ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನಾಭರಣ ಕೊಳ್ಳಲು ಗ್ರಾಹಕರು ಉತ್ಸುಕರಾಗಿದ್ದರೆ, ಹಲವು ಬಗೆಯ ರಿಯಾಯಿತಿ ಘೋಷಣೆ ಮೂಲಕ ಗ್ರಾಹಕರನ್ನು ಸೆಳೆಯಲು ವರ್ತಕರು ಮುಂದಾಗಿದ್ದಾರೆ.10 ಗ್ರಾಂ. ಚಿನ್ನ 1 ಲಕ್ಷ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದರ ಹೆಚ್ಚಾಗಬಹುದು ಎಂಬ ಕಾರಣ ಹಾಗೂ ಹೂಡಿಕೆ ದೃಷ್ಟಿಯಿಂದ ಚಿನ್ನಾಭರಣ ವಹಿವಾಟು ದಾಖಲೆ ಪ್ರಮಾಣದಲ್ಲಿ ಆಗಬಹುದು ಎಂದು ವರ್ತಕರು ನಿರೀಕ್ಷಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ.10 ರಷ್ಟು ಕೇಜಿ ಚಿನ್ನ ಮಾರಾಟ ಆಗಬಹುದು ಎಂದು ಚಿನ್ನಾಭರಣ ವರ್ತಕರ ಸಂಘ ತಿಳಿಸಿದೆ.
ಮೇಕಿಂಗ್ ಶುಲ್ಕದಲ್ಲಿ ರಿಯಾಯಿತಿ, ದುಬೈ ದರದಲ್ಲಿ ಚಿನ್ನ ಮಾರಾಟ, ಒಟ್ಟು ಮೊತ್ತದ ಮೇಲೆ ನೇರ ರಿಯಾಯಿತಿ ಹಾಗೂ ನಿರ್ದಿಷ್ಟ ಮೊತ್ತದ ಖರೀದಿಗೆ ಉಚಿತ ಕೊಡುಗೆಗಳ ವಿವಿಧ ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಗಳು ಘೋಷಣೆ ಮಾಡಿವೆ. ಇನ್ನು ಕೆಲ ಇ-ಕಾರ್ಟ್ ಕಂಪನಿಗಳು ಮನೆಗೆ ಚಿನ್ನವನ್ನು ತಲುಪಿಸುವುದಾಗಿ ಘೋಷಿಸಿರುವುದು ಈ ಬಾರಿಯ ವಿಶೇಷ.15 ದಿನಗಳಲ್ಲಿ ಚಿನ್ನದ ಬೆಲೆ 1ಲಕ್ಷದ ಆಸುಪಾಸಲ್ಲೇ ಏರಿಕೆ ಕಂಡಿದೆ. 10ಗ್ರಾಂ. ಚಿನ್ನದ ಬೆಲೆ ₹ 98, 210 ಇದ್ದುದು ಎರಡು ದಿನಗಳ ಹಿಂದೆ 97, 530ಗೆ ಇಳಿಕೆಯಾಗಿತ್ತು. ಅದೇ ರೀತಿ 22 ಕ್ಯಾರೆಟ್ ಚಿನ್ನ 90020 ಇದ್ದುದು, ₹89,400ಗೆ ಇಳಿಕೆಯಾಗಿತ್ತು. ಆದರೆ, ಅಕ್ಷಯ ತೃತೀಯ ಮುನ್ನಾದಿನ 22 ಕ್ಯಾರೆಟ್‌ಗೆ 9250 ಹಾಗೂ 24 ಕ್ಯಾರೆಟ್‌ಗೆ ₹10,145 ಗೆ ಏರಿಕೆಯಾಗಿತ್ತು. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಬಹುದು ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಜೊತೆಗೆ ಬೆಳ್ಳಿಯ ಮೇಲೂ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹಬ್ಬದ ಮುನ್ನಾದಿನ ಬೆಳ್ಳಿ 1 ಕೇಜಿಗೆ ₹ 1,03,700 ದರವಿತ್ತು.ರಾಜ್ಯದಲ್ಲಿ ಈ ಬಾರಿ ದಾಖಲೆಯ ಚಿನ್ನಾಭರಣ ವಹಿವಾಟು ನಡೆಯುವ ನಿರೀಕ್ಷೆಯಿದೆ. ದರ ಹೆಚ್ಚಾಗಿದ್ದರೂ ಮುಂದಿನ ದಿನಗಳಲ್ಲಿ ಇಳಿಯುವ ಸಾಧ್ಯತೆ ಬದಲಾಗಿ ಹೆಚ್ಚಾಗುವ ಸಂಭವವೇ ಅಧಿಕವಾಗಿದೆ. ಹೀಗಾಗಿ ಹೆಚ್ಚಿನ ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಲಿದ್ದಾರೆ.
- ಎನ್. ವಿದ್ಯಾಸಾಗರ್, ಜ್ಯೂವೆಲ್ಲರಿ ಅಸೋಸಿಯೇಶನ್ ಬೆಂಗಳೂರು, ಮಾಜಿ ಅಧ್ಯಕ್ಷ