ಸೇನೆಯಲ್ಲಿ ಶಿಫಾರಸು ನಡೆಯಲ್ಲ - ರಾಗಾ ಹೇಳಿಕೆ ಬಾಲಿಶ

| N/A | Published : Nov 06 2025, 10:38 AM IST

indian army
ಸೇನೆಯಲ್ಲಿ ಶಿಫಾರಸು ನಡೆಯಲ್ಲ - ರಾಗಾ ಹೇಳಿಕೆ ಬಾಲಿಶ
Share this Article
  • FB
  • TW
  • Linkdin
  • Email

ಸಾರಾಂಶ

 ಸೇನೆಯೆಂದರೆ ಶಿಸ್ತು ರಾಹುಲ್‌ರು ಉಡಾಫೆ ಮಾತೆಂದು ಪರಿಗಣಿಸಿದರೂ  ಹೇಳಿಕೆಗಳಿಂದ ಕಿರಿಯ ಹಂತದ ಅಧಿಕಾರಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ಯಾವ ರೀತಿ ಭಾವನೆ ಮೂಡಬಹುದು ? ಆಲೋಚಿಸಬೇಕು. ಈ ಮಗ್ಗುಲಲ್ಲಿ ರಾಹುಲ್ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ ಪ್ರಾಜ್ಞರು ಇದರ ಬಗ್ಗೆಯೂ ದೂರು ದಾಖಲಿಸಬೇಕು

ಮೊದಲ ಮಾತು ಹೇಳಿಬಿಡುತ್ತೇನೆ. ಬಹುತೇಕ ನಾವು ಸೇನೆ, ಸೈನಿಕರ ಕುರಿತು ಮಾತನಾಡುವಾಗ ಹಳ್ಳಿಯಿಂದ ಬಂದವ, ರೈತ ಹಿನ್ನೆಲೆಯವ, ಕಷ್ಟದಿಂದ ಈ ಹಂತಕ್ಕೇರಿದ್ದಾರೆ ಎಂದೇ ಅವರ ಕುರಿತು ಮಾತು ಆರಂಭಿಸುತ್ತೇವೆ.

ರಾಹುಲ್‌ ಗಾಂಧಿ ಅವರ ಮಾತಿಗೆ ಬರೋಣ, ಸೇನೆಯನ್ನು ಶೇ.10ರ ಗುಂಪಿನಿಂದಲೇ ಬಂದವರು ನಿಯಂತ್ರಿಸುತ್ತಿದ್ದಾರೆ, ಅವರೇ ಉದ್ಯೋಗ, ಸೇನೆ, ದೇಶದ ಸಂಪತ್ತನ್ನು ನಿಯಂತ್ರಿಸುತ್ತಾರೆ. ಉಳಿದ ಶೇ.90ರಷ್ಟು ಜನರಿಗೆ ನಿಜವಾದ ಪ್ರಾತಿನಿಧ್ಯವಿಲ್ಲ. ಶೇ.90ರಷ್ಟು ಜನಸಂಖ್ಯೆ, ಅಂದರೆ ಬಡವರು, ಹಿಂದುಳಿದವರು, ಜನರಿಗೆ ಗೌರವ ಮತ್ತು ಅವಕಾಶಗಳೊಂದಿಗೆ ಬದುಕಲು ಸಾಧ್ಯವಾಗುವ ರಾಷ್ಟ್ರ ನಮಗೆ ಬೇಕು ಎಂಬ ಮಾತನ್ನು ಅವರು ಹೇಳಿದ್ದಾರೆ.

ರಾಹುಲ್‌ ಅವರ ಮಾತೇ ತಾಂತ್ರಿಕ ದೋಷದಿಂದ ಕೂಡಿದೆ. ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ಭೂಸೇನೆಗಳಲ್ಲಿ ಜ್ಯೂನಿಯರ್‌ ಕಮಿಷನ್ಡ್‌ ಆಗಿರಲಿ, ಕಮಿಷನ್ಡ್‌ ಆಗಿರಲಿ ಅಥವಾ ನಾನ್‌ ಕಮಿಷನ್ಡ್‌ ಆಗಿರಲಿ ಈ ಎಲ್ಲ ಹಂತಗಳ ಹುದ್ದೆ ಆಯ್ಕೆಗೆ ತನ್ನದೇ ಆದ ಪ್ರಕ್ರಿಯೆಯಿದೆ. ಯಾವ ಹುದ್ದೆಯಲ್ಲಿದ್ದವರೂ ಸೈನ್ಯವನ್ನಾಗಲಿ, ಸೈನಿಕನನ್ನಾಗಲಿ ನಿಯಂತ್ರಿಸಲು ಸಾಧ್ಯವಿಲ್ಲ. ಇಲ್ಲಿ ಸೇನೆಯನ್ನು ಶಿಸ್ತಿನ ಕೇಡರ್‌ ವ್ಯವಸ್ಥೆಯ ಕಾರ್ಯಕಲಾಪ ನಿರ್ಧರಿಸುತ್ತದೆಯೇ ವಿನಃ ಯಾವುದೋ ವರ್ಗ ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಮಾತು.

