ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತೀಯ ರೈಲ್ವೆಯ ಈ ಮಾರ್ಗದಲ್ಲಿ ನೂತನವಾಗಿ ಆರಂಭಿಸಲಾದ ‘ಜಂಟಿ ಪಾರ್ಸೆಲ್ ಪ್ರಾಡಕ್ಟ್- ರ್‍ಯಾಪಿಡ್ ಕಾರ್ಗೋ ಸರ್ವಿಸ್’ (ಜೆಪಿಆರ್- ಆರ್‌ಸಿಎಸ್) ರೈಲಿನಲ್ಲಿ ಸೇವೆ ಆರಂಭಿಸಿದ ದೇಶದ ಮೊಟ್ಟಮೊದಲ ಇ-ಕಾಮರ್ಸ್ ಸಂಸ್ಥೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅಮೆಜಾನ್ ಪಾತ್ರವಾಗಿದೆ.
ಇದರಿಂದ ದೆಹಲಿ, ಅಹಮದಾಬಾದ್ ಮತ್ತು ಸೂರತ್ ಮಾರ್ಗಗಳ ಮೂಲಕ ಮುಂಬೈ, ಪುಣೆ ಹಾಗೂ ಗೋವಾಗೆ ಉತ್ತಮ ಸಂಪರ್ಕ ಲಭ್ಯವಾಗಲಿದೆ. ರಸ್ತೆ ಸಾರಿಗೆಯ ಮೇಲಿನ ಅವಲಂಬನೆ ತಗ್ಗಿಸಿ, ಪರಿಸರಸ್ನೇಹಿ ರೈಲು ಜಾಲದಲ್ಲಿ ನಿತ್ಯ 10ಕ್ಕೂ ಹೆಚ್ಚು ಪಾರ್ಸೆಲ್ ವ್ಯಾನ್‌ಗಳ ಬಳಕೆಯಾಗಲಿದೆ.2019 ರಲ್ಲಿ ಕೇವಲ ಒಂದೇ ಒಂದು ರೈಲಿನಿಂದ ಆರಂಭವಾಗಿ, ಪ್ರಸ್ತುತ 130 ಮಾರ್ಗಗಳಲ್ಲಿ 140ಕ್ಕೂ ಅಧಿಕ ರೈಲುಗಳ ಮೂಲಕ 100ಕ್ಕೂ ಹೆಚ್ಚು ನಗರಗಳಿಗೆ ಸರಕು ಪೂರೈಕೆ ಆಗಲಿದೆ.
ಅಮೆಜಾನ್ ಇಂಡಿಯಾದ ನಿರ್ದೇಶಕ ಕಿಶೋರ್ ಲಂಕಾ ಮಾತನಾಡಿ, ‘ಕೇಂದ್ರ ಸರ್ಕಾರದ ''ವಿಕಸಿತ ಭಾರತ, ವಿಕಸಿತ ರೈಲು'' ದೂರದೃಷ್ಟಿಯ ಚಿಂತನೆಗೆ ಅನುಗುಣವಾಗಿ ಭಾರತೀಯ ರೈಲ್ವೆ ಜೊತೆ ಕೈಜೋಡಿಸಿರುವುದು ಸಂತಸ ತಂದಿದೆ. ಮೀಸಲಾದ ಸರಕು ಸಾರಿಗೆ ಮೂಲಸೌಕರ್ಯದ ಬಳಕೆಯಿಂದ ಸಾಗಣೆ ವೆಚ್ಚ ತಗ್ಗುವುದರ ಜೊತೆಗೆ, ಪರಿಸರಸ್ನೇಹಿ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಗ್ರಾಹಕರಿಗೆ ವೇಗದ ಸೇವೆ ನೀಡಲು ಸಾಧ್ಯವಾಗಲಿದೆ’ ಎಂದರು.
ಉತ್ತರ ಪ್ರದೇಶದ ನ್ಯೂ ದಾದ್ರಿಯಿಂದ ಮುಂಬೈ ಸಮೀಪದ ಜೆಎನ್‌ಪಿಟಿ ವರೆಗೆ ಸುಮಾರು 1,504 ಕಿ.ಮೀ ವ್ಯಾಪಿಸಿರುವ ವೆಸ್ಟರ್ನ್ ಡಿಎಫ್‌ಸಿ ಕಾರಿಡಾರ್, ದೇಶದ ಬಂದರುಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ಬೆಸೆಯುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಲು ಸಹಕಾರಿಯಾಗಿದೆ.