- ಡಾ. ಕೆ.ಎಸ್. ಪವಿತ್ರ
ಖ್ಯಾತ ಇಂಗ್ಲಿಷ್ ಕವಿ ಆಲಿವರ್ ವೆಂಡೆಲ್ ಹೋಮ್ಸ್ ಹೇಳಿದನಂತೆ - ‘ಮುತ್ತಿನ ಶಬ್ದ ಫಿರಂಗಿಯಷ್ಟು ದೊಡ್ಡದೇನಲ್ಲ, ಆದರೆ ಅದರ ಪ್ರತಿಧ್ವನಿ ಬಹು ದೀರ್ಘ ಸಮಯದವರೆಗೆ ಉಳಿಯುವಂಥದ್ದು’. ವಾತ್ಸಾಯನನ ಕಾಮಸೂತ್ರ ನಮ್ಮ ನಾಡಿನಲ್ಲಿಯೇ ಹುಟ್ಟಿದ್ದರೂ, ಅದೆಷ್ಟೋ ವಿಧದ ಚುಂಬನಗಳ ಉದ್ದ ಪಟ್ಟಿಯನ್ನೇ ನೀಡಿದ್ದರೂ, ಅಲೆಕ್ಸಾಂಡರ್ ಭಾರತಕ್ಕೆ ಬರುವ ದಾರಿಯಲ್ಲಿ ವಾತ್ಸಾಯನನ ಪಾಠ ಸಿಕ್ಕಿದ್ದೇ, ಆತನಿಂದ ಮುತ್ತು ಕೊಡುವ ಕಲೆ ಗ್ರೀಸ್ ತಲುಪಿತು ಎಂದೆಲ್ಲ ಯಾರೋ ಬರೆದಿದ್ದರೂ, ನಮಗೆ ಭಾರತೀಯರಿಗೆ ಮುತ್ತಿನ ಬಗ್ಗೆ ಮಾತನಾಡುವುದೆಂದರೆ ಸ್ವಲ್ಪ ಮಡಿವಂತಿಕೆಯೇ.
‘ಮುತ್ತು’ ಎಂಬ ಪದವನ್ನಾಗಲಿ, ‘ಕಿಸ್’ ಎಂಬ ಈಗ ಕನ್ನಡದ್ದೇ ಎಂಬಷ್ಟು ರೂಢಿಯಾಗಿರುವ ಪದವನ್ನಾಗಲಿ ಹೇಳುವಾಗ ಸಣ್ಣ ನಗು ಮುಖದಲ್ಲಿ ಸುಳಿಯದಿರದು. ಆದರೆ ಅಮೇರಿಕನ್ನರು ಮಾತ್ರ ಆ ವಿಚಾರದಲ್ಲಿ ಬಲು ಮುಂದುವರಿದವರು- ಧಾರಾಳಿಗಳು. ಅವರಿಗೆ ಮುತ್ತಿನ ಪ್ರೀತಿ-ಸ್ವಾತಂತ್ರ್ಯ ಎಷ್ಟೆಂದರೆ ‘ಕಿಸ್ ಆ್ಯಂಡ್ ಮೇಕಪ್’ - ‘ಮುತ್ತಿಟ್ಟು ರಾಜಿಯಾಗು’ ಎನ್ನುವುದಕ್ಕೆ ಒಂದು ದಿನವನ್ನೇ (ಆಗಸ್ಟ್ 25) ಮೀಸಲಾಗಿಟ್ಟು ಬಿಟ್ಟಿದ್ದಾರೆ!
ಪ್ರೀತಿಗೆ- ಮುತ್ತಿಗೆ ದಿನವನ್ನು ಮೀಸಲಿಡುವ ಅಗತ್ಯವಿದೆಯೋ ಇಲ್ಲವೋ ಕಾಣೆ. ಆದರೆ ‘ಮುತ್ತು’ ಎಂಬ ಕ್ರಿಯೆಯ ಬಗ್ಗೆ, ಅದರ ಅವಶ್ಯಕತೆ-ಅದು ಸಂವಹಿಸುವ ಭಾವನೆಗಳ ಬಗ್ಗೆ ಮಾತನಾಡುವುದು ಮನೋವೈದ್ಯೆಯಾಗಿ ಪ್ರತಿನಿತ್ಯ ಸಂಬಂಧಗಳ ಸಮಸ್ಯೆಯನ್ನು ನೋಡುವಾಗ ನನಗೆ ಮಹತ್ವದ್ದು ಅನ್ನಿಸುತ್ತದೆ. ಸಂಬಂಧಗಳಲ್ಲಿ ಸಂವಹನ ನಡೆಯುವುದು ಕೇವಲ ಮಾತಿನ ಮೂಲಕವಲ್ಲ. ವಾತ್ಸಲ್ಯ- ಪ್ರಣಯ- ಅನುಕಂಪ- ಸಹಾನುಭೂತಿಗಳನ್ನು ಮತ್ತೊಬ್ಬರಿಗೆ ತಲುಪಿಸಲು ಸ್ಪರ್ಶ ಎಷ್ಟು ಪರಿಣಾಮಕಾರಿ ಎಂಬುದು ನಮಗೆಲ್ಲರಿಗೂ ಗೊತ್ತು.
