;Resize=(412,232))
ಹೊಸದಾಗಿ ಮೇಯರ್ ಆದ ಹುಮ್ಮಸ್ಸು, ಫೋನ್ ಮೂಲಕ ಜನರ ಸಮಸ್ಯೆ ಆಲಿಸಬೇಕು, ಪರಿಹರಿಸಬೇಕು ಎಂಬ ಭರ್ಜರಿ ಉತ್ಸಾಹದಿಂದ ಬಂದ ಮೇಯರ್ ಮೇಡಂ ಅವರಿಗೆ ಫೋನೇ ಇರಲಿಲ್ಲ. ಫೋನ್ ಎಲ್ಲಿ ಎಂದು ಕೊಂಚ ಜೋರಾಗಿ ಕೇಳಿದಾಗ ತಡಬಡಿಸಿದ ಸಿಬ್ಬಂದಿಗೆ ಫೋನ್ ಮಾತ್ರ ಸಿಗದೇ ಇದ್ದಾಗ ಕೊನೆಗೆ ‘ಮೊಬೈಲ್ ಪೋನ್ ಇನ್ ಕಾರ್ಯಕ್ರಮ’ ನಡೆಸಿದ ಪ್ರಸಂಗ ನಡೆಯಿತು.
ಇದು ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ದುರ್ಗಮ್ಮ ಬಿಜವಾಡ ಅವರು ಎದುರಿಸಿದ ಪ್ರಸಂಗ!
ಆಗಿದ್ದೇನಪ್ಪ ಅಂದ್ರೆ, ಪ್ರತಿ ಬುಧವಾರ ಪಾಲಿಕೆಯಲ್ಲಿ ಮೇಯರ್‌ರ ಪೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತದೆ. ಸಾರ್ವಜನಿಕರು ಪೋನ್ ಇನ್‌ನಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರೆ ಅವುಗಳನ್ನು ಅಲ್ಲೇ ಬಗೆಹರಿಸುತ್ತಾರೆ ಮೇಯರ್.
ದುರ್ಗಮ್ಮ ಬಿಜವಾಡ ಇತ್ತೀಚಿಗಷ್ಟೇ ಮೇಯರ್ ಆದವರು. ಅವರಿಗೆ ಫೋನ್ ಇನ್ ನಡೆಸಬೇಕು, ಸಾರ್ವಜನಿಕರ ಸಮಸ್ಯೆ ಆಲಿಸಬೇಕು ಎಂಬ ಮಹದಾಸೆಯಿತ್ತು. ಅದರಂತೆ ಮೇಯರ್ ಆಗಿ ಆಯ್ಕೆಯಾದ ಮೂರ್ನಾಲ್ಕು ದಿನಗಳಲ್ಲಿ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಎಸ್‌ಐಆರ್‌ನಿಂದ ನಾಲ್ಕೈದು ವಾರ ಸರಿಯಾಗಿ ಫೋನ್ ಇನ್ ಕಾರ್ಯಕ್ರಮ ಆಗಿರಲಿಲ್ಲ. ಈ ಕಾರ್ಯಕ್ರಮ ಆಯೋಜಿಸುವ ಸಿಬ್ಬಂದಿಯೂ ಎಸ್‌ಐಆರ್‌ನಲ್ಲಿ ಬ್ಯುಸಿ ಆಗಿದ್ದರು. ಈ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೇ ಕಾರ್ಯಕ್ರಮ ಘೋಷಣೆ ಮಾಡಿ ಕಚೇರಿಗೆ ಬಂದು ಕುಳಿತರೆ ಅಲ್ಲಿ ಫೋನೇ ಇರಲಿಲ್ಲ.
