ಬೆಂಗಳೂರು : ಪ್ರವಾಸಿಗರನ್ನು ಸೆಳೆಯುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್‌

KannadaprabhaNewsNetwork | Updated : Nov 15 2024, 07:47 AM IST

ಸಾರಾಂಶ

ಮರಗಿಡಗಳ ನಡುವೆ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು, ಒಂದೇ ಕಡೆ ಹತ್ತಾರು ಪ್ರಬೇಧದ ಪತಂಗಗಳು, ಅವುಗಳನ್ನು ಹತ್ತಿರದಿಂದ ಕಂಡು ಖುಷಿಪಡುತ್ತಿರುವ ಪ್ರವಾಸಿಗರು. ಇಂತಹ ರೋಮಾಂಚಕಾರಿ ದೃಶ್ಯಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ.

ಎಂ.ನರಸಿಂಹಮೂರ್ತಿ

ಬೆಂಗಳೂರು ದಕ್ಷಿಣ : ಮರಗಿಡಗಳ ನಡುವೆ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು, ಒಂದೇ ಕಡೆ ಹತ್ತಾರು ಪ್ರಬೇಧದ ಪತಂಗಗಳು, ಅವುಗಳನ್ನು ಹತ್ತಿರದಿಂದ ಕಂಡು ಖುಷಿಪಡುತ್ತಿರುವ ಪ್ರವಾಸಿಗರು. ಇಂತಹ ರೋಮಾಂಚಕಾರಿ ದೃಶ್ಯಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್ ಮುಖ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಕ್ಕಳೊಂದಿಗೆ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರಿಗೆ ಅತಿ ಹೆಚ್ಚು ಮುದ ನೀಡುವ ಪರಿಸರ ಸಮತೋಲನ ಹಾಗೂ ಹೂವಿನ ಪರಾಗ ಸ್ಪರ್ಷಕ್ಕೆ ಮೂಲ ಕಾರಣವಾದ ಅತ್ಯಂತ ಚಿಕ್ಕ ಕೀಟ ಪ್ರಪಂಚದ ಆಕರ್ಷಕ ಬಣ್ಣಬಣ್ಣದ ಚಿಟ್ಟೆಗಳು ಸ್ವಾಗತಿಸುತ್ತವೆ.

ಸುಂದರವಾದ ಚಿಟ್ಟೆ ಉದ್ಯಾನವನವನ್ನು7 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು, ಸುಮಾರು 1 ಕಿ.ಮೀ ಉದ್ದದ ಚಿಟ್ಟೆಯ ಜಾಡನ್ನು ಹೊಂದಿದೆ. 5 ಎಕರೆ ಉದ್ಯಾನದಲ್ಲಿ ಸ್ಥಾಪಿಸಲಾದ ಚಿಟ್ಟೆ ಟ್ರಯಲ್ ಸಂರಕ್ಷಣಾಲಯ, ವಸ್ತುಸಂಗ್ರಹಾಲಯ ಪ್ರವಾಸಿಗರಿಗೆ ಚಿಟ್ಟೆಯ ಸಮಗ್ರ ಮಾಹಿತಿ ನೀಡುತ್ತವೆ. ಇಲ್ಲಿ ಚಿಟ್ಟೆಯ ಬಗ್ಗೆ ಶಿಕ್ಷಣ, ಸಂರಕ್ಷಣೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಚಿಟ್ಟೆ ಪಾರ್ಕ್‌ಅನ್ನು ಸಂಪೂರ್ಣವಾಗಿ ನೋಡಲು ಸುಮಾರು 2 ಗಂಟೆಯ ಅವಧಿ ತಗಲುತ್ತದೆ. ಪಾರ್ಕ್ ಪ್ರವೇಶ ಮಾರ್ಗದಲ್ಲಿ ದೊಡ್ಡ ಚಿಟ್ಟೆ ಆಕಾರದ ಗೇಟ್ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಸುಂದರ ವಾತವರಣದ ನಡುವೆ ಸಾವಿರಾರು ಚಿಟ್ಟೆಗಳು ಸ್ವಚ್ಛಂದವಾಗಿ ಹಾರಾಡುತ್ತಿರುತ್ತದೆ.13 ವಿವಿಧ ಬಗೆಯ ಪ್ರಭೇದದ ಪಾತರಗಿತ್ತಿಗಳಿಗೆ ಆಶ್ರಯ ತಾಣವಾಗಿದೆ. ಎಲ್ಲಾ ಬಗೆಯ ಚಿಟ್ಟೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಸೆಪ್ಟೆಂಬರ್‌ನಿಂದ ಜನವರಿಯವರೆಗೆ ಚಿಟ್ಟೆಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರೂ, ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್ ನಲ್ಲಿ ವರ್ಷಪೂರ್ತಿ ಚಿಟ್ಟೆಗಳನ್ನು ನೋಡಬಹುದಾದ ಪರಿಸರ ನಿರ್ಮಾಣ ಮಾಡಲಾಗಿದೆ. ಸುಮಾರು 300 ರಿಂದ 400 ಕಿ.ಮೀ.ದಾಟಿ ಹೊರ ರಾಜ್ಯಗಳಿಂದ ಚಿಟ್ಟೆಗಳು ಸಂತಾನೋತ್ಪತ್ತಿಗಾಗಿ ಆಗಮಿಸುವುದು ವಿಶೇಷವಾಗಿದೆ.