ಪ್ರಥಮವಾಗಿ ಈ ಹೇಳಿಕೆಗೆ ನಿರ್ಲಕ್ಷ್ಯವೇ ದಿವ್ಯ ಔಷಧ. ಸೇನೆಯ ಯಾವ ವಿಭಾಗವೂ ಈ ಮಾತಿಗೆ ಎಳ್ಳಷ್ಟೂ ಕಿಮ್ಮತ್ತು ಕೊಟ್ಟಿರಲ್ಲ, ತಲೆ ಕೆಡಿಸಿಕೊಂಡಿರಲ್ಲ. ಆದರೆ, ಇದು ಹೊಸದಾಗಿ ಸೇನೆಗೆ ಸೇರಬೇಕು ಎಂಬ ಬಯಕೆ ಇರುವವರಿಗೆ, ಸೇನೆ, ಸೈನಿಕರನ್ನು ಹೀರೋಗಳಂತೆ ಕಾಣುವವರಲ್ಲಿ ಎಲ್ಲೋ ಒಂದು ಕಡೆ ಅನುಮಾನ ಮೂಡಿಸುವ, ಸೈನ್ಯವೆಂದರೂ ಇಷ್ಟೇನಾ? ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಜತೆಗೆ ನಕಾರಾತ್ಮಕ ಸಂದೇಶವನ್ನೂ, ಸ್ವತಃ ಸೈನಿಕರ ಮನೋಸ್ಥೈರ್ಯ ಕುಂದಿಸುವ ಅಂಶವನ್ನೂ ಒಳಡಗೊಂಡಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಈ ಹೇಳಿಕೆಗೆ ಒಂದಿಷ್ಟು ಸ್ಪಷ್ಟನೆ ನೀಡುವುದು ಅಗತ್ಯ.

ಕ್ಲಿಷ್ಟ ಪ್ರಕ್ರಿಯೆಗಳು ನಡೆಯುತ್ತವೆ

ಸೇನೆಯಲ್ಲಿ ಸುಬೇದಾರ್‌ ಹಂತದಿಂದ ಹಿಡಿದು ಪ್ರತಿ ಹಂತದಲ್ಲೂ ಲೆಫ್ಟಿನೆಂಟ್‌, ಕ್ಯಾಪ್ಟನ್‌, ಮೇಜರ್‌, ಕರ್ನಲ್‌, ಬ್ರಿಗೇಡಿಯರ್‌, ಮೇಜರ್‌ ಜನರಲ್‌, ಲೆ.ಜನರಲ್‌, ಜನರಲ್‌ ಹಾಗೂ ಫೀಲ್ಡ್‌ ಮಾರ್ಷಲ್‌ ಹೀಗೆ ಅತ್ಯುನ್ನತ ದರ್ಜೆಯ ಹಂತದವರೆಗಿನ ಹುದ್ದೆ ಭರ್ತಿಯಾಗುವಾಗ ತನ್ನದೇ ಆದ ಕ್ಲಿಷ್ಟ ಪ್ರಕ್ರಿಯೆಗಳು ನಡೆಯುತ್ತವೆ. ಎಲ್ಲವೂ ಅತ್ಯಂತ ಪಾರದರ್ಶಕವಾಗಿ ನಡೆಯುತ್ತವೆ.

ಸೇನೆಯಲ್ಲಿರುವ ತಂದೆ ಸ್ವಂತ ಮಕ್ಕಳನ್ನು ಸೇನೆಗೆ ಸೇರ್ಪಡೆ ಮಾಡಬೇಕೆಂದರೂ ಅದು ಸಾಧ್ಯವಿಲ್ಲ. ಇಲ್ಲಿ ಯಾವುದೇ ರೀತಿಯ ಶಿಫಾರಸ್ಸು ನಡೆಯಲ್ಲ. ಇದು ಸಿನಿಮಾ ಕ್ಷೇತ್ರದಂತಹ ನೆಪೋ ಕಿಡ್‌ಗಳ ಆಡುಂಬೊಲ ಆಗಲು ಸಾಧ್ಯವೇ ಇಲ್ಲ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ, ಇಂಡಿಯನ್‌ ಮಿಲಿಟರಿ ಅಕಾಡೆಮಿಯಲ್ಲಿ ಕಬ್ಬು ನುರಿದಂತೆ ನುರಿಸಿಕೊಂಡು, ವಿದೇಶದಲ್ಲೆಲ್ಲೋ ವರ್ಷಗಟ್ಟಲೆ ಜಂಟಿ ಸಮರಾಭ್ಯಾಸ, ತಾಂತ್ರಿಕ ಪರಿಣತಿ ಪಡೆದಿದ್ದಲ್ಲಿ ಮಾತ್ರ ಸೇನೆಯ ಅಧಿಕಾರದ ಸಿಹಿಯುಣ್ಣಲು (ಅಂದರೆ ಒತ್ತಡದ ಜವಾಬ್ದಾರಿ ಎಂದು ಅರ್ಥೈಸಿ) ಸಾಧ್ಯವಾಗಿರುತ್ತದೆ.