ಹೀಗಿರುವಾಗ ಅದ್ಹೇಗೆ ಸಾರ್ವಜನಿಕರ ಕರೆ ಬರುತ್ತದೆ ಎಂಬ ಪ್ರಶ್ನೆ ಕಾಡತೊಡಗಿತ್ತು. ಮೇಯರ್ ಏನೋ ಬಂದು ಕುಳಿತರು. ಆದರೆ ಎಷ್ಟೊತ್ತಾದರೂ ಲ್ಯಾಂಡ್ ಲೈನ್ ಬರಲಿಲ್ಲ. ಆಗ ಮೇಯರ್, ಎಲ್ಲಿ? ಲ್ಯಾಂಡ್‌ಲೈನ್‌ಗಳೆಲ್ಲ ಕಾಣ್ತಾನೇ ಇಲ್ಲ? ಎಂದು ಸಿಬ್ಬಂದಿಗೆ ಕೇಳಿದರು. ಆಗ ಅಧಿಕಾರಿಗಳು ಫೋನ್‌ಗಾಗಿ ಹುಡುಕಾಡಿದರು, ಆದರೆ ಲ್ಯಾಂಡ್‌ಲೈನ್ ಸಿಗಲಿಲ್ಲ. ಕರೆ ಮಾಡಲು ಕಾಯುತ್ತಿದ್ದ ಸಾರ್ವಜನಿಕರು ಕೊನೆಗೆ ಮೇಯರ್ ಮೊಬೈಲ್‌ಗೆ ಕರೆ ಮಾಡಲು ಶುರು ಮಾಡಿದರು. ಮೊಬೈಲ್‌ನಲ್ಲೇ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿದ ಮೇಯರ್, ಜನರ ಸಮಸ್ಯೆ ಆಲಿಸಿದರು. ಕೊನೆಗೆ ಮುಂದಿನ ಸಲ ಹೀಗಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿ ಹೊರಟರು.
ಒಟ್ಟಿನಲ್ಲಿ ಲ್ಯಾಂಡ್ ಲೈನ್ ಇಲ್ಲದಿದ್ರೂ, ಪೋನ್ ಇನ್ ಆದಂತಾಯ್ತು ಎಂದು ನಗುತ್ತಲೇ ಸಿಬ್ಬಂದಿ ಹೊರಬಂದರು.
ಮರ ಮೊದಲೋ, ಬೀಜ ಮೊದಲೋ? ಕೋಳಿ ಮೊದಲೋ, ಮೊಟ್ಟೆ ಮೊದಲೋ? ಎಂದು ಜನ ಸಾಮಾನ್ಯರ ನಡುವೆ ಆಗಾಗ ವಿಷಯಗಳು ಸ್ವಾರಸ್ಯಕರ ಚರ್ಚೆ, ತೀವ್ರ ಜಿಜ್ಞಾಸೆಗೊಳಗಾಗೋದನ್ನು ಕಂಡಿದ್ದೇವೆ. ಆದರೆ ನಮ್ಮ ಹೋಮ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಸಾಹೇಬ್ರ ಸುದ್ದಿಗೋಷ್ಠಿಯಲ್ಲಿ ಹೂಳು ಮೊದಲೋ, ಬಿಲ್ ಮೊದಲೋ ಎಂಬ ವಿಚಾರ ಚರ್ಚೆಯಾಗಿ ಗಮನ ಸೆಳೆಯಿತೆನ್ನಿ.
ಮೊನ್ನೆ ಹೀಗೆ ಒಂದು ರೌಂಡ್ ಕಲಬುರಗಿಗೆ ಬಂದಾಗ ಹೋಮ್ ಮಿನಿಸ್ಟರ್ ಅಧಿಕೃತ ಪ್ರೆಸ್‌ಮೀಟ್‌ನಲ್ಲಿ ಕಲಬುರಗಿಗೆ ನೀರು ಪೂರೈಸೋ ಭೀಮಾ ಬಾಂದಾರಿನ ಹೂಳೆತ್ತೋ ಕಾಮಗಾರಿಯಲ್ಲಿ ಹಗರಣವಾಗಿದೆ, ಮೊದ್ಲು ಹೂಳೆತ್ತೋ ಬದ್ಲು ಬಿಲ್ ಎತ್ತಿದ್ದಾರೆಂದು ಸುದ್ದಿಗಾರರು ಹಗರಣ ವಿಷಯ ಪ್ರಸ್ತಾಪಿಸಿ ಸಚಿವರ ಗಮನ ಸೆಳೆದ್ರು.
