28 AM IST
ಏರ್‌ಪೋರ್ಟ್‌ | Kannada Prabha

ಸಾರಾಂಶ

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಬೇಕು ಎಂಬ ಬಗ್ಗೆ ತೀವ್ರ ಪೈಪೋಟಿ ನಡೆದಿರುವ ಈ ಹಂತದಲ್ಲೇ ಕೆಂಗೇರಿ ಸಮೀಪದ ಹೆಮ್ಮಿಗೆಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಸ್ಕೈಡೆಕ್‌ ಬಹುತೇಕ ಕನಕಪುರ ರಸ್ತೆಗೆ ಸ್ಥಳಾಂತರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 ಬೆಂಗಳೂರು : ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಬೇಕು ಎಂಬ ಬಗ್ಗೆ ತೀವ್ರ ಪೈಪೋಟಿ ನಡೆದಿರುವ ಈ ಹಂತದಲ್ಲೇ ಕೆಂಗೇರಿ ಸಮೀಪದ ಹೆಮ್ಮಿಗೆಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಸ್ಕೈಡೆಕ್‌ ಬಹುತೇಕ ಕನಕಪುರ ರಸ್ತೆಗೆ ಸ್ಥಳಾಂತರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತನ್ಮೂಲಕ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಿಡದಿ, ರಾಮನಗರ ಭಾಗದಲ್ಲಿ ನಿರ್ಮಾಣವಾಗಲಿದೆಯೇ ಎಂಬ ಪ್ರಶ್ನೆ ಉದ್ಬವವಾಗಲು ಕಾರಣವಾಗಿದೆ.

ಉನ್ನತ ಮೂಲಗಳ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ನಿವಾರಣೆಗಾಗಿ ನಿರ್ಮಿಸಲು ಉದ್ದೇಶಿಸಿರುವ ಎರಡನೇ ವಿಮಾನ ನಿಲ್ದಾಣ ಬಿಡದಿ ಸೇರಿದಂತೆ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ ಸರ್ಕಾರದ ಮಟ್ಟದಲ್ಲಿ ಇದೆ.

ಹೀಗಾಗಿಯೇ ಸ್ಕೈಡೆಕ್‌ ಸ್ಥಳಾಂತರದ ವಿಚಾರ ಮುನ್ನೆಲೆಗೆ ಬಂದಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ 250 ಮೀಟರ್‌ ಎತ್ತರದ ಸ್ಕೈಡೆಕ್‌ ನಿರ್ಮಿಸಲು ಮುಂದಾಗಿದ್ದು, ಅದಕ್ಕಾಗಿ ಕೆಂಗೇರಿ ಬಳಿಯ ಹೆಮ್ಮಿಗೆಪುರದಲ್ಲಿ ಸ್ಥಳ ಗುರುತಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸಾರ್ವಜನಿಕರಿಂದ ಆಕ್ಷೇಪಣೆಯನ್ನು ಆಹ್ವಾನಿಸಿದೆ.

ಆದರೆ, ಇದೀಗ ಬಿಡದಿ ಸೇರಿದಂತೆ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಚರ್ಚೆ ಶುರುವಾಗಿದೆ. ಒಂದು ವೇಳೆ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ ವಿಮಾನ ನಿಲ್ದಾಣ ನಿರ್ಮಿಸಲು ನಿರ್ಧರಿಸಿದರೆ, ವಿಮಾನ ನಿಲ್ದಾಣದ 25 ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಹೈ ರೈಸ್‌ ಕಟ್ಟಡ ನಿರ್ಮಿಸಲು ಅನುಮತಿಯಿಲ್ಲ.

ಈ ಕಾರಣದಿಂದಲೇ ಸ್ಕೈಡೆಕ್‌ ನಿರ್ಮಾಣಕ್ಕಾಗಿ ಹೆಮ್ಮಿಗೆಪುರದ ಜತೆಗೆ ಹೊಸ ಜಾಗವನ್ನು ಗುರುತಿಸುವ ಕಾರ್ಯ ನಡೆಸಲಾಗುತ್ತಿದೆ. ಹೆಮ್ಮಿಗೆಪುರದಲ್ಲಿ ಸ್ಕೈಡೆಕ್‌ ನಿರ್ಮಿಸಲಾಗದಿದ್ದರೆ, ಕನಕಪುರ ರಸ್ತೆಯಲ್ಲಿನ ತಾತಗುಣಿಯ ರೋರಿಕ್‌ ಎಸ್ಟೇಟ್‌ನಲ್ಲಿ ಸ್ಕೈಡೆಕ್‌ ನಿರ್ಮಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಸ್ಕೈಡೆಕ್‌ ನಿರ್ಮಿಸಲು ಈ ಹಿಂದೆ ಎನ್‌ಜಿಇಎಫ್‌, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್‌, ಜಿಕೆವಿಕೆ, ರೇಸ್‌ಕೋರ್ಸ್‌, ಬೆಂಗಳೂರು ಅರಮನೆ ಆವರಣ ಹೀಗೆ ಹಲವು ಜಾಗಗಳನ್ನು ಗುರುತಿಸಲಾಗಿತ್ತು. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಚ್‌ಎಎಲ್‌ ವಿಮಾನ ನಿಲ್ದಾಣದ ಸುರಕ್ಷತೆ ದೃಷ್ಟಿಯಿಂದಾಗಿ ಆ ಸ್ಥಳಗಳಲ್ಲಿ ಸ್ಕೈಡೆಕ್‌ ನಿರ್ಮಾಣಕ್ಕೆ ಅನುಮತಿ ಸಿಗಲಿಲ್ಲ. ಅಂತಿಮವಾಗಿ ಹೆಮ್ಮಿಗೆಪುರದಲ್ಲಿ ಜಾಗ ಗುರುತಿಸಲಾಯಿತಾದರೂ ಇದೀಗ ಆ ಸ್ಥಳವನ್ನೂ ಬದಲಿಸುವ ಸಾಧ್ಯತೆಯಿದೆ.

2ನೇ ವಿಮಾನ ನಿಲ್ದಾಣ ನಿರ್ಮಾಣ ಏತಕ್ಕೆ?: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. 2023-24ನೇ ಸಾಲಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 3.75 ಕೋಟಿ ಜನರು ಬಳಕೆ ಮಾಡಿದ್ದಾರೆ. ಹೀಗೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಾಗಿ 2ನೇ ಟರ್ಮಿನಲನ್ನು ನಿರ್ಮಿಸಿ, ಸೇವೆಗೆ ನೀಡಲಾಗಿದೆ. ಈ ಕಾರಣದಿಂದಲೇ ಬೆಂಗಳೂರಿಗಾಗಿಯೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