ಮುಂಬಡ್ತಿಗೆ ಬರುವುದೂ ಸುಲಭವಲ್ಲ

ಮುಂಬಡ್ತಿಗೆ ಬರುವುದೂ ಸುಲಭವಲ್ಲ. ಇಲ್ಲಿ ಎಲ್ಲವೂ ಪಾರದರ್ಶಕ. ವಾರ್ಷಿಕ ಗೌಪ್ಯ ವರದಿ (ಎಸಿಆರ್‌) ಅಧಿಕಾರಿಯ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದ ವಿವರವಾದ ಮೌಲ್ಯಮಾಪನ ಒಳಗೊಂಡಿರುತ್ತದೆ. ಇದನ್ನು ಅವರ ತಕ್ಷಣದ ಮೇಲ್ವಿಚಾರಕರು ಸಿದ್ಧಪಡಿಸುತ್ತಾರೆ. ಈ ವರದಿಯು ಅಧಿಕಾರಿಯ ನಾಯಕತ್ವ ಸಾಮರ್ಥ್ಯಗಳು, ನಿರ್ವಹಣಾ ಕೌಶಲ್ಯಗಳು, ತಾಂತ್ರಿಕ ಪರಿಣತಿ, ದೈಹಿಕ ಸದೃಢತೆ ಮತ್ತು ವೈಯಕ್ತಿಕ ನಡವಳಿಕೆಯ ಸಮಗ್ರ ವಿವರವನ್ನು ಒದಗಿಸುತ್ತದೆ.

ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ) ಅಧಿಕಾರಿ ವಲಯಕ್ಕೆ ಮುಂಬಡ್ತಿ ನೀಡುತ್ತದೆ. ಇಲ್ಲಿ ಪ್ರತಿ ಹಂತದಲ್ಲೂ ಪರೀಕ್ಷೆಯನ್ನು ಎದುರಿಸಿಯೇ ಆಗಬೇಕು. ನೋಡಿ, ಸೇನೆಯ ಅಧಿಕಾರಿ ವಲಯದಲ್ಲಿ ಮೇಜರ್‌ ಹಂತದಿಂದ ಮುಂದುವರಿದು ಒಬ್ಬ ಕರ್ನಲ್‌ ಆಗಿದ್ದಾನೆ ಎಂದಾದರೆ ಅಗ್ನಿಯಲ್ಲಿ ಮಿಂದೆದ್ದಿದ್ದಾನೆ ಎಂದರ್ಥ. ನೂರು ಅಧಿಕಾರಿಗಳಲ್ಲಿ ಶೇ.4ರಷ್ಟು ಜನ ಮಾತ್ರ ಬ್ರಿಗೇಡಿಯರ್‌ ಆಗಲು ಸಾಧ್ಯ. ಆ ಪೈಕಿ ಒಬ್ಬ ಮಾತ್ರ ಮೇಜರ್‌ ಜನರಲ್‌ ಆಗುತ್ತಾನೆ.

ಸುಮ್ಮನೆ ಹೇಳುತ್ತೇನೆ, ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿಯಾದವರು ಜಿಲ್ಲಾಧಿಕಾರಿಯಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗುತ್ತಾರಲ್ಲ ಆ ರೀತಿ ಸೇನೆಯಲ್ಲಿ ಆಗಲ್ಲ. ಇಲ್ಲಿ ಬಲಿಷ್ಠವಾದ ಓಡುವ ಕುದುರೆ ಮಾತ್ರ, ಅದರಲ್ಲೂ ತನ್ನೊಂದಿಗೆ ಇತರ ಕುದುರೆಗಳನ್ನು ಓಡಿಸಿಕೊಂಡು ಹೋಗುವ ಕುದುರೆ ಮಾತ್ರ ಮುಂದುವರಿಯುತ್ತದೆ. ಇಲ್ಲದಿದ್ದರೆ ಇಲ್ಲ.