ನೀವು (ಪತ್ರಕರ್ತರು) ಹೇಳಿದ್ದೆಲ್ಲ ನಾನು ಸೀರಿಯಸ್ ಆಗಿ ಪರಿಗಣಿಸ್ತೀನಿ, ತಮಗಿರೋ ಮಾಹಿತಿಯಂತೆ ಸರಡಗಿ ಭೀಮಾ ಬಾಂದಾರಲ್ಲಿ ಮೊದ್ಲು ಹೂಳೆತ್ತಿದ್ದಾರೆ, ನೀವು (ಪತ್ರಕರ್ತರು) ಬಿಲ್ ಎತ್ತಿದ್ದಾರೆ ಅಂತೀರಿ, ಬಿಲ್ ಇನ್ನೂ ಎತ್ತಿಲ್ಲ ಅಂದ್ರು.
ಇತ್ತ ಪಟ್ಟು ಬಿಡದ ಪತ್ರಕರ್ತರೋ, ಸಾರ್... ವಿಚಾರ ನೀವು ತಿಳಿದಷ್ಟು ಸರಳವಾಗಿಲ್ಲ, ಹೂಳೆತ್ತೋ ಬದಲು ಬಿಲ್ ಎತ್ತಿದ್ದಾರೆ, ಅಲ್ಲಿನ ರಿಯಲ್ ಫ್ಯಾಕ್ಟ್ ನಿಮ್ಗೆ ಗೊತ್ತಿಲ್ಲ, ಮುಚ್ಚಿಟ್ಟಿದ್ದಾರೆ ಎಂದು ಗುಟ್ಟು ರಟ್ಟು ಮಾಡಿದಾಗ ಹೂಳು, ಬಿಲ್, ಯಾವುದು ಮೊದ್ಲು ಎತ್ತಿದ್ರು ಅನ್ನೋ ಚರ್ಚೆಯಲ್ಲೇ ಕಿಕ್ಕಿರಿದ ಸುದ್ದಿಗೋಷ್ಠಿ ಗೊಂದಲದ ಗೂಡಾದಾಗ ನನ್ನ ನೆಕ್ಸ್ಟ್ ವಿಸಿಟ್‌ನಲ್ಲಿ ಭೀಮಾ ಬಂದಾರಿಗೆ ಹೋಗೋಣ, ಹೂಳೆತ್ತಿದ್ರೋ, ಬಿಲ್ ಎತ್ತಿದ್ರೋ ನೋಡೇ ಬರೋಣ ಎಂದು ಹೇಳ್ತಾ ಮಿನಿಸ್ಟರ್ ಸಾಹೇಬ್ರು ಹೂಳು- ಗೋಳಿನ ಚರ್ಚೆಗೆ ತೆರೆ ಎಳೆದ್ರೆನ್ನಿ.
ವಿಷಯ ಇಷ್ಟಕ್ಕೇ ಮುಗಿಲಿಲ್ಲ. ಸವಾಲ್-ಜವಾಬ್‌ನಲ್ಲಿ ಹೂಳು, ಬಿಲ್ ಪದಗಳು ಪುನರಾವರ್ತನೆಗೊಂದು ಪದೇ ಪದೆ ವಿಷಯ ಪ್ರಸ್ತಾಪವಾಗಿ ಗೊಂದಲವಾದಾಗ ಬಾಂದಾರಲ್ಲಿ ಮೊದ್ಲು ಹೂಳನ್ನೆತ್ತಿದರೋ, ಬಿಲ್ಲನ್ನೇ ಎತ್ತಿ ಕೈತೊಳೆದುಕೊಂಡರೋ ಎಂಬ ವಿಷಯ ಸದ್ಯಕ್ಕಂತೂ ಚರ್ಚೆಯಲ್ಲಿ ಕಳೆದ್ಹೋಗಿದೆ.