ವಾತ್ಸಲ್ಯ-ಪ್ರಣಯ ಈ ಎರಡರಲ್ಲೂ ‘ಮುತ್ತು’ ಸಂಬಂಧವನ್ನು ಗಟ್ಟಿ ಮಾಡಬಲ್ಲದು. ಇಂದಿಗೂ ಬೆಳೆದ ಮಕ್ಕಳಿಗೆ ತಾಯಿ ಮುತ್ತಿಡುವ ಚಿತ್ರಣ ಹಾಸ್ಯಮಯ ಅನ್ನಿಸುವ ಬದಲು, ಚೇತೋಹಾರಿ ಎಂದೇ ಅನಿಸುತ್ತದೆ. ಅಮ್ಮ ಮಗುವಿಗೆ ನೀಡುವ ಮುತ್ತು ಸುರಕ್ಷತೆಯ ಬೆಚ್ಚನೆ ಭಾವವನ್ನೂ ಜೊತೆಗೇ ತರುತ್ತದೆ.ಪ್ರಣಯದ ಮುತ್ತು, ಅಮ್ಮ ಮಗುವಿಗೆ ಕೊಡುವ ಮುತ್ತಿಗಿಂತ ಸಂಕೀರ್ಣವಾದದ್ದು. ಅಮೇರಿಕೆಯ ಬಿಲ್‌ಬೋರ್ಡ್ ಹಾಟ್ 100 ಎಂಬ ಸಾವಿರಾರು ಹಾಡುಗಳ ನಂ.1 ಹಿಟ್ ಹಾಡುಗಳ ಪಟ್ಟಿಯಲ್ಲಿ ಮೊದಲ 99 ಹಾಡುಗಳಲ್ಲಿ ‘ಕಿಸ್’ ಎಂಬ ಪದವಿತ್ತು!!
ವೈಜ್ಞಾನಿಕವಾಗಿ ತುಟಿಗಳ ಸ್ಪರ್ಶ ‘ಆಕ್ಸಿಟೋಸಿನ್’ ಎಂಬ ರಸದೂತವನ್ನು ಬಿಡುಗಡೆ ಮಾಡುತ್ತದೆ. ಆಕ್ಸಿಟೋಸಿನ್ ಸಾಮಾಜಿಕ ಸಂಬಂಧಗಳಲ್ಲಿ ಪ್ರೀತಿ-ಪ್ರಣಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ಸಮಯದಲ್ಲಿ ಉಂಟಾಗುವ ‘ಉನ್ಮಾದ’ ದಂತಹ ಭಾವಕ್ಕೆ ಕಾರಣ ಡೋಪಮೀನ್ ಎಂಬ ಮತ್ತೊಂದು ರಸದೂತ. ಸಂತಸ-ತೃಪ್ತ ಭಾವಗಳನ್ನು ಅದು ಪ್ರಚೋದಿಸುತ್ತದೆ. ಮಾತಿನಿಂದ ವ್ಯಕ್ತಪಡಿಸಲಾಗದ ಆಸೆ-ಪ್ರೀತಿ-ಮನಸ್ಸು ಹಾತೊರೆಯುವ ಭಾವಗಳನ್ನು ಒಂದು ಮುತ್ತು ಸಂಗಾತಿಗೆ ತಿಳಿಯಪಡಿಸಬಹುದು ಎನ್ನುವುದೇ ಅದರ ಶಕ್ತಿ.
ಮನೋವಿಜ್ಞಾನ ಸರಿಯಾಗಿ ಮುತ್ತು ಕೊಡುವ ರೀತಿಯನ್ನೂ ಬೋಧಿಸುತ್ತದೆ! ಯಾವುದೇ ಕಾರ್ಯವನ್ನು ಮಾಡುವಾಗಲೂ ‘ಮೈಂಡ್‌ಫುಲ್‌ನೆಸ್’ ಆ ಕ್ಷಣದಲ್ಲಿ ಬದುಕುವುದು ಮುಖ್ಯವಷ್ಟೆ. ಹಾಗೆಯೇ ಮುತ್ತಿಡುವಾಗಲೂ ಸಂಗಾತಿಗೆ ಗಮನ ನೀಡುವುದು, ಭಾವನೆಯಿಂದ ಮುತ್ತಿಡುವುದು, ಆ ಸಮಯದಲ್ಲಿ ಮನಸ್ಸನ್ನು ಇತರೆಡೆ ಹರಿಯಬಿಡದಿರುವುದು ಮುತ್ತಿನಿಂದ ಇಬ್ಬರಿಗೂ ಉಂಟಾಗುವ ಸಂತಸ-ಉದ್ವೇಗ -ತೃಪ್ತಿಗಳನ್ನು ಹೆಚ್ಚಿಸಬಲ್ಲವು. ಮುತ್ತಿಡುವಾಗ ಸಂಗಾತಿಯ ಪ್ರತಿಕ್ರಿಯೆಯನ್ನು ಗಮನಿಸುವುದೂ ಮುಖ್ಯವೆ.