ರಾಹುಲ್‌ರ ಈ ಹೇಳಿಕೆ ಹಾಸ್ಯಾಸ್ಪದ ಎಂದು ಹೇಳಲು ಸಾಧ್ಯವಿಲ್ಲ. ಇದು ಶುದ್ಧವಾಗಿ ದಿಕ್ಕು ತಪ್ಪಿದ ರಾಜಕೀಯ ಪ್ರೇರಿತ ದುಷ್ಟ ಹೇಳಿಕೆ. ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಯಾರನ್ನೋ ಓಲೈಸಲು ಸೇನೆಯನ್ನು ಎಳೆತಂದಿರುವುದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಹಿಂದೆ ಅವರು ವೋಟ್‌ ಚೋರಿ ಹೇಳಿಕೆಗಳನ್ನು ನೀಡಿ ಅದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ಕೋರಿದಾಗ ಡೇಟಾ ಕೊಡಿ ಎಂದು ಆಯೋಗವನ್ನೇ ಮರು ಕೇಳಿದವರು. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವಾಗ ತಾವು ಎಂತಹ ಸ್ಥಾನದಲ್ಲಿದ್ದೇವೆ ಎಂಬ ಕನಿಷ್ಠ ಪ್ರಜ್ಞೆ ಬೇಕಾಗುತ್ತದೆ.

ನಾನು ‘ಪ್ರಶಸ್ತಾ ರಣವೀರತಾ’ ಧ್ಯೇಯವಾಕ್ಯದ ಜಮ್ಮು ಕಾಶ್ಮೀರ ರೈಫಲ್‌ 9ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿದವನು. ಫ್ರಂಟ್‌ ಲೈನ್‌ನಲ್ಲಿ ನಿಂತು ಮೇಜರ್‌ ಆದವನು. ಚೀನಾ ಗಡಿ ಸಿಕ್ಕಿಂ, ಪಂಜಾಬ್‌, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿ ಸಾಕಷ್ಟು ಕಡೆ ಸೇವೆ ಸಲ್ಲಿಸಿದ್ದೇನೆ. ಸೇನೆಯಲ್ಲಿ ಜಾತಿ, ಧರ್ಮ, ಭಾಷೆ ಸೇರಿ ಯಾವುದೇ ರೀತಿ ತಾರತಮ್ಯ ವಿಚಾರ ಬರುವುದೇ ತಪ್ಪು. ಅದನ್ನು ವ್ಯಕ್ತಪಡಿಸುವುದಕ್ಕೂ ನಿರ್ಬಂಧವಿದೆ. ರಾಹುಲ್‌ ಬದಲು ಯಾವುದೇ ಸೇನಾ ಸಿಬ್ಬಂದಿ ಈ ಹೇಳಿಕೆ ಕೊಟ್ಟಿದ್ದರೆ ಆತನನ್ನು ಒಂದು ಕ್ಷಣವೂ ಸೇನೆ ಉ‍ಳಿಸಿಕೊಳ್ಳುತ್ತಿರಲಿಲ್ಲ.

ಸೇನೆಯೆಂದರೆ ಶಿಸ್ತು. ರಾಹುಲ್‌ರದು ಉಡಾಫೆ ಮಾತೆಂದು ಪರಿಗಣಿಸಿದರೂ ಈ ಹೇಳಿಕೆಗಳಿಂದ ಕಿರಿಯ ಹಂತದ ಅಧಿಕಾರಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ಯಾವ ರೀತಿಯ ಭಾವನೆ ಮೂಡಬಹುದು? ಆಲೋಚಿಸಬೇಕಾಗುತ್ತದೆ. ಈ ಮಗ್ಗುಲಲ್ಲಿ ರಾಹುಲ್‌ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ ಪ್ರಾಜ್ಞರು ಇದರ ಬಗ್ಗೆಯೂ ದೂರು ದಾಖಲಿಸಬೇಕು. ಅಥವಾ ಆಡಳಿತ ಸುಮೋಟೊ ಪ್ರಕರಣ ದಾಖಲಿಸಿಕೊಂಡು ಸೇನೆಯಲ್ಲಿ ಶೇ.10ರ ಗುಂಪಿನಿಂದಲೇ ಬಂದವರು ನಿಯಂತ್ರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಅವರಿಂದ ಸ್ಪಷ್ಟೀಕರಣ ಕೇಳಬೇಕು. ಸ್ಪಷ್ಟೀಕರಣ ನೀಡಲು ವಿಫಲವಾದರೆ ಕ್ಷಮೆ ಯಾಚಿಸುವಂತೆ ಮಾಡಬೇಕು. ಕ್ರಮವೂ ಆಗಬೇಕು.

ಮೇಜರ್‌ ಗಣಪತಿ ಹೆಗಡೆ (ನಿವೃತ್ತ), ಬೆಂಗಳೂರು

Read more Articles on