ಚಿಟ್ಟೆಗಳ ಜೀವನವು ನಾಲ್ಕು ಹಂತದಲ್ಲಿ ತನಗೆ ಆಹಾರ ಸಿಗುವ ಗಿಡದಲ್ಲಿ ಮೊಟ್ಟೆ ಇಟ್ಟು ನಂತರ ಲಾರ್ವಾ ಸ್ಥಿತಿಗೆ ತಲುಪುತ್ತವೆ. ಅವುಗಳು ಎಲೆಗಳನ್ನ ತಿಂದು ಪಿಫಾ ಸ್ಥಿತಿಗೆ ತಲುಪಿ ಬಳಿಕ ರೂಪಾಂತರಿಯಾಗಿ ಬಣ್ಣಬಣ್ಣದ ಚಿಟ್ಟೆಗಳಾಗುತ್ತವೆ.

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಚಿಟ್ಟೆಗಳು, ಮೊಟ್ಟೆ, ಲಾರ್ವಾ,ಮರಿಗಳ ಸಂಪೂರ್ಣ ಮಾಹಿತಿಯನ್ನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಪ್ರವಾಸಿಗರಿಗೆ ನೀಡಿ ಪರಿಸರ ಸಂರಕ್ಷಣೆಯಲ್ಲಿ ಚಿಟ್ಟೆಗಳ ಮಹತ್ವದ ಬಗ್ಗೆ ವಿವರಣೆ ನೀಡಲಾಗುತ್ತದೆ.

ಪಾರ್ಕ್ ನಲ್ಲಿ ವಿವಿಧ ಉಷ್ಣವಲಯದ ಸಸ್ಯಗಳು ಮತ್ತು ಹೂವುಗಳನ್ನು ಬೆಳೆಸಲಾಗಿದ್ದು, ಇದು ಚಿಟ್ಟೆಗಳಿಗೆ ಸೂಕ್ತವಾದ ಆವಾಸಸ್ಥಾನ ಆಗಿದೆ. ವಿಶಿಷ್ಟವಾದ ಚಿಟ್ಟೆ ಪ್ರಭೇದಗಳ ಬಗ್ಗೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರದ ಬಗ್ಗೆ ಪ್ರವಾಸಿಗರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಚಿಟ್ಟೆ ಉದ್ಯಾನವನವು ಸಂರಕ್ಷಣಾಲಯವನ್ನು ಸಹ ಹೊಂದಿದ್ದು, ವರ್ಷ ಪೂರ್ತಿ ಚಿಟ್ಟೆಗಳನ್ನು ಕಾಣಬಹುದಾಗಿದೆ

ವಿ.ಲೋಕನಾಥ್, ಕೀಟ ತಜ್ಞ, ಚಿಟ್ಟೆ ಪಾರ್ಕ್

Share this article