ಕೆ ಎಸ್ ಪವಿತ್ರಾ
-ನೀವು ಡಾನ್ಸ್ ಥೆರಪಿ ಮಾಡ್ತೀರಂತೆ. ಒಂದು ತಿಂಗಳು ಕ್ಲಾಸಿಗೆ ಬಂದ್ರೆ ಸಾಕಾಗುತ್ತಾ? ಆಮೇಲೆ ಇಂಜೆಕ್ಷನ್, ಮಾತ್ರೆ ಬೇಕಾಗುತ್ತಾ?-ಡಾನ್ಸ್ ಥೆರಪಿಗೆ ಬಂದೋರ ಹತ್ತಿರ ಪ್ರೋಗ್ರಾಮ್ ಮಾಡಿಸ್ತೀರಾ?
ಇಂಥ ಪ್ರಶ್ನೆಗಳನ್ನು ನಾನು ನೃತ್ಯ ಚಿಕಿತ್ಸೆ ಕೊಡುತ್ತೇನೆಂದು ಗೊತ್ತಾದ ತಕ್ಷಣ ಕೇಳುವವರಿದ್ದಾರೆ. ಚಿಕಿತ್ಸೆ ಅಂದರೆ ನಮಗೆ ನೆನಪಾಗುವುದು ಮಾತ್ರೆ, ಇಂಜೆಕ್ಷನ್, ಔಷಧಿ, ಪಥ್ಯ ಮತ್ತು ಅದರ ಜತೆಗೆ ಎಷ್ಟು ದಿನ ತಗೋಬೇಕು ಅನ್ನುವ ಪ್ರಶ್ನೆ. ಒಂದಷ್ಟು ದಿನ ತೆಗೆದುಕೊಂಡರೆ ರೋಗ ವಾಸಿಯಾಗುತ್ತದಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.
ಮನೋವೈದ್ಯೆಯಾಗಿ, ನೃತ್ಯವನ್ನು ಚಿಕಿತ್ಸೆಗೆಂದು ವಿಶ್ಲೇಷಿಸಿ, ಬಗೆದು ಬಗೆದು ನೋಡುವಾಗ ನೃತ್ಯಕ್ಕಿರುವ ಔಷಧಿಯಂತಹ-ಆರೋಗ್ಯಪೇಯದಂತಹ ಮೌಲ್ಯವನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷಿಸಿಯೇ ಬಿಟ್ಟಿದ್ದೇವೆ ಎಂದು ನನಗೆ ವಿಷಾದವಾಗುತ್ತದೆ.
ಸಂತಸವಾದಾಗ ಮಕ್ಕಳು ಜಿಗಿಯುತ್ತಾರೆ, ಚಪ್ಪಾಳೆ ತಟ್ಟುತ್ತಾರೆ, ‘ಹೋ’ ಎಂದು ಕೂಗುತ್ತಾರೆ; ದುಃಖವಾದಾಗಲೂ ಅಷ್ಟೆ, ಅಳುವಾಗ-ಬೇಸರಿಸುವಾಗ ಮೈ ಕಂಪಿಸುತ್ತದೆ, ಮುಖ ಮುದುಡುತ್ತದೆ. ಇವೆಲ್ಲವೂ ನೃತ್ಯಾರಂಭ ನಮ್ಮೊಳಗೇ ಎಂಬುದನ್ನು ದೃಢಪಡಿಸುತ್ತದೆ!
ಐತಿಹಾಸಿಕವಾಗಿ ನೋಡಿದರೂ ಅಷ್ಟೆ, ಆದಿಮಾನವನ ಗುಹೆಗಳ ಶಿಲಾ ಪಳೆಯುಳಿಕೆಗಳಲ್ಲಿಯೂ ನೃತ್ಯದ ಚಿತ್ರಗಳು ಎದ್ದು ನಿಲ್ಲುತ್ತವೆ. ಇನ್ನೂ ಭಾಷೆಯ ಉಗಮವಾಗದಿದ್ದಾಗ, ಮತ್ತೊಬ್ಬರೊಡನೆ ಮಾತನಾಡಲು ಮಾನವ ಬಹುಶಃ ಉಪಯೋಗಿಸಿದ್ದು ಸನ್ನೆಯ ಭಾಷೆಯನ್ನೇ, ಅಂದರೆ ನೃತ್ಯವನ್ನೇ. ಹಳ್ಳಿಗಳಲ್ಲಿ ಕೃಷಿ ಸಂತ್ಕೃತಿಯ ಭಾಗವಾಗಿ ಬೆಳೆದಿದ್ದು ಜನಪದ ನೃತ್ಯಗಳು.
