ಕನ್ನಡಪ್ರಭವಾರ್ತೆ ಬೆಂಗಳೂರು:
ಪ್ರತಿ ವರ್ಷ ಸತತ ನಾಲ್ಕು ವಾರಾಂತ್ಯಗಳಲ್ಲಿ ಅಮೆಜಾನ್ ವಿಜ್ಞಾನಿಗಳಿಂದ ನಡೆಸಲ್ಪಡುವ ಈ ಶಿಕ್ಷಣ ಅಭಿಯಾನವು ಒಟ್ಟಾರೆಯಾಗಿ 4 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದೆ. ಆರಂಭಿಕ ವರ್ಷದಲ್ಲಿ 3,927 ರಷ್ಟಿದ್ದ ಅರ್ಜಿಗಳ ಸಂಖ್ಯೆಯು, 2026ರ ವೇಳೆಗೆ 1.3 ಲಕ್ಷಕ್ಕೂ ಅಧಿಕಕ್ಕೆ ಏರಿಕೆಯಾಗುವ ಮೂಲಕ 34 ಪಟ್ಟು ಬೃಹತ್ ಬೆಳವಣಿಗೆ ಕಂಡಿದೆ. ಪ್ರಸ್ತುತ ಆರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಯೋಜನೆಯು, ಕಾಲೇಜು ಪಠ್ಯಕ್ರಮ ಮತ್ತು ಉದ್ಯಮಕ್ಕೆ ಅಗತ್ಯವಿರುವ ತಾಂತ್ರಿಕ ಸಾಮರ್ಥ್ಯದ ನಡುವಿನ ಅಂತರವನ್ನು ಯಶಸ್ವಿಯಾಗಿ ಕಡಿಮೆ ಮಾಡುತ್ತಿದೆ.
ವಿಶೇಷವೆಂದರೆ, ಈ ಉಚಿತ ತರಬೇತಿಯಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಮೊದಲ ವರ್ಷದಲ್ಲಿ ಸುಮಾರು 5,000 ರಷ್ಟಿದ್ದ ಯುವತಿಯರ ನೋಂದಣಿ ಸಂಖ್ಯೆಯು 2026 ರಲ್ಲಿ 55,000 ಕ್ಕೂ ಅಧಿಕ ತಲುಪಿದ್ದು, ಶೇ. 40 ಕ್ಕಿಂತ ಹೆಚ್ಚು ಪಾಲು ಹೊಂದಿದ್ದಾರೆ. ಈ ಸಮ್ಮರ್ ಸ್ಕೂಲ್ ಗೆ ಆಯ್ಕೆಯಾಗಲು ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಹಾಗೂ ಸುಧಾರಿತ ಕೋಡಿಂಗ್ ಪರೀಕ್ಷೆ ಎಂಬ ಎರಡು ಹಂತಗಳ ಕಠಿಣ ಮೌಲ್ಯಮಾಪನಕ್ಕೆ ಒಳಪಡುತ್ತಾರೆ. ಪ್ರತಿ ವರ್ಷ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ಪ್ರಮುಖ 3,000 ವಿದ್ಯಾರ್ಥಿಗಳನ್ನು ಮಾತ್ರ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಸೂಪರ್ ವೈಸ್ಡ್ ಲರ್ನಿಂಗ್, ಅನ್‌ಸೂಪರ್‌ವೈಸ್ಡ್ ಲರ್ನಿಂಗ್, ಡಿಪ್ ನ್ಯೂರಲ್ ನೆಟ್ ವರ್ಕ್ಸ್, ಜನರೇಟಿವ್ ಎಐ ಹಾಗೂ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ ಸೇರಿದಂತೆ ಒಟ್ಟು 8 ಪ್ರಮುಖ ಮಾಡ್ಯೂಲ್‌ಗಳನ್ನು ಕಲಿಯುತ್ತಾರೆ. ನೈಜ ಜಗತ್ತಿನಲ್ಲಿ ಎದುರಾಗುವ ಗ್ರಾಹಕರ ತಾಂತ್ರಿಕ ಸವಾಲುಗಳನ್ನು ಬಗೆಹರಿಸಲು ಈ ತರಬೇತಿ ಸಹಕಾರಿಯಾಗಿದೆ.ತರಬೇತಿ ಅವಧಿಯಲ್ಲಿ ಶ್ರೇಷ್ಠ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಅಮೆಜಾನ್ ನ ಸೈನ್ಸ್ ಹಾಗೂ ರಿಸರ್ಚ್ ವಿಭಾಗದ ನೇಮಕಾತಿ ವ್ಯವಸ್ಥೆಯಲ್ಲಿ ವಿಶೇಷ ಮುನ್ನಣೆ ಸಿಗಲಿದೆ. ಇದರಿಂದ ಕಲಿಕೆಯಿಂದ ನೇರವಾಗಿ ಉದ್ಯೋಗ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಸುಲಭ ಹಾದಿ ನಿರ್ಮಾಣವಾಗಿದೆ.
2023ರ ತರಬೇತಿ ಆವೃತ್ತಿಯಲ್ಲಿ ಪಾಲ್ಗೊಂಡು, ಪ್ರಸ್ತುತ ಅಮೆಜಾನ್‌ನಲ್ಲಿ ಅಪ್ಲೈಡ್ ಸೈಂಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಖುಷಿ ಗುಪ್ತಾ ತಮ್ಮ ಅನುಭವ ಹಂಚಿಕೊಳ್ಳುತ್ತಾ , ‘ಕೋಟಿಗಟ್ಟಲೆ ಗ್ರಾಹಕರ ನೈಜ ಸಮಸ್ಯೆಗಳನ್ನು ಮೆಷಿನ್ ಲರ್ನಿಂಗ್ ಹೇಗೆ ಪರಿಹರಿಸುತ್ತದೆ ಎಂಬುದನ್ನು ಹತ್ತಿರದಿಂದ ತಿಳಿಯಲು ಎಂಎಲ್ ಸಮ್ಮರ್ ಸ್ಕೂಲ್ ನನಗೆ ಅಪರೂಪದ ಅವಕಾಶ ನೀಡಿತು. ಅಮೆಜಾನ್ ವಿಜ್ಞಾನಿಗಳಿಂದ ನೇರವಾಗಿ ಕಲಿತದ್ದು ಅಪ್ಲೈಡ್ ಸೈನ್ಸ್ ಕ್ಷೇತ್ರದಲ್ಲಿ ನನ್ನ ವೃತ್ತಿಜೀವನಕ್ಕೆ ಗಟ್ಟಿ ಬುನಾದಿ ಹಾಕಿಕೊಟ್ಟಿತು. ಫರೀದಾಬಾದ್ ನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನಾನು, ಇಂದು ಅಮೆಜಾನ್ ನಲ್ಲಿ ಪೂರ್ಣಕಾಲಿಕ ಅಪ್ಲೈಡ್ ಸೈಂಟಿಸ್ಟ್ ಆಗಿ ಬೆಳೆದು ನಿಲ್ಲಲು ಈ ಕಾರ್ಯಕ್ರಮವೇ ಕಾರಣ’ ಎಂದರು.