ಬೆಂಗಳೂರು, ನ. 24, 2026: ಇತ್ತೀಚೆಗೆ ನಡೆದ ಘಟನೆಗಳು ನೆನಪಾಗದೇ ಇರುವುದು, ಸಂಭಾಷಣೆ ವೇಳೆ ಸೂಕ್ತ ಪದಗಳು ಹೊಳೆಯದಿರುವುದು ಹಾಗೂ ಸಣ್ಣಪುಟ್ಟ ವಿಷಯಗಳಿಗೆ ಗೊಂದಲಕ್ಕೊಳಗಾಗುವುದನ್ನು ಸಾಮಾನ್ಯವಾಗಿ ವಯಸ್ಸಾದಂತೆ ಇದೆಲ್ಲಾ ಸಹಜ ಎಂದು ನಿರ್ಲಕ್ಷಿಸಲಾಗುತ್ತದೆ. ಆದರೆ, ಇಂತಹ ಲಕ್ಷಣಗಳನ್ನು ಗುರುತಿಸುವಲ್ಲಿ ಆಗುವ ಸಣ್ಣ ವಿಳಂಬವೂ ಕುಟುಂಬಗಳಿಗೆ ಅಮೂಲ್ಯ ಚಿಕಿತ್ಸಾ ಸಮಯವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಬುದ್ಧಿಮಾಂದ್ಯತೆಗೆ (ಡಿಮೆನ್ಶಿಯಾ) ಅತ್ಯಂತ ಪ್ರಮುಖ ಕಾರಣವಾಗಿರುವ ಆಲ್ಝೈಮರ್ಸ್ ಕಾಯಿಲೆಯು ಕ್ರಮೇಣ ಉಲ್ಬಣಗೊಳ್ಳುವ ನರಮಂಡಲದ ಕ್ಷೀಣಗೊಳ್ಳುವ ಕಾಯಿಲೆಯಾಗಿದೆ. ಇದು ವ್ಯಕ್ತಿಯ ನೆನಪಿನ ಶಕ್ತಿ, ಅರಿವಿನ ಸಾಮರ್ಥ್ಯ ಹಾಗೂ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಶಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಶದಲ್ಲಿ ವೃದ್ಧಾಪ್ಯದ ಜನಸಂಖ್ಯೆ ಮತ್ತು ಬುದ್ಧಿಮಾಂದ್ಯತೆ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ, ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚುವ ಅಗತ್ಯವಿದೆ ಎಂದು ವೈದ್ಯಕೀಯ ತಜ್ಞರು ಪ್ರತಿಪಾದಿಸಿದ್ದಾರೆ.
ಆಲ್ಝೈಮರ್ಸ್ ಕಾಯಿಲೆಯ ಹೆಚ್ಚುತ್ತಿರುವ ಹೊರೆಯನ್ನು ನಿಭಾಯಿಸುವ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನರವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಸುವರ್ಣ ಅಲ್ಲಾಡಿ, ‘ಆಲ್ಝೈಮರ್ಸ್ ಕಾಯಿಲೆಯ ಆರಂಭಿಕ ಲಕ್ಷಣಗಳನ್ನು ಯಾವಾಗಲೂ ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ನೆನಪಿನ ಶಕ್ತಿ, ಸಂವಹನ, ಸುತ್ತಮುತ್ತಲಿನ ಪರಿಸರದ ಅರಿವು ಅಥವಾ ಸಾಮಾನ್ಯವಾಗಿ ಮಾಡುವ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯದಲ್ಲಿ ನಿರಂತರ ಬದಲಾವಣೆಗಳು ಕಂಡುಬಂದರೆ, ಅವುಗಳನ್ನು ವಯಸ್ಸಾಗುವಿಕೆಯ ಅನಿವಾರ್ಯ ಭಾಗವೆಂದು ಪರಿಗಣಿಸಬಾರದು. ಹೆಚ್ಚಿನ ಜಾಗೃತಿ ಮತ್ತು ಸಕಾಲಿಕ ವೈದ್ಯಕೀಯ ತಪಾಸಣೆಯಿಂದ ಮಾತ್ರ ಈ ಸವಾಲನ್ನು ಎದುರಿಸಲು ಸಾಧ್ಯ’ ಎಂದು ವಿವರಿಸಿದರು.
ಆರಂಭಿಕ ಹಂತದಲ್ಲೇ ರೋಗಪತ್ತೆ ಮಾಡುವ ಮಹತ್ವದ ಬಗ್ಗೆ ಮಾತನಾಡಿದ ಕೋಲ್ಕತ್ತಾದ ಅಪೋಲೊ ಆಸ್ಪತ್ರೆಯ ನರವಿಜ್ಞಾನ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ. ಅಮಿತಾಭ ಘೋಷ್, ‘ಆಲ್ಝೈಮರ್ಸ್ ಆರಂಭಿಕ ಲಕ್ಷಣಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ ಮತ್ತು ನಿಧಾನವಾಗಿ ಬೆಳವಣಿಗೆಯಾಗುತ್ತವೆ. ಇತ್ತೀಚಿನ ಸಂಭಾಷಣೆ ಅಥವಾ ಘಟನೆಗಳನ್ನು ಪದೇಪದೇ ಮರೆಯುವುದು, ಪರಿಚಿತ ಪದಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದು, ಚಿರಪರಿಚಿತ ಸ್ಥಳಗಳಲ್ಲೇ ಗೊಂದಲಕ್ಕೊಳಗಾಗುವುದು ಅಥವಾ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ತೊಂದರೆಯಾಗುವುದು ಪ್ರಮುಖ ಎಚ್ಚರಿಕೆಯ ಸೂಚನೆಗಳು. ಇಂತಹ ಲಕ್ಷಣಗಳು ದೈನಂದಿನ ಜೀವನಕ್ಕೆ ಅಡ್ಡಿಯಾಗಲು ಆರಂಭಿಸಿದಾಗ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಬೇಕು. ಇದರಿಂದ ರೋಗಿ ಮತ್ತು ಕುಟುಂಬದವರಿಗೆ ಸೂಕ್ತ ವೈದ್ಯಕೀಯ ಮೌಲ್ಯಮಾಪನ ಹಾಗೂ ಅಗತ್ಯ ಬೆಂಬಲ ಸಿಗಲು ಸಾಧ್ಯವಾಗುತ್ತದೆ’ ಎಂದರು.ಜನಸಂಖ್ಯೆಯ ವಯೋವೃದ್ಧಿ, ರೋಗದ ಕುರಿತಾದ ಕಡಿಮೆ ಅರಿವು ಮತ್ತು ರೋಗನಿರ್ಣಯದಲ್ಲಿನ ವಿಳಂಬದಿಂದಾಗಿ ಭಾರತದಲ್ಲಿ ಆಲ್ಝೈಮರ್ಸ್ ಹೊರೆ ತ್ವರಿತವಾಗಿ ಹೆಚ್ಚುತ್ತಿದೆ. ಪ್ರಸ್ತುತ ದೇಶದಲ್ಲಿ ಸುಮಾರು 88 ಲಕ್ಷ ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಇದರಲ್ಲಿ ಬಹುಪಾಲು ಪ್ರಕರಣಗಳಿಗೆ ಆಲ್ಝೈಮರ್ಸ್ ಕಾರಣವಾಗಿದೆ. 2036ರ ವೇಳೆಗೆ ಈ ಸಂಖ್ಯೆ ಸುಮಾರು ದ್ವಿಗುಣಗೊಂಡು 1.69 ಕೋಟಿಗೆ ತಲುಪುವ ನಿರೀಕ್ಷೆಯಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳ ಮೇಲೆ ದೊಡ್ಡ ಸವಾಲಾಗಲಿದೆ. ಜಾಗತಿಕ ಮಟ್ಟದಲ್ಲೂ ಈ ಸಂಖ್ಯೆ 2050ರ ವೇಳೆಗೆ ಮೂರು ಪಟ್ಟು ಹೆಚ್ಚಾಗಿ 15.2 ಕೋಟಿಗೆ ತಲುಪುವ ಅಂದಾಜಿದೆ. ಸಮಸ್ಯೆ ಇಷ್ಟು ವ್ಯಾಪಕವಾಗಿದ್ದರೂ, ಸಾಮಾಜಿಕ ಕಳಂಕ ಹಾಗೂ ಮರೆವು ವಯಸ್ಸಾಗುವಿಕೆಯ ಸಹಜ ಭಾಗ ಎಂಬ ತಪ್ಪು ಕಲ್ಪನೆಯಿಂದಾಗಿ ಬಹುತೇಕ ಪ್ರಕರಣಗಳು ಪತ್ತೆಯಾಗದೆ ಉಳಿಯುತ್ತಿವೆ.
ನಿರ್ಲಕ್ಷಿಸಬಾರದ ಆರಂಭಿಕ ಎಚ್ಚರಿಕೆಯ ಲಕ್ಷಣಗಳು
ದೈನಂದಿನ ಜೀವನಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಪದೇಪದೇ ನೆನಪಿನ ಶಕ್ತಿ ಕುಂದುವುದು.
ನಿತ್ಯ ಮಾಡುತ್ತಿದ್ದ ಪರಿಚಿತ ಕೆಲಸಗಳು ಅಥವಾ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ತೊಂದರೆ ಎದುರಾಗುವುದು.
ವಿವೇಚನೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅಥವಾ ನಡವಳಿಕೆಯಲ್ಲಿ ಅಸಹಜ ಬದಲಾವಣೆಗಳು ಕಂಡುಬರುವುದು.