ಬೆಂಗಳೂರು : ಮಷಿನ್‌ಗನ್ ಕೈಯಲ್ಲಿ ಹಿಡಿದು, ಯುದ್ಧ ಟ್ಯಾಂಕ್‌ಗಳ ಮೇಲೆ ಹತ್ತಿಳಿದು ಪುಳಕಿತರಾದ ವಿದ್ಯಾರ್ಥಿಗಳು, ಗ್ರೇನೆಡ್ ಲಾಂಚರ್ ಕೆಲಸ ಮಾಡೋದು ಹೇಗೆ, ಸೈನ್ಯದ ರಾತ್ರಿಯ ಗಸ್ತು ಹೇಗಿರುತ್ತದೆ ಎಂಬುದನ್ನು ವಿವರಿಸಿದ ಸೈನ್ಯಾಧಿಕಾರಿಗಳು, ರೋಮಾಂಚನಗೊಳಿಸುವ ಶ್ವೇತಾಶ್ವ ಬೈಕ್ ರೈಡ್, ಶ್ವಾನ, ಅಶ್ವಗಳ ಪ್ರದರ್ಶನ.
ಇವು 77ನೇ ಆರ್ಮಿ ಡೇ ಪ್ರಯುಕ್ತ ಶನಿವಾರ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ‘ನಿಮ್ಮ ಸೇನೆಯನ್ನು ತಿಳಿಯಿರಿ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು. ಅಪರೂಪದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಜನತೆ ಭಾರತೀಯ ಸೈನ್ಯದ ಕುರಿತು ಕುತೂಹಲದಿಂದ ತಿಳಿದುಕೊಂಡರು.
ಕಾರ್ಯಕ್ರಮ ಆಯೋಜಿಸಿದ್ದ ಕರ್ನಾಟಕ ಮತ್ತು ಕೇರಳ ಉಪ ಪ್ರದೇಶ ವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ದೇಶಕ್ಕಾಗಿ ತ್ಯಾಗ ಮಾಡಿದ ವೀರ ನಾರಿಯರನ್ನು ಪುರಸ್ಕರಿಸಿದರು.
ಬಳಿಕ ಮಿಲಿಟರಿ ಪೊಲೀಸರು ನಡೆಸಿಕೊಟ್ಟ ‘ಶ್ವೇತ ಅಶ್ವ’ ಮೋಟರ್‌ಸೈಕಲ್ ರೋಮಾಂಚನಕಾರಿ ಸಾಹಸ ಪ್ರದರ್ಶನ ನೆರೆದವರ ಮೈ ನವಿರೇಳಿಸಿತು. ಬಳಿಕ ಗೂರ್ಖಾ ರೈಫಲ್ಸ್‌ನ ಸೈನಿಕರು ಖುರ್ಕಿ ನೃತ್ಯದ ಮೂಲಕ ಮೆರಗು ತಂದರು. ಅತ್ಮಿ ಪೈಪ್ ಬ್ಯಾಂಡ್‌ನವರು ನುಡಿಸಿದ ನಾದ ಮಾರ್ದನಿಸಿತು. ಕಳರಿಪಯಟ್ಟು ಸಾಹಸ ಪ್ರದರ್ಶನ, ಕರಾಟೆಯ ಸಾಹಸ ಆಕರ್ಷಕವಾಗಿತ್ತು. ಎಎಸ್‌ಸಿ ಸೆಂಟರ್‌ನ ವಿವಿಧ ಶಾಲಾ ಕಾಲೇಜುಗಳ ಸುಮಾರು ಎರಡು ಸಾವಿರಕ್ಕೂ ಅಧಿಕ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ರಾತ್ರಿ ವೇಳೆಯ ಬೈನಾಕ್ಯೂಲರ್, ಬಾಂಬ್ ಡಿಟೆಕ್ಟರ್, ವಿಶೇಷ ಕಾರ್ಯಾಚರಣೆ ವೇಳೆ ಧರಿಸುವ ಉಡುಪು, ರೇಡಿಯೋ ಕಮ್ಯೂನಿಕೇಶನ್ ಕೆಲಸ ಮಾಡುವ ರೀತಿಯನ್ನು ಜನತೆಗೆ ವಿವರಿಸಲಾಯಿತು.
ವಯನಾಡ್ ಭೂಕುಸಿತ ಕಾರ್ಯಾಚರಣೆ ವಿವರ:
ಯುದ್ಧ ಸೇತುವೆ ನಿರ್ಮಾಣ, ವಯನಾಡ್ ಭೂಕುಸಿತ ದುರಂತದಲ್ಲಿ ಸೈನಿಕರು ನಡೆಸಿದ ರಕ್ಷಣಾ ಕಾರ್ಯಾಚರಣೆಯ ವಿವರವನ್ನು ಜನರಿಗೆ ನೀಡಲಾಯಿತು. ವೈದ್ಯಕೀಯ ನೆರವು, ನೇಮಕಾತಿ ಅವಕಾಶ, ಸೇನಾ ಉದ್ಯೋಗ ಕೋಶ, ಮಾಜಿ ಸೈನಿಕರ ಸಹಾಯ ಕೇಂದ್ರ ಮತ್ತು ಆಹಾರ ಮಳಿಗೆಗಳಂತಹ ಮಾಹಿತಿಯುಕ್ತ ಮತ್ತು ಸಂವಾದಾತ್ಮಕ ಮಳಿಗೆಗಳನ್ನು ತೆರೆಯಲಾಗಿತ್ತು.
ರಷ್ಯಾದ ಎ.ಕೆ 47, ಶಸ್ತ್ರಾಸ್ತ್ರ ಪ್ರದರ್ಶನ:ಸ್ವಿಡನ್ ನಿರ್ಮಿತ ರಾಕೆಟ್ ಲಾಂಚರ್, ಇಸ್ರೇಲ್ ನಿರ್ಮಿತ ಗ್ರೇನೆಡ್ ಲಾಂಚರ್, ಬಾಂಬ್ ಲಾಂಚರ್ ಸ್ಟಿಮ್ಯೂಲೇಟರ್, ರಷ್ಯಾದ ಎ.ಕೆ.47, ಮಷಿನ್ ಗನ್ 7.62 ಸೇರಿ ಸಾಕಷ್ಟು ಬಗೆಯ ಗನ್‌ಗಳು ಪ್ರದರ್ಶನಕ್ಕಿದ್ದವು. ಇವುಗಳನ್ನು ಜನತೆ ಕೈಯಲ್ಲಿ ಹಿಡಿದು ಅದರ ಬಗ್ಗೆ ಸೈನ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಚಿಕ್ಕ ಮಕ್ಕಳು ಗನ್ ಹಿಡಿದು ಖುಷಿ ಪಟ್ಟರು. ಜೊತೆಗೆ ಯುದ್ಧ ಟ್ಯಾಂಕ್, ಬುಲೆಟ್‌ಪ್ರೂಫ್ ಜೀಪುಗಳ ಮೇಲೆ ಕುಳಿತು ಸಂಭ್ರಮಿಸಿದರು.