ದೈಹಿಕವಾಗಿ-ಮಾನಸಿಕವಾಗಿ ಹಗುರಾಗಲು, ಸಂತಸವನ್ನು ಹರಡಲು, ಗಂಡು-ಹೆಣ್ಣುಗಳ ನಡುವೆ ಸಂಬಂಧ ಬೆಳೆಯಲು ನೃತ್ಯ ಇಂತಹ ಸಂದರ್ಭಗಳಲ್ಲಿ ಒಂದು ಮಾರ್ಗವಾಗುತ್ತಿತ್ತು. ಪಾಶ್ಚಾತ್ಯ ಜಗತ್ತಿನಲ್ಲಿಯೂ ಮಕ್ಕಳು ೧೬ ದಾಟಿದಾಕ್ಷಣ, ಅವರು ವಿವಿಧ ನೃತ್ಯಗಳನ್ನು ಕಲಿಯುವಂತೆ, ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿತ್ತು. ಮಣಿಪುರದ ನೃತ್ಯ ಕಲಾವಿದೆಯೊಬ್ಬರು ಒಮ್ಮೆ ನೃತ್ಯದ ಚಲನೆಗಳನ್ನು ತೋರಿಸುತ್ತಾ ಹೇಳಿದ್ದರು. “ಮಣಿಪುರದಲ್ಲಿ ನೃತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮದುವೆಯಲ್ಲಿ, ಮಗು ಹುಟ್ಟಿದಾಗ ನೃತ್ಯ ಮಾಡುವಂತೆ, ತನ್ನ ಪತಿಯ ಶವಯಾತ್ರೆಯಲ್ಲಿ ಭಾಗವಹಿಸುವಾಗ ದುಃಖತಪ್ತ ಪತ್ನಿ ನಿಧಾನವಾಗಿ ಚಲಿಸುವ ರೀತಿಯೂ ನೃತ್ಯದ ಒಂದು ಚಲನೆಯೇ ಆಗಿದೆ”.
ನೃತ್ಯ ಒಂದೆಡೆ ತನ್ನ ಆಂಗಿಕ ಚಲನೆಗಳಿಂದ ‘ದೈಹಿಕ’ವಾದದ್ದು. ಇನ್ನೊಂದೆಡೆ ತನ್ನ ಭಾವನಾತ್ಮಕ ಅಭಿವ್ಯಕ್ತಿಯಿಂದ ‘ಮಾನಸಿಕ’ವೂ ಹೌದು. ಈ ‘ಮನೋದೈಹಿಕ’ ಎಂಬ ಕಾರಣದಿಂದಲೇ ನೃತ್ಯಕ್ಕಿರುವ ಸಂವಹನ ಶಕ್ತಿ ಅಪಾರ-ಅಗಾಧ. ‘ಶಾಸ್ತ್ರೀಯ’ ಎಂಬ ಶಾಸ್ತ್ರಪ್ರಕಾರ ನಡೆಯುವ ನೃತ್ಯ ಕಲಿಕೆಯಲ್ಲಿಯೂ, ಇಂತಹ ಮನೋದೈಹಿಕ ಸಂವಹನ ನಿರಂತರವಾಗಿ ಗುರು-ಶಿಷ್ಯರ ನಡುವೆ ನಡೆಯುತ್ತಲೇ ಇರುತ್ತದೆ. ದೇಹದ ಭಾಷೆಯನ್ನೇ ಸ್ವತಃ ನೃತ್ಯಕಲಾವಿದೆ ಗಮನಿಸಲಾರಂಭಿಸಿದರೆ ದೇಹದ ಅರಿವಿನ ಹೊಸತೊಂದು ಜಗತ್ತು ನಮ್ಮೆದುರು ತೆರೆದುಕೊಳ್ಳುತ್ತದೆ.