ಟೂಥ್‌ಪೇಸ್ಟ್‌ನ ಜಾಹೀರಾತಿನಲ್ಲಿ ತೋರಿಸುವಂತೆ, ಬಾಯಿಯ ದುರ್ಗಂಧ-ದುಶ್ಚಟಗಳಿಂದ ದೂರವಿರುವುದು ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಮುತ್ತಿಡುವುದಕ್ಕೂ ಸಹಕಾರಿ.ಮುತ್ತಿನ ಹಿಂದೆ ಏನೇನಿರಬಹುದು?! ಬಹು ಹಿಂದೆ ಯೂರೋಪಿನಲ್ಲಿ ಸಾಮಾಜಿಕವಾಗಿ ಮುತ್ತಿಡುವ ‘ಹೋಲಿ ಕಿಸ್ಸಿಂಗ್’ ಪ್ರಚಲಿತವಿತ್ತಂತೆ. ಅಂದರೆ ‘ಆತ್ಮ’ಗಳ ವಿನಿಮಯ ಅದೆಂದು ನಂಬಲಾಗುತ್ತಿತ್ತು. ರೋಮ್ ಪತನದ ನಂತರ ಸಾಮಾಜಿಕ ಮುತ್ತಿಡುವುದು ಹಲವು ನೂರು ವರುಷಗಳವರೆಗೆ ಮರೆಯಾಗಿ ಹೋಯಿತು. ಮತ್ತೆ 11ನೇ ಶತಮಾನದ ಕೊನೆಯ ಭಾಗದಲ್ಲಿ ಆರಂಭವಾದ ಎಲ್ಲರೆದುರಿಗೆ ಪ್ರೇಮಿಗಳ ಮುತ್ತಿಟ್ಟು ಪ್ರೀತಿಯನ್ನು ‘ಸೀಲ್’ ಮಾಡುವ ಕ್ರಿಯೆ ಆರಂಭವಾಯಿತು.
ರೋಮಿಯೋ-ಜ್ಯೂಲಿಯಟ್‌ರ ಪ್ರೀತಿಯ ಕಥೆ ಇದೇ ಸಮಯದಲ್ಲಿ ‘ಪ್ರೇಮ ಮಾದರಿ’ ಯಾಗಿ ಪ್ರಚಾರಕ್ಕೆ ಬಂದಂತಹದ್ದು. ‘ಪ್ರೇಮ’ವನ್ನು ಮನೆತನ-ಕುಟುಂಬ-ಸಮಾಜ ಎಲ್ಲದರ ವಿರುದ್ಧ ಹೋರಾಡುವ, ತನ್ನನ್ನು ಮಾತ್ರ ತಾನು ಕಂಡುಕೊಳ್ಳುವ ಶಕ್ತಿಯಾಗಿ ಎದ್ದು ನಿಲ್ಲುವಂತೆ ಮಾಡಿದ ಕಥಾನಕವದು. ದುಃಖಾಂತವನ್ನು ಕಂಡ ಈ ಕಥೆ ‘ಮುತ್ತ’ನ್ನು ನೆನಪಿಸಿದಷ್ಟೇ, ನಾವು ಮುತ್ತಿಡುವ ವ್ಯಕ್ತಿಯ ಹಿನ್ನೆಲೆ-ಮುತ್ತಿನಿಂದ ಮುಂದಾಗಬಹುದಾದ ಪರಿಣಾಮಗಳ ಸರಮಾಲೆ-ಆರೋಗ್ಯದ ಮೇಲೆ ಅದರ ಪರಿಣಾಮ, ಕಳೆದುಕೊಳ್ಳಬಹುದಾದ ಜೀವನಾನಂದ-ಜೀವ ಎಲ್ಲವನ್ನೂ ನೆನಪಿಸಬೇಕು! ದಂಪತಿಗಳು ಮುತ್ತಿಟ್ಟು ರಾಜಿಯಾಗುವ ಸಂದರ್ಭದಲ್ಲಿ , ಮುತ್ತು ಕ್ಷಮೆ-ಪಶ್ಚಾತ್ತಾಪ-ತಪ್ಪೊಪ್ಪಿಕೊಳ್ಳುವ ಅಭಿವ್ಯಕ್ತಿ ಎಂಬುದನ್ನೂ ನೆನಪಿಸಿಕೊಳ್ಳಬೇಕು !