ಚಲನೆಯ ಮೂಲ ದೇಹದ ಯಾವ ಭಾಗದಲ್ಲಿದೆ; ಮತ್ತೊಂದು ಸುತ್ತು ತಿರುಗಿದರೂ ಬೀಳದಂತಿದ್ದ ಪರಿಸ್ಥಿತಿಯಲ್ಲಿ ಎರಡೇ ಸುತ್ತಿಗೆ ಹೆದರಿ ನಿಲ್ಲಿಸಿದ್ದೇಕೆ? ದೇಹದ ಮಾಧ್ಯಮದ ಮೂಲಕ ಮನಸ್ಸನ್ನು ದುಡಿಸಿಕೊಂಡು ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದೇ ನಿಜವಾಗಿ ನೃತ್ಯದಿಂದ ನಡೆಯುವ ಪ್ರಕ್ರಿಯೆ. ನನಗನ್ನಿಸುವಂತೆ ನೃತ್ಯದ ಅಭ್ಯಾಸದಿಂದ ನಾವು ಕಲಿಯುವುದು ನೃತ್ಯವನ್ನಲ್ಲ; ನೃತ್ಯದೊಂದಿಗೆ ನಮ್ಮ ಅಂತರಂಗದೊಂದಿಗೆ ಮಾತನಾಡಿಕೊಳ್ಳುವ, ದೇಹದ ಮೂಲಕ ಹೊರಹಾಕಿ ಇತರರಿಗೆ ಅದನ್ನು ಸಂವಹಿಸುವ ಕಲೆಯನ್ನು.‘ನೃತ್ಯಚಿಕಿತ್ಸೆ’ಯ ‘ಪ್ರಿಸ್ಕ್ರಿಪ್ಷನ್ ’ ಕೊಡಿ ಎಂದು ಬರುವ ಜನರಿಗೆ ನಾನು ಹೇಳುತ್ತೇನೆ- “ಸಮಸ್ಯೆಗಳಿಂದ ದೂರವಾಗಲು ನೃತ್ಯ ಪರಿಹಾರವಲ್ಲ. ಅವುಗಳನ್ನು ಹೊಸ ದೃಷ್ಟಿಯಿಂದ ನೋಡಲು, ತೆರೆದ ಕೈ ಕಾಲುಗಳಿಂದ ಅಪ್ಪಿಕೊಳ್ಳಲು ನೃತ್ಯವನ್ನು ಉಪಯೋಗಿಸಿ. ನಿಮ್ಮ ಬಗ್ಗೆ -ನಿಮ್ಮ ದೇಹದ ಬಗ್ಗೆ ಕಲಿಯಲು ನೃತ್ಯ ಮಾಡಿ. ನೀವು ಕಾರ್ಯಕ್ರಮ ಮಾಡಿದರೂ/ಮಾಡದಿದ್ದರೂ ಸರಿಯೆ, ಆದರೆ ನೃತ್ಯ ಮಾಡುವ ಕ್ಷಣವನ್ನು ಆಸ್ವಾದಿಸಿ. ಕೇವಲ ಕಾರ್ಯಕ್ರಮದ ಬಗೆಗೆ ಯೋಚಿಸಿ, ಅದರ ಉಪಯೋಗವನ್ನು ಸೀಮಿತ ಮಾಡಿಬಿಡಬೇಡಿ!”
. ಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಹೇಳಿದ “ನಾವು ನಗುವಿಗಾಗಿ, ಅಳುವಿಗಾಗಿ, ಭಯ-ಅಸ್ವಸ್ಥತೆ-ಭರವಸೆ-ಕೂಗುವಿಕೆಗಾಗಿ ನರ್ತಿಸುತ್ತೇವೆ. ನಾವು ನೃತ್ಯಗಾರರು; ನಾವು ಕನಸುಗಳನ್ನು ಸೃಷ್ಟಿಸುತ್ತೇವೆ” ಎಂಬ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ದೇಹ-ಮನಸ್ಸುಗಳ ಆರೋಗ್ಯಕ್ಕಾಗಿ ಮನಸ್ಸನ್ನು ಕುಣಿಸಬೇಕಾಗಿದೆ.ಡಾ|| ಕೆ.ಎಸ್. ಪವಿತ